More

    ‘ಅರಿತರೆ ಶರಣ, ಮರೆತರೆ ಮಾನವ’

    ಕನ್ನಡ ಸಂಸ್ಕೃತಿಯ ಅಧ್ಯಯನ ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಗಳಲ್ಲೊಂದು -ಆಕರ ಸಾಹಿತ್ಯದ ಕೊರತೆ. ಅಧ್ಯಯನಕ್ಕೆ ಆರಿಸಿಕೊಂಡ ವಿಷಯದ ಬಗ್ಗೆ ಅಗತ್ಯವಾದ ಎಲ್ಲ ಮಾಹಿತಿಗಳೂ ನಮಗೆ ಒಂದೆಡೆ ಸಿಗುವುದಿಲ್ಲ. ಪರಾಮರ್ಶನ ಗ್ರಂಥಾಲಯವೊಂದರ ಅಗತ್ಯವಿದೆಯೆಂದು ಹಲವು ವರ್ಷಗಳಿಂದ ಹೇಳುತ್ತಲೇ ಇದ್ದರೂ ಸಂಬಂಧಪಟ್ಟ ಸಂಸ್ಥೆಗಳಿಗೆ ಆಸಕ್ತಿಯಾಗಲೀ, ಕಾಳಜಿಯಾಗಲೀ ಇಲ್ಲ. ನಮ್ಮ ವಿಶ್ವವಿದ್ಯಾಲಯಗಳ ಅಧ್ಯಯನ ಕೇಂದ್ರಗಳಿಗಾಗಲೀ, ಅಕಾಡೆಮಿ, ಪರಿಷತ್ತು, ಸಂಸ್ಕೃತಿ ಇಲಾಖೆ, ಗ್ರಂಥಾಲಯ ವಿಭಾಗ- ಮೊದಲಾದ ಸಾಂಸ್ಕೃತಿಕ ಸಂಸ್ಥೆಗಳಾಗಲೀ ಈ ಬಗ್ಗೆ ಆಸಕ್ತಿ ಪ್ರಕಟಿಸದಿರುವುದು, ಬೌದ್ಧಿಕ ಚಟುವಟಿಕೆಗೆ ಬೇಕಾದ ವಾತಾವರಣ ನಿರ್ವಿುಸದಿರುವುದು ಅವರ ಸಾಂಸ್ಕೃತಿಕ ಬೇಜವಾಬ್ದಾರಿತನವನ್ನು ತೋರಿಸುತ್ತದೆ.

    ‘ಅರಿತರೆ ಶರಣ, ಮರೆತರೆ ಮಾನವ’ಆಕರ ಸಾಹಿತ್ಯದ ಕೊರತೆಗೆ ಮತ್ತೊಂದು ಕಾರಣವೂ ಇದೆ. ಈ ಬಗೆಯ ಕೆಲಸ ಮಾಡುವವರಿಗೆ ಸಿಗದಿರುವ ಪ್ರಾಮುಖ್ಯತೆ. ಸೃಜನಶೀಲವೆಂದು ನಾವು ಈಗ ಗುರ್ತಿಸುತ್ತಿರುವ ಸಾಹಿತ್ಯ ಚಟುವಟಿಕೆಗೆ ಇರುವ ಪ್ರಾಧಾನ್ಯತೆ, ಅಪಾರ ಶ್ರಮ ಬೇಡುವ, ವಿಸ್ತಾರ ಅಧ್ಯಯನ ಅಗತ್ಯವಿರುವ ಈ ಬಗೆಯ ಸಾಹಿತ್ಯ ಚಟುವಟಿಕೆಗೆ ಇಲ್ಲ. ಜೊತೆಗೆ ಆಕರ ಸಾಹಿತ್ಯವೆಂದರೆ ಪುಸ್ತಕ ಸಂಗ್ರಹವೆಂಬ ಸರಳ ತಿಳುವಳಿಕೆಯೂ ನಮ್ಮಲ್ಲಿದೆ. ಅದು ಪ್ರಾಥಮಿಕ ನೆಲೆ. ಆದರೆ ‘ಆಕರ ವಿಜ್ಞಾನ’ ಒಂದು ಅಧ್ಯಯನ ಶಿಸ್ತು ಎಂಬ ಪರಿಕಲ್ಪನೆ ನಮ್ಮಲ್ಲಿನ್ನೂ ಮೂಡಬೇಕಾಗಿದೆ. ಈ ಕ್ಷೇತ್ರದ ವ್ಯಾಪ್ತಿ ಅತ್ಯಂತ ವಿಸ್ತಾರವಾದುದು. ಒಬ್ಬ ಲೇಖಕನ ಬಗೆಗೆ ಅಧಿಕೃತ ಮಾಹಿತಿ, ಆತನ ಕೃತಿಗಳು, ಆತನ ಕೃತಿಗಳ ಬಗ್ಗೆ ಇದುವರೆಗೆ ಪ್ರಕಟವಾಗಿರುವ ಬರಹಗಳು- ಇವೆಲ್ಲವನ್ನೂ ನೀಡುವುದು ಕೃತಿಕಾರ ಆಕರ (Author Bibliography)ವಾದರೆ, ಒಂದು ಸಾಹಿತ್ಯ ಪ್ರಕಾರ ಕುರಿತಂತೆ ಕನ್ನಡದಲ್ಲಿ, ಸಾಧ್ಯವಾದರೆ ಬೇರೆ ಬೇರೆ ಭಾಷೆಗಳಲ್ಲಿ ಇದುವರೆಗೆ ಬಂದಿರುವ ಮಾಹಿತಿಗಳನ್ನು ನೀಡುವುದನ್ನು ಪ್ರಕಾರ ಆಕರ (Form Bibliography) ಎಂದು ಕರೆಯುತ್ತಾರೆ. ಹೀಗೆಯೇ ಒಂದು ನಿರ್ದಿಷ್ಟ ಕಾಲಘಟ್ಟ ಕುರಿತು (Thematic Bibliography), ಒಂದು ನಿರ್ದಿಷ್ಟ ಕೃತಿ ಕುರಿತು(Text Bibliography) ಆಕರ ಗ್ರಂಥಗಳನ್ನು ರೂಪಿಸಬಹುದಾಗಿದೆ. ಇಂತಹ ಕೆಲಸ ಸಾಹಿತ್ಯದ ಗಂಭೀರ ಅಧ್ಯಯನಕ್ಕೆ ತೊಡಗುವ ವಿದ್ವಾಂಸರಿಗೆ ಅತ್ಯಂತ ಉಪಯುಕ್ತವಾಗುತ್ತದೆ. ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಪ್ರಕಟಿಸಿರುವ ‘ಶಿವಪದ ರತ್ನಕೋಶ’ ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶ ಇಂತಹ ಒಂದು ಉಪಯುಕ್ತ ಕೃತಿ.

    ಭಾಷೆ ಮನುಷ್ಯನ ಪ್ರಬಲ ಅಸ್ತ್ರಗಳಲ್ಲೊಂದು. ಭಾಷೆಯನ್ನು ಬಳಸುವ ರೀತಿಯನ್ನು ಅವಲಂಬಿಸಿಯೇ ವ್ಯಕ್ತಿ-ವ್ಯಕ್ತಿಗಳ, ವ್ಯಕ್ತಿ-ಸಮಾಜದ ಸಂಬಂಧದ ಸ್ವರೂಪ ಬಹುಮಟ್ಟಿಗೆ ರೂಪುಗೊಳ್ಳುತ್ತದೆ. ಭಾಷೆ ಸಂಬಂಧವನ್ನು ಹಸನುಗೊಳಿಸಬಲ್ಲುದು, ಹದಗೆಡಿಸಬಲ್ಲುದು. ‘ಆಡಿದ ತಕ್ಷಣ ಪದ ಸಾಯುತ್ತದೆ ಎಂದು ಕೆಲವರು ಹೇಳುತ್ತಾರೆ, ಆದರೆ ಆ ಕ್ಷಣದಲ್ಲಿ ಪದಕ್ಕೆ ಹೊಸ ಅರ್ಥ ಪ್ರಾಪ್ತವಾಗುತ್ತದೆ’- ಇದು ಎಮಿಲಿ ಡಿಕನ್ಸನ್​ನ ಮಾತು. ಇದು ನಿಜ. ಪ್ರತಿಸಲವೂ ನಾವಾಡುವ ಮಾತುಗಳಲ್ಲಿ ಶಬ್ದಗಳು ಹೊಸ ಹುಟ್ಟು ಪಡೆಯುತ್ತಿರುತ್ತವೆ. ದಿನನಿತ್ಯದ ವ್ಯವಹಾರದಲ್ಲಿ ನಾವು ಮಾತನ್ನು ಬಳಸುವಾಗ, ಅದರ ಶಕ್ತಿಸಾಮರ್ಥ್ಯದ ಬಗ್ಗೆ ಅರಿವಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ‘ನುಡಿದರೆ ಮುತ್ತಿನ ಹಾರದಂತಿರಬೇಕು’, ‘ಮಾತು ಜ್ಯೋತಿರ್ಲಿಂಗ’, ’ಮಾತಿನಿಂ ಸರ್ವಸಂಪದವು’, ‘ಮಾತು ಬಲ್ಲವನಿಗೆ ಜಗಳವಿಲ್ಲ’- ಇಂತಹ ‘ಮಾತು’ಗಳು ಮಾತಿನ ಮಹತ್ವವನ್ನು ಹೇಳುತ್ತವೆ.

    ಭಾರತೀಯ ಸಂಸ್ಕೃತಿಯ ಅತ್ಯಂತ ಮಹತ್ವದ ಸಂಗತಿಯೆಂದರೆ ಸಂಸ್ಕೃತ ತನ್ನದೇ ಆದ ಸಾಹಿತ್ಯ ಪರಂಪರೆಯೊಂದನ್ನು ರೂಪಿಸಿಕೊಂಡು, ಅದನ್ನು ಪ್ರಭಾವಶಾಲಿಯಾಗಿ ಜಾರಿಗೊಳಿಸಿದ್ದು. ಈ ಸಾಹಿತ್ಯ ಸಂಸ್ಕೃತಿ ಒಟ್ಟಾರೆ ಭಾರತೀಯ ಸಾಹಿತ್ಯದ ಸ್ವರೂಪವನ್ನು ನಿಯಂತ್ರಿಸಲು ಪ್ರಯತ್ನಿಸಿತು. ತನ್ನ ವ್ಯಾಖ್ಯೆಯ ಮೂಲಕ ಸಾಹಿತ್ಯದ ಆಕೃತಿಯನ್ನು ನಿರ್ವಚಿಸಿ, ತಾನು ಗುರ್ತಿಸಿದ್ದೇ ಸಾಹಿತ್ಯ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿತು. ಆದರೆ ಸಾಹಿತ್ಯ ಪರಂಪರೆಯ ಈ ಸರ್ವಾಧಿಕಾರತ್ವವನ್ನು ಮೀರಿ ಸಾಹಿತ್ಯದ ವ್ಯಾಖ್ಯೆ ಬದಲಾಗುತ್ತಾ ಹೋಗುತ್ತದೆ. ಸೃಜನಶೀಲತೆಗೆ ಯಾವ ಕಟ್ಟುಪಾಡು, ಯಾರ ಹಂಗು? ಕನ್ನಡದ ವಚನ ಸಾಹಿತ್ಯ ಆ ಬಗೆಯದು.

    ಕನ್ನಡದಲ್ಲಿ ಎರಡು ಪರಂಪರೆಯಿದೆ. ಒಂದು ಸಂಸ್ಕೃತದ ಜೊತೆ ಅನುಸಂಧಾನ ನಡೆಸುತ್ತಲೇ ತನ್ನ ವಿಶಿಷ್ಟತೆಯನ್ನು ಕಾಯ್ದುಕೊಂಡ ಸಾಹಿತ್ಯಮಾರ್ಗ. ಆದರೆ ಹನ್ನೆರಡನೇ ಶತಮಾನದ ವಚನ ಚಳುವಳಿ ಇದಕ್ಕಿಂತ ಸಂಪೂರ್ಣ ಭಿನ್ನವಾದುದು. ಆಶಯ, ಆಕೃತಿಯ ನೆಲೆಯಲ್ಲಿ ಮಾತ್ರವಲ್ಲ, ಚರಿತ್ರೆ, ಧರ್ಮ, ಆಧ್ಯಾತ್ಮಿಕ ಪರಿಕಲ್ಪನೆಗಳ ದೃಷ್ಟಿಯಿಂದಲೂ ಇದು ಸಂಪೂರ್ಣ ಬೇರೆಯಾದುದು. ಇದು ಸಾಂಪ್ರದಾಯಿಕ ರೂಢಿಯ ಸಾಮಾಜಿಕ ಮೌಲ್ಯಗಳ ವಿರುದ್ಧ ಎದ್ದ ಬಂಡಾಯ. ‘ಧರ್ಮ ಎನ್ನುವುದು ಕಥನದ ವಿಲಾಸದಲ್ಲಿ ಸಿಕ್ಕಬಾರದು’ ಎಂದು ಅಲ್ಲಮ ಹೇಳುವುದೂ ಸಹ ಸಂಪ್ರದಾಯ ಸಾಹಿತ್ಯದ ವಿರುದ್ಧದ ಬಂಡಾಯದ ದನಿಯಾಗಿಯೇ ಕೇಳಿಸುತ್ತದೆ. ಯಾವುದೇ ಸಾಹಿತ್ಯ ಸಂಸ್ಕೃತಿಗಳಿಗೆ ತಾವು ಹುಟ್ಟಿದ ನೆಲದ ಗುಣ ಇದ್ದೇ ಇರುತ್ತದೆ. ಅನೇಕ ಸಲ ಅವು ತಮ್ಮ ಮೂಲ ಗುಣಗಳಂತೆ ತಮ್ಮ ಅಧ್ಯಯನದ ವಸ್ತುವನ್ನೂ ಪರಿವರ್ತಿಸಿ ಬಿಡುತ್ತವೆ. ಈ ಹಿನ್ನೆಲೆಯಲ್ಲಿ ವಚನಸಾಹಿತ್ಯದ ಪರಿಭಾಷೆಯ ಅಧ್ಯಯನ ಒಂದು ರೀತಿಯಲ್ಲಿ ದೇಸಿ ಸಂಸ್ಕೃತಿಯ ಅಧ್ಯಯನವೂ ಹೌದು.

    ಸುತ್ತೂರು ಮಹಾಸಂಸ್ಥಾನ ಅನೇಕ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಕಟ್ಟುವ ಪ್ರಯತ್ನ ಮಾಡುತ್ತಿದೆ. ಅವುಗಳಲ್ಲಿ ಮುಖ್ಯವಾದುದು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ. ಈ ಗ್ರಂಥಮಾಲೆಯ ಮೂಲಕ ಅನೇಕ ಉಪಯುಕ್ತ ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾದುದು ‘ಶಿವಪದ ರತ್ನಕೋಶ’. ಸ್ವತಃ ವಿದ್ವಾಂಸರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳಿಗೆ ಸಾಹಿತ್ಯ ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿಯಿದೆ. ಸಾಹಿತ್ಯ ಸಲ್ಲಾಪ ಅವರಿಗೆ ಅತ್ಯಂತ ಪ್ರಿಯವಾದುದು. ಹೀಗಾಗಿಯೇ ವಿದ್ವಜ್ಜನರ ಒಡನಾಟದಿಂದಾಗಿ ಇಲ್ಲಿ ಧರ್ಮವು ಸಾಹಿತ್ಯದ ಸ್ಪರ್ಶ ಪಡೆದು ಚಲನಶೀಲವಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಚಟುವಟಿಕೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಿರುತ್ತವೆ. ‘ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ’ ಎಂಬ ತಾತ್ವಿಕ ನಿಲವು ಸ್ವಾಮೀಜಿಯವರ ಕಾರ್ಯಚಟುವಟಿಕೆಗಳ ಹಿಂದಿದೆ.

    ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಪರಂಪರೆ ಆರಂಭವಾಗುವುದೇ ಲಕ್ಷಣಗ್ರಂಥದಿಂದ. ನಮ್ಮಲ್ಲಿ ಲಕ್ಷಣಗ್ರಂಥಗಳು, ಲಕ್ಷಣಗ್ರಂಥ ಮಾತ್ರವಾಗಿರದೆ, ಅವುಗಳ ಸ್ವರೂಪದ ವ್ಯಾಪ್ತಿ ವಿಸ್ತಾರವಾಗಿದ್ದು ಸಾಂಸ್ಕೃತಿಕ ಮಹತ್ವ ಪಡೆದುಕೊಂಡಿವೆ. ‘ಶಿವಪದ ರತ್ನಕೋಶ’ ವಿನ್ಯಾಸದಲ್ಲಿ ವೀರಶೈವ ಲಿಂಗಾಯತ ಪಾರಿಭಾಷಿಕ ಪದಕೋಶವಾದರೂ, ಅದರ ಅಧ್ಯಯನ ವ್ಯಾಪ್ತಿ ಸಾಂಸ್ಕೃತಿಕವಾಗಿ ಹೆಚ್ಚು ಮಹತ್ವದ್ದಾಗಿದೆ.

    1943ರಲ್ಲಿ ಫ.ಗು.ಹಳಕಟ್ಟಿಯವರು ‘ಶಿವಾನುಭವ ಶಬ್ದಕೋಶ’ದ ರಚನೆಯ ಮೂಲಕ ವೀರಶೈವ ಪಾರಿಭಾಷಿಕ ಸಂಗತಿಗಳನ್ನು ವಿವರಿಸುವ ಪ್ರಯತ್ನ ಮಾಡಿದರು. ನಂತರದಲ್ಲಿ ಬಸವ ಸಮಿತಿಯ ‘ವೀರಶೈವ ಪಾರಿಭಾಷಿಕ ಪದಕೋಶ’ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಪ್ರಕಟಿಸಿದ ಸಮಗ್ರ ವಚನ ಸಂಪುಟಗಳ ಸರಣಿಯ ಕೊನೆಯ ಸಂಪುಟ ‘ವಚನ ಪರಿಭಾಷಾಕೋಶ’ ಪ್ರಕಟವಾದವು. ಜಯಶ್ರೀ ದಂಡೆಯವರ ‘ಬೆಡಗಿನ ವಚನ ಪರಿಭಾಷಾ ಕೋಶ’ವನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. 2009ರಲ್ಲಿ ಸಂಗಮೇಶ ಸವದತ್ತಿಮಠ ಅವರು ‘ವರ್ಣನಾತ್ಮಕ ವಚನಪದಕೋಶ’ ಪ್ರಕಟಿಸಿದ್ದಾರೆ. ಜಿ.ಎಸ್.ಸಿದ್ದಲಿಂಗಯ್ಯನವರ ‘ಶಬ್ದಸೋಪಾನ’ ಕೊಂಚ ಭಿನ್ನ ಕೋಶ. ಇದು ಸುಮಾರು ಇನ್ನೂರನಲವತ್ತೆ್ತ್ರದು ವಚನಕಾರರ ವಿವರ ನೀಡುತ್ತಲೇ, ಟಿಪ್ಪಣಿ ರೂಪದಲ್ಲಿ ಅನೇಕ ಮಾಹಿತಿಗಳನ್ನು ಒದಗಿಸುತ್ತದೆ. 2011ರಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆಯಿಂದಲೇ ಸಂಸ್ಕೃತದ ‘ವೀರಶೈವ ಪಾರಿಭಾಷಿಕ ಪದಕೋಶ’ ಪ್ರಕಟವಾಯಿತು. ಈ ಎಲ್ಲ ಕೋಶಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ‘ಶಿವಪದ ರತ್ನಕೋಶ’ ರೂಪುಗೊಂಡಿದೆ.

    ಈ ಬೃಹತ್ ಕೋಶ ರಚನೆಯಲ್ಲಿ ಅನೇಕ ವಿದ್ವಾಂಸರು ಪಾಲ್ಗೊಂಡಿದ್ದಾರೆ. ಸಮಗ್ರ ವಚನ ಸಾಹಿತ್ಯದ ಜೊತೆಗೆ ಹರಿಹರನಿಂದ ಮೊದಲ್ಗೊಂಡು ಷಡಕ್ಷರದೇವನವರೆಗೆ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ವೀರಶೈವ ಕವಿಗಳ ಕಾವ್ಯಗಳನ್ನು ಪರಿಶೀಲಿಸಲಾಗಿದೆ. ಹಿಂದಿನ ಎಲ್ಲ ಕೋಶಗಳನ್ನು ಪರಾಮಶಿಸಿ ಅಗತ್ಯ ಮಾಹಿತಿಗಳನ್ನು ಉಪಯೋಗಿಸಿಕೊಳ್ಳಲಾಗಿದೆ. ಈ ಪದಕೋಶದಲ್ಲಿ ಅನುಬಂಧದ ಉಲ್ಲೇಖಗಳನ್ನು ಹೊರತುಪಡಿಸಿ 4,681 ಮುಖ್ಯ ಉಲ್ಲೇಖಗಳನ್ನು, ಸುಮಾರು 40000 ಕ್ಕೂ ಹೆಚ್ಚು ಪ್ರಯೋಗಗಳನ್ನೂ ನೀಡಲಾಗಿದೆ. ಖ್ಯಾತ ವಿದ್ವಾಂಸರಾದ ಟಿ. ವಿ.ವೆಂಕಟಾಚಲ ಶಾಸ್ತ್ರೀ, ಜಿ.ಎಸ್.ಸಿದ್ಧಲಿಂಗಯ್ಯ, ಎನ್.ಎಸ್.ತಾರಾನಾಥ, ಎಚ್.ವಿ.ನಾಗರಾಜರಾವ್, ಸಿ. ಶಿವಕುಮಾರಸ್ವಾಮಿ ಹಾಗೂ ಆರ್.ಎಸ್. ಪೂರ್ಣಾನಂದ ಅವರನ್ನೊಳಗೊಂಡ ಸಂಪಾದಕ ಸಮಿತಿ ಈ ಕಾರ್ಯವನ್ನು ಅತ್ಯಂತ ಯೋಜನಾಬದ್ಧವಾಗಿ ನಿರ್ವಹಿಸಿದೆ. ವೀರಶೈವ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಸಿದ್ಧೇಶ್ವರ ಸ್ವಾಮಿಯವರು ಇದರ ರಚನೆಯಲ್ಲಿ ನೆರವಾಗಿದ್ದಾರೆ. ನಂದೀಶ್ ಹಂಚೆ ಈ ಸಂಪುಟ ರಚನೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಶ್ರಮ ವಹಿಸಿದ್ದಾರೆ. ಪದಕೋಶದ ನಿರೂಪಣಾ ವಿಧಾನ, ಪ್ರಯೋಗಗಳ ಅನುಕ್ರಮಣಿಕೆ ರೀತಿ, ಅರ್ಥವಿವರಣ ಕ್ರಮ, ಲೇಖನ ಚಿಹ್ನೆಗಳು ಇವೆಲ್ಲವುಗಳಲ್ಲಿ ವೈಜ್ಞಾನಿಕ ಶಿಸ್ತಿದೆ. ಈ ಎಲ್ಲದರ ಹಿಂದೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಒತ್ತಾಸೆ, ಆಸಕ್ತಿ ಇದೆ.

    ಹನ್ನೆರಡನೇ ಶತಮಾನ ಕರ್ನಾಟಕದ ಇತಿಹಾಸದಲ್ಲಿ ಮಹತ್ವದ ಕ್ರಾಂತಿಕಾರಕ ಘಟ್ಟ. ರೂಢಿಯ ನಮ್ಮ ಅನೇಕ ನಂಬಿಕೆಗಳ ಬುಡವನ್ನೇ ಅಲುಗಾಡಿಸಿದಂಥ ಕಾಲವದು. ಸಾಮಾಜಿಕ, ಸಾಹಿತ್ಯಕ, ಧಾರ್ವಿುಕ ತಿಳಿವಳಿಕೆಯ ಬಗ್ಗೆ ಹೊಸ ಅರಿವು, ದರ್ಶನ ಈ ಹಂತದಲ್ಲಿ ಕಾಣಿಸಿಕೊಂಡಿತು. ‘ದೇಸಿ ಚಳುವಳಿ’ ಎಂದು ಕರೆಯಬಹುದಾದ ಈ ಹಂತದ ಇತಿಹಾಸ ಭಾರತೀಯ ಸಂಸ್ಕೃತಿಯನ್ನು ಹೊಸ ನೆಲೆಯಲ್ಲಿ ಅರ್ಥೈಸಲು ಅವಕಾಶ ಮಾಡಿಕೊಡುತ್ತದೆ. ಏಕೀಕೃತ ಭಾರತೀಯ ದರ್ಶನಕ್ಕೆ ಬದಲಾಗಿ ಭಿನ್ನ ದನಿಗಳು ನಮಗೆ ಕಾಣಿಸುತ್ತವೆ. ಹೀಗಾಗಿ ಇಂತಹ ಭಾಷಿಕ ವಿಶ್ವವೊಂದು ಅತ್ಯಂತ ಸಂಕೀರ್ಣ ಸಮಾಜೋ-ಸಾಂಸ್ಕೃತಿಕ ಸಂಗತಿಗಳನ್ನು ನಮಗೆ ಪರಿಚಯಿಸುತ್ತದೆ.

    ಈ ಪದಕೋಶದಲ್ಲಿ ಅರ್ಥ ಮಾತ್ರವಲ್ಲ, ಅದು ಪ್ರಯೋಗವಾಗಿರುವ ಬಗೆಯನ್ನೂ ನೀಡಿರುವುದು ಉಪಯುಕ್ತ. ಆದರೆ ಹೀಗೆ ನೀಡುವಾಗ ಅದು ಪಡೆಯುವ ಭಿನ್ನ ಸ್ವರೂಪ, ಅಭಿವ್ಯಕ್ತಿ ಕ್ರಮಗಳನ್ನೂ ಗಮನಿಸಿದ್ದರೆ ಅದು ಹೊಸ ಒಳನೋಟ ನೀಡುತ್ತಿತ್ತು. ಉದಾಹರಣೆಗೆ ‘ಅರಿವು’ ಎಂಬ ಪದ. ಇಲ್ಲಿ ತಿಳಿವಳಿಕೆ, ಜ್ಞಾನ ಎಂಬ ಅರ್ಥದ ಜೊತೆಗೆ ಅದು ಬಳಕೆಯಾಗಿರುವ ಪ್ರಯೋಗಗಳನ್ನೂ ನೀಡಲಾಗಿದೆ. ಬಸವಣ್ಣನವರ ವಚನದಲ್ಲಿ ಸೂತ್ರಪ್ರಾಯವಾದ ‘ಅರಿತರೆ ಶರಣ, ಮರೆತರೆ ಮಾನವ’ ಎಂಬ ಮಾತು ಬರುತ್ತದೆ. ಒಂದು ರೀತಿಯಲ್ಲಿ ಇದು ಶರಣರ ಬಗೆಗಿನ ನಿರ್ವಚನವೂ ಹೌದು. ಇದೇ ಮಾತು ಹೆಂಡದ ಮಾರಯ್ಯನ ವಚನದಲ್ಲಿ ಬರುವ ಬಗೆ ಕುತೂಹಲಕರವಾಗಿದೆ. ಆತ ಹೇಳುತ್ತಾನೆ: ‘ಅರಿದುಕೊಂಡಲ್ಲಿ ಸುಧೆ, ಮರೆತುಕೊಂಡಲ್ಲಿ ಸುರೆ’. ಹೆಂಡದ ಮಾರಯ್ಯನ ಕಾಯಕದ ಪರಿಭಾಷೆ ಆತನ ಚಿಂತನೆಯ ಅಭಿವ್ಯಕ್ತಿಯಾಗಿಯೂ ರೂಪಾಂತರವಾಗಿರುವ ಕ್ರಮ ಅಧ್ಯಯನಯೋಗ್ಯ. ಆಡುಮಾತು ಅಧ್ಯಾತ್ಮದ ನೆಲೆಗೇರುವ ಬಗೆಯೇ ದಿನನಿತ್ಯದ ಭಾಷೆ ಪರಿಭಾಷೆಯಾಗುವ ಪವಾಡ. ಇಂತಹ ವಿವರಗಳು ಇಲ್ಲಿರಬೇಕಿತ್ತು ಅನ್ನಿಸುತ್ತದೆ. ಇದು ವಿದ್ವತ್ತಿನ ಜೊತೆಗೆ ಕಾವ್ಯಸೂಕ್ಷ್ತ್ರ್ಮ ಸಂವೇದನೆಯನ್ನೂ ಬೇಡುತ್ತದೆ. ಹಾಗೆಯೇ ಸಂಸ್ಕೃತದ ‘ಶೂನ್ಯ’ ಎನ್ನುವುದು ಕನ್ನಡದಲ್ಲಿ ‘ಬಯಲು’ ಎಂದಾದಾಗ ಅಲ್ಲಿ ಉಂಟಾಗುವ ಪರಿವರ್ತನೆಯನ್ನು ಅರ್ಥಮಾಡಿಕೊಳ್ಳಲು ರೂಢಿಯ ಜ್ಞಾನ ಸಾಕಾಗುವುದಿಲ್ಲ. ಸಂಸ್ಕೃತದ ಹಿನ್ನೆಲೆಯಲ್ಲಿ ಕನ್ನಡ ವಚನಗಳ ರಾಚನಿಕ ಸ್ವರೂಪವನ್ನು ಗಮನಿಸಹೊರಟರೆ ಅಲ್ಲಿಯ ನಾಟಕೀಯತೆಯ ರೋಮಾಂಚನವೇ ಮಾಯವಾಗಿಬಿಡುತ್ತದೆ. ಈ ಎಚ್ಚರ ಇಂತಹ ಅಧ್ಯಯನದಲ್ಲಿ ಅತ್ಯಗತ್ಯ.

    ಗಂಭೀರ ಅಧ್ಯಯನವೇ ಮರೆಯಾಗುತ್ತಿರುವ ನಮ್ಮ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ‘ಶಿವಪದ ರತ್ನಕೋಶ’ ಉಪಯುಕ್ತವಾದ ಒಂದು ವಿದ್ವತ್ಪೂರ್ಣ ಪ್ರಕಟಣೆ. ಈ ವಿದ್ವತ್​ಕೈಂಕರ್ಯದಲ್ಲಿ ಭಾಗಿಯಾದ ಎಲ್ಲರೂ ಅಭಿನಂದನಾರ್ಹರು.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts