ಅವರ ಮಹಾನ್ ತ್ಯಾಗ ನವಭಾರತಕ್ಕೆ ಪ್ರೇರಣೆಯಾಗಲಿ

ಇಡೀ ದೇಶ ಜಲಿಯನ್​ವಾಲಾ ಬಾಗ್ ಹುತಾತ್ಮರನ್ನು ಸ್ಮರಿಸುತ್ತಿದೆ. ಸ್ವಾತಂತ್ರ್ಯಪ್ರಾಪ್ತಿಯ ಹೋರಾಟದಲ್ಲಿ ಪ್ರಾಣವನ್ನೇ ಅರ್ಪಿಸಿದ ಆ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಿಕ್ಕು ಕಲ್ಪಿಸಿದ ಅವರ ತ್ಯಾಗ, ಬಲಿದಾನ ಅಮೂಲ್ಯವಾದದ್ದು. ಭಾರತಕ್ಕೆ ಸ್ವಾತಂತ್ರ್ಯ ಇಂಥ ಲಕ್ಷಾಂತರ ಬಲಿದಾನಿಗಳಿಂದ ಪ್ರಾಪ್ತವಾಗಿದ್ದು, ಅದರ ಮಹೋನ್ನತೆಯನ್ನು ಅರಿತು ನಾವು ಮುಂದಡಿ ಇಡಬೇಕಿದೆ.

ಪ್ರಸ್ತುತ ಇರುವ ಟೆಲಿವಿಜನ್ ಮತ್ತು ಸಾಮಾಜಿಕ ಮಾಧ್ಯಮಗಳು 20ನೇ ಶತಮಾನದ ಆರಂಭದಲ್ಲಿ ಇದ್ದಿದ್ದರೆ, 1947ರ ಬದಲು ಭಾರತಕ್ಕೆ ಸ್ವಾತಂತ್ರ್ಯ ಕನಿಷ್ಠ 25 ವರ್ಷ ಮುಂಚಿತವಾಗಿಯೇ ಸಿಗುತ್ತಿತ್ತು. 1919ರ ಏಪ್ರಿಲ್ 13ರಂದು ನಡೆದ ಜಲಿಯನ್​ವಾಲಾ ಬಾಗ್ ಹತ್ಯಾಕಾಂಡದ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಬಿಂಬಿಸಬಹುದಿತ್ತು. ಖ್ಯಾತ ಕವಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ಹತ್ಯಾಕಾಂಡದ ಬಗ್ಗೆ ಒಂದು ತಿಂಗಳ ಬಳಿಕ (ಮೇ 22) ತಿಳಿದು, ಅಮಾಯಕರ ಕಗ್ಗೊಲೆಯನ್ನು ಪ್ರತಿಭಟಿಸುವ ಸಲುವಾಗಿ ಅವರು ನೈಟ್​ಹುಡ್ ಪುರಸ್ಕಾರ ವಾಪಸು ಮಾಡಿದರು.

100 ವರ್ಷಗಳ ಹಿಂದೆ ಇದೇ ದಿನ ಅಮೃತಸರದ ಜಲಿಯನ್​ವಾಲಾ ಬಾಗ್​ನಲ್ಲಿ ಸೇರಿದ್ದ ಅಮಾಯಕ ಭಾರತೀಯರ ಮೇಲೆ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ತನ್ನ ಪಡೆಗೆ ಗುಂಡು ಹಾರಿಸಲು ಆದೇಶಿಸಿದ್ದ. ಬೈಸಾಕಿ ಆಚರಣೆಗೆ ಜಮಾವಣೆಗೊಂಡಿದ್ದವರು ಬಾಗ್​ನಲ್ಲಿ ನೆರೆದಿದ್ದರು. ಜತೆಗೆ ರಾಷ್ಟ್ರವಾದಿ ನಾಯಕರಾದ ಡಾ. ಸೈಫುದ್ದೀನ್ ಕಿಛ್ಲೆ ಮತ್ತು ಸತ್ಯಪಾಲ್​ರ ಬಂಧನವನ್ನು ಖಂಡಿಸಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದರು.

ಸ್ವಾತಂತ್ರ್ಯಕ್ಕಾಗಿ ದೇಶ ನಡೆಸಿದ ಹೋರಾಟದಲ್ಲಿ ಜಲಿಯನ್​ವಾಲಾ ಬಾಗ್ ಹತ್ಯಾಕಾಂಡ ಒಂದು ಪ್ರಮುಖ ತಿರುವು. ಜತೆಗೆ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಈ ಘಟನೆ ಅತಿಹೆಚ್ಚು ಪರಿಣಾಮ ಬೀರಿದಂಥದ್ದು. ಬ್ರಿಟಿಷರ ಮೇಲೆ ಕಿಂಚಿತ್ ವಿಶ್ವಾಸ ಇಟ್ಟುಕೊಂಡಿದ್ದವರನ್ನು ಕೂಡ ಈ ಹತ್ಯಾಕಾಂಡ ಕಣ್ಣೀರು ಸುರಿಸುವಂತೆ ಮಾಡಿತ್ತು. ಅವರ ವಿಶ್ವಾಸ ಛಿದ್ರಗೊಂಡಿತ್ತು. ಉತ್ತಮ ನಡೆಯ, ಉದಾರವಾದಿ ಇಂಗ್ಲೀಷ್ ಪ್ರಜೆಗಳು ಮಹಾಕ್ರೂರಿಗಳಾಗಿ ದೇಶದ ಜನರಿಗೆ ಕಾಣಿಸತೊಡಗಿದರು. ಇದರ ಪರಿಣಾಮವಾಗಿ ಈಸ್ಟ್ ಇಂಡಿಯಾ ಕಂಪನಿ ತನ್ನ ಆಡಳಿತದಲ್ಲಿನ ನ್ಯಾಯಸಮ್ಮತತೆಯನ್ನು ಕಳೆದುಕೊಂಡಿತು. ಪ್ರಜ್ಞಾಹೀನ ಹತ್ಯಾಕಾಂಡದ ಮೂಲಕ ಬ್ರಿಟಿಷರು ತಮ್ಮ ಆಡಳಿತದಲ್ಲಿ ಕಡ್ಡಾಯವಾಗಿ ಇರಬೇಕಿದ್ದ ನ್ಯಾಯದ ದಾರಿಯನ್ನು ಮೀರಿದ್ದರು. ಬ್ರಿಟಿಷರ ಆಡಳಿತದಲ್ಲಿದ್ದ ಕೆಲವು ಹಿರಿಯ ಅಧಿಕಾರಿಗಳು ಮತ್ತು ಜಾಗತಿಕ ನಾಯಕರಿಗೆ ಕೂಡ ಈ ಹತ್ಯಾಕಾಂಡ ಸರಿ ಅಲ್ಲ ಎಂದೆನಿಸಿತ್ತು.

ಅಂದಿನ ಆಡಳಿತದಲ್ಲಿ ರಕ್ಷಣಾ ಸಚಿವ ಎನಿಸಿದ್ದ ವಿನ್ಸಟನ್ ರ್ಚಚಿಲ್, ಭಾರತದ ಸ್ವಾತಂತ್ರ್ಯದ ಪರವಾಗಿ ಒಲವು ಹೊಂದಿಲ್ಲದಿದ್ದರೂ ಹತ್ಯಾಕಾಂಡವನ್ನು ‘ರಾಕ್ಷಸೀಯ ವರ್ತನೆ’ ಎಂದು ಖಂಡಿಸಿದರು. ಬ್ರಿಟನ್​ನ ಅಂದಿನ ಪ್ರಧಾನಿ ಎಚ್.ಎಚ್. ಅಸಕ್ಯಿತ್, ‘ಇತಿಹಾಸದಲ್ಲಿ ಅತ್ಯಂತ ನಾಚಿಕೆಯ ವಿಚಾರ’ ಎಂದು ತಲೆತಗ್ಗಿಸಿದರು. 1920ರ ಜುಲೈ 8ರಂದು ಬ್ರಿಟನ್ ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ರ್ಚಚಿಲ್, ‘ ಜಲಿಯನ್​ವಾಲಾ ಬಾಗ್​ನಲ್ಲಿ ನೆರೆದಿದ್ದ ಜನರ ಬಳಿ ಶಸ್ತ್ರಗಳಿರಲಿಲ್ಲ. ಅವರು ಯಾರ ಮೇಲೆಯೂ ದಾಳಿಗೆ ಮುಂದಾಗಿರಲಿಲ್ಲ. ಗುಂಡು ಹಾರಿಸಲು ಮುಂದಾದಾಗ ಅವರು ಚದುರಿ ಓಡಲು ಯತ್ನಿಸಿದರು. ಹೊರಕ್ಕೆ ಹೋಗಲು ಜಾಗವಿಲ್ಲದ ಕಾರಣ , ಹಾರಿದ ಒಂದು ಗುಂಡು ಮೂವರಿಂದ ನಾಲ್ಕು ಜನರ ದೇಹವನ್ನು ಸೀಳಿತು. ನೇರವಾಗಿ ಗುಂಡು ಹಾರಿದಾಗ ಪ್ರಾಣರಕ್ಷಣೆಗಾಗಿ ಮೂಲೆಗೆ ಓಡಿದರು. ಮೂಲೆಗೆ ಗುಂಡು ಹಾರಿಸಿದರೆ ಪ್ರಾಣಭಯದಿಂದ ಹುಚ್ಚರಂತೆ ಚಲ್ಲಾಪಿಲ್ಲಿಯಾಗಿ ಓಡಿದರು. ಕೆಲವರು ನೆಲಕ್ಕೆ ಕುಸಿದರು. ಆಗ ನೆಲದ ಮೇಲೆಯೇ ಗುಂಡು ಹಾರಿಸಲಾಯಿತು. 8 ರಿಂದ 10 ನಿಮಿಷ ಸತತ ಗುಂಡಿನ ದಾಳಿ ಮುಂದುವರಿಯಿತು. ತುಪಾಕಿಗಳಲ್ಲಿದ್ದ ಗುಂಡುಗಳು ಖಾಲಿಯಾದ ಬಳಿಕವೇ ಸದ್ದು ನಿಂತಿದ್ದು’ ಎಂದು ಹತ್ಯಾಕಾಂಡವನ್ನು ವಿವರಿಸಿದರು. ಮೌನವಾಗಿ ಎಲ್ಲವನ್ನೂ ಆಲಿಸಿದ ಸಂಸತ್ತು ಜನರಲ್ ಡೈಯರ್​ರನ್ನು ಸೇವೆಯಿಂದ ವಜಾಗೊಳಿಸಲು ಮತ ಚಲಾಯಿಸಿತು. ಡೈಯರ್ ಪರ 37, ವಿರುದ್ಧ 247 ಮತಗಳು ಬಿದ್ದವು.

ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದ್ದ ಒಬ್ಬ ಪಂಜಾಬಿ ಯುವಕ ಉದ್ಧಮ್ ಸಿಂಗ್ ಸ್ವತಃ ಗಾಯಗೊಂಡಿದ್ದ. ಘಟನೆಯ ನೋವು ಮತ್ತು ಬ್ರಿಟಿಷರ ವಿರುದ್ಧದ ಆಕ್ರೋಶವನ್ನು ಆತ 21 ವರ್ಷಗಳವರೆಗೆ ಜೀವಂತವಾಗಿರಿಸಿಕೊಂಡು, 1940ರ ಮಾರ್ಚ್ 13ರಂದು ಲಂಡನಿನ ಕ್ಯಾಕ್ಸಟನ್ ಹಾಲ್​ನಲ್ಲಿ ಮೈಕಲ್ ಫ್ರಾನ್ಸಿಸ್ ಒ’ಡಯ್ಯರ್​ನನ್ನು ಗುಂಡಿಕ್ಕಿ ಹತ್ಯೆಗೈದ.

ಹತ್ಯಾಕಾಂಡ ನಡೆಸಿದ ಕ್ರೂರಿ ಡೈಯರ್​ನ ಅತಿ ಆಪ್ತ ವಲಯದಲ್ಲಿ ಪಂಜಾಬ್​ನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಡಯ್ಯರ್ ಗುರುತಿಸಿಕೊಂಡಿದ್ದ. ಡಯ್ಯರ್ ಹತ್ಯೆ ಬಳಿಕ ಕೋರ್ಟ್ ಎದುರು ಉದ್ಧಮ್ ಸಿಂಗ್​ನನ್ನು ಹಾಜರುಪಡಿಸಿದಾಗ, ‘ನನಗೆ ಸಾವಿನ ಭಯವಿಲ್ಲ. ನನ್ನ ದೇಶಕ್ಕಾಗಿ ಸಾಯುತ್ತಿದ್ದೇನೆ. ಬ್ರಿಟಿಷರ ಆಡಳಿತದಲ್ಲಿ ದೇಶದ ಜನರು ಹಸಿವಿನಿಂದ ಸಾಯುತ್ತಿರುವುದನ್ನು ನಾನು ಕಂಡಿದ್ದೇನೆ. ಇದರ ವಿರುದ್ಧ ಪ್ರತಿಭಟಿಸಿದ್ದೇನೆ. ಅದು ನನ್ನ ಕರ್ತವ್ಯವಾಗಿತ್ತು. ನನ್ನ ತಾಯ್ನಾಡಿ ಗಾಗಿ ಸಾಯುವುದಕ್ಕಿಂತ ದೊಡ್ಡ ಹೆಮ್ಮೆ ಮತ್ತು ಗೌರವ ನನಗೆ ಸಿಗಲಾರದು’ ಎಂದಿದ್ದ. 1940ರ ಜುಲೈ 31ರಂದು ಸಿಂಗ್​ನನ್ನು ಗಲ್ಲಿಗೇರಿಸಲಾಯಿತು.

ಡಯ್ಯರ್​ನನ್ನು ಉದ್ಧಮ್ ಹತ್ಯೆಗೈದ ಘಟನೆಯನ್ನು ‘ಪ್ರಜ್ಞಾಹೀನ ಕೃತ್ಯ’ ಎಂದು ಖಂಡಿಸಿದ್ದ ಪಂಡಿತ್ ನೆಹರು, 1952ರಲ್ಲಿ ಪ್ರಧಾನಿ ಆಗಿದ್ದಾಗ ‘ಶಹೀದ್-ಇ-ಅಜಾಮ್ ಉದ್ಧಮ್ ಸಿಂಗ್​ಗೆ ನಾನು ಗೌರವ ಸೂಚಿಸುತ್ತೇನೆ. ನಾವು ಸ್ವತಂತ್ರ ಪಡೆಯಲು ಆತ ಪ್ರಾಣತ್ಯಾಗ ಮಾಡಿದ’ ಎಂದಿದ್ದರು.

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಂತೆ 1905ರ ಬಂಗಾಳ ವಿಭಜನೆ, ಇಂಡಿಯನ್ ನ್ಯಾಷನಲ್ ಆರ್ವಿು ರಚನೆ , ಕ್ವಿಟ್ ಇಂಡಿಯಾ ಚಳವಳಿ ಮಾದರಿ ದೇಶದ ಇತಿಹಾಸದಲ್ಲಿ ಜಲಿಯನ್​ವಾಲಾ ಬಾಗ್ ಅತ್ಯಂತ ಪ್ರಮುಖ ಘಟನೆಯಾಗಿ ದಾಖಲಾಗಿದೆ.

ಇದೊಂದು ಪ್ರಮುಖ ತಿರುವು ಕೂಡ. ನಾವು ಇಂದು ಸುಖವಾಗಿ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಲು 100 ವರ್ಷಗಳ ಹಿಂದೆ ತಮ್ಮ ಪ್ರಾಣತ್ಯಾಗ ಮಾಡಿದವರಿಗೆ ಸದಾ ಋಣಿಯಾಗಿರಬೇಕು. ಅವರಿಗೆ ನಾವು ನೀಡಬಹುದಾದ ಅತ್ಯುತ್ತಮ ಶ್ರದ್ಧಾಂಜಲಿ ಎಂದರೇ ನವಭಾರತ ನಿರ್ವಣವೇ. ಅವರ ತ್ಯಾಗದ ಬೆಲೆಯನ್ನು ಅರಿತು ಈ ನಿಟ್ಟಿನಲ್ಲಿ ಎಲ್ಲರೂ ಉತ್ತಮ ಭಾರತ ನಿರ್ವಣಕ್ಕಾಗಿ ಶ್ರಮಿಸೋಣ.

ಸ್ಮಾರಕ ಸ್ಮರಣೆ…

ಅಮೃತಸರದ ಜಲಿಯನ್​ವಾಲಾ ಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದ ಜನರ ಸ್ಮರಣೆಗಾಗಿ ಸ್ಮಾರಕ ನಿರ್ವಿುಸಲಾಗಿದ್ದು, ಲಕ್ಷಾಂತರ ಜನರಿಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ನೆನಪು ಮಾಡಿಕೊಡುತ್ತಿದೆ. ದೇಶಭಕ್ತರ ಪಾಲಿಗಂತೂ ಶ್ರದ್ಧಾಕೇಂದ್ರವಾಗಿದೆ.

ಸ್ಮಾರಕದ ನಿರ್ವಣಕ್ಕಾಗಿಯೇ 1951ರಲ್ಲಿ ‘ಜಲಿಯನ್​ವಾಲಾ ಬಾಗ್ ರಾಷ್ಟ್ರೀಯ ಸ್ಮಾರಕ ಕಾಯ್ದೆ’ ರೂಪಿಸಲಾಯಿತು. ಇದರಡಿಯಲ್ಲಿ ಜಲಿಯನ್​ವಾಲಾ ಬಾಗ್ ಮೆಮೋರಿಯಲ್ ಟ್ರಸ್ಟ್ ರೂಪಿಸಿ ಈ ಸ್ಮಾರಕದ ನಿರ್ಮಾಣ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ವಹಿಸಲಾಯಿತು.

ಟ್ರಸ್ಟ್​ನಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು, ಡಾ.ಸೈಫುದ್ದೀನ್ ಕಿಚ್​ಲಿವು, ಮೌಲಾನಾ ಅಬುಲ್ ಕಲಾಂ ಆಜಾದ್ ಇದ್ದರು. ಅಲ್ಲದೆ, ಕೇಂದ್ರ ಸರ್ಕಾರದಿಂದ ಆಯ್ಕೆಯಾದ ಮೂವರು ಸದಸ್ಯರೂ ಇದ್ದರು. 2006ರಲ್ಲಿ ಈ ಕಾಯ್ದೆಯಲ್ಲಿ ತಿದ್ದುಪಡಿ ತರಲಾಯಿತು. ಪ್ರಧಾನಿಯನ್ನು ಟ್ರಸ್ಟ್​ನ ಅಧ್ಯಕ್ಷರಾಗಿ ಮಾಡಲಾಗಿದೆ, ಜತೆಗೆ ಕಾಂಗ್ರೆಸ್​ನ ಅಧ್ಯಕ್ಷ, ಸಂಸ್ಕೃತಿ ಸಚಿವ, ಲೋಕಸಭೆ ಪ್ರತಿಪಕ್ಷ ನಾಯಕ, ಪಂಜಾಬ್ ಗವರ್ನರ್ ಮತ್ತು ಮುಖ್ಯಮಂತ್ರಿ, ಕೇಂದ್ರ ಸರ್ಕಾರದಿಂದ ಆಯ್ಕೆಯಾದ ಮೂವರು ಇದರ ಸದಸ್ಯರಾಗಿರುತ್ತಾರೆ ಎಂದು ಕಾಯ್ದೆ ಹೇಳುತ್ತದೆ. ಕಳೆದ ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಮತ್ತೊಮ್ಮೆ ತಿದ್ದುಪಡಿ ತರಲಾಗಿದ್ದು ಕಾಂಗ್ರೆಸ್​ನ ಅಧ್ಯಕ್ಷರನ್ನು ಟ್ರಸ್ಟ್​ನಿಂದ ಹೊರಗಿಡಲಾಗಿದೆ.

1961ರಲ್ಲಿ ಸ್ಮಾರಕ ಉದ್ಘಾಟನೆ: 6.5 ಎಕರೆ ಪ್ರದೇಶದಲ್ಲಿ ನಿರ್ವಿುಸಲಾದ ಜಲಿಯನ್​ವಾಲಾ ಬಾಗ್ ಸ್ಮಾರಕವನ್ನು 1961ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಈ ಸ್ಮಾರಕದ ವಿನ್ಯಾಸವನ್ನು ಮಾಡಿದ್ದು ಅಮೆರಿಕದ ಆರ್ಕಿಟೆಕ್ಟ್ ಬೆಂಜಮಿನ್ ಪೊಲ್ಕ್. ಇಲ್ಲಿ ದುರಂತದ ಕುರುಹುಗಳಾಗಿ ಗೋಡೆಗೆ ತಾಗಿರುವ ಗುಂಡಿನ ಗುರುತುಗಳನ್ನು ಹಾಗೇ ಬಿಡಲಾಗಿದೆ. ಜತೆಗೆ ನೂರಾರು ಜನರು ಪ್ರಾಣರಕ್ಷಣೆಗಾಗಿ ಹಾರಿದ್ದ ಬಾವಿಯನ್ನು ಹಾಗೇ ಇಡಲಾಗಿದೆ. ಇಲ್ಲಿ ಕಲ್ಲಿನಿಂದ ನಿರ್ವಿುಸಿದ ದೀಪವಿದ್ದು, ‘ದುರಂತದಲ್ಲಿ ಹುತಾತ್ಮರಾದವರ ನೆನಪಿಗೆ’ ಎಂದು ಬರೆಯಲಾಗಿದೆ.

ಸ್ಮಾರಕ ಅಭಿವೃದ್ಧಿಗೆ 19 ಕೋಟಿ: ಜಲಿಯನ್​ವಾಲಾ ಬಾಗ್ ಸ್ಮಾರಕದ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ 19.29 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹತ್ಯಾಕಾಂಡ ನಡೆದು 100 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿ ಕೆಲ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ. ವೀಕ್ಷಕರಿಗೆ ಹೆಚ್ಚಿನ ಸವಲತ್ತು, ಸ್ಮಾರಕದ ಅಭಿವೃದ್ಧಿ, ಸಂಗ್ರಹಾಲಯ, ಶಬ್ದ ಮತ್ತು ಬೆಳಕಿನ ಪ್ರದರ್ಶನ ಮುಂತಾದ ಯೋಜನೆಗಳಿವೆ. ಇದಕ್ಕೆ ಟೆಂಡರ್ ಕರೆಯಲಾಗಿದ್ದು, 2019 ಏ.10 ಟೆಂಡರ್ ಸಲ್ಲಿಕೆಗೆ ಕೊನೆ ದಿನವಾಗಿತ್ತು. ಪಂಜಾಬ್ ಸರ್ಕಾರ ಕೂಡ ಕೆಲ ಯೋಜನೆಗಳನ್ನು ಹಾಕಿಕೊಂಡಿದೆ.

(ಲೇಖಕರು ಭಾರತದ ಉಪರಾಷ್ಟ್ರಪತಿ)