ಹರಪನಹಳ್ಳಿ ಭೀಮವ್ವ

ಹತ್ತೊಂಬತ್ತನೆಯ ಶತಮಾನದ ಮಹಿಳಾ ಕೀರ್ತನಕಾರ್ತಿಯರಲ್ಲಿ ಅಗ್ರಸ್ಥಾನದಲ್ಲಿರುವವರು ಹರಪನಹಳ್ಳಿ ಭೀಮವ್ವ. ಅವರ ಆರಾಧನೆಯ ಈ ಸಂದರ್ಭದಲ್ಲಿ ದಾಸಸಾಹಿತ್ಯಕ್ಕೆ ಅವರ ಕೊಡುಗೆಯ ಅವಲೋಕನ ಇಲ್ಲಿದೆ.

| ಕೆ. ಲೀಲಾ ಶ್ರೀನಿವಾಸ ಹರಪನಹಳ್ಳಿ

ಕರ್ನಾಟಕದ ದಾಸಪರಂಪರೆಯಲ್ಲಿ 19ನೆಯ ಶತಮಾನದ ಅಗ್ರಗಣ್ಯ ಪ್ರಾಜ್ಞ ಮಹಿಳಾ ಕೀರ್ತನಕಾರರಲ್ಲಿ ಹರಪನಹಳ್ಳಿಯ ಭೀಮವ್ವನದು ದೊಡ್ಡ ಹೆಸರು. ಇವರು ರಚಿಸಿದ ಅಸಂಖ್ಯ ಹರಿ ಕೀರ್ತನೆಗಳಲ್ಲಿ ಧರ್ಮಪರಾಯಣತೆ, ಅಧ್ಯಾತ್ಮಿಕತೆಗಳು ಅನುಭವಾತ್ಮಕ ನೆಲೆಯಲ್ಲಿ ಸಮ್ಮಿಳಿತಗೊಂಡು ಕನ್ನಡ ಸಾರಸ್ವತಲೋಕಕ್ಕೆ ಅಪೂರ್ವ ಕೊಡುಗೆಯೆನಿಸಿವೆ.

ತಂದೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯ ರಘುನಾಥಾಚಾರ್ಯರು, ತಾಯಿ ರಾಘಮ್ಮ. ಉತ್ತಮ ಸಂತಾನಕ್ಕಾಗಿ ದಂಪತಿಗಳು ಹರಿವಾಯು ಗುರುಗಳನ್ನು ಪೂಜಿಸಿದ ಫಲವಾಗಿ 1823ರ ಜುಲೈ ಆರರಂದು ಹೊಸಪೇಟೆ ತಾಲ್ಲೂಕು ನಾರಾಯಣದೇವರಕೆರೆಯಲ್ಲಿ ಜನಿಸಿದ ಮಗಳೇ ಮುಂದೆ ಭೀಮವ್ವನೆಂದು ಹೆಸರಾದ ಕಮಲಾಕ್ಷಿ. ಹುಟ್ಟಿನಿಂದಲೇ ಮಿತಭಾಷಿ. ದೇವರ ವಿಗ್ರಹಗಳೆಡೆಗೆ ಆಕರ್ಷಣೆ. ಸದಾ ಹರಿಚಿಂತನೆ. ತೊಟ್ಟಿಲು ತೂಗಿ ಹರಿನಾಮ ಹಾಡಿದರೆ ಮಾತ್ರ ಅಳು ನಿಲ್ಲಿಸುವಿಕೆ – ಹೀಗೆ ಎಲ್ಲವೂ ಎಳವೆಯಲ್ಲಿಯೇ ಬಾಲೆಯ ಭವಿಷ್ಯತ್ತಿಗೆ ಹೊತ್ತಿಗೆಯಾಗಿದ್ದವು. ಹುಟ್ಟಿದ ಹಲವು ತಿಂಗಳುಗಳವರೆಗೆ ಮಗುವಿನ ಮೈಮೇಲೆ ಚಕ್ರ ಹಾಗೂ ಕಾಲುಗಳಲ್ಲಿ ಕಮಲದ ಚಿತ್ರ ಮೂಡಿದ್ದವಂತೆ. ಒಂದು ದಿನ ಮಗುವಿನ ಕೊರಳಿಗೆ ಹಾವೊಂದು ಸುತ್ತಿಕೊಂಡು ನಂತರ ತನ್ನಿಂತಾನೇ ಬಿಟ್ಟುಹೋಯಿತಂತೆ. ಮಗದೊಂದು ದಿನ ಚೇಳೊಂದು ಜಡೆಯಲ್ಲಿ ಸೇರಿಕೊಂಡಿತ್ತಂತೆ. ಅವಳು ಆರು ವರ್ಷದವಳಿದ್ದಾಗ ಕನಸಿನಲ್ಲಿ ವೇದವ್ಯಾಸರು ಬಂದು ಹರಸಿದ್ದರಂತೆ.

ಅನಕ್ಷರಸ್ಥೆಯಾದ ಕಮಲಾಕ್ಷಿ 11 ವರ್ಷದವಳಿದ್ದಾಗ ಆಗಿನ ಸಂಪ್ರದಾಯದಂತೆ ರಾಯದುರ್ಗ ತಾಲೂಕಿನ ಗೋಪಾಲಪ್ಪನವರ ವಂಶದ ಮುನಿಯಪ್ಪ ಎಂಬ 45 ವರ್ಷದ ವಿಧುರನಿಗೆ ಕೊಟ್ಟು ಮದುವೆ ಮಾಡಲಾಯಿತು. ಅವನಿಗವಳು ಮೂರನೇ ಹೆಂಡತಿ! ಗಂಡನ ಮನೆಯಲ್ಲಿ ಕೃಷ್ಣಾಬಾಯಿ ಎಂದು ಹೆಸರು ಬದಲಾಯಿತು. ಅತ್ತೆ ಮನೆಯಲ್ಲಿ ಅನಾದರ, ಬಿಡುವಿಲ್ಲದ ಕೆಲಸ, ವಯಸ್ಸಾದ ಪತಿ, ಸಂಸಾರದಲ್ಲಿ ಸರಿಗಮವಿಲ್ಲ. 12 ವರ್ಷಗಳಿದ್ದಾಗ ಒಬ್ಬ ಮಗಳು ಹಾಗೂ 14 ವರ್ಷದವಳಿದ್ದಾಗ ಒಬ್ಬ ಮಗ ಜನಿಸಿದರು. ವಯಸ್ಸಾದ ಪತಿಯ ಮರಣದ ನಂತರ ಜೀವನದ ಗತಿಯೇ ಬದಲಾಯಿತು. ಅಧ್ಯಾತ್ಮದೆಡೆಗೆ ತುಡಿತ, ದೇವರೇ ಎಲ್ಲಕ್ಕೂ ಎಂಬಂತೆ ಕೇವಲ ಪೂಜೆ, ಪುನಸ್ಕಾರ.

ಒಂದು ದಿನ ರಾತ್ರಿ ಸ್ವಪ್ನದಲ್ಲಿ – ಅರಣ್ಯದಲ್ಲಿ ಮರವೊಂದರ ಬುಡದಲ್ಲಿ ಈಕೆ ಮಲಗಿದ್ದಾಳೆ. ಆ ಮಾರ್ಗವಾಗಿ ನಾರದ ಮಹರ್ಷಿಗಳು ಬರುತ್ತಾರೆ. ಅವರೊಡನೆ ಒಂದು ಸರ್ಪ! ನಾರದರು ಆ ಸರ್ಪಕ್ಕೆ ಅಣತಿ ನೀಡಿ ಈಕೆಯ ನಾಲಿಗೆಯ ಮೇಲೆ ಅಕ್ಷರಗಳನ್ನು ಬರೆಸುತ್ತಾರೆ. ಬೆಳಗಾಗಿ ಎದ್ದ ನಂತರ ಅಚ್ಚರಿಯೆಂಬಂತೆ ಭೀಮವ್ವನಲ್ಲಿ ಬದಲಾವಣೆ! ಸಾಮಾನ್ಯ ಕುರಿಗಾಹಿ ಕಾಳಿದಾಸನಾದಂತೆ ಸತತ ಕೀರ್ತನೆಗಳನ್ನು ರಚಿಸಲಾರಂಭಿಸುತ್ತಾರೆ. ಹಾಗೆ ಬರೆದ ಮೊದಲ ಹಾಡೇ ‘ರಕ್ಷಿಸಬೇಕೆನ್ನ ಲಕ್ಷ್ಮೀನರಸಿಂಹನ ಭಕ್ತನೇ’. ಮೊದಮೊದಲು ಇವರು ತಮ್ಮ ರಚನೆಗಳನ್ನು ಪರರಿಗೆ ತೋರಿಸುತ್ತಿರಲಿಲ್ಲ. ಮತ್ತೊಂದು ದಿನ ಕನಸಿನಲ್ಲಿ ನಾರದರು ಬಂದು ಬರೆದುದೆಲ್ಲವನ್ನೂ ಭೀಮೇಶಕೃಷ್ಣನ ಹೆಸರಿನಲ್ಲಿ ಪ್ರಕಟಿಸುವಂತೆ ಆಜ್ಞಾಪಿಸಿ ಹರಸಿ ಹೋದರಂತೆ. ಅಂದಿನಿಂದ ಕೃಷ್ಣಬಾಯಿ ‘ಭೀಮವ್ವ’ನಾದರು. ‘ಭೀಮೇಶಕೃಷ್ಣ’ ಅಂಕಿತನಾಮವಾಯಿತು.

ನಂತರ ಭೀಮವ್ವನ ಹೃದಯಾಂತರಾಳದಿಂದ ನಿರರ್ಗಳವಾಗಿ ಹೊರಬಂದ ಕೀರ್ತನೆ, ಸುಳಾದಿ, ಉಪಾಭೋಗ ರಚನೆಗಳು ಜನಮೆಚ್ಚುಗೆ ಗಳಿಸಿದವು. ರತಿ ಕಲ್ಯಾಣ, ಮಯ್ಯದ ಹಾಡು, ನಳ ಚರಿತ್ರೆ, ಸುಭದ್ರಾ ಕಲ್ಯಾಣ – ಹೀಗೆ ಅಂದಾಜು 143 ಸಣ್ಣ ಕೀರ್ತನೆ ಹಾಗೂ 193 ದೊಡ್ಡ ಕೀರ್ತನೆಗಳನ್ನು ರಚಿಸಿದ್ದಾರೆ. ಉತ್ತರಕರ್ನಾಟಕದ ಬಹುತೇಕ ಮನೆಗಳಲ್ಲಿ ಇಂದಿಗೂ ಲಕ್ಷ್ಮೀಭಜನೆ, ಉರುಟಣೆಯ ಹಾಡು, ಹಸೆಯ ಹಾಡು, ಮಂಗಳಗೌರಿ ಹಾಡು, ಆರತಿಹಾಡು, ಸುವ್ವಾಲಿ ಹಾಡು, ಮಹಿಳೆಯರ ಬಾಯಿಯಲ್ಲಿ ನಲಿಯುತ್ತಿದ್ದರೆ ಅವೆಲ್ಲ ಭೀಮವ್ವ ವಿರಚಿತವೇ. ಇವರ ಬಹುತೇಕ ರಚನೆಗಳಲ್ಲಿ ಭಾಗವತ, ರಾಮಾಯಣ, ಮಹಾಭಾರತ ಹಾಗೂ ಮಧ್ವಮತದ ಸಿದ್ಧಾಂತಗಳು ಹಾಸುಹೊಕ್ಕಾಗಿರುವುದು ವಿಶೇಷ. ಹರಪನಹಳ್ಳಿಯ ತಿಮ್ಮಲಾಪುರದ ವೆಂಕಟರಮಣ ದೇವರನ್ನು ಕುರಿತು ‘ಕಂಡು ಧನ್ಯನಾದೆ ತಿಮಲಾಪುರೀಶ ದೊರೆಯೇ’ ಎಂದು ಹಾಡಿದ್ದಾರೆ.

ಒಟ್ಟಂದದಲ್ಲಿ ಸದಾ ಭಗವದ್ಭಕ್ತಿಯಿಂದ ಕೀರ್ತನಸಂಚಯನದ ಮೂಲಕ ಜನರಿಗೆ ಹರಿಪಾರಮ್ಯವನ್ನುಣಬಡಿಸಿದ ಭೀಮವ್ವ ಶುಭಕೃತ ಸಂವತ್ಸರ ಪುಷ್ಯ ಶುದ್ಧ ತ್ರಯೋದಶಿಯಂದು (11 ಜನವರಿ 1903) ತುಂಗಭದ್ರಾತೀರದ ಹೊಸೂರಿನಲ್ಲಿ ಹರಿಪಾದ ಸೇರಿದರು. ಇದೇ ಜನವರಿ 18ರ ದ್ವಾದಶಿಯಂದು ಇವರ ವಂಶದವರು ಭೀಮವ್ವನವರ ಆರಾಧನಾ ಮಹೋತ್ಸವವನ್ನು ನಡೆಸಲಿದ್ದಾರೆ.