ಪ್ರಶ್ನೆ ಪರಿಹಾರ

| ಮಹಾಬಲಮೂರ್ತಿ ಕೊಡ್ಲೆಕೆರೆ

# ನಾನು ಕರ್ನಾಟಕದವಳು. ಪತಿಯ ಸಂಪರ್ಕ ಬಂದು ಈಗ ಜಬಲ್​ಪುರದಲ್ಲಿದ್ದೇನೆ. ಋಣಾನುಬಂಧ ಪ್ರೀತಿಸಿ ಮದುವೆಯಾಗಿ, ಎಲ್ಲರನ್ನೂ ತೊರೆದು ಬಂದಿದ್ದಾಯ್ತು. ಆದರೆ ನನ್ನ ಪತಿ ಚಿಕ್ಕಂದಿನ ಅವರ ಮೇಲೆ ಯಾರೋ ಒಬ್ಬ ಲಿಫ್ಟ್​ಮನ್ ನಡೆಸಿದ ಅತಿರೇಕದ ವರ್ತನೆ (ಅನೈತಿಕವಾಗಿ ನಡೆಸಿದ್ದ ದಾಳಿ) ನೆನೆದೇ ಅಸ್ವಸ್ಥರಾಗುತ್ತಾರೆ. ಒಳ್ಳೆಯವರು. ಸಾಂತ್ವನ ಬಯಸುತ್ತಾರೆ. ಮಿಕ್ಕಿದ್ದು ಶೂನ್ಯ. ಪರಿಹಾರ ಇದೆಯೆ?

| ಶಾಶ್ವತಿ ಎನ್.ಆರ್. ಜಬಲ್​ಪುರ

ನಿಮ್ಮ ಸಮಸ್ಯೆ ಅರ್ಥವಾಗುವಂಥದು. ಧರ್ವರ್ಥಕಾಮ ಮೋಕ್ಷಗಳು ಮನುಷ್ಯ ಜೀವನದ ಜೀವಾಳ. ಆದರೆ ಹಲವು ಬಿರುಗಾಳಿಗಳಿಂದ ಅನಿರೀಕ್ಷಿತವಾಗಿ ನಡೆದ ಯಾತನಾಮಯ ಏಟುಗಳು ಹಲವರ ಪಾಲಿಗೆ ಇಡೀ ಜೀವನವನ್ನು ನರಕವನ್ನಾಗಿಸುತ್ತವೆ. ಆ ಆವರಣದಲ್ಲಿ ನೀವೂ ಬಂಧಿಯಾಗಿದ್ದೀರಿ. ವಿಶೇಷವಾಗಿ ಶುಕ್ರವಾರ ರಾತ್ರಿ ಮಂದವಾದ ಕೆಂಪು ನೀಲಿ ಬೆಳಕಿನಲ್ಲಿ ಮನೆಯವರ ಜತೆಗೂಡಿ ಕಾಳಿಕಾಳನ್ನು ಪೂಜಿಸಿ. ಶ್ರೀ ತ್ರಿಪುರಸುಂದರಿ ಧ್ಯಾನಸ್ತೋತ್ರ, ಕೆಂಪು, ಬಿಳಿ ಹೂಗಳಿಂದ ಅರ್ಚನೆ ಮಾಡಿ. ಹಿಂದೆ

ಲಿಫ್ಟ್ ಮನ್​ನಿಂದ ನಡೆದಿದ್ದ ದೌರ್ಜನ್ಯದ ನೆನಪು ಉರಿಯಾಗಿ ಬಾಧಿಸದಿರಲು ದಿವ್ಯನಾಗ (ಮುಖ್ಯವಾಗಿ ವಾಸುಕಿ ಮಂತ್ರ) ಮಂತ್ರವನ್ನು ಮನೆಯವರು ಜಪಿಸಲಿ. ಕ್ಷೇಮವಾಗುವುದು.

# ನನ್ನ ಮಗಳಿಗೀಗ ಮೂವತ್ತು ವರ್ಷ. ಡಾಕ್ಟರ್ ಆಗಿ ಲಂಡನ್​ನಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಸಂಪಾದಿಸಿದ್ದಾಳೆ. ವರಗಳ ಜಾತಕ ಬರುತ್ತಲೇ ಇವೆ. ಆದರೆ ದುರ್ದೈವವಶಾತ್ ಅವಳ ಹಣೆಯ ಭಾಗದಲ್ಲಿ ಬಿಳಿ ಮಚ್ಚೆ ಇದೆ. ಕೂದಲಿನ ವಿನ್ಯಾಸದಿಂದ ಅದು ಹಾಗೆ ಕಾಣದು. ಇದನ್ನು ಮುಚ್ಚಿಡಲು ಮನಸ್ಸಿಲ್ಲ. ಸತ್ಯ ತಿಳಿಸಿದಾಗ ಫಲ ಶೂನ್ಯ. ಪರಿಹಾರ ಏನು?

| ಪರಮೇಶ್ವರ್ ಬಿಡದಿ ಮೈಸೂರು

ರವಿ-ಬುಧರು ಅಗಾಧ ಬುದ್ಧಿಕೌಶಲ, ಗುರು-ಕುಜರು ಅಪಾರವಾದ ಜ್ಞಾನ-ಸಿದ್ಧಿಗಳನ್ನು ಒದಗಿಸುತ್ತಾರೆ. ಇದರಿಂದ ಶ್ರೇಷ್ಠ ಓದಿಗೆ, ಸ್ಥಾನಮಾನಕ್ಕೆ ಸದ್ಯ ಒಳ್ಳೆಯ ಅವಕಾಶವಿದೆ. ಈಗ ನೀವು ವಿವರಿಸಿದ ಸಮಸ್ಯೆ, ಇದು ಆಗಬಾರದಿತ್ತು. ಆದರೆ ಬುಧನ ನೀಚತ್ವ, ದೌರ್ಬಲ್ಯ, ದುಃಸ್ಥಾನದ ಆಧಿಪತ್ಯ, ದುಸ್ಥಾನದಲ್ಲಿ ಬುಧಾದಿತ್ಯ ಯೋಗಗಳು ಚರ್ಮದ ಕ್ಷತ ಅಥವಾ ವ್ಯಾಧಿಗೆ, ಒಣ ಬಿರುಕು ತ್ವಚೆ, ಕಳಾಹೀನಸ್ಥಿತಿಗೆ ದಾರಿ ಮಾಡುತ್ತವೆ. ವಿಶೇಷವಾಗಿ ಕುಲದೇವರನ್ನು ಧ್ಯಾನಿಸಿ. ಡಾಕ್ಟರ್ ಆಗಿ ನಿಮ್ಮ ಮಗಳಿಗೂ ಚಿಕಿತ್ಸೆಯ ವಿಧಾನಗಳನ್ನು ಸಮೀಪಿಸಲು ದಾರಿ ಗೊತ್ತು. ವಿಶೇಷವಾಗಿ ಚಂದನ, ಅರಿಶಿಣ, ಹಸುವಿನ ತುಪ್ಪ ಬೆರೆಸಿ (ಧನ್ವಂತರಿ ಧ್ಯಾನ, ಯಮ ಮತ್ತು ಯಮುನಾಸಿದ್ಧಿ ಸ್ತೋತ್ರ ಪಠಣ ಸಹಿತ) ಬಿಳಿ ಮಚ್ಚೆಯ ಜಾಗಕ್ಕೆ ಲೇಪಿಸಿಕೊಳ್ಳಲಿ. ವರ್ಚಸ್ಸಿನ ಸಿದ್ಧಿಗೆ ದುರ್ಗಾ ಅಷ್ಟೋತ್ತರ ಪಠಿಸಲಿ.

# ನನ್ನ ಮಗ ವಿದ್ಯಾಭ್ಯಾಸದತ್ತ ಗಮನ ಹರಿಸುತ್ತಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಅಭೂತಪೂರ್ವ ಯಶಸ್ಸು ಪಡೆದಿದ್ದ ಅವನು ಈಗ ವಿದ್ಯಾಭ್ಯಾಸದಲ್ಲಿ ದುರ್ಬಲನಾಗಿದ್ದಾನೆ. ನನ್ನ ಪ್ರಾರಬ್ಧಗಳನ್ನು ಶಬ್ದಗಳಲ್ಲಿ ವಿವರಿಸಲಾರೆ. ‘ನನಗೆ ಏನೂ ಬೇಡ. ನನಗೆ ನಾನು ಯಾರು ಎಂಬುದನ್ನು ತಿಳಿಯುವಂತೆ ಮಾಡಿ. ಅನ್ಯರಿಗೆ ಆಗದ ವಿಚಿತ್ರ ಅನುಭವಗಳು ನನಗೆ ಆಗುತ್ತವೆ’ ಎಂದು ಬಡಬಡಿಸುತ್ತಾನೆ. ‘ನಾನು ಪಾಪದ ಶಿಶು, ನನಗೆ ಜೀವನ ಬೇಡ’ ಎಂದು ಅಳುತ್ತಾನೆ. ಸಮಸ್ಯೆ ಏನೆಂಬುದೇ ತಿಳಿಯುತ್ತಿಲ್ಲ. ಪರಿಹಾರ ಇದೆಯೇ?

| ಅಗಸ್ಱಕುಮಾರ್ ಮೇಟೋಟಗಿ ಬೀದರ್

ಅವರ ಕೊರಗು ಬೇರೆಯದೇ ಇದೆ. ಕುಜ, ಶುಕ್ರ, ಚಂದ್ರ, ಸೂರ್ಯ, ಬುಧರು ಒಗ್ಗೂಡಿಕೊಂಡಿರುವ ಯೋಗವು ಶಕ್ತಿ ಎಂಬುದು ಒಂದು ವಿಷಯ. ಅವನೊಳಗೆ ಈ ಗ್ರಹಗಳು ಭಾವನೆಗಳನ್ನು, ಅಸ್ತಿತ್ವದ ಅರಿವನ್ನು ಬೇರೆ ರೀತಿ ಪಲ್ಲಟಗೊಳಿಸುವ ಘಾತಕಶಕ್ತಿ ಪಡೆದಿರುವುದು ಸ್ಪಷ್ಟ. ವಿಪ್ಲವಗಳ ಬೇರು ಇಡೀ ದೃಶ್ಯವನ್ನು ಅದಲು ಬದಲಾಗಿಸುವ ಧಾವಂತದಲ್ಲಿದೆ. ಆತ ಹರಿಹರ ಆರಾಧನೆ ಮಾಡಲಿ. ಪ್ರಯತ್ನಶುದ್ಧಿ ಶಾಂಭವಿಸ್ತೋತ್ರಗಳನ್ನು ಪಠಿಸಲಿ. ವಿಶೇಷವಾಗಿ ಯಾವ ಉಡುಪುಗಳ ಬಗೆಗೆ ಅವನ ಆಸ್ಥೆಗಳು ಕಂಡುಬರುತ್ತಿವೆ ಎಂಬುದನ್ನು ಗುರುತಿಸಿ. ಆಧುನಿಕರಾದ ಒಳ್ಳೆಯ ಫಿಜಿಶಿಯನ್ ಬಳಿ ಆತನೊಬ್ಬನೇ ಎಲ್ಲವನ್ನೂ ತೆರೆದು ಹೇಳಲಿ. ನಂದಿಕೇಶ್ವರನಿಗೆ ಅವಶ್ಯವಾದ ನವಧಾನ್ಯ ಸಹಿತ ಫಲಪಂಚಾಮೃತ ಸೇವೆ ನಡೆಸಿ. ನಂದಿಯ ಸಿದ್ಧಿಶಕ್ತಿಯು ಅನುಗ್ರಹಕ್ಕೆ ಯೋಗ್ಯ ದಾರಿಯಾಗುವುದು. ಈಗ ಕಂಡುಬರುತ್ತಿರುವ ಸಮಸ್ಯೆಗಳನ್ನು ದೂರ ಮಾಡಲು ಅವಕಾಶ ಮಾಡಿಕೊಡುತ್ತದೆ. ಮನೋವೈದ್ಯರನ್ನು ಭೇಟಿ ಮಾಡಿ. ಗೈನಕಾಲಜಿಸ್ಟ್ ಬಳಿ ಒಯ್ಯುವ ಸಂದರ್ಭ ಬಂದರೆ ಗಾಬರಿಯಾಗಬೇಡಿ. ನಂದೀಶ್ವರನಿಂದ ಪರಿಹಾರದ ದಾರಿ ಲಭ್ಯ.

# ನಾನು ಎಂ.ಎನ್.ಸಿ. ಕಂಪನಿಯಲ್ಲಿ ಉದ್ಯೋಗಿ. ಬೆಂಗಳೂರು ನನ್ನ ಸ್ಥಳ. ಈಗ ಕೆಲಸ ಮುಂಬೈನಲ್ಲಿ. ಕಷ್ಟಪಟ್ಟು ಬೆಂಗಳೂರಿನಲ್ಲಿ ಒಂದು ಸೈಟ್ ಖರೀದಿಸಿ ಕಾಂಪೌಂಡ್​ಗೆ ಗೋಡೆ ಕಟ್ಟಿ ನಿರಾಳನಾಗಿದ್ದೆ. ‘ಈ ಸೈಟನ್ನು ಅಕ್ರಮವಾಗಿ ಖರೀದಿಸಿದ್ದೀರಾ. ನಿಮಗೆ ಇದರ ಹಕ್ಕು ಇಲ್ಲ’ ಎಂದು ಕೆಲವರು ಬಂದು ತಲೆನೋವು ತಂದಿದ್ದಾರೆ. ನಾನು ಮುಂಬೈನಲ್ಲಿದ್ದು ಏನನ್ನೂ ಮಾಡಲಾಗದ ಅಸಹಾಯಕ. ನನಗೆ ತೊಂದರೆ ಆದೀತೆ? ಪರಿಹಾರ ಇದೆಯೇ?

| ಯುವರಾಜ್ ಸಿದ್ಧಾರ್ಥಪ್ಪ

ಸಾಡೇಸಾತಿ ಕಾಟಕ್ಕೂ, ಶಶಿಮಂಗಳ ಯೋಗದ ದೌರ್ಬಲ್ಯಗಳಿಗೂ, ಭೂಮಿಯ ವಿಚಾರದಲ್ಲಿ ರಾಹುವಿನ ತೊಂದರೆಯೂ, ಕಿರಿಕಿರಿಗಳೂ, ಕೇತುದೋಷವೂ ಇದೆ. ಈಗ ದೃಢವಾಗಿರಿ. ನೀವು ಮೋಸವೇನೂ ಮಾಡಿಲ್ಲ. ಮೋಸ ಹೋಗಿದ್ದೀರಿ. ನಿಮಗೆ ಮಾರಾಟ ಮಾಡಿದವರ ವಿರುದ್ಧ, ನಿಮ್ಮ ಹೆಸರಿಗೆ ದಾಖಲಾತಿ ಆಗುವಾಗ ಎಲ್ಲಿ ಯಾರ ಮೂಲಕ ಆಯಿತೋ ಅವರ ವಿರುದ್ಧ, ಯೋಗ್ಯ ವಕೀಲರ ಸಹಾಯದೊಂದಿಗೆ ಒಂದು ತಕರಾರು ಅರ್ಜಿ ಕೊಟ್ಟು, ನ್ಯಾಯಾಲಯದ ಆವಶ್ಯಕತೆಯ ಬಗೆಗೆ ವಕೀಲರ ಸಹಾಯದೊಂದಿಗೆ ಹೆಜ್ಜೆ ಇಡಿ. ಕಾಯ್ದೆಯ ಪ್ರಕಾರದ ವ್ಯಾಜ್ಯದಲ್ಲಿ ಅಂತಿಮ ಜಯವಿದೆ. ಇನ್ನು ಸುಮಾರು ನಾಲ್ಕೂ ಮುಕ್ಕಾಲು ವರ್ಷಗಳಲ್ಲಿ ನಿಮ್ಮ ಹಣ ನಿಮಗೆ ಸಿಗುತ್ತದೆ. ಭೂವರಾಹಸ್ವಾಮಿ ಸ್ತೋತ್ರ ಪಠಿಸಿ. ಪ್ರತಿ ಮಂಗಳವಾರ ಅರಳೀಮರದ ಎಲೆಗೆ ಹಸುವಿನ ಬೆಣ್ಣೆ ಸವರಿ ಬನ್ನಿ.

# ಪ್ರತಿದಿನ ನಮ್ಮ ಮನೆಯಲ್ಲಿ ಅತ್ತೆಯವರ ಸಂಬಂಧವಾಗಿ ಜಗಳವಾಗುತ್ತದೆ. ಸಿಟ್ಟು ಎಂಬುದು ಅವರ ಗುಣ. ಇವರು ಹೊಂದಿಕೋ ಎಂದು ಹೇಳುತ್ತಾರೆಯೇ ವಿನಾ ಅತ್ತೆಯವರ ಆರ್ಭಟಕ್ಕೆ ನಾನು ತತ್ತರಿಸಿದಾಗ ಸಾಂತ್ವನ ಇರುವುದಿಲ್ಲ. ತಾಯಿಯದು ತಪ್ಪು ಎನ್ನುತ್ತಾರೆಯೇ ವಿನಾ ನನ್ನ ಪರವಾಗಿ ವಾದಿಸುವುದಿಲ್ಲ. ನನಗೂ ಕೆಲಸವಿದೆ. ಸುಸ್ತಾಗಿ ಮನೆಗೆ ಬಂದಾಗ ಶಾಂತಿ ಇರಲಾರದು. ಬದುಕೇ ಗೋಳಾಗಿದೆ. ಮಕ್ಕಳೂ ಆಗಿಲ್ಲ. ಪರಿಹಾರ ಏನು?

| ಪುಷ್ಪಲತಾ ಕಮಲಾಕ್ಷ ಜೇವರ್ಗಿ

ಜಾತಕದ ರಾಹುದೋಷವೀಗ ಸದ್ಯ ನಿಮ್ಮನ್ನು ಗೋಜಲಿನಲ್ಲಿ ಇಡಿಸಿದೆ. ಯಾವುದಕ್ಕೂ ಪ್ರತಿದಿನ ಉದ್ದಿನ ಅನ್ನವನ್ನು ನಾಗನಿಗೆ (ಬೆಳ್ಳಿಯ ಮೂರ್ತಿ ದೇವರ ಪೀಠದಲ್ಲಿದ್ದರೆ) ನೈವೇದ್ಯ ಮಾಡಿ. ಪ್ರತಿ ಶುಕ್ರವಾರ ಅರಿಶಿಣ-ಕುಂಕುಮ ಬೆರೆಸಿದ ನೀರನ್ನು ತುಳಸಿಗಿಡಕ್ಕೆ ಹನಿಸಿ. ಅತ್ತೆಯವರನ್ನು ಶಾಂತವಾಗಿಸಲು ರಾಹುವಿನ ನೆರವಿನ ಅಗತ್ಯವಿದೆ. ರಾಹುಪೀಡಾ ನಿವಾರಣಾ ಸ್ತೋತ್ರ 27 ಬಾರಿ ಓದಿ. 27 ಬಾರಿ ಓದಲು ಕೇವಲ 12ರಿಂದ 15 ನಿಮಿಷ ಸಾಕು.

# ಕೇಂದ್ರ ಸರ್ಕಾರಿ ಕೆಲಸದಲ್ಲಿರುವ ನನಗೆ ಇದ್ದಕ್ಕಿದ್ದಂತೆ ಬೆಂಗಳೂರಿನಿಂದ ಹೈದರಾಬಾದ್​ಗೆ ವರ್ಗವಾಗಿದೆ. ಹಲವು ರೀತಿಯ ತೊಂದರೆ ಎದುರಿಸುತ್ತಿದ್ದೇನೆ. ಮದುವೆಯೂ ವಿಳಂಬವಾಗುತ್ತಿದೆ. ಊರಲ್ಲಿ ತಂದೆ-ತಾಯಿಗೆ ಕಾಯಿಲೆ. ಅಣ್ಣನ ಮೇಲೆ ಜವಾಬ್ದಾರಿ. ಒಂದಕ್ಕೊಂದು ಕೂಡಿ ಬರದೆ ಕೇವಲ ಕಿರಿಕಿರಿ, ಒತ್ತಡಗಳಲ್ಲಿ ಕುಸಿಯುತ್ತಿದ್ದೇನೆ. ನಾನು ಮನಸ್ಸಿಟ್ಟ ಹುಡುಗಿಯ ಬಗ್ಗೆ ಮನೆಯಲ್ಲಿ ಒಪ್ಪಿಗೆ ಇಲ್ಲ. ಸೂಕ್ತ ನಿರ್ಧಾರ, ತಿಳಿವಳಿಕೆ, ಸಲಹೆಗಳೇ ಇರದೆ ಬದುಕು ಯಾಂತ್ರಿಕವಾಗಿದೆ. ಪರಿಹಾರಗಳೇನು?

| ಗಜಾನನ ಹೆಗಡೆ ಹೈದರಾಬಾದ್

ಸ್ವಲ್ಪ ಸಮಾಧಾನ ತಾಳಿ. ಇನ್ನು 25 ತಿಂಗಳಲ್ಲಿ ಸಾಡೇಸಾತಿ ಮುಗಿಯಲಿದೆ. ಜತೆಗೆ ಉತ್ತಮವಾದ ಬುಧನು ತನ್ನ ದಶಾಕಾಲದಲ್ಲಿ ಒಳಿತಿಗಾಗಿ ದಾರಿ ಮಾಡಿಕೊಡುತ್ತಾನೆ. ನರಸಿಂಹ ಕರಾವಲಂಬ ಸ್ತೋತ್ರ, ರಾಮರಕ್ಷಾ ಸ್ತೋತ್ರ, ವಿಷ್ಣು ಅಷ್ಟೋತ್ತರ ಓದಿ. ಒಳಿತಿಗಾಗಿನ ದಿನಗಳು ಹತ್ತರ ಬರುತ್ತಿವೆ. ತಂದೆ-ತಾಯಿಯ ಬಳಿ ರಜಾ ಪಡೆದು ಬಂದು ನೇರವಾಗಿ ಮಾತನಾಡಿ. ಮದುವೆಯ ವಿಚಾರದಲ್ಲಿ ಸರಳ ಪರಿಹಾರ ಮೂಡಿಕೊಳ್ಳುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದಿರಿ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *