ಧ್ಯಾನಸ್ಥ ಮೌನ ಪರಿಪೂರ್ಣತೆಯ ಶಾಂತಿ

ಮೌನ ಎಂದರೆ ಕೇವಲ ಮಾತನಾಡದ ಕ್ಷಣವಲ್ಲ. ಸುಮ್ಮನಿರುವಾಗಲೂ ಮನದಲ್ಲಿ ಆಲೋಚನೆಗಳಿಲ್ಲದ ಕ್ಷಣ. ಹೊಸ ಚಿಂತನೆಯೊಂದು ತಾನಾಗಿ ಹುಟ್ಟಿಕೊಳ್ಳುವ ಕ್ಷಣ. ಮನದ ಈ ಧ್ಯಾನಸ್ಥ ಕ್ಷಣಗಳ ಅನುರಣನ, ಅನುಸಂಧಾನ ಈ ಚಿಂತನೀಯ ಬರಹದಲ್ಲಿದೆ.

| ಪುರುಷೋತ್ತಮಾನಂದ

ಒಮ್ಮನಸಿನಿಂದ ನೀನೀ ತತ್ವವಂ ಗ್ರಹಿಸು |

ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ |

ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು |

ನೆಮ್ಮದಿಗೆ ದಾರಿಯಿದು – ಮಂಕುತಿಮ್ಮ ||

‘ಏಕಾಗ್ರ ಮನಸ್ಸಿನಿಂದ ನೀನು ಈ ತತ್ವವನ್ನು ಗ್ರಹಿಸು. ಪರಮಾತ್ಮನ ಲೀಲಾವಿನೋದಕ್ಕೆ ಮಿತಿಯಿಲ್ಲ, ಗೊತ್ತುಗುರಿಯಿಲ್ಲ. ನಿನಗೆ ಸಂದ ಪಾಡನ್ನು ಪಡುತ್ತ ಮೌನವಾಗಿ, ಸುಮ್ಮನೆ, ಶಾಂತವಾಗಿರು. ನೆಮ್ಮದಿಯ ಬದುಕಿಗೆ ಇದೇ ದಾರಿ.’

| ಡಿ.ವಿ.ಜಿ.

ಭಗವದ್ಗೀತೆಯಲ್ಲಿ ಮೌನವನ್ನು, ‘ಮಾನಸಿಕ ತಪಸ್ಸು’ ಎಂದು ಕರೆದಿದ್ದಾನೆ ಶ್ರೀಕೃಷ್ಣ. ವೇದೋಪನಿಷತ್ತುಗಳಲ್ಲಿ ಶಾಂತಿಮಂತ್ರಗಳು ಹೇರಳವಾಗಿ ಕಂಡುಬರುತ್ತವೆ. ಇದರಿಂದ ನಮಗೊಂದು ವಿಷಯ ಸ್ಪಷ್ಟವಾಗುತ್ತದೆ. ಏನೆಂದರೆ, ಜೀವನದಲ್ಲಿ ನಾವು ಸೌಖ್ಯವನ್ನು ಕಾಣಬೇಕಾದರೆ ಆ ಮೌನ ಈ ಶಾಂತಿ ಅತ್ಯಗತ್ಯ ಎಂದು. ಸುಖಕರ ಜೀವನಕ್ಕೆ ಶಾರೀರಿಕ ಸೌಖ್ಯ ಹಾಗೂ ಮಾನಸಿಕ ಸೌಖ್ಯಗಳೆರಡೂ ಆವಶ್ಯಕ. ಮೌನವೆಂಬುದು ಈ ಶಾರೀರಿಕ ಸೌಖ್ಯ, ಮಾನಸಿಕ ಸೌಖ್ಯಗಳ ಮೇಲೆ ಎಷ್ಟು ಗಾಢವಾದ ಪ್ರಭಾವ ಬೀರಬಲ್ಲದು ಎಂಬುದು ಪ್ರಯೋಗ ಮಾಡಿ ನೋಡಿದಾಗ ತಿಳಿಯುತ್ತದೆ. ಶರೀರ ಮನಸ್ಸುಗಳಿಗೆ ಅಸೌಖ್ಯವಾದಾಗ ಮನುಷ್ಯ ಮೊದಲನೆಯದಾಗಿ ಬಯಸುವ ಅಂಶವೇ ಶಾಂತಿ. ಒಂದು ಕಡೆ ಶಾಂತವಾಗಿ ಒರಗಿಕೊಂಡಿರಲು ಬಯಸುತ್ತಾನೆ ಅವನು.

‘ಶಬ್ದಮಾಲಿನ್ಯ’ ಎಂಬುದು ಆಧುನಿಕ ವಿಜ್ಞಾನದ ಒಂದು ಕೊಡುಗೆ. ಈ ವಿಜ್ಞಾನದಿಂದ ಒಳ್ಳೆಯದಾಗಿಲ್ಲವೆಂದಲ್ಲ. ಆದರೆ, ಒಳ್ಳೆಯದರ ಜೊತೆಗೆ ಬಂದ ಕೆಡಕುಗಳನ್ನೂ ಗಮನಿಸದಿರುವಂತಿಲ್ಲ. ಮುಂದುವರಿದ ರಾಷ್ಟ್ರಗಳಲ್ಲಿನ ಪ್ರಮುಖ ನಗರಗಳ ನಿವಾಸಿಗಳು ಇಂದು ಶಬ್ದಮಾಲಿನ್ಯದಿಂದಾಗಿ ವಿಚಿತ್ರ ಶಾರೀರಿಕ ಹಾಗೂ ಮಾನಸಿಕ ಅಸೌಖ್ಯವನ್ನು ಅನುಭವಿಸುತ್ತಿರುವುದು ಕಂಡುಬರುತ್ತಿದೆ. ಸ್ವಯಂಕೃತಾಪರಾಧ!

ಆದರೆ, ಹೊರಗಡೆಯ ಶಬ್ದಮಾಲಿನ್ಯಕ್ಕಿಂತಲೂ ಹೆಚ್ಚಾಗಿ ನಮ್ಮ ಮಾತುಗಳ ಮೂಲಕ ಉಂಟಾದ ಶಬ್ದಮಾಲಿನ್ಯ ಇನ್ನೂ ಭಯಂಕರವಾದುದು. ಮಾತು, ಮಾತು, ಮಾತು! ನಾವು ಸದಾ ಹರಟುತ್ತಲೇ ಇರುತ್ತೇವೆ. ನಮ್ಮ ಮನಸ್ಸು ಕೂಡ ಹರಟುತ್ತಲೇ ಇರುತ್ತದೆ. ಯಾರಾದರೂ ಸಿಕ್ಕಿದರೆ ನಾಲಿಗೆ ಬಿಟ್ಟು ಹರಟುತ್ತದೆ. ಯಾರೂ ಸಿಗದೆ ಹೋದರೆ ತನ್ನೊಳಗೇ ಹರಟುತ್ತಿರುತ್ತದೆ. ನಮ್ಮ ಮನಸ್ಸನ್ನು ನಾವೇ ನೋಡಿಕೊಂಡಾಗ ಗೊತ್ತಾಗುತ್ತದೆ, ಈ ಮನಸ್ಸು ಸುಮ್ಮನಿರುವ ಸ್ವಭಾವದ್ದೇ ಅಲ್ಲ ಎಂದು. ನಿದ್ರೆ ಮಾಡುತ್ತಿರುವಾಗ ಮಾತ್ರ ಅದಕ್ಕೊಂದಿಷ್ಟು ವಿಶ್ರಾಂತಿ. ಆದರೆ, ನಿದ್ರೆಗೆ ಸ್ವಲ್ಪ ಮೊದಲು ಅದು ಕನಸು ಕಾಣುತ್ತ ಕನವರಿಸುತ್ತಿರುತ್ತದೆ. ನಿದ್ದೆಯಿಂದ ಏಳುವ ಮೊದಲು ಸ್ವಲ್ಪ ಕನವರಿಸುತ್ತಿರುತ್ತದೆ. ಹೀಗೆ ಈ ಹರಟುವ ಮನಸ್ಸನ್ನು ಒಳಗಿಟ್ಟುಕೊಂಡು ಕೇವಲ ತುಟಿ ಮುಚ್ಚಿ ಮೌನವನ್ನಾಚರಿಸುತ್ತಾರೆ ಕೆಲವರು. ಆಗ ಅವರ ಚೇಷ್ಟೆಗಳನ್ನು ಗಮನಿಸಬೇಕು ನಾವು! ಅಲ್ಲಿ ಮಾತೊಂದು ಇಲ್ಲ; ಆದರೆ ಉಳಿದೆಲ್ಲ ಚೇಷ್ಟೆಗಳೂ ಇರುತ್ತವೆ – ಭರತನಾಟ್ಯ, ಕಥಕ್ಕಳಿ, ಯಕಗಾನ – ಇವುಗಳನ್ನೆಲ್ಲ ನಾವಲ್ಲಿ ಕಾಣಬಹುದು. ಇನ್ನು ಕೆಲವರು ಈ ಬಗೆಯ ಚೇಷ್ಟೆಗಳನ್ನು ಮಾಡದಿದ್ದರೂ ಒಂದೇ ಸಮನೆ ಬರೆದು ಬರೆದು ತೋರಿಸುತ್ತಿರುತ್ತಾರೆ. ಇದರಿಂದ ನಾವೇನು ತಿಳಿಯಬಹುದೆಂದರೆ ಅವರ ತುಟಿಗಳು ಮುಚ್ಚಿಕೊಂಡಿದ್ದರೂ ಮನಸ್ಸು ಮಾತ್ರ ಮಾತನಾಡುತ್ತಲೇ ಇದೆ ಎಂದೆ. ಆದ್ದರಿಂದಲೇ ಶ್ರೀಕೃಷ್ಣ ಮೌನವನ್ನು ಮಾನಸಿಕ ತಪಸ್ಸಿನ ವರ್ಗಕ್ಕೆ ಸೇರಿಸಿದ್ದಾನೆ. ಎಂದರೆ, ಮನಸ್ಸನ್ನು ಮೌನಗೊಳಿಸಲು ಸಾಧ್ಯವಾದಾಗಲೇ ನಿಜವಾದ ಮೌನಾಚರಣೆ ಮಾಡಿದಂತಾಗುತ್ತದೆ.

ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್ |

ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ ||

‘ಸತ್ಯವಾದ, ಸಂತೋಷಕರವಾದ, ಹಿತವಾದ, ಹಾಗೂ ಇತರರ ಮನಸ್ಸನ್ನು ಕೆಡಿಸದ ಮಾತನ್ನಾಡುವುದು. ನಿರಂತರ ಸ್ವಾಧ್ಯಾಯದ ಅಭ್ಯಾಸ ಇವು ಮಾತಿನ ಸಂಯಮ ಅಥವಾ ತಪಸ್ಸೆನಿಸುವುದು.’

| ಭಗವಾನ್ ಶ್ರೀಕೃಷ್ಣ (ಭಗವದ್ಗೀತೆ.: 17-15)

ಈ ಮೌನದ ಮಹತ್ವವನ್ನು ಮನಗಾಣಿಸುವುದಕ್ಕಾಗಿ ಜನ ಅದೆಷ್ಟು ಮಾತನಾಡಿದ್ದಾರೆ! ನಿಜಕ್ಕೂ ಈ ಮೌನ ಮನಶ್ಶಾಂತಿಗೂ ಸಹಾಯಕಾರಿ, ಸಮಾಜದ ಶಾಂತಿಗೂ ಸಹಾಯಕಾರಿ. ಮಾತಿನಿಂದ ಮನೆಮನೆಗಳೇ ಹಾಳಾಗಿ ಹೋಗಿವೆ. ಮಾತಿನಿಂದ ಸ್ನೇಹ ಸುಟ್ಟುಹೋದ ಉದಾಹರಣೆಗಳಿವೆ. ಮಾತೇ ಮೃತ್ಯುವಾದ ಸಂದರ್ಭಗಳೂ ಇವೆ. ಆದರೆ ಮೌನದಿಂದ ಕೆಟ್ಟುಹೋದದ್ದು ಯಾವುದೂ ಇಲ್ಲ.

ಬಹಳ ಮಾತನಾಡುವುದರಿಂದ ಮನಸ್ಸನ್ನು ಏಕಾಗ್ರಗೊಳಿಸಿ ಧ್ಯಾನಕ್ಕೆ ನಿಯೋಜಿಸುವುದು ಅಸಂಭವನೀಯ. ಯೋಗದ ಮೊದಲ ಮೆಟ್ಟಿಲೇ ವಾಜ್‌ ನಿರೋಧ. ಬಹಳವಾಗಿ ಮಾತನಾಡುವುದರಿಂದ ಮನಸ್ಸು ಬರಡಾಗುತ್ತದೆ. ಮೊದಲೇ ಚಂಚಲವಾದ ಮನಸ್ಸು ಮತ್ತಷ್ಟು ಚಂಚಲವಾಗುತ್ತದೆ. ಮನಸ್ಸಿನ ಸತ್ವ ಕುಂಠಿತವಾಗುತ್ತದೆ. ಅಲ್ಲದೆ, ನಾವಾಡುವ ಒಂದೊಂದು ಮಾತಿನ ಮೂಲಕವೂ ನಮ್ಮ ಶಕ್ತಿ ಅಷ್ಟಷ್ಟು ಹರಿದುಹೋಗುತ್ತದೆ ಎಂಬುದು ನಮಗೆ ತಿಳಿದಿರಬೇಕು. ಮೌನದಿಂದ ಶಕ್ತಿ ಸಂಚಯವಾಗುತ್ತದೆ.

ಭಗವತ್ಸಾಕ್ಷಾತ್ಕಾರದ ದಾರಿಯಲ್ಲಿ ಸತ್ಯವಾಕ್ಯಪರಿಪಾಲನೆ ಅತ್ಯಾವಶ್ಯಕ. ಸತ್ಯಪಾಲನೆಯಲ್ಲಿ ಮೌನದ್ದೇ ಮಹತ್ವದ ಪಾತ್ರ. ಬಹಳ ಮಾತನಾಡುವಾಗ ಒಂದೊಂದು ಸುಳ್ಳು ನುಸುಳುವ ಸಂಭವ. ಹೀಗೆ ಪರ್ಯಾಯವಾಗಿ ಭಗವತ್ ಸಾಕಾತ್ಕಾರಕ್ಕೆ ಮೌನವು ನೆರವಾಗುವ ಬಗೆಯನ್ನು ಗಮನಿಸಬೇಕು ನಾವು!

ಭಗವಂತನ ಭಾಷೆಯೇ ಮೌನ. ಮೌನವನ್ನು ಅಭ್ಯಸಿಸಿ ಮನಸ್ಸಿನ ಗದ್ದಲವನ್ನು ನಿಲ್ಲಿಸಿದಾಗ ಭಗವಂತನ ಧ್ವನಿ ಕೇಳಲಾರಂಭಿಸುತ್ತದೆ. ನಮಗೆ ತಿಳಿದಿರುವಂತೆ ಧ್ಯಾನ ಕಾಲದಲ್ಲಿ ಇತರ ಮಾತುಗಳೆಲ್ಲ ನಿಂತಾಗ ಮನಸ್ಸು ತೈಲಧಾರೆಯಂತೆ ಭಗವಂತನ ಕಡೆಗೆ ಏಕಮುಖವಾಗಿ ಹರಿಯಲಾರಂಭಿಸುತ್ತದೆ. ಇಂತಹ ಧ್ಯಾನಕಾಲದಲ್ಲೇ ನಮಗೂ ಭಗವಂತನಿಗೂ ನಿಕಟವಾದ ಸಂಪರ್ಕ ಸಂಬಂಧ ಏರ್ಪಡುವುದು. ಧ್ಯಾನ ಕಾಲದಲ್ಲಿ ನೀರವ ಮೌನ ಆವರಿಸುತ್ತದೆ. ಈ ಧ್ಯಾನವೇ ಗಳಿತವಾಗಿ ಮುಂದೆ ಅದು ಸಮಾಧಿಸ್ಥಿತಿಯನ್ನು ಮುಟ್ಟಿದಾಗ ಮೌನ ಪರಿಪೂರ್ಣವಾಗುತ್ತದೆ. ಏಕೆಂದರೆ ಅಲ್ಲಿ ಮನಸ್ಸಿನ ಏಕಾಕಾರ ವೃತ್ತಿಯೂ ನಿಂತುಹೋಗಿರುತ್ತದೆ. ಇಂತಹ ದಿವ್ಯಮೌನದಲ್ಲೇ ಭಗವಂತ ನಮ್ಮೊಡನೆ ಮಾತನಾಡುವುದು. ಅವನ ಮೌನವ್ಯಾಖ್ಯಾನದಿಂದ ನಮ್ಮ ಸಂಶಯಗಳೆಲ್ಲ ಪರಿಹಾರ.

ಮಾತಿನಿಂ ನಗೆ-ನುಡಿಯು | ಮಾತಿನಿಂ ಹಗೆ ಕೊಲೆಯು|

ಮಾತಿನಿಂ ಸರ್ವ ಸಂಪದವು ಲೋಕಕ್ಕೆ |

ಮಾತೆ ಮಾಣಿಕವು ಸರ್ವಜ್ಞ ||

| ಸರ್ವಜ್ಞ

ಈಗ, ಇಂತಹ ತಪೋಮಯವಾದ ಹಾಗೂ ಶಾಂತಿದಾಯಕವಾದ ಮೌನವನ್ನು ಅಭ್ಯಾಸ ಮಾಡುವುದು ಹೇಗೆ ಎಂಬುದು ಕೂಡ ಚಿಂತನೀಯವಾದ ಅಂಶ. ನಾವು ಯಾವುದಾದರೂ ಒಂದು ಅದ್ಭುತವನ್ನು ಕಂಡಾಗ ಅಥವಾ ಕೇಳಿದಾಗ ‘ಆಹಾ!’ ಎಂಬ ಉದ್ಗಾರವೆತ್ತಿ ಮೂಕರಾಗುತ್ತೇವೆ, ಮೌನ ತಾಳುತ್ತೇವೆ. ಸಮುದ್ರದ ಮುಂದೆ ನಿಂತಾಗ ಅದರ ಅಗಾಧತೆಯನ್ನು ಕಂಡು ಮನಸ್ಸು ಮೂಕವಾಗುತ್ತದೆ. ರಾತ್ರಿ ಕೋಟಿಕೋಟಿ ನಕ್ಷತ್ರಗಳಿಂದ ಕೂಡಿದ ಅನಂತ ಆಕಾಶವನ್ನು ನೋಡಿದಾಗ ಅನಂತದ ಕಲ್ಪನೆಯಿಂದ ಮನಸ್ಸು ಮೌನವಾಗುತ್ತದೆ.

ಅದ್ಭುತ ಘಟನೆಗಳೇ ಆಗಲಿ, ಅಗಾಧ ಸಮುದ್ರವೇ ಆಗಲಿ, ಅನಂತ ಆಕಾಶವೇ ಆಗಲಿ – ಇವೆಲ್ಲಕ್ಕಿಂತ ಅದ್ಭುತ, ಅನಂತನಾದವನು ಭಗವಂತ. ಅದ್ಭುತ ವಿಶ್ವವನ್ನು ಸೃಷ್ಟಿಸಿ ಅದನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತಿರುವವನು ಭಗವಂತ. ಇಂತಹ ಭಗವಂತನ ಮಹಿಮೆಯನ್ನು, ಅವನ ಅನಂತ ಕಲ್ಯಾಣಗುಣಗಳನ್ನು ಅವನ ದಿವ್ಯಾದ್ಭುತ ಚರಿತೆಯನ್ನು ಅರಿತು ಭಾವಿಸುವುದರ ಮೂಲಕ ನಮ್ಮ ಮಾತನಾಡುವ ಮನಸ್ಸನ್ನು ಮೌನವಾಗಿಸುವುದು ಸುಲಭವಾಗಲಾರದೆ? ಹೀಗೆ ಭಗವಂತನ ಮಹಿಮೆಯಲ್ಲಿ ಮನಸ್ಸು ನೆಲೆನಿಂತಾಗ ಉಂಟಾದ ಮೌನದಿಂದ ಶಾಂತಿ, ಸಮಾಧಾನ, ಆನಂದ!

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದರೆ

ಕೂಡಲಸಂಗಮದೇವನೆಂತೊಲಿವನಯ್ಯ

| ಬಸವಣ್ಣ

(ಕೃಪೆ: ‘ವಿಚಾರಕಿರಣ! ಭಾವಸ್ಪುರಣ!!’, ವಿವೇಕಹಂಸ)