More

    ಸಾಮಯಿಕ ಅಂಕಣ| ಮಾತಿಂದ ನಗೆ ನುಡಿಯು, ಮಾತಿಂದ ಕೊಲೆ ಹಗೆಯು…

    ಸಾಮಯಿಕ ಅಂಕಣ| ಮಾತಿಂದ ನಗೆ ನುಡಿಯು, ಮಾತಿಂದ ಕೊಲೆ ಹಗೆಯು...

    ‘ಮಾತಿಂದ ನಗೆ ನುಡಿಯು ಮಾತಿಂದ ಕೊಲೆ ಹಗೆಯು/ಮಾತಿಂದ ಸರ್ವಸಂಪದವು ಲೋಕಕ್ಕೆ/ಮಾತೆ ಮಾಣಿಕವು ಸರ್ವಜ್ಞ’

    ನಮ್ಮ ಬದುಕಿನಲ್ಲಿ ಮಾತಿನ ಪಾತ್ರ ಅತ್ಯಂತ ಮಹತ್ವವಾದುದು. ನಾವಾಡುವ ಮಾತು ಒಂದು ರೀತಿ ನಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತದೆ; ಸಾಮಾಜಿಕವಾಗಿ ನಮ್ಮ ಸ್ಥಾನವನ್ನು ನಿರ್ದೇಶಿಸುತ್ತದೆ. ನಮ್ಮ ಬದುಕಿನ ಸುಖ ಸಂತೋಷಗಳಿಗೆ, ದುಃಖ ಸಂಕಟಗಳಿಗೆ ಮಾತು ಕಾರಣವಾಗುತ್ತದೆ. ‘ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು’ ಎಂಬುದು ಗಾದೆಮಾತು. ಗಾದೆ ನಮ್ಮ ಗ್ರಾಮೀಣ ಜನಪದರ ಜೀವನಾನುಭವದ ಸಾರರೂಪೀ ಚಿಂತನೆ. ಒಂದು ಗಾದೆ ಚಲಾವಣೆಗೆ ಬರುವ ಮುನ್ನ ಪರೀಕ್ಷೆಗೆ ಒಳಪಟ್ಟು ‘ಇದು ನಿಜವಾದ ಮಾತು’ ಎಂದು ಸರ್ವಮಾನ್ಯತೆ ಪಡೆದು, ಅನುಭವದಿಂದ ಖಾತ್ರಿಯಾದನಂತರ ರೂಢಿಗೆ ಬರುತ್ತದೆ. The wisdom of many and the wit of one ಎಂಬುದು ಗಾದೆಗಿರುವ ಒಂದು ವ್ಯಾಖ್ಯಾನ. ‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಇದು ಇನ್ನೊಂದು ಗಾದೆ; ದುಡುಕಿನಿಂದ ಆಡುವ ಒಂದು ಮಾತು ನಮ್ಮ ಬದುಕನ್ನೇ ಬಲಿ ತೆಗೆದುಕೊಂಡುಬಿಡಬಹುದು; ‘ಮಾತು ಆಡಿ ಹೋಯಿತು, ಮುತ್ತು ಒಡೆದು ಹೋಯಿತು’ ಇದು ಮಗದೊಂದು ಗಾದೆ; ಒಮ್ಮೆ ಆಡಿದ ಮಾತನ್ನು ಮತ್ತೆ ಹಿಂತೆಗೆದುಕೊಳ್ಳುವುದು ಕಷ್ಟ, ಅದರ ಪರಿಣಾಮ ಕೇಳುವವರ ಮೇಲಾಗಿಬಿಟ್ಟಿರುತ್ತದೆ; ಆದ್ದರಿಂದ ಮಾತನಾಡುವಾಗ ಯೋಚಿಸಿ ಮಾತನಾಡಬೇಕು.

    ಮಾತಿನ ಬಗ್ಗೆ ಇದನ್ನೆಲ್ಲ ಹೇಳಲು ಕಾರಣ: ಇತ್ತೀಚಿನ ದಿನಗಳಲ್ಲಿ ನಮ್ಮ ಸಾಮಾಜಿಕ ಬದುಕಿನಲ್ಲಿ ಮಾತು ಅಪಮೌಲ್ಯಗೊಳ್ಳುತ್ತಿದೆ ಎಂಬ ಆತಂಕ. ಶಬ್ದಗಳಿಗೆ ತನಗೆ ತಾನೇ ಅರ್ಥವಿರುವುದಿಲ್ಲ; ನಾವು, ಮಾತನಾಡುವವರು ಅದಕ್ಕೆ ಅರ್ಥ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಮಾತುಗಳು ಕೇವಲ ಶಬ್ದಮಾತ್ರವಾಗಿಬಿಡುತ್ತವೆ. ಯಾವ ಪರಿಣಾಮವನ್ನೂ ಬೀರುವುದಿಲ್ಲ. ನಮ್ಮ ಸಂದರ್ಭದಲ್ಲಿ ಮಾತು ಹೀಗೆ ಯೋಗ್ಯರಲ್ಲದವರ ಕೈಗೆ ಸಿಲುಕಿ ಘನತೆ ಕಳೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಸಂವೇದನಾಶೀಲರನ್ನು ಕಾಡುತ್ತಿದೆ. ನಮ್ಮ ದಿನನಿತ್ಯದ ಬದುಕಿನಲ್ಲಿ ಮಾತು ಸಂವಹನದ ಸಾಧ್ಯತೆ ದಾಟಿ ಜಗಳದ ರೂಪ ತಾಳುತ್ತಿದೆ; ಸಂವಾದವೆಂದು ಆರಂಭವಾಗುವುದು ವಾಗ್ಯುದ್ಧದಲ್ಲಿ ಪರ್ಯವಸಾನವಾಗುತ್ತಿದೆ; ಭಿನ್ನಾಭಿಪ್ರಾಯವನ್ನು ಗೌರವದಿಂದ ಕಾಣುವ ಬದಲು ಅಂಥವರ ಮೇಲೆ ಆಕ್ರಮಣ ಮಾಡಲಾಗುತ್ತಿದೆ. ‘ನಿನ್ನ ಅಭಿಪ್ರಾಯದ ಬಗ್ಗೆ ನನಗೆ ಗೌರವವಿದೆ, ಆದರೆ ಅದು ನನಗೆ ಸಮ್ಮತವಿಲ್ಲ’ ಎಂಬುದು ಸುಸಂಸ್ಕೃತ ನಡವಳಿಕೆ. ಅಂತಹ ನಡವಳಿಕೆ ಈಗ ಮಾಯವಾಗಿದೆ. ನಾವಾಡುವ ಮಾತುಗಳು ಯಾವುದೋ ಹುನ್ನಾರದ ಭಾಗವಾಗಿ ರೂಪಾಂತರಗೊಳ್ಳುತ್ತಿವೆ. ಯಾರು ಯಾವ ಹೊತ್ತಿನಲ್ಲಿ ನಮ್ಮ ಮಾತುಗಳನ್ನು ದಾಖಲಿಸಿಕೊಂಡು ತಮಗೆ ಬೇಕಾದ ಹಾಗೆ ಸಂಚು ರೂಪಿಸಲು ಬಳಸಿಕೊಳ್ಳುತ್ತಾರೆಯೋ ಎಂಬ ಆತಂಕದ ಸ್ಥಿತಿಯಲ್ಲಿಯೇ ನಾವು ಎಚ್ಚರದಿಂದ ಮಾತನಾಡಬೇಕಾಗಿದೆ.

    ಹಾಗೆ ನೋಡಿದರೆ ಕನ್ನಡ ಮನಸ್ಸು ಆರಂಭದಿಂದಲೂ ಮಾತಿನ ಬಗ್ಗೆ ಮತ್ತೆ ಮತ್ತೆ ಚಿಂತಿಸಿದೆ. ಕನ್ನಡದ ಮೊದಲ ಉಪಲಬ್ಧ ಕೃತಿ ‘ಕವಿರಾಜಮಾರ್ಗ’ದಲ್ಲಿಯೇ ಮಾತಿನ ನಾಲ್ಕು ವಿವಿಧ ನೆಲೆಗಳನ್ನು ವಿವರಿಸುತ್ತಾನೆ. ಮನಸ್ಸಿನಲ್ಲಿರುವ ಅರ್ಥವನ್ನು ಇನ್ನೊಬ್ಬರಿಗೆ ತೆರೆದಿಟ್ಟಂತೆ ತಿಳಿಸಬಲ್ಲವನು ‘ಮಾತರಿವ’, ಅಂದರೆ ಮಾತು ಬಲ್ಲವನು; ಕಿರಿದರಲ್ಲಿ ಪಿರಿದರ್ಥವನ್ನು ಅಡಗಿಸಿ ಅಭಿವ್ಯಕ್ತಪಡಿಸಬಲ್ಲವನು ಮೊದಲನೆಯವನಿಗಿಂತ ‘ನಿಪುಣ’; ನುಡಿಯನ್ನು ಛಂದೋಬಂಧವೊಂದರಲ್ಲಿ ಅಳವಡಿಸಬಲ್ಲವನು ಈಗ ಪ್ರಸ್ತಾಪಿಸಿದ ನಿಪುಣನಿಗಿಂತ ‘ಜಾಣ’; ಒಂದು ಮಾರ್ಗ ಅಥವಾ ಪರಂಪರೆಯೊಂದನ್ನು ರೂಪಿಸಬಲ್ಲಂಥವನು ಇವರೆಲ್ಲರಿಗಿಂತ ಶ್ರೇಷ್ಠ, ಆತನನ್ನು ಬಲ್ಲವನು, ‘ಬಲ್ಲಂ’ ಎಂದು ಕರೆಯುತ್ತಾರೆ. ಈ ನೆಲೆಗಳು ಮಾತಿನ ಬಳಕೆಯ ವಿವಿಧ ಹಂತಗಳನ್ನು ಪರಿಣಾಮಕಾರಿಯಾಗಿ ವಿವರಿಸುತ್ತವೆ.

    ವಾಸ್ತವವಾಗಿ ನಮ್ಮ ದಿನನಿತ್ಯದ ಅನುಭವವನ್ನು ಗಮನಿಸಿದರೂ ಮಾತಿನ ಕಷ್ಟ ಎಷ್ಟೆಂಬುದು ಅರಿವಾಗುತ್ತದೆ. ನಾವು ಮನಸ್ಸಿನಲ್ಲಿ ಅಂದುಕೊಳ್ಳುವುದೇ ಒಂದು, ಅದನ್ನು ಮಾತಿನಲ್ಲಿ ಹೇಳಿದಾಗ ಪಡೆಯುವ ರೂಪವೇ ಮತ್ತೊಂದು; ನಮ್ಮ ಮಾತುಗಳನ್ನು ಕೇಳಿಸಿಕೊಂಡವರು ಅದನ್ನು ಗ್ರಹಿಸುವ ಬಗೆಯೇ ಮಗದೊಂದು. ಹೀಗೆ ಮನಸ್ಸಿನಿಂದ ಮಾತು, ಮಾತಿನಿಂದ ಅರ್ಥ ವ್ಯಕ್ತವಾಗುವ ವೇಳೆಗೆ ಮೂಲ ಭಾವ ಬೇರೆಯದೇ ರೂಪ ಪಡೆದುಕೊಂಡುಬಿಟ್ಟಿರುತ್ತದೆ. ಹೀಗಾಗಿಯೇ ಅನೇಕ ವೇಳೆ ಸಮರ್ಪಕ ಸಂವಹನದ ಕೊರತೆಯೇ ಅಸಮಾಧಾನಕ್ಕೆ, ಜಗಳಕ್ಕೆ ಕಾರಣವಾಗುತ್ತದೆ. ಅಭಿವ್ಯಕ್ತಿಯ ತೊಡಕನ್ನು ಕುವೆಂಪು ಹೀಗೆ ಹೇಳಿದ್ದಾರೆ: ‘ಹೇಳಿದರೆ ಹಾಳಾಗುವುದೊ ಅನುಭವದ ಸವಿಯು/ಹೇಳದಿರೆ ತಾಳಲಾರನೊ ಕವಿಯು/ನುಡಿಗಳನು ತೊಡಗಿದರೆ ತೊದಲುವುದು ನಾಲಗೆಯು/ಕಳ್ಳರಂತೋಡುವುವು ಪದಗಳೆಲ್ಲ/ತನ್ನಧಿಕತೆಗೆ ತಾನೆ ಮೂರ್ಛೆ ಹೋಹುದು ಭಾವ/ಮಾತ ಮೀರಿದ ಮೌನದೊಳು ಮಗ್ನವಾಗಿ’. ನಮ್ಮ ಮನಸ್ಸಿನ ಭಾವವನ್ನು ಅದೇ ತೀವ್ರತೆಯಲ್ಲಿ ಹೇಳುವುದು ಸುಲಭವಲ್ಲ.

    ಪಂಪ ಮಾತನ್ನು ಕುರಿತು ಹೇಳುವಾಗ ‘ಪರಮಜಿನೇಂದ್ರವಾಣಿಯೆ ಸರಸ್ವತಿ ಬೇರದು ಪೆಣ್ಣ ರೂಪಮಂ/ಧರಿಯಿಸಿ ನಿಂದುದಲ್ತು ಅದುವೆ ಭಾವಿಸಿ ಓದುವ ಕೇಳ್ವ ಪೂಜಿಪ/ಆದರಿಸುವ ಭವ್ಯಕೋಟಿಗೆ ನಿರಂತರಸೌಖ್ಯಮನೀವುದು ಆನ್ ಅದ/ರ್ಕೆರೆದಪೆನ್ ಆ ಸರಸ್ವತಿಯೆ ಮಾಳ್ಕೆ ಎಮಗಿಲ್ಲಿಯೆ ವಾಗ್ವಿಳಾಸಮಂ’ ಎಂದು ಜಿನನ ಮಾತುಗಳನ್ನೇ ಸರಸ್ವತಿ ಎಂದು ಪರಿಭಾವಿಸುತ್ತಾನೆ. ಮಾತು ಮಂತ್ರವಾಗುವುದು, ದೈವವಾಗುವುದು ಅದನ್ನು ಯಾರು ಆಡುತ್ತಾರೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ತ್ರಿಕರಣ ಶುದ್ಧಿಯಿಂದ ಕ್ರಿಯಾಶೀಲರಾದ ಚೇತನಗಳು ಆಡುವ ಮಾತಿಗೆ ಈ ಶಕ್ತಿಯಿರುತ್ತದೆ. ಮಾತನ್ನು ಅವರು ದೈವತ್ವದ ನೆಲೆಗೇರಿಸಬಲ್ಲರು. ಇಂಥವರ ಮಾತುಗಳನ್ನು ಕೇಳಿಸಿಕೊಳ್ಳುವ ಸಮಾಜವೂ ಮಾತಿಗೆ ಶಕ್ತಿಯನ್ನು ತಂದುಕೊಟ್ಟುಬಿಡುತ್ತದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ‘ಮಾತುಕೊಡು’, ‘ಭಾಷೆಕೊಡು’ ಎಂಬ ನುಡಿಗಟ್ಟು ಬಳಕೆಯಲ್ಲಿದೆ. ಇಲ್ಲಿ ಮಾತು ‘ಪ್ರಮಾಣ’ ಎಂಬರ್ಥದಲ್ಲಿ ಬಳಕೆಯಾಗುತ್ತಿರುವುದನ್ನು ಗಮನಿಸಬೇಕು. ‘ಶ್ರೀಮಂತನಲ್ಲಿ ಔದಾರ್ಯಬುದ್ಧಿಯೂ, ವಚೋನಿಪುಣನಲ್ಲಿ ಮತ್ಸರವಿಲ್ಲದಿರುವುದೂ ಕಷ್ಟ; ಒಂದು ವೇಳೆ ಔದಾರ್ಯಬುದ್ಧಿಯವನಿಗೆ ಶ್ರೀಮಂತಿಕೆಯೂ, ಮತ್ಸರವಿಲ್ಲದವನಿಗೆ ವಾಕ್ಚಾತುರ್ಯವೂ ಒದಗಿ ಬಂದರೆ ಸಮಾಜ ಧನ್ಯ’ ಎಂದು ರನ್ನ ಹೇಳುವುದು ಇಲ್ಲಿ ನೆನಪಾಗುತ್ತಿದೆ. ಮಾತು ಮತ್ಸರಕ್ಕೆ ಕಾರಣವಾಗುವ ಬದಲು ಸೌಹಾರ್ದ ಸೃಷ್ಟಿಸಲು ಕಾರಣವಾಗುವುದಾದರೆ ಅಂತಹ ಸಮಾಜ ನಿಸ್ಸಂದೇಹವಾಗಿ ಆರೋಗ್ಯಕರವಾಗಿರಬಲ್ಲುದು.

    ನಮ್ಮ ವಚನಕಾರರಂತೂ ಮಾತಿಗೆ ವಿಶೇಷ ಮಹತ್ವ ನೀಡಿದವರು. ‘ಮಾತುಕೊಡು’, ‘ಭಾಷೆಕೊಡು’ ಎಂಬ ಪರಿಕಲ್ಪನೆಗಳಂತೆಯೇ ‘ವಚನ’ ಎಂಬುದೂ ‘ಪ್ರಮಾಣ’ ಎಂಬುದಕ್ಕೆ ಪರ್ಯಾಯವಾಗಿ ಬಳಕೆಯಾಗುತ್ತದೆ. ಮಾತು ಅವರಿಗೆ ಕೇವಲ ಸಂವಹನದ ಸಾಧ್ಯತೆಯಲ್ಲ, ಅದು ಕೂಡಲಸಂಗಮನನ್ನು ಒಲಿಸುವ ಸಾಧನ. ‘ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’; ಹಾಗೆ ನುಡಿದರಷ್ಟೇ ಸಾಲದು, ‘ನುಡಿದಂತೆ ನಡೆಯಬೇಕು’; ಆಗ ಕೂಡಲಸಂಗಮದೇವ ಒಲಿಯುತ್ತಾನೆ. ಇದು ಶರಣರು ಕಂಡುಕೊಂಡ ಸತ್ಯ. ಅಂತಹ ಶರಣರು ಮರ್ತ್ಯಲೋಕದವರ ಮೈಲಿಗೆ ಕಳೆಯಲೆಂದು ವಚನವೆಂಬ ಜ್ಯೋತಿಯನ್ನು ನೀಡಿದ್ದಾರೆ. ಅದು ದೇವಲೋಕಕ್ಕೆ ದಾರಿ; ಪುರಾತನರು ವಚನವೆಂಬ ಮೆಟ್ಟಿಲುಗಳನ್ನು ನಿರ್ವಿುಸಿ ಆ ಮೂಲಕ ದೈವಸಾನ್ನಿಧ್ಯಕ್ಕೆ ಹೋಗುವ ಹಾದಿ ತೋರಿದ್ದಾರೆ. ಅಂತಹ ಶರಣರ ಸೂಳ್ನುಡಿ ದೊರಕಿದರೆ ದೈವಸಾಕ್ಷಾತ್ಕಾರವಾದಂತೆ: ‘ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ/ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ/ನಿಮ್ಮ ಶರಣರ ಸೂಳ್ನುಡಿಯ ನೊಂದರೆಗಳಿಗೆಯಿತ್ತಡೆ/ನಿಮ್ಮನಿತ್ತೆ ಕಾಣಾ ರಾಮನಾಥ’ (ದೇವರ ದಾಸಿಮಯ್ಯ). ಅಲ್ಲಮನಂತೂ ‘ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ’ ಎಂದಿದ್ದಾನೆ. ಅವನ ಪ್ರಕಾರ ‘ಮಾತೆಂಬುದು ಜ್ಯೋತಿರ್ಲಿಂಗ’.

    ಮಾತು ಪರಸ್ಪರ ಸಂವಾದಕ್ಕೆ, ಅರ್ಥಮಾಡಿಕೊಳ್ಳುವುದಕ್ಕೆ, ಸಹಬಾಳ್ವೆಗೆ ಅವಕಾಶ ಮಾಡಿಕೊಡಬೇಕು. ಆದರೆ ಇಂದು ಮಾತು ನಮ್ಮ ಮನಸ್ಸುಗಳನ್ನು ‘ರಣರಂಗ’ವಾಗಿಸಿದೆ. ಸಾರ್ವಜನಿಕ ಬದುಕಿನಲ್ಲಿ ಅತ್ಯಂತ ಎಚ್ಚರಿಕೆಯಿಂದ, ಸಂಯಮದಿಂದ, ಘನತೆಯಿಂದ ಮಾತನ್ನು ಬಳಸಬೇಕು; ಆದರೆ ಇಂದು ಏನಾಗಿದೆ? ಪರಸ್ಪರ ದೂರುವುದೇ ನಮ್ಮ ನಾಯಕರ ಸಾಧನೆಯಾಗಿಬಿಟ್ಟಿದೆ. ಇದರ ಸಾಮಾಜಿಕ ಪರಿಣಾಮವೆಂದರೆ ಎರಡು ಬಣಗಳ ಘರ್ಷಣೆ, ಆಕ್ರಮಣ, ಹೊಡೆದಾಟ. ನಮ್ಮ ದೃಶ್ಯಮಾಧ್ಯಮಗಳಲ್ಲಿ ದಿನವಿಡೀ ಇದರ ಪ್ರದರ್ಶನ! ಬೇಂದ್ರೆ ಹೇಳುತ್ತಾರೆ: ‘ಸಾಕು ವಾದವಿವಾದ/ಹೃದಯ ಸಂವಾದಕ್ಕೆ ಹಸಿದು ಬಂದೆ/ನೀಡು ಸಿಪ್ಪೆಯ ಸುಲಿದು ತಿರುಳನೊಂದೆ/ಇದಿರಾಡದಿರು ಗೆಳತಿ ನೀನು ಕೂಡ/ಹೃದಯವನು ರಣರಂಗ ಮಾಡಬೇಡ’.

    ಯಾವುದೇ ಕ್ರಿಯೆಗೆ ಮೂರು ಹಂತಗಳಿರುತ್ತವೆ. ಮೊದಲನೆಯದು ಮನಸ್ಸಿನಲ್ಲಿ ಮೂಡುವ ಭಾವ ಅಥವಾ ಆಲೋಚನೆ; ಆಮೇಲೆ ಅದು ಮಾತಿನ ರೂಪ ಪಡೆಯುತ್ತದೆ. ಇದು ಎರಡನೆಯ ಹಂತ. ನಂತರದಲ್ಲಿ ಮಾತು ಕ್ರಿಯೆಯಾಗಿ ರೂಪು ಪಡೆಯುವುದು ಮೂರನೆಯ ಮಜಲು. ಇದನ್ನೇ ‘ಕಾಯಾ ವಾಚಾ ಮನಸಾ’ ಎಂದು ರೂಢಿಯಲ್ಲಿ ಗುರ್ತಿಸುತ್ತಾರೆ. ನಾನು ಇದನ್ನು ‘ಮನಸಾ ವಾಚಾ ಕಾಯಾ’ ಎಂಬ ನೆಲೆಯಲ್ಲಿ ಹೇಳಿದ್ದೇನೆ. ನಮ್ಮ ಮನಸ್ಸಿನಲ್ಲಿ ಏನೇನೆಲ್ಲ ಭಾವಗಳು ಮೂಡುತ್ತವೆ. ನಮ್ಮೆಲ್ಲರ ಅದೃಷ್ಟವೆಂದರೆ ನಮ್ಮ ಮನಸ್ಸು ಯಾರಿಗೂ, ನಮ್ಮ ಜೊತೆಜೊತೆಗೇ ಅನೇಕ ವರ್ಷಗಳು ಸಹಬಾಳ್ವೆ ನಡೆಸಿದವರಿಗೂ ತಿಳಿಯುವುದಿಲ್ಲ. ಮನಸ್ಸಿನಲ್ಲಿ ಮೂಡಿದ ಭಾವಗಳಿಗೆಲ್ಲ ಮಾತಿನ ರೂಪ ಕೊಡಲಾಗುವುದಿಲ್ಲ, ಕೊಡಲೂಬಾರದು. ಸಾಮಾಜಿಕ ಬದುಕಿನಲ್ಲಿ ಯಾವ ಭಾವಗಳಿಗೆ ಮಾತು ಕೊಡಬೇಕೆಂಬ ವಿವೇಚನೆ ಅತ್ಯಗತ್ಯ. ಅನ್ನಿಸಿದ್ದನ್ನೆಲ್ಲಾ ಹೇಳುವುದು ಅಪಾಯವನ್ನು ಆಹ್ವಾನಿಸಿದಂತೆ. ನಾವಾಡುವ ಮಾತಿನ ಪರಿಣಾಮ ಏನಾಗುತ್ತದೆ ಎಂಬ ಅರಿವು ಎಚ್ಚರ ಇರಬೇಕು. ಉದ್ವೇಗಕ್ಕೊಳಗಾಗಿ ಮಾತನಾಡಿ ಆ ನಂತರದಲ್ಲಿ ಆಡಿದ ಮಾತುಗಳನ್ನು ದಕ್ಕಿಸಿಕೊಳ್ಳಲಾಗದೆ ಪಾಡು ಪಡುವ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಭಾವಾವೇಶದ ಮಾತುಗಳು ಕೇಳಲು ಚಂದವಿರುತ್ತವೆ, ರಂಜನೆಯನ್ನೂ ನೀಡುತ್ತವೆ. ಆದರೆ ಮೌಲಿಕವಾಗುವುದಿಲ್ಲ.

    ಮನೋರೂಪಿ ಭಾವ ಸಾಮಾಜಿಕ ನೆಲೆಯಲ್ಲಿ ಮಾತಿನ ರೂಪ ಪಡೆಯುವಾಗ ಎಚ್ಚರ ಅತ್ಯಗತ್ಯವಾಗಿರುವಂತೆಯೇ ಆಡುವ ಮಾತಿಗೂ ಕ್ರಿಯೆಗೂ ಸಮನ್ವಯತೆ ಬೇಕಾಗುತ್ತದೆ. ‘ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮದೇವನೆಂತೊಲಿವನಯ್ಯಾ?’ ಆಡುವುದು ಸುಲಭ, ಆದರೆ ಆಡಿದಂತೆ ನಡೆಯುವುದು ಬಲು ಕಷ್ಟ. ಭಾಷಣಗಳಲ್ಲಿ ಭರವಸೆ ನೀಡುವುದು ಆಕರ್ಷಕ, ಆದರೆ ಅದರ ಅನುಷ್ಠಾನ ಸಾಧ್ಯವಾಗದು ಎಂಬ ಅರಿವಿದ್ದೂ ಮೆಚ್ಚಿಸಲು ಮಾತನಾಡುವುದು ಪೊಳ್ಳುತನ. ತೆರೆಯ ಮೇಲಿನ ವೀರಾವೇಶದ ಉದಾತ್ತ ಮಾತುಗಳಿಗೆ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ರೋಮಾಂಚಕಾರಿ, ಆದರೆ ವಾಸ್ತವ ಬದುಕಿನಲ್ಲಿ ಅದರ ಪಾಲನೆ ದುಸ್ತರ. Words are there to cheat you ಎಂಬುದು ಪ್ರಸಿದ್ಧವಾದ ಹೇಳಿಕೆ. ನಮ್ಮ ನಾಯಕಮಣಿಗಳಿಗೆ ಮಾತೇ ಬಂಡವಾಳ. ಮಾತಿನಿಂದಲೇ ನಿರಂತರ ಮೋಸ ಮಾಡುವುದು ಅವರಿಗೆ ಸಾಧ್ಯವಾಗಿದೆ, ಮತ್ತೆ ಮತ್ತೆ ಮೋಸ ಹೋಗುವುದೂ ನಮಗೆ ಅಭ್ಯಾಸವಾಗಿಬಿಟ್ಟಿದೆ. ಶರಣರ ‘ಸೂಳ್ನುಡಿ’ ದೈವಸಾಕ್ಷಾತ್ಕಾರಕ್ಕೆ ಹಾದಿಯೂ ಹೌದು, ಜಿನನ ವಾಣಿ ಸರಸ್ವತಿಯೆನ್ನುವುದೂ ಸತ್ಯವೇ; ಅಂತೆಯೇ ಆಕರ್ಷಕ ಮಾತು ಮೋಸ ಮಾಡುವ ಸಾಧನವೆಂಬುದೂ ನಿಜವೇ, ದುಡುಕಿನ ಒಂದು ಮಾತು ಬದುಕಿನ ವಿನಾಶಕ್ಕೆ ಕಾರಣ ಎಂಬುದೂ ವಾಸ್ತವವೇ! ಮಾತಿನ ಮಹಿಮೆ ಅಪಾರ! ‘ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ/ರಸಿಕನಲ್ಲದನ ಬರಿಮಾತು ಕಿವಿಯೊಳಗೆ ಕೂ/ರ್ದಸಿಯ ಬಡಿದಂತೆ ಸರ್ವಜ್ಞ’

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts