ಕೋಚಿಂಗ್ ಮಾಫಿಯಾಗೆ ಹಿಡಿದ ಸೂಪರ್ ಕನ್ನಡಿ

| ಚನ್ನಮಲ್ಲಿಕಾರ್ಜುನ ಹದಡಿ, ಬೆಂಗಳೂರು,

ಐಐಟಿ ಮತ್ತು ಜೆಇಇಗಳಂತಹ ಪರೀಕ್ಷೆಗಳು ಬಡ ವಿದ್ಯಾರ್ಥಿಗಳಿಗೆ ಗಗನಕುಸುಮವೇ ಸರಿ. ಆದರೆ ಅದನ್ನು ಬಡವರ ಕೈಗೆ ದೊರಕುವಂತೆ ಮಾಡುವ ಉದ್ದೇಶವೇ ಬಿಹಾರ್ ಮೂಲದ ಗಣಿತಜ್ಞ ಆನಂದ್ ಕುಮಾರ್ ಅವರ ‘ಸೂಪರ್ 30’ ಪರಿಕಲ್ಪನೆ. ಅದಕ್ಕೆ ಸ್ವಲ್ಪ ಮಸಾಲೆ ಬೆರೆಸಿ ತೆರೆಗೆ ತಂದಿದ್ದಾರೆ ನಿರ್ದೇಶಕ ವಿಕಾಸ್ ಬಹ್ಲ್.

ಆನಂದ್​ಕುಮಾರ್ (ಹೃತಿಕ್ ರೋಷನ್) ಪೋಸ್ಟ್​ಮ್ಯಾನ್​ನ ಮಗ. ಗಣಿತದಲ್ಲಿ ಗೋಲ್ಡ್ ಮೆಡಲ್ ಪಡೆದವನು. ಅವನ ಪ್ರತಿಭೆಗೆ ಸಾಕ್ಷಿಯಾಗಿ ಕೆಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ದೊರೆಯುತ್ತದೆ. ಸಹಾಯಕ್ಕಾಗಿ ಶಿಕ್ಷಣ ಸಚಿವರ ಮನೆಗೆ ಅಲೆದಾಟ ನಡೆಯುತ್ತದೆ. ಹಣ ಹೊಂದಿಸಲು ಎದುರಾಗುವ ಕಷ್ಟಗಳನ್ನು ನಿಭಾಯಿಸುವಾಗಲೇ ತಂದೆ ಮರಣ ಹೊಂದುತ್ತಾರೆ. ಕೆಂಬ್ರಿಜ್ ಕನಸು ಅಲ್ಲೇ ಉಳಿದು ತಾಯಿ ಮಾಡಿದ ಹಪ್ಪಳ ಮಾರಾಟದಲ್ಲಿ ತೊಡಗುತ್ತಾನೆ ಆನಂದ್. ನಂತರ ಶ್ರೀಮಂತರ ಒಂದು ಕೋಚಿಂಗ್ ಸೆಂಟರ್​ನಲ್ಲಿ ಉಪನ್ಯಾಸಕನಾಗಿ ಕೆಲಸ ಆರಂಭಿಸುತ್ತಾನೆ. ಬಳಿಕ ಬಡವರಿಗೆ, ಹಿಂದುಳಿದವರಿಗೆ ಉನ್ನತ ಶಿಕ್ಷಣ ಬರೀ ಕನಸು ಎಂಬುದು ಆನಂದ್​ಗೆ ಅರಿವಾಗಿ ಬಡಮಕ್ಕಳಿಗೆ ‘ಸೂಪರ್ 30’ ಕೋಚಿಂಗ್ ಶುರು ಮಾಡುತ್ತಾನೆ. ಸಮಾಜದಲ್ಲಿ ತೀರಾ ಕೆಳಸ್ತರದಲ್ಲಿರುವವರ ಮಕ್ಕಳು ಅಲ್ಲಿ ಬಂದು ಸೇರುತ್ತಾರೆ. ಎದುರಾಗುವ ಎಲ್ಲ ಅಡ್ಡಿ-ಆತಂಕಗಳನ್ನು ಎದುರಿಸಿ ಆನಂದ್ ಹೇಗೆ ಯಶಸ್ವಿ ಆಗುತ್ತಾನೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಆ ಮೂಲಕ ಶಿಕ್ಷಣ ವ್ಯವಸ್ಥೆಯ ಕಟು ಸತ್ಯವನ್ನು ಈ ಸಿನಿಮಾ ಪ್ರೇಕ್ಷಕರ ಮುಂದಿಡುತ್ತದೆ. ಕೋಚಿಂಗ್ ಮಾಫಿಯಾದ ವಿವರಗಳೂ ಇಲ್ಲಿವೆ. ನೋಡುಗರನ್ನು ಹಲವು ದೃಶ್ಯಗಳು ಭಾವುಕವಾಗಿ ಆವರಿಸಿಕೊಳ್ಳುತ್ತವೆ. ಪ್ರತಿ ಸಂಭಾಷಣೆಯೂ ತೂಕಬದ್ಧವಾಗಿದೆ.

ಆನಂದ್ ಮೇಲೆ ನಡೆದ ಗುಂಡಿನ ದಾಳಿ ಮುಂತಾದ ಸನ್ನಿವೇಶಗಳು ದೀರ್ಘವೂ, ನಾಟಕೀಯವೂ ಎನಿಸುತ್ತವೆ. ಅದರ ಬಗ್ಗೆ ನಿರ್ದೇಶಕರ ಗಮನ ಹರಿಸಿದ್ದರೆ ಚಿತ್ರ ಇನ್ನಷ್ಟು ಆಪ್ತವಾಗಬಹುದಿತ್ತು. ಕಮರ್ಷಿಯಲ್ ಮಾದರಿಯ ಹೀರೋಗಿರಿಯ ಹಂಗಿಲ್ಲದ ಈ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡ ಹೃತಿಕ್ ತೀರ್ವನಕ್ಕೆ ಸೈ ಎನ್ನಬೇಕು. ಕಪ್ಪಗಿನ ಸಾಧಾರಣ ವ್ಯಕ್ತಿಯಾಗಿ, ಡಾನ್ಸ್, ಫೈಟ್ಸ್​ಗಳ ಹಂಗಿಲ್ಲದೆಯೂ ಅವರು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಮೃಣಾಲ್ ಠಾಕೂರ್, ಪಂಕಜ್ ತ್ರಿಪಾಠಿ, ನಂದೀಶ್ ಸಂದು ಅಭಿನಯ ಕೂಡ ಚೆನ್ನಾಗಿದೆ. ಎಲ್ಲರೂ ಅವರವರ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರ: ಸೂಪರ್ 30

ನಿರ್ದೇಶನ: ವಿಕಾಸ್ ಬಹ್ಲ್

ನಿರ್ಮಾಣ: ಫ್ಯಾಂಥಮ್ ಫಿಲಂಸ್

ಪಾತ್ರವರ್ಗ: ಹೃತಿಕ್ ರೋಷನ್, ಮೃಣಾಲ್ ಠಾಕೂರ್, ಪಂಕಜ್ ತ್ರಿಪಾಠಿ, ಜಾನಿ ಲೀವರ್, ನಂದೀಶ್ ಸಿಂಗ್ ಮುಂತಾದವರು

Leave a Reply

Your email address will not be published. Required fields are marked *