ಜ್ಞಾನ ಭಕ್ತಿಗಳೊಡನೆ ಶರಣಾಗು

| ಸ್ವಾಮಿ ಹರ್ಷಾನಂದಜೀ ರಾಮಕೃಷ್ಣ ಮಠ, ಬಸವನಗುಡಿ, ಬೆಂಗಳೂರು

ಕಾಳಿದಾಸನ ಕುಮಾರಸಂಭವದಲ್ಲಿ ದಕ್ಷನ ಮಗಳಾದ ಪಾರ್ವತಿ ತನ್ನ ದೇಹ ತೊರೆದು, ಹಿಮವಂತನ ಮಗಳಾಗಿ ಹೇಮಾವತಿಯಾಗಿದ್ದಾಳೆ. ಅವಳು ಶಿವನನ್ನು ಪತಿಯಾಗಿ ಪಡೆಯಲು ಕಠೋರ ತಪಸ್ಸಿನಲ್ಲಿ ಆಹಾರ ತೊರೆದು, ಎಲೆಗಳನ್ನು ತಿನ್ನುತ್ತಿದ್ದಳು. ನಂತರ ಅದನ್ನೂ ಬಿಟ್ಟು ವಾಯುಸೇವನೆಯಿಂದ ತಪಸ್ಸು ಮುಂದುವರಿಸಿದಳು. ಮಗಳ ಕಠೋರತೆ ನೋಡಿ ತಾಯಿ ಮೇನೆಗೆ ದುಃಖವಾಯಿತು. ಅವಳು ಮಗಳಿಗೆ ‘ಉ-ಮಾ’ ಎಂದರೆ ‘ಇನ್ನುಮುಂದೆ ಹೀಗೆ ಮಾಡದಿರು’ ಎಂದಳು. ಅವಳ ತಪಸ್ಸನ್ನು ಪರೀಕ್ಷಿಸಲು ಶಿವ ಬ್ರಹ್ಮಚಾರಿಯಾಗಿ ಬಂದನು. ಅವಳು ಅವನಿಗೆ ಗೌರವಿಸಿದಳು. ಇವನು ‘ನೀನೇಕೆ ಕಷ್ಟಪಡುತ್ತಿರುವೆ?’ ಎಂದನು. ಅವಳು ‘ನಾನು ಶಿವನನ್ನು ಪತಿಯಾಗಿ ಪಡೆಯಲು ಇವೆಲ್ಲವನ್ನೂ ಮಾಡುತ್ತಿರುವೆ’ ಎಂದಳು. ಇವನು ಶಿವನನ್ನು ಚೆನ್ನಾಗಿ ಬೈದಾಗ ಅವಳಿಗೆ ಸಿಟ್ಟು ಬರುವುದು. ಆಗವಳ ತಂದೆ-ತಾಯಿ ಬಂದು, ‘ಬ್ರಹ್ಮಚಾರಿ ಸೇವೆ ಮಾಡು. ಪುಣ್ಯ ಬರುವುದು’ ಹಾಗೂ ಇವನಿಗೆ, ‘ನಮ್ಮ ಮಗಳು ನಿನ್ನ ಸೇವೆ ಮಾಡುವುದರಿಂದ ನಿನಗೆ ತೊಂದರೆ, ವಿರೋಧಗಳಿವೆಯೇ?’ ಎನ್ನುವರು. ಬ್ರಹ್ಮಚಾರಿ ತನಗೇನೂ ತೊಂದರೆಯಿಲ್ಲ ಎನ್ನುವನು. ಆಗ ಕಾಳಿದಾಸ, ‘ಮನಸ್ಸಿಗೆ ವಿಕಾರವುಂಟುಮಾಡುವ ಎದುರಿಗಿರುವ ಆಕರ್ಷಕ ವಿಷಯವಸ್ತುಗಳನ್ನು ಪಡೆಯುವ ಸ್ವಾತಂತ್ರ್ಯದ್ದರೂ ಬೇಕೆಂದೇ ಅವುಗಳ ಆಕರ್ಷಣೆಗೆ ಒಳಗಾಗದೆ ಯಾರ ಮನಸ್ಸು ವಿಕಾರವಾಗುವುದಿಲ್ಲವೋ ಅವರಿಗೆ ‘‘ಧೀರ’’ರೆಂದು ಹೆಸರು’ ಎನ್ನುವನು. ಶಿವ ಅಂಥ ಸ್ಥಿತಪ್ರಜ್ಞ ಧೀರನಾಗಿದ್ದರಿಂದ ಪಾರ್ವತಿ ಸೇವೆ ಮಾಡಿದಳು. ನಂತರ ಶಿವ ದರ್ಶನ ಕೊಟ್ಟು ಪಾರ್ವತಿಯ ವಿವಾಹವಾಗುವುದು.

ಸ್ಥಿತಪ್ರಜ್ಞನು ಇಂದ್ರಿಯಗಳನ್ನು ನಿಗ್ರಹಿಸಿ, ಎಲ್ಲ ವಿಷಯಗಳನ್ನು ತೊರೆದಿದ್ದರೂ ಮನಸ್ಸಿನಲ್ಲಾಗಬಹುದಾದ ಅವುಗಳ ಸಂಸ್ಕಾರಗಳನ್ನು ಹೋಗಲಾಡಿಸಲು ಸಾಧನೆಯ ಮೂಲಕ ಸಾಕ್ಷಾತ್ಕಾರಕ್ಕಾಗಿ ಯತ್ನಿಸಬೇಕು. ಈ ಯತ್ನದಿಂದ ಸಾಕ್ಷಾತ್ಕಾರವಾದಾಗ ಎಲ್ಲಾ ವಿಷಯವಸ್ತುಗಳ ರಸ, ರುಚಿ, ಸಂಸ್ಕಾರಗಳನ್ನು ಗೆದ್ದು ಸ್ಥಿತಪ್ರಜ್ಞ ಸ್ಥಿತಿಯಲ್ಲಿ ಮುಂದುವರಿಯಬಹುದು.

ಜ್ಞಾನದೊಡನೆ ಭಕ್ತಿಯಿಂದ ಭಗವಂತನಲ್ಲಿ ಶರಣಾಗಿ ತನ್ಮೂಲಕ ಸ್ಥಿತಪ್ರಜ್ಞಸ್ಥಿತಿ ಹೊಂದುವವನಾಗು. ಪರಮಾತ್ಮನು ಈ ಶ್ಲೋಕದಲ್ಲಿ ಸಾಧಕನಿಗೆ ಸುಲಭವಾಗಲು ಸಾಧನೆಯ ವಿಷಯದಲ್ಲಿ ಎಚ್ಚರಿಸುವನು. (ಯತತೋ ಹ್ಯಪಿ ಕೌಂತೇಯ… ಭ.ಗೀ.: 2.60) ‘ಎಲೈ ಕೌಂತೇಯ, ನಮ್ಮಲ್ಲಿ ವಿಕ್ಷೇಪವುಂಟುಮಾಡುವ (ತಪ್ಪು ದಾರಿಗೆಳೆಯುವ) ಬಲವಾದ ಪಂಚೇಂದ್ರಿಯಗಳು ಮನಸ್ಸನ್ನು ಕದಡುತ್ತವೆ. ಪ್ರಯತ್ನಶೀಲನೂ, ಜ್ಞಾನಿಯೂ ಆದವನ ಮನಸ್ಸನ್ನೂ ಬಲಾತ್ಕಾರದಿಂದ ಹರಣ ಮಾಡುವುವು’ ಎನ್ನುವನು ಶ್ರೀಕೃಷ್ಣ. ಕೇವಲ ಜ್ಞಾನವಿದ್ದರೆ ಸಾಲದು. ಅದರ ಸಾಕ್ಷಾತ್ಕಾರವಾಗಬೇಕು. ಇದಕ್ಕಾಗಿ ಬುದ್ಧಿವಂತ ಸಾಧಕ ಸಾಧನೆಯ ಮೂಲಕ ಯತ್ನಿಸುವನು. ಗಂಡು ಜಿಂಕೆ ತನ್ನ ಮರಿಗಳೊಡನೆ ನೀರು ಕುಡಿಯಲು ಹೋಯಿತು. ನೀರಿನ ಪ್ರತಿಬಿಂಬದಲ್ಲಿ ತನ್ನ ಕವಲೊಡೆದ ಸುಂದರ ಕೊಂಬುಗಳನ್ನು ನೋಡಿ ಜಂಬವೆನಿಸಿತು. ಮರಿಗಳಿಗೆ ತನ್ನ ಸೌಂದರ್ಯದ ಬಗ್ಗೆ ಬಡಾಯಿ ಕೊಚ್ಚಿತು. ಹುಲಿ, ಸಿಂಹ ಬಂದರೂ ಸೀಳಿಹಾಕುವೆ ಎಂದಿತು. ಅಷ್ಟರಲ್ಲಿ ದೂರದಲ್ಲಿ ಬೇಟೆನಾಯಿ ಬೊಗಳುವ ಸದ್ದು ಕೇಳಿತು. ತಕ್ಷಣವೇ ಅದು ನೂರು ಮೈಲಿ ವೇಗದಲ್ಲಿ ಓಟಕಿತ್ತಿತು. ಅಪ್ಪ ಓಡಿದ್ದು ಏಕೆಂದು ತಿಳಿಯದೆ ಮರಿಗಳೂ ಓಡಿ ‘ಕೊಂಬು ಗಟ್ಟಿಯಾಗಿದೆಯೆಂದು ಜಂಬಕೊಚ್ಚಿ ಓಡಿದ್ದೇಕೆ?’ ಎಂದು ಪ್ರಶ್ನಿಸಿದವು. ಆಗ ಅದು, ‘ಆ ನಾಯಿ ಶಬ್ದ ಕೇಳಿದೊಡನೆ ಕೊಂಬು, ಶಕ್ತಿ ಎಲ್ಲಾ ಮರೆತುಹೋಗುವುದು’ ಎಂದಿತು. ಅನೇಕ ಬಾರಿ ಸಾಧಕರು ತಾವು ಬಹಳ ಸಾಧನೆ ಮಾಡಿದ್ದೇವೆ, ತಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲವೆಂದು ತಿಳಿದಿರುವರು. ಆದರೆ ಆಕರ್ಷಣೆ, ಅಡಚಣೆಗಳು ಕೇವಲ ಅರ್ಧ ಕ್ಷಣದಲ್ಲಿ ಮನಸ್ಸನ್ನು ಮುರಿಯುತ್ತವೆ. ಇದನ್ನು ತಿಳಿಸಲು ಶ್ರೀರಾಮಕೃಷ್ಣ ಪರಮಹಂಸರು ಈ ಕಥೆ ಹೇಳುತ್ತಿದ್ದರು.

ಬಲವಾದ ಇಂದ್ರಿಯಗಳನ್ನು ನಮ್ಮ ಪ್ರಯತ್ನದಿಂದ ಗೆಲ್ಲುವುದು ಕಷ್ಟಸಾಧ್ಯ. ಇವುಗಳನ್ನು ಗೆಲ್ಲುವ ಬಗ್ಗೆ ವೇದಾಂತದೇಶಿಕರು ಮುಂದಿನ ಉದಾಹರಣೆ ಕೊಡುವರು. ವ್ಯಾಪಾರಿಯೊಬ್ಬ ಬಹಳ ವಸ್ತುಗಳ ಸಹಿತ ಆಳುಗಳೊಡನೆ ಮಾರಾಟಕ್ಕೆ ಬೇರೆ ಊರಿಗೆ ಹೊರಟಿದ್ದಾನೆ. ದಾರಿಯಲ್ಲಿ ಕಾಡಿನ ಮೂಲಕ ಸಾಗುವಾಗ ನಾಲ್ವರು ದರೋಡೆಕೋರರು ಬಂದು ವಸ್ತುಗಳನ್ನು ಲೂಟಿ ಮಾಡಿದರು. ವ್ಯಾಪಾರಿ ಕಷ್ಟಪಟ್ಟು ಹಿಂತಿರುಗಿ ಬಂದು ರಾಜನಲ್ಲಿಗೆ ಹೋಗಿ ಕಳ್ಳರಿಂದ ರಕ್ಷಣೆಗಾಗಿ ಪ್ರಾರ್ಥಿಸಿದನು. ಅದಕ್ಕಾಗಿ ರಾಜ ಅವನಿಗೆ ಸೈನಿಕರನ್ನು ರಕ್ಷಣೆಗಾಗಿ ಕೊಟ್ಟನು. ವ್ಯಾಪಾರಿ ಇದನ್ನು ಎಲ್ಲೆಡೆ ಡಂಗುರ ಸಾರಿದನು. ಕಾಡಿನ ಕಳ್ಳರ ಕಿವಿಗೂ ಈ ವಿಷಯ ಬಿದ್ದಿತು. ಅವರು ಎಚ್ಚರಗೊಂಡು ಇವನ ತಂಟೆಗೆ ಬರದಿರಲು ನಿರ್ಧರಿಸಿದರು. ಅಂದಿನಿಂದ ವ್ಯಾಪಾರಿ ನಿರ್ಭಯವಾಗಿ ಕಾಡಿನಲ್ಲಿ ಹೋಗಲಾರಂಭಿಸಿದನು. ಜೀವನದಲ್ಲೇ ಹೀಗಿರುವಾಗ ಆಧ್ಯಾತ್ಮಿಕ ಜೀವನದಲ್ಲೂ ರಕ್ಷಣೆಯ ಸಹಾಯ ಬೇಕು. ಇದು ಪರಮಾತ್ಮನ ಕೃಪೆಯಿಂದ, ಭಕ್ತಿಯಿಂದ ಮಾತ್ರ ಬರುವುದು. ನಾವು ಭಕ್ತರಾಗಿ ಭಕ್ತಿಯಿಂದ ‘ಭಗವಂತ, ನಾನು ಸಾಮಾನ್ಯ ಸಾಧಕ. ದೊಡ್ಡ ತಪಸ್ಸು ಮಾಡುವ ಶಕ್ತಿಯಿಲ್ಲ. ಗುರು-ಹಿರಿಯರಿಂದ ಸ್ವಲ್ಪ ವಿಷಯ ತಿಳಿದಿರುವೆ. ಅದನ್ನು ಅಭ್ಯಾಸ ಮಾಡುವೆ. ಆದರೆ ನನಗೆ ನೈಜ ರಕ್ಷಣೆ ನಿನ್ನಿಂದ ಮಾತ್ರ. ನೀನೇ ನನ್ನ ಆಪದ್ಬಾಂಧವ’ ಎಂದು ಪ್ರಾರ್ಥಿಸಿದಾಗ, ನಮ್ಮ ಸಾಧನಾಪಥದಲ್ಲಿ ಒಳಗಿನಿಂದ ಶಕ್ತಿ ಬರುವುದು. ಆಗ ನಮ್ಮನ್ನು ಮುಟ್ಟಲು ಯಾರಿಗೂ ಸಾಧ್ಯವಿಲ್ಲ. ಪರಮಾತ್ಮನ ಕೃಪೆ, ದಯೆ ಎಂಬ ಶ್ರೀರಕ್ಷೆ ನಮ್ಮ ಮೇಲಿರುವವರೆಗೂ ನಾವು ಕ್ಷೇಮವಾಗಿ ಸಾಧನೆಯ ದಾರಿಯಲ್ಲಿ ಸಾಗಬಹುದು. ವಿಷಯ ತಿಳಿದು ಜ್ಞಾನ ಸಂಪಾದಿಸಿ ಕೈಲಾದಷ್ಟು ಆತ್ಮಗೌರವ, ಆತ್ಮಶಕ್ತಿಯಿಂದ ಸಾಧನೆ ಮಾಡುವಾಗ ನಮಗೆ ಹೇಗಾದರೂ ರಕ್ಷಣೆ ದೊರೆಯಬೇಕು. ಇದು ಸಿಗುವುದು ಪರಮಾತ್ಮನಿಂದ ಮಾತ್ರ. ಮನುಷ್ಯಪ್ರಯತ್ನದ ಅಹಂಕಾರವಿರದೆ, ದೈವಾನುಗ್ರಹವಿದ್ದಾಗ ಮಾತ್ರ ಸಫಲತೆ ಬರುವುದು. ಯಾವುದೇ ಕೆಲಸವಾಗಲು ಅಧಿಷ್ಠಾನ, ಕರ್ತೃ, ಅನೇಕ ಬಗೆಯ ಕರಣ ಮತ್ತು ವಿಧವಿಧದ ಕರ್ಮಗಳ ಸಿದ್ಧಿಗಾಗಿ ಐದನೆಯದಾಗಿ ದೈವ ಇರಬೇಕೆಂದು ಭಗವಂತ 18ನೆಯ ಅಧ್ಯಾಯದಲ್ಲಿ ಹೇಳಿರುವನು. ನಾವೆಷ್ಟೇ ಕಷ್ಟಪಟ್ಟು ನಮ್ಮ ಶಕ್ತಿ ಅವಲಂಬಿಸಿ ಕೆಲಸ ಮಾಡಿದರೂ ಅದು ಸಾಲದು. ಕಾರಣವೇನೆಂದರೆ ಇಂದ್ರಿಯಗಳು ಬಹಳ ಶಕ್ತಿಯುಳ್ಳವು. ಇದಕ್ಕೆ ಕಾರಣ ನಾವು ನೂರಾರು ಜನ್ಮ ದಾಟಿ ಬಂದಿರುವುದರಿಂದ ಪ್ರತಿ ಜನ್ಮದಲ್ಲೂ ಒಂದೊಂದು ರೀತಿ ಸಂಸ್ಕಾರ ಸಂಪಾದಿಸಿರುತ್ತೇವೆ. ಯಾವ ಸಂಸ್ಕಾರ ಯಾವ ಸಮಯದಲ್ಲಿ ನಮ್ಮನ್ನು ಕೆಡವುತ್ತದೆನ್ನಲಾಗದು. ಹೀಗಿರುವಾಗ ನಮಗೆ ಭಗವಂತನ ಕೃಪೆಯೊಂದೇ ಆಶ್ರಯ. ಇದನ್ನು ಭಾವಿಸಿ ಪುರುಷಪ್ರಯತ್ನದ ಜತೆ ಭಗವಂತನ ಅನುಗ್ರಹದಿಂದ ಸಾಧನಾಪಥದಲ್ಲಿ ಸುಲಭವಾಗಿ ಸಾಕ್ಷಾತ್ಕಾರ ಸಂಪಾದಿಸಬಲ್ಲೆವು. (ಸಂಗ್ರಹ: ಸುರೇಶ್ ಕುಮಾರ್)

Leave a Reply

Your email address will not be published. Required fields are marked *