ವಸತಿ ಶಾಲೆ-ನಿಲಯಗಳಲ್ಲಿ ಸೌಕರ್ಯ ಮಾಯ!

ಬೆಂಗಳೂರು: ‘ಸೋರುತಿಹುದು ಹಾಸ್ಟೆಲ್ ಮಾಳಿಗೆ…’ ಆದರಿಲ್ಲಿ ಅಜ್ಞಾನ ದಿಂದಲ್ಲ, ನಿರ್ಲಕ್ಷ್ಯದಿಂದ!, ‘ಶೌಚಗೃಹವಿದೆ, ಆದರೆ, ಬಾಗಿಲೇ ಇಲ್ಲ! ತಕ್ಷಣ ಸರಿಮಾಡಿಸೋಕೆ ಇಲ್ಲೇನು ರಾಜಕಾರಣಿಗಳೋ, ಅಧಿಕಾರಿಗಳೋ ಬಂದು ಕೂರುತ್ತಾರೆಯೇ? ಇಲ್ಲವಲ್ಲ, ನಾವೇ,,, ಅದೇ ಬಡ ವಿದ್ಯಾರ್ಥಿಗಳು ತಾನೇ..?’, ‘ಕೊಠಡಿ ಇರುವುದು ಇರುವೆ ಗೂಡಿ ನಂತೆ, ಮಲಗುವುದು ಮಾತ್ರ ಆರೆಂಟು ಮಂದಿ!, ಇಕ್ಕಟ್ಟಿನಲ್ಲಿ ಒಗ್ಗಟ್ಟು ಸೂತ್ರ ಹೇಳಿಕೊಡು ತ್ತಿದ್ದಾರೆಯೇ?’

ಇಷ್ಟೆಲ್ಲ ಮಾತು ಕೇಳಿಬರು ತ್ತಿರುವುದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಸತಿ ಶಾಲೆ ಹಾಗೂ ವಸತಿ ನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ. ಸಮಾಜದ ಕಟ್ಟಕಡೆಯ ಮಗುವಿಗೂ ಉತ್ತಮ, ಮೌಲ್ಯಯುತ ಹಾಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವ ಉದ್ದೇಶದೊಂದಿಗೆ ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ಸ್ಥಾಪಿಸಿದ್ದರೂ ಆಶಯಕ್ಕೆ ತದ್ವಿರುದ್ಧ ಸ್ಥಿತಿ ಇರುವುದು ಮಾತ್ರ ವಿಪರ್ಯಾಸ. ಯಾವ ಸರ್ಕಾರ ಬರಲಿ ಬಿಡಲಿ, ಇಲ್ಲಿನ ಸ್ಥಿತಿಯಂತೂ ಸುಧಾರಿಸುವುದಿಲ್ಲ ಎಂಬ ತೀರ್ವನಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರು ಬಂದಿದ್ದಾರೆ. ಇನ್ನಾದರೂ ಸಮಸ್ಯೆಯ ಮೂಲಕ್ಕೆ ಪರಿಹಾರವೆಂಬ ಮುಲಾಮನ್ನು ಹಚ್ಚಲಾಗುತ್ತದೆಯೇ ಎಂಬುದನ್ನು ನೋಡಬೇಕಿದೆ. ಇವು ಸೇರಿ ಗ್ರಂಥಾಲಯ, ಆಹಾರ, ನೀರು, ಸ್ವಚ್ಛತೆಗಳಂತಹ ಅನೇಕ ಸಮಸ್ಯೆಗಳು ಹಾಸಿ ಹೊದ್ದು ಮಲಗುವಷ್ಟಿವೆ.

ನಾಳೆಯಿಂದ

ವಸತಿ ಶಾಲೆ, ನಿಲಯಗಳ ದುಸ್ಥಿತಿ ಬಗ್ಗೆ ಬೆಳಕು ಚೆಲ್ಲುವ ‘ವಿಜಯವಾಣಿ’ ರಿಯಾಲಿಟಿ ಚೆಕ್ ಸರಣಿ ವರದಿಗಳು ನಾಳೆಯಿಂದ ಸ್ಥಳೀಯ ಪುಟಗಳಲ್ಲಿ…

ಕಲಬುರಗಿಯಲ್ಲಿ ಶೌಚಗೃಹ‘ಭಂಗ’

ಕಲಬುರಗಿಯ ವಿದ್ಯಾನಗರದಲ್ಲಿರುವ ಪರಿಶಿಷ್ಟ ಜಾತಿ, ಪಂಗಡದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್​ಗಳಲ್ಲಿರುವ ವಿದ್ಯಾರ್ಥಿಗಳ ಅನುಪಾತದಂತೆ ಕೊಠಡಿಗಳು ಲಭ್ಯವಿಲ್ಲ. ಒಂದು ಕೋಣೆಯಲ್ಲಿ 10-12 ವಿದ್ಯಾರ್ಥಿನಿಯರಿದ್ದಾರೆ. ಸುಮಾರು 300 ವಿದ್ಯಾರ್ಥಿನಿಯರಿದ್ದು, 12 ಬ್ಲಾಕ್​ಗಳಿವೆ. ಈ ಬ್ಲಾಕ್​ಗಳಿಗೆ ಒಟ್ಟಾರೆ 48 ಶೌಚಗೃಹಗಳಿದ್ದು, ಶೌಚಗೃಹ, ಸ್ನಾನಗೃಹಗಳು ಇಷ್ಟುಮಂದಿಗೆ ಸರಿ ಹೋಗಲ್ಲ ಎನ್ನುವುದು ವಿದ್ಯಾರ್ಥಿನಿಯರ ಅಳಲು. ಓದಿಗೆ ಪೈಪೋಟಿ ಇರಬೇಕೇ ವಿನಃ ಸ್ನಾನ, ಶೌಚಕ್ಕೆ ಹೋಗಲು ಅಲ್ಲ ಎಂಬುದು ಇವರ ವಾದ. ಜತೆಗೆ ಕೆಲ ಕಡೆ ಗ್ರಂಥಾಲಯಗಳೂ ಸರಿ ಇಲ್ಲ. ಮೂರೋ, ನಾಲ್ಕೋ ಪತ್ರಿಕೆಗಳು ಬರುತ್ತಿವೆ. ಹೀಗಾಗಿ ಎಲ್ಲರೂ ಎಲ್ಲಿ ಓದಲು ಸಾಧ್ಯ? ಎಂದು ವಿದ್ಯಾರ್ಥಿಗಳು ಕೇಳುತ್ತಿದ್ದಾರೆ.

ಮಂಗಳೂರಲ್ಲಿ ಕಮಿಷನ್ ಕಾವು

ದಕ್ಷಿಣಕನ್ನಡ ಜಿಲ್ಲೆಯ ಕೆಲವೆಡೆ 30 ವರ್ಷಕ್ಕಿಂತ ಹಳೇ ಕಟ್ಟಡಗಳು ಮಳೆಗಾಲದಲ್ಲಿ ಸೋರಲಾರಂಭಿಸಿವೆ. ಹೊಸ ಕಟ್ಟಡಕ್ಕೆ ಯೋಜನಾ ಪಟ್ಟಿ ಕಳುಹಿಸಲಾಗಿದೆ. ಅಲ್ಲದೆ, ಕೆಲವೆಡೆ ಜಮೀನು ಖರೀದಿಯೂ ನಡೆದಿದೆ. ಆದರೆ, ಕಮಿಷನ್ ಆಸೆಯಿಂದ ಹೊಸ ಕಟ್ಟಡಕ್ಕೆ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ ಎನ್ನುವ ಆರೋಪಗಳೂ ಇವೆ. ಇದಕ್ಕೆ ಒಂದು ನಿದರ್ಶನ ಕೊಡುವುದಾದರೆ, ಬಂಟ್ವಾಳ ತಾಲೂಕಿನ ಮೊಡಂಕಾಪು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ 1972ರಲ್ಲಿ ಮೈಸೂರು ಸರ್ಕಾರ ನಿರ್ವಿುಸಿತ್ತು, 46 ವರ್ಷ ಪೂರೈಸಿದೆ. ಪದೇಪದೆ ಹೆಂಚು ಒಡೆಯುವುದು ಸಾಮಾನ್ಯ. ಶೌಚಗೃಹದ ಬಾಗಿಲು ಮುರಿದು ಹೋಗಿದ್ದು, ಅಳವಡಿಸಿರುವ ಟೈಲ್ಸ್​ಗಳು ಕಿತ್ತುಹೋಗಿವೆ. ಹೊಸ ಕಟ್ಟಡ ಬೇಡಿಕೆ ಇನ್ನೂ ಕಡತದಲ್ಲೇ ಇದೆ. ಇನ್ನು ಬಿ.ಸಿ.ರೋಡಿನಲ್ಲಿರುವ ವಸತಿ ಶಾಲೆ (1ರಿಂದ 5ನೇ ತರಗತಿ) ಆರ್​ಸಿಸಿ ಕಟ್ಟಡದಲ್ಲಿದ್ದರೂ ಮಳೆಗಾಲ ಬಂದಾಗ ವಸತಿ ನಿಲಯ ಹಾಗೂ ಶಾಲೆಯ ಕೋಣೆಗಳ ಗೋಡೆ ತೇವಗೊಳ್ಳುತ್ತವೆ. ತರಗತಿ ಕೋಣೆಯ ಸೀಲಿಂಗ್​ನ ಕಾಂಕ್ರೀಟ್ ಬಿರುಕು ಬಿಟ್ಟು ಕಬ್ಬಿಣದ ಸರಳುಗಳು ಕಾಣುತ್ತಿವೆ. ಈ ಭಾಗದಲ್ಲಿ ಸಿಬ್ಬಂದಿ ಸಮಸ್ಯೆಯೂ ಇದ್ದು, ಒಬ್ಬ ವಾರ್ಡನ್ 2- 3 ಹಾಸ್ಟೆಲ್​ಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಮಂಜೂರಾದ ರಾತ್ರಿ ಕಾವಲುಗಾರರ ಎಲ್ಲ ಎಂಟು ಹುದ್ದೆಗಳು ಖಾಲಿ ಇರುವುದು ಚಿಕ್ಕ ನಿದರ್ಶನ. ಜತೆಗೆ ಇಲ್ಲಿನ ಕುಚ್ಚಲು ಅಕ್ಕಿ ಸೇರಿ ಆಹಾರ ಪದ್ಧತಿಯೂ ಕೆಲವರಿಗೆ ಹಿಡಿಸುತ್ತಿಲ್ಲ.

ಬಾಡಿಗೆ ಕಟ್ಟಡ, ಸ್ನಾನಕ್ಕೆ ನೀರೂ ಇಲ್ಲ

ಬೆಳಗಾವಿ ಜಿಲ್ಲೆಯಲ್ಲಿ ಮೂರು ಇಲಾಖೆ ವ್ಯಾಪ್ತಿಯಡಿ 261 ಮೆಟ್ರಿಕ್ ಪೂರ್ವ ಹಾಗೂ ನಂತರದ ಹಾಸ್ಟೆಲ್​ಗಳು ಕಾರ್ಯನಿರ್ವಹಿಸುತ್ತಿವೆ. ಶೇ.10 ಹಾಸ್ಟೆಲ್​ಗಳು ಶಿಥಿಲಾವಸ್ಥೆಯಲ್ಲಿದ್ದು, ಸಣ್ಣ-ಪುಟ್ಟ ದುರಸ್ತಿ ಮಾಡಲಾಗಿದೆ. ಜಿಲ್ಲೆಯ 30ಕ್ಕೂ ಅಧಿಕ ಹಾಸ್ಟೆಲ್​ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು, ಸ್ಥಳಾವಕಾಶದ ಕೊರತೆ ಇದೆ. ಚಿಕ್ಕ ಕೊಠಡಿಗಳಾಗಿದ್ದರಿಂದ ಬೆಡ್ ಹಾಕಿಲ್ಲ, ಒಂದೇ ಕೊಠಡಿಯಲ್ಲಿ ಆರೇಳು ವಿದ್ಯಾರ್ಥಿಗಳು ಮಲಗಬೇಕಿದೆ. ಕೆಲವೆಡೆ ಅಡುಗೆಮನೆಯ ಕಟ್ಟೆಯ ಮೇಲೂ ಮಲಗುತ್ತಿದ್ದಾರೆ. ಇಲ್ಲೂ ಸಿಬ್ಬಂದಿ ಸಮಸ್ಯೆ ಇದೆ. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಸ್ವಚ್ಛತೆ ಇಲ್ಲ. ರುಚಿಕರವಾದ ಆಹಾರ ನೀಡುತ್ತಿಲ್ಲ. ಫಲಕದಲ್ಲಿ ಹಾಕಿರುವ ಆಹಾರ ಪಟ್ಟಿ ಪಾಲನೆಯಾಗುತ್ತಿಲ್ಲ. ಮಧ್ಯಾಹ್ನ ಉಳಿದ ಊಟ ರಾತ್ರಿ ಬಡಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ರಾಯಚೂರು ಜಿಲ್ಲೆಯ ಹಲವಾರು ವಸತಿಗೃಹಗಳಲ್ಲಿ ಸ್ನಾನಗೃಹದ ಸಮಸ್ಯೆಯಿಂದ ವಿದ್ಯಾರ್ಥಿಗಳು ಹೊರಗೆ ಸ್ನಾನ ಮಾಡುವಂತಾಗಿದೆ. ಒಂದೊಂದು ರೂಮಿನಲ್ಲಿ ಐದಾರು ವಿದ್ಯಾರ್ಥಿಗಳು ಇಕ್ಕಟ್ಟಿನ ಸ್ಥಿತಿಯಲ್ಲಿ ವಾಸ ಮಾಡಬೇಕಾಗಿದೆ. ಜತೆಗೆ ಉಪಾಹಾರ ಮತ್ತು ಭೋಜನದ ಗುಣಮಟ್ಟದ ಬಗ್ಗೆಯೂ ವಿದ್ಯಾರ್ಥಿಗಳಿಂದ ಆರೋಪಗಳಿವೆ.

ಚೇಳು ಕಡಿದು ವಿದ್ಯಾರ್ಥಿ ಸಾವು

ಕೆಲ ಜಿಲ್ಲೆಗಳಲ್ಲಿ ಹಾಸ್ಟೆಲ್​ಗಳ ಸುತ್ತಮುತ್ತ ಸ್ವಚ್ಛತೆ ಮರೀಚಿಕೆಯಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ರಾಯಚೂರು ತಾಲೂಕು ಇಡಪನೂರು ಗ್ರಾಮದ ಆರ್​ಎಂಎಸ್​ಎ ವಸತಿ ಶಾಲೆ ವಿದ್ಯಾರ್ಥಿ ಹುಲಿಗೆಮ್ಮ (15) ಶಾಲೆಗೆ ಹೋಗಲು ಶೂ ಹಾಕಿಕೊಳ್ಳುವಾಗ ಸಾಕ್ಸ್​ನಲ್ಲಿದ್ದ ಚೇಳು ಕಡಿದು ಶುಕ್ರವಾರ ಮೃತಪಟ್ಟಿದ್ದಾಳೆ. ಇಂಥ ನೂರಾರು ಪ್ರಕರಣಗಳು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

Leave a Reply

Your email address will not be published. Required fields are marked *