ಅರಣ್ಯದಲ್ಲಿ ಪಾಂಡವರು

| ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ

ದ್ಯೂತದಲ್ಲಿ ಸೋತು ಅರಣ್ಯಕ್ಕೆ ಹೊರಟ ಪಾಂಡವರನ್ನು ಹಸ್ತಿನಾವತಿಯ ಪೌರರೆಲ್ಲ ಹಿಂಬಾಲಿಸಿದರು. ‘ಪಾಪಿಷ್ಠ ದುರ್ಯೋಧನನೇ ರಾಜನಾಗಿರಲು, ಶಕುನಿಯ ಮಾರ್ಗದರ್ಶನ; ಕರ್ಣ, ದುಶ್ಶಾಸನರ ಸಹಕಾರ! ದೇವರಲ್ಲಿ ವಿಶ್ವಾಸವಿಲ್ಲದಿದ್ದರೂ ವಿಶ್ವಾಸವಿದ್ದಂತೆ ನಟಿಸುತ್ತ, ಭಕ್ತಿಯಿಲ್ಲದಿದ್ದರೂ ಭಕ್ತಿಯ ಪ್ರದರ್ಶನ ಮಾಡುತ್ತ, ಸ್ವಾರ್ಥಕ್ಕಾಗಿ ಏನನ್ನೂ ಮಾಡುವ ದುರ್ಯೋಧನನ ರಾಜ್ಯದಲ್ಲಿ ಯಾರು ಸುಖವಾಗಿರಲು ಸಾಧ್ಯ? ಇಂಥ ದುಷ್ಟರ ಕೈಕೆಳಗೆ ಬದುಕುವುದಕ್ಕಿಂತ ಸಜ್ಜನರಾದ ನಿಮ್ಮೊಂದಿಗೆ ಕಾಡಿನಲ್ಲಿ ಬದುಕುವುದೇ ಲೇಸು. ಇಂದಿಗೆ ನಮ್ಮ ಸರ್ವನಾಶವಾಯಿತು’ ಎಂದು ಗೋಳಿಟ್ಟರು. ‘ನೀವೆಲ್ಲ ನಮ್ಮ ಮೇಲಿಟ್ಟಿರುವ ವಿಶ್ವಾಸಕ್ಕೆ ಋಣಿಗಳಾಗಿದ್ದೇವೆ. ನಮ್ಮ ಮೇಲಿನ ಪ್ರೀತಿಯಿಂದ ಇಲ್ಲಿಯವರೆಗೂ ಬಂದ ನಿಮ್ಮ ಈ ಪ್ರೀತಿಗೆ ಆಭಾರಿಗಳಾಗಿದ್ದೇವೆ. ನನ್ನದೊಂದು ವಿಜ್ಞಾಪನೆಯಿದೆ; ಅದೇನೆಂದರೆ ಭೀಷ್ಮರು, ದ್ರೋಣರು, ವಿದುರ ಮುಂತಾದ ಅನೇಕ ಸಜ್ಜನರಿರುವ ಹಸ್ತಿನಾವತಿಯನ್ನು ತೊರೆದು ಬಂದರೆ ಅವರೆಲ್ಲರಿಗೂ ಅವಮಾನ ಮಾಡಿದಂತಾಗುತ್ತದೆ. ಅವರಿಗಾಗಿಯಾದರೂ ನೀವೆಲ್ಲ ಹಸ್ತಿನಾವತಿಯಲ್ಲಿಯೇ ಇರಬೇಕು. ಈ ಮಾತುಗಳನ್ನು ಕೇಳಿ ನೀವೆಲ್ಲ ಹಿಂದಿರುಗಿದರೆ ಅದಕ್ಕಿಂತ ದೊಡ್ಡ ಸಂತೋಷ ನಮಗೆ ಬೇರಾವುದೂ ಇಲ್ಲ.’ ಧರ್ಮರಾಜನ ಮಾತನ್ನು ಕೇಳಿದ ಪ್ರಜೆಗಳೆಲ್ಲ ದುಃಖ ತಾಳಲಾರದೆ ಕಣ್ಣೀರಿಟ್ಟರು. ದುಃಖದಿಂದ ಕಣ್ಣೀರಿಡುತ್ತ ಮನಸ್ಸಿಲ್ಲದ ಮನಸ್ಸಿನಿಂದ ಪ್ರಜೆಗಳೆಲ್ಲ ಹಿಂದಿರುಗಿದರು.

ಪ್ರಜೆಗಳ ಈ ವರ್ತನೆ ದುರ್ಯೂಧನಾದಿಗಳ ಧಾರ್ಷ್ಯr ಹಾಗೂ ಪಾಂಡವರ ಸಜ್ಜನಿಕೆಗೆ ಹಿಡಿದ ಕೈಗನ್ನಡಿಯಂತಿತ್ತು. ಮಹಾಭಾರತ ಈ ಪ್ರಸಂಗದ ಮೂಲಕ ಮಾಂಡವರಿಗಿದ್ದ ಪ್ರಜಾನುರಾಗವನ್ನು ಎತ್ತಿ ತೋರಿಸುತ್ತದೆ. ಜತೆಗೆ ನಾವು ಮಾನವೀಯತೆಯಿಂದ ಜನರೊಡನೆ ಹೇಗೆ ವರ್ತಿಸಬೇಕು ಎಂಬುದನ್ನೂ ತಿಳಿಸುತ್ತದೆ. ಹಸ್ತಿನಾವತಿಯ ಪ್ರಜೆಗಳೆಲ್ಲರೂ ಧರ್ಮರಾಜನ ಮಾತಿಗೆ ಕಟ್ಟುಬಿದ್ದು ಮನಸ್ಸಿಲ್ಲದ ಮನಸ್ಸಿನಿಂದ ಹಿಂದಿರುಗಿದರು. ಕೆಲವು ವಿದ್ವಾಂಸರು ಮಾತ್ರ ‘ಪಾಂಡವರನ್ನು ಬಿಟ್ಟು ನಮ್ಮಿಂದ ಬದುಕಲು ಸಾಧ್ಯವೇ ಇಲ್ಲ’ ಎಂದು ಅವರನ್ನೇ ಹಿಂಬಾಲಿಸಿದರು. ಆಗ ಧರ್ಮರಾಜ ಅವರನ್ನು ಕುರಿತು ನುಡಿದನು, ‘ನಮ್ಮ ಬಳಿ ಯಾವುದೇ ವಿಧದ ದ್ರವ್ಯವಾಗಲೀ ಸಂಪತ್ತಾಗಲೀ ಇಲ್ಲ. ರಾಜ್ಯ ಕಳೆದುಕೊಂಡು ಬರಿಗೈಯಲ್ಲಿ ಬಂದಿದ್ದೇವೆ. ಇಂತಹ ಸ್ಥಿತಿಯಲ್ಲಿ ನಮ್ಮನ್ನು ಹಿಂಬಾಲಿಸಿದರೆ ನಿಮ್ಮ ಯೋಗಕ್ಷೇಮವನ್ನು ಯಾರು ವಿಚಾರಿಸಬೇಕು? ನಾನು ಹೇಳಿದರೆ ನನ್ನ ತಮ್ಮಂದಿರು ಕಾಡಿನಲ್ಲಿ ಹಣ್ಣುಹಂಪಲಗಳನ್ನು ಹುಡುಕಿ ತರುತ್ತಾರೆ. ಆದರೆ ಅವರೆಲ್ಲ ನನ್ನಿಂದಾಗಿ, ರಾಜ್ಯವನ್ನೆಲ್ಲ ಕಳೆದುಕೊಂಡು ಈಗಾಗಲೇ ಬಹಳಷ್ಟು ದುಃಖಪಡುತ್ತಿದ್ದಾರೆ. ಅವರಿಗೆ ಮತ್ತಷ್ಟು ದುಃಖ ನೀಡುವುದಕ್ಕೆ ನನಗೆ ಇಷ್ಟವಿಲ್ಲ! ಹಾಗಾಗಿ ತಾವೆಲ್ಲರೂ ನನ್ನ ಸ್ಥಿತಿಯನ್ನು ಅರ್ಥಮಾಡಿಕೊಂಡು ದಯವಿಟ್ಟು ಹಿಂದಿರುಗಬೇಕೆಂಬುದೇ ನನ್ನ ಕಳಕಳಿಯ ಪ್ರಾರ್ಥನೆ.’ ವಿದ್ವಾಂಸರೆಂದರು, ‘ನಮ್ಮ ಚಿಂತೆ ನಿನಗೆ ಬೇಡ! ನಮ್ಮ ಆಹಾರಪದಾರ್ಥಗಳ ವ್ಯವಸ್ಥೆಯನ್ನು ನಾವೇ ನೋಡಿಕೊಳ್ಳುತ್ತೇವೆ. ನಮ್ಮಿಂದ ನಿಮಗೆ ಯಾವ ತೊಂದರೆಯೂ ಆಗದಂತೆ, ನಿಮಗೆ ಪ್ರಿಯವಾದ ಭಗವತ್ಕಥಾಪ್ರವಚನ ನಡೆಸಿಕೊಂಡು ನಮ್ಮಷ್ಟಕ್ಕೆ ನಾವಿರುತ್ತೇವೆ.’

ಧರ್ಮರಾಜ ಹೇಳಿದ, ‘ಜ್ಞಾನಿಗಳಾದ ತಾವೆಲ್ಲ ಜತೆಯಲ್ಲಿದ್ದರೆ ನಮಗೂ ಸಂತೋಷ. ನಮ್ಮ ವನವಾಸವೂ ಸುಖದಿಂದ ಸಾಗುತ್ತದೆ. ಆದರೆ ನಿಮಗೆ ಯಾವುದೇ ರೀತಿಯ ಅನುಕೂಲವನ್ನೂ ಒದಗಿಸಲಾಗುತ್ತಿಲ್ಲವಲ್ಲ ಎಂಬ ಅಳಲು ನನ್ನದು. ಅದಕ್ಕೂ ಮಿಗಿಲಾಗಿ ನೀವೆಲ್ಲ ಈ ಕಾಡಿನಲ್ಲಿ ಕಷ್ಟಪಡುವ ದೃಶ್ಯವನ್ನು ಹೇಗೆ ನೋಡಲಿ? ಅಧರ್ಮದಿಂದ ನಮಗೆ ಮಾತ್ರ ತೊಂದರೆ ನೀಡುವುದಲ್ಲದೆ ನಿಮಗೂ ತೊಂದರೆ ನೀಡುತ್ತಿರುವ ಆ ದುರ್ಯೋಧನನಿಗೆ ಧಿಕ್ಕಾರವಿರಲಿ!’ – ಹೀಗೆ ಧರ್ಮರಾಜ ತನ್ನನ್ನು ಪ್ರೀತಿಯಿಂದ ಹಿಂಬಾಲಿಸಿ ಬಂದ ವಿದ್ವಾಂಸರನ್ನು ಬಿಡುವುದೋ? ಕರೆದುಕೊಂಡು ಹೋಗುವುದೋ ಎಂಬ ದ್ವಂದ್ವಕ್ಕೆ ಸಿಲುಕಿ ದಿಕ್ಕು ತೋಚದೆ ಕುಳಿತುಬಿಟ್ಟನು. ಜ್ಞಾನಿಗಳು ಮತ್ತು ಧರ್ಮರಾಜನ ನಡುವಿನ ಸಂಭಾಷಣೆಯ ಮೂಲಕ ನಾವು ಎಲ್ಲರೊಂದಿಗೂ ಹೇಗೆ ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಬದುಕಬೇಕು ಎಂಬುದನ್ನು ವ್ಯಾಸರು ಈ ಪ್ರಸಂಗದ ಮೂಲಕ ತಿಳಿಸಿಕೊಟ್ಟಿದ್ದಾರೆ.

(ಸಂಗ್ರಹ: ಬಿ.ಎನ್. ಶ್ರೀಶ )

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *