ಕೊಚ್ಚಿಹೋದವರು 14 ಮಂದಿ!

| ಗಿರೀಶ್ ಗರಗ ಬೆಂಗಳೂರು

ಮಳೆಯ ಅನಾಹುತಕ್ಕೆ ಸಂಬಂಧಿಸಿ ದಂತೆ ಬಿಬಿಎಂಪಿಗೆ ಮೊದಲೇ ಮುನ್ಸೂಚನೆ ಇದ್ದರೂ ನಿವಾರಣೆಗೆ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿಯೇ ಪ್ರತಿ ವರ್ಷ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಮಳೆಗಾಲದಲ್ಲಿ ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 12 ವರ್ಷಗಳಲ್ಲಿ 14 ಜನರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.

ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಬೆಂಗಳೂರು ತತ್ತರಿಸಿದೆ. ಅದರಲ್ಲೂ ಕಳೆದ ವರ್ಷ ಸುರಿದ ಭಾರಿ ಮಳೆಗೆ ಬಹಳಷ್ಟು ಅನಾಹುತಗಳೇ ಸಂಭವಿಸಿವೆ. ಅನೇಕ ಬಡಾವಣೆಗಳಲ್ಲಿ ಪ್ರವಾಹ ಉಂಟಾಗಿ ಬಿಬಿಎಂಪಿ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಾಗಿತ್ತು. ಬೆಂಗಳೂರಿನಲ್ಲಿ ಭಾರಿ ಮಳೆ ಬಂದಾಗ ಪ್ರವಾಹ ಉಂಟಾಗುವ 339 ಪ್ರದೇಶಗಳನ್ನು ಬಿಬಿಎಂಪಿ ಗುರುತು ಮಾಡಿತ್ತು. ಆದರೆ, ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ. ಹೀಗಾಗಿಯೇ ಜನರ ಆಸ್ತಿ ಪಾಸ್ತಿ ನಷ್ಟವಾಗುವುದರ ಜತೆಗೆ ಪ್ರಾಣಹಾನಿಗೂ ಕಾರಣವಾಗುತ್ತಿದೆ.

2005ರಿಂದ 2017ರವರೆಗೆ 14 ಜನರು ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಅದಕ್ಕೆ ಪ್ರಮುಖ ಕಾರಣ ತಡೆಗೋಡೆ ಇಲ್ಲದಿರುವುದು. ಮಳೆ ನೀರು ರಸ್ತೆ, ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದ್ದು, ಅದರಿಂದಾಗಿ ಪಾದಚಾರಿಗಳು ರಾಜಕಾಲುವೆಯಲ್ಲಿ ಕೊಚ್ಚಿ ಹೋಗುವಂತಾಗುತ್ತಿದೆ.

ಹೊರವಲಯದಲ್ಲಿ ಹೆಚ್ಚು ಪ್ರವಾಹ: ಬಿಬಿಎಂಪಿ ನಿರ್ಲಕ್ಷ್ಯದಿಂದಾಗಿ ಹೊರವಲಯಗಳ ಬಡಾವಣೆಗಳಲ್ಲಿಯೇ ಅತಿ ಹೆಚ್ಚು ಪ್ರವಾಹ ಉಂಟಾಗಿದೆ. ಮಹದೇವಪುರ ವಲಯದಲ್ಲಿಯೇ 78 ಬಡಾವಣೆಗಳು ಪ್ರವಾಹಪೀಡಿತವಾಗಿವೆ. ಬೊಮ್ಮನಹಳ್ಳಿ, ಕೋರಮಂಗಲ ವ್ಯಾಲಿಗಳಲ್ಲೂ 50ಕ್ಕೂ ಹೆಚ್ಚಿನ ಪ್ರವಾಹಪೀಡಿತ ಬಡಾವಣೆಗಳಿವೆ.

ಕಾರಣವೇನು?

ಬಡಾವಣೆಗಳಲ್ಲಿ ಪ್ರವಾಹ ಹೆಚ್ಚಾಗಲು ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯದಿರುವುದು, ಹೂಳು ತುಂಬಿಕೊಂಡಿರುವುದು, ಒತ್ತುವರಿಯಾಗಿರುವುದು ಪ್ರಮುಖ ಕಾರಣಗಳು.ರಾಜಕಾಲುವೆ ಬಂದು ಸೇರುವ ಕೆರೆಯಲ್ಲಿ ಹೂಳು ತುಂಬಿದ್ದು, ನೀರು ಶೇಖರಣೆ ಸಾಮರ್ಥ್ಯ ಕಡಿಮೆಯಾಗಿದೆ. ಹಿಂದೆಲ್ಲ ರಾಜಕಾಲುವೆಯಿಂದ ಹರಿಯುವ ನೀರು ಕೆರೆಗಳಿಗೆ ಸೇರುತ್ತಿತ್ತು. ಆದರೀಗ, ಕೆರೆಗಳೆಲ್ಲ ಒತ್ತುವರಿಯಾಗಿದ್ದು, ಅಲ್ಲಿಗೆ ನೀರು ಹೋಗಲು ಸಾಧ್ಯವಾಗುತ್ತಿಲ್ಲ. ಏನೇ ಆದರೂ ರಾಜಕಾಲುವೆ ಅಥವಾ ಚಿಕ್ಕ ಚರಂಡಿಗಳಲ್ಲಿ ನೀರು ಹರಿಯಬೇಕು. ಆದರೆ, ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಚರಂಡಿಗಳಲ್ಲೂ ಹೂಳು ತುಂಬಿದೆ ಹಾಗೂ ಚರಂಡಿಗಳಿಂದ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಪ್ರವಾಹಪೀಡಿತ ಪ್ರದೇಶಗಳು ಹೆಚ್ಚಾಗಿವೆ.