ಅಕ್ಷರದವ್ವನಿಗೆ ದೃಶ್ಯನಮನ

| ಮದನ್

ಬೆಂಗಳೂರು: ಅದು 19ನೇ ಶತಮಾನದ ಆರಂಭ ಕಾಲ. ಸತಿ ಪದ್ದತಿ ಚಾಲ್ತಿಯಲ್ಲಿತ್ತು. ಹೆಣ್ಣುಮಕ್ಕಳು ಓದು-ಬರಹ ಕಲಿಯುವುದು ಮಹಾಪರಾಧ ಎಂಬ ಭಾವನೆ ಬೇರೂರಿತ್ತು. ಎಲ್ಲೆಲ್ಲೂ ಜಾತಿ ತಾರತಮ್ಯದ್ದೇ ಪಾರುಪತ್ಯ. ಇಂಥ ಪರಿಸರವನ್ನು ‘ಸಾವಿತ್ರಿಬಾಯಿ ಫುಲೆ’ ಚಿತ್ರದ ಮೂಲಕ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ನಿರ್ದೇಶಕ ವಿಶಾಲ್ ರಾಜ್. ಈ ಸಿನಿಮಾದ ಸಂಪೂರ್ಣ ಕಥೆ ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರ ಜೀವನ ಆಧರಿಸಿದ್ದರೂ, ಇದನ್ನು ಕೇವಲ ಬಯೋಪಿಕ್ ಎಂದರೆ ತಪ್ಪಾದೀತು. ಯಾಕೆಂದರೆ, ಒಂದು ಬಯೋಪಿಕ್​ನಲ್ಲಿ ಕಾಣಬಹುದಾಗಿದ್ದಕ್ಕಿಂತಲೂ ಹೆಚ್ಚಿನದನ್ನು ವಿವರಿಸುತ್ತದೆ ಈ ಚಿತ್ರ. ಲೇಖಕ ಸರಜೂ ಕಾಟ್ಕರ್ ಬರೆದ ‘ಸಾವಿತ್ರಿಬಾಯಿ ಫುಲೆ’ ಕಾದಂಬರಿಯನ್ನೇ ಆಧರಿಸಿ ಸಿನಿಮಾ ಮಾಡಿದ್ದಾರೆ ವಿಶಾಲ್ ರಾಜ್.

ಒಂದೂವರೆ ಶತಮಾನದ ಹಿಂದೆ ನಡೆದ ಘಟನೆಗಳನ್ನು ಬೆಳ್ಳಿಪರದೆಯಲ್ಲಿ ಮೂಡಿಸುವುದು ಸುಲಭದ ಮಾತಲ್ಲ. ಅಂದಿನ ಸಾಮಾಜಿಕ ಚಿತ್ರಣವನ್ನು ಬಿತ್ತರಿಸುವುದಕ್ಕೆ ಎಷ್ಟು ಕಾಳಜಿ ವಹಿಸಬೇಕೋ, ಭೌತಿಕ ಪರಿಸರವನ್ನು ಕಟ್ಟಿಕೊಡಲು ಅಷ್ಟೇ ಕಾಳಜಿ ವಹಿಸಬೇಕು. ಈ ವಿಚಾರದಲ್ಲಿ ‘ಸಾವಿತ್ರಿಬಾಯಿ ಫುಲೆ’ ಚಿತ್ರವನ್ನು ಮೆಚ್ಚಲೇಬೇಕು. ಹಳೇ ಕಾಲದ ರಸ್ತೆ, ಕಟ್ಟಡ, ವೇಷಭೂಷಣ, ಪೀಠೋಪಕರಣ.. ಹೀಗೆ ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ತೆರೆಗೆ ತರುವಲ್ಲಿ ನಿರ್ದೇಶಕರು ಸೈ ಎನಿಸಿಕೊಂಡಿದ್ದಾರೆ. ಅದಕ್ಕೆ ಎಚ್.ಬಿ. ನಾಗರಾಜ್ ಕಲಾ ನಿರ್ದೇಶನ, ವಿಜಯ್ ಕುಮಾರ್ ಅವರ ವಸ್ತ್ರ ವಿನ್ಯಾಸ ಹೆಚ್ಚು ಕೊಡುಗೆ ನೀಡಿದೆ. ಎಲ್ಲವನ್ನೂ ಅತ್ಯಂತ ನೈಜವಾಗಿ ಸೆರೆಹಿಡಿದ ನಾಗರಾಜ ಆದವಾನಿ ಅವರ ಛಾಯಾಗ್ರಹಣಕ್ಕೆ ಹೆಚ್ಚು ಅಂಕ ಸಲ್ಲುತ್ತದೆ.

2 ಗಂಟೆ 7 ನಿಮಿಷಗಳ ಈ ಚಿತ್ರದಲ್ಲಿ ಒಂದೇ ಒಂದು ಅನಗತ್ಯ ಸನ್ನಿವೇಶವನ್ನೂ ನಿರ್ದೇಶಕರು ತುರುಕಿಲ್ಲ. ಇಲ್ಲಿನ ಪ್ರತಿ ಶಾಟ್​ಗೂ ಅರ್ಥವಿದೆ. ಪ್ರತಿ ಸಂಭಾಷಣೆಗೂ ಮಹತ್ವವಿದೆ. ಸಾವಿತ್ರಿಬಾಯಿ ಅವರ ಅರ್ಥಪೂರ್ಣ ಬದುಕಿಗೆ ಹಿಡಿದ ದೊಡ್ಡ ಕನ್ನಡಿಯಂತೆ ಈ ಸಿನಿಮಾ ಭಾಸವಾಗುತ್ತದೆ. ಆ ಕನ್ನಡಿಯಲ್ಲಿ ಸಾವಿತ್ರಿಬಾಯಿ ಅವರ ವ್ಯಕ್ತಿತ್ವ ಕಂಡಷ್ಟೇ ಸ್ಪಷ್ಟವಾಗಿ ಇತರ ವ್ಯಕ್ತಿಗಳೂ ಗೋಚರಿಸುತ್ತಾರೆ. ಸಾಮಾನ್ಯ ಹುಡುಗಿಯಾಗಿದ್ದವಳು ಸಮಾಜ ಸುಧಾರಕಿ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆಯುವಲ್ಲಿ ಅವರ ಪತಿ ಜ್ಯೋತಿಬಾ ಫುಲೆ ಕೊಡುಗೆ ದೊಡ್ಡದು. ಜ್ಯೋತಿಬಾ ಅವರ ನಿಲುವು, ಆಶಯ, ಸಮಾಜ ಸೇವೆ, ದೂರದೃಷ್ಟಿ ಮುಂತಾದ ವಿವರಗಳ ಬಗ್ಗೆಯೂ ಈ ಸಿನಿಮಾ ತಿಳಿಸಿಕೊಡುತ್ತದೆ. ಹಾಗಾಗಿ, ಪೂರ್ತಿ ಚಿತ್ರ ನೋಡಿದ ಬಳಿಕ ಸಾವಿತ್ರಿ ಅವರ ಕುರಿತು ತಿಳಿದುಕೊಂಡ ರೀತಿಯೇ ಜ್ಯೋತಿಬಾ ಬಗ್ಗೆಯೂ ತಿಳಿದುಕೊಂಡ ಸಾರ್ಥಕತೆ ಪ್ರೇಕ್ಷಕನಿಗಾಗುತ್ತದೆ. ಅದರ ಜತೆಗೆ, ಹೆಣ್ಣುಮಕ್ಕಳ ದುಸ್ಥಿತಿ, ಪುರೋಹಿತಶಾಹಿ ದಬ್ಬಾಳಿಕೆ, ಸಾಕ್ಷರತೆಯ ಮಹತ್ವದ ಕುರಿತಾಗಿಯೂ ಈ ಚಿತ್ರ ಮಾತನಾಡುತ್ತದೆ.

ಸಾವಿತ್ರಿಯವರು ನಡೆದು ಬಂದಿರುವುದು ಕಷ್ಟದ ಹಾದಿಯಲ್ಲಿ. ಅಲ್ಲಿ ನಗುವಿಗಿಂತಲೂ ಹೆಚ್ಚು ಕಣ್ಣೀರಿದೆ. ಹಾಗಾಗಿ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಈ ಚಿತ್ರದ ಹಲವು ದೃಶ್ಯಗಳು ಆವರಿಸಿಕೊಳ್ಳುತ್ತವೆ. ಅದಕ್ಕೆ ಸಾಥ್ ನೀಡುವುದು ಶಬ್ಬೀರ್ ಅವರ ಹಿನ್ನೆಲೆ ಸಂಗೀತ. ವೀಣೆ, ಪಿಟೀಲು, ಶಹನಾಯಿ ಮುಂತಾದ ಸಾಂಪ್ರದಾಯಕ ವಾದ್ಯಗಳ ಮೂಲಕವೇ ಹಳೇ ಜಗತ್ತನ್ನು ಆಲಿಸುವಂತೆ ಮಾಡುತ್ತಾರೆ ಶಬ್ಬೀರ್. ಇನ್ನು ‘ಯುಗವೇ ಬಾ, ಜಗವೇ ಬಾ..’ ಹಾಡಿನಿಂದ ಮೋಡಿ ಮಾಡುತ್ತಾರೆ ಸಂಗೀತ ನಿರ್ದೇಶಕಿ/ಗಾಯಕಿ ಸಂಗೀತಾ ಕಟ್ಟಿ. ಕಲಾವಿದರೆಲ್ಲ ಅಭಿನಯಿಸುವುದಕ್ಕಿಂತ ಹೆಚ್ಚಾಗಿ ಪಾತ್ರಗಳನ್ನೇ ಜೀವಿಸಿದ್ದಾರೆ. ತಾರಾ ಅನುರಾಧ ಮತ್ತು ಸುಚೇಂದ್ರ ಪ್ರಸಾದ್ ಪೈಪೋಟಿಗೆ ಬಿದ್ದವರಂತೆ ನೋಡುಗರ ಮನಗೆಲ್ಲುತ್ತಾರೆ. ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶ್ರೀಪತಿ, ಮಹಾಂತೇಶ್, ಉಮೇಶ್ ತೇಲಿ ಮುಂತಾದವರು ನೆನಪಿನಲ್ಲಿ ಉಳಿಯುತ್ತಾರೆ. ಒಟ್ಟಾರೆ, ಬಡ ಹೆಣ್ಣುಮಕ್ಕಳ ಪಾಲಿಗೆ ಸಾಕ್ಷಾತ್ ಸರಸ್ವತಿಯಂತಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಅವರಿಗೆ ದೃಶ್ಯನಮನ ಸಲ್ಲಿಸಿದೆ ಈ ಚಿತ್ರ.

ಚಿತ್ರ: ಸಾವಿತ್ರಿಬಾಯಿ ಫುಲೆ

ನಿರ್ಮಾಣ: ಬಸವರಾಜ ವಿ. ಭೂತಾಳಿ

ನಿರ್ದೇಶನ: ವಿಶಾಲ್ ರಾಜ್

ಪಾತ್ರವರ್ಗ: ತಾರಾ ಅನುರಾಧ, ಸುಚೇಂದ್ರ ಪ್ರಸಾದ್, ಶ್ರೀಪತಿ ಮಂಜನಬೈಲು, ತನುಜಾ, ಮಹಾಂತೇಶ್ ಗಜೇಂದ್ರಗಡ, ಉಮೇಶ್ ತೇಲಿ ಮುಂತಾದವರು.