ರಸ್ತೆಯಲ್ಲೇ ನಿಲ್ಲುವ ಕೊಳಚೆ ನೀರು

ಗಣ್ಯಾತಿಗಣ್ಯರು ವಾಸಿಸುವ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜಯಮಹಲ್ ನಂದಿದುರ್ಗ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲೇ ಮೂಲಸೌಕರ್ಯವಿಲ್ಲ. ರಸ್ತೆಗಳೆಲ್ಲ ಗುಂಡಿಮಯ. ಹಲವು ವರ್ಷಗಳಿಂದ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಜನ ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ. ಜೀವ ಕೈಯಲ್ಲಿಡಿದು ವಾಹನ ಸವಾರರು ಸಂಚರಿಸುತ್ತಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ ಯಾವ ಮಟ್ಟಿಗಿದೆ ಎಂಬುದು ವಿಜಯವಾಣಿ ರಿಯಾಲಿಟಿ ಚೆಕ್​ನಲ್ಲಿ ಬಯಲಾಗಿದೆ.

ಬೆಂಗಳೂರು: ಈ ಬಡಾವಣೆಯಲ್ಲಿ ವಾಸವಿರುವವರೆಲ್ಲ ಗಣ್ಯಾತಿಗಣ್ಯರು. ಆದರೆ, ಮೂಲಸೌಕರ್ಯ ಮಾತ್ರ ಮರೀಚಿಕೆ.

ಇಲ್ಲಿನ ರಸ್ತೆಗಳಿಗೆ ಡಾಂಬರು ಇಲ್ಲ. ಚರಂಡಿಗಳು ಕಟ್ಟಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತದೆ. ಪ್ರತಿನಿತ್ಯ ಮೂಗು ಮುಚ್ಚಿಕೊಂಡೇ ಓಡಾಡಬೇಕಾದ ಪರಿಸ್ಥಿತಿ!

ಸಚಿವರು ಸೇರಿ ವಿವಿಐಪಿಗಳು ವಾಸವಿರುವ ಬಡಾವಣೆಯದ್ದೇ ಈ ದುಃಸ್ಥಿತಿಯಾದರೆ ಬಡವರು ವಾಸಿಸುವ ಲೇಔಟ್ ಸ್ಥಿತಿ ಕೇಳುವರ್ಯಾರು?

ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜಯಮಹಲ್ ಬಡಾವಣೆ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜಯಮಹಲ್ ವಾರ್ಡ್ ವ್ಯಾಪ್ತಿಗೆ ಒಳಪಡುವ ನಂದಿದುರ್ಗ ರಸ್ತೆ ಮೇಲೆ ಕಳೆದ ಎರಡು ವರ್ಷಗಳಿಂದ ಕೊಳಚೆ ನೀರು ಹರಿಯುತ್ತಿದೆ. ಸ್ಥಳೀಯರು ಹಲವು ಬಾರಿ ಮನವಿ ಕೊಟ್ಟರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಸರಿಪಡಿಸುವ ಗೋಜಿಗೆ ಹೋಗಿಲ್ಲ.

ರೋಗಗಳ ಭೀತಿ: ನಂದಿದುರ್ಗ ರಸ್ತೆಯ ಪಕ್ಕದಲ್ಲೇ ಕಸದ ರಾಶಿ ಬಿದ್ದಿದೆ. ಮೋರಿಗಳಿಂದಾಗಿ ದುರ್ವಾಸನೆ ಬರುತ್ತದೆ. ದೂರದರ್ಶನ ಕೇಂದ್ರದಿಂದ ಕಂಟೋನ್ಮೆಂಟ್ ರೈಲು ನಿಲ್ದಾಣ, ಹಲಸೂರು ಕಡೆಗೆ ಸಂಚರಿಸುವವರು ನಂದಿದುರ್ಗ ರಸ್ತೆ ಸಮೀಪಿಸುತ್ತಿದ್ದಂತೆ ಮೂಗು ಮುಚ್ಚಿ ಸಾಗಬೇಕು. ಕೊಳಚೆ ನೀರು ಸಂಗ್ರಹವಾಗಿ ರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಸ್ಥಳೀಯರನ್ನು ಕಾಡಿದೆ. ಸಮಸ್ಯೆ ಗೊತ್ತಿದ್ದರೂ ಪರಿಹರಿಸಿದೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರ ವಿರುದ್ಧ ಬಡಾವಣೆ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಲಿಗಾಗಿ ಕಾದಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್

ನಂದಿದುರ್ಗ ರಸ್ತೆಯ ಸಾದತ್ ಹೆಲ್ ್ತ ಕೇರ್​ಗೆ ಹೊಂದಿಕೊಂಡಿರುವ ವಿದ್ಯುತ್ ಟ್ರಾನ್ಸ್​ಫಾರ್ಮರ್ ಬಲಿಗಾಗಿ ಕಾದಿದೆ. ವಿದ್ಯುತ್ ವೈರ್​ಗಳು ಜೋತುಬಿದ್ದಿದ್ದು, ಅನಾಹುತಕ್ಕೆ ಆಹ್ವಾನಿಸುತ್ತಿವೆ. ಈ ವೈರ್​ಗಳು ಆಗಾಗ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಿಡಿಗಳು ಹಾರುತ್ತವೆ. ಹೀಗಾಗಿ ಫುಟ್​ಪಾತ್​ನಲ್ಲಿ ಯಾರೂ ಓಡಾಡದ ಸ್ಥಿತಿ ನಿರ್ವಣವಾಗಿದೆ. ಹಲವು ಬಾರಿ ಬೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರೂ ದುರಸ್ತಿಗೊಳಿಸಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ವಾರ್ಡ್​ನಲ್ಲಿ 25 ವರ್ಷಗಳ ಹಿಂದೆ ಅಳವಡಿಸಲಾಗಿರುವ ಚರಂಡಿ ಪೈಪ್​ಗಳು ಹಾಗೂ ಮೋರಿ ಅಧ್ವಾನಗೊಂಡಿದ್ದು, ಅಲ್ಲಲ್ಲಿ ಕೊಳಕು ನೀರು ಉಕ್ಕಿ ರಸ್ತೆಯ ಮೇಲೆ ಹರಿಯುವುದು ಸಾಮಾನ್ಯವಾಗಿದೆ. ಯಾರೊಬ್ಬರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಫುಟ್​ಪಾತ್ ಯಾವುದು, ರಸ್ತೆ ಯಾವುದು ಎಂಬುದೇ ತಿಳಿಯದಂತಾಗಿದೆ.

| ಕಾಂತಮ್ಮ, ಸ್ಥಳೀಯ ನಿವಾಸಿ

ಹೇಳುವುದಕ್ಕೆ ಪ್ರತಿಷ್ಠಿತ ಬಡಾವಣೆ. ಆದರಿಲ್ಲಿ ದಿನನಿತ್ಯ ಧೂಳಿನಲ್ಲೇ ಬದುಕುವ ಸ್ಥಿತಿ. ಕಾಮಗಾರಿ ನೆಪದಲ್ಲಿ ರಸ್ತೆ ಅಗೆಯುವವರು ಅದನ್ನು ಮುಚ್ಚದೆ ಹೋಗುತ್ತಾರೆ. ದೊಡ್ಡ ಅನಾಹುತ ಸಂಭವಿಸುವ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕು.

| ನಾರಾಯಣ ರಾವ್, ಸ್ಥಳೀಯ ನಿವಾಸಿ

ನಂದಿದುರ್ಗ ರಸ್ತೆಯಲ್ಲಿರುವ ಖಾಸಗಿ ಅಪಾರ್ಟ್​ವೆುಂಟ್​ಗಳ ಆವರಣದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ಒಳಚರಂಡಿಯಿಂದ ಸಮಸ್ಯೆ ಸೃಷ್ಟಿಯಾಗಿದೆ. ಅಪಾರ್ಟ್​ವೆುಂಟ್ ನಿವಾಸಿಗಳಿಗೆ ಸೂಚನೆ ಕೊಟ್ಟರೂ ಪ್ರಯೋಜನವಾಗಿಲ್ಲ. ರಸ್ತೆಯ ಮೇಲೆ ಹರಿಯುತ್ತಿರುವ ಕೊಳಚೆ ನೀರಿನ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಲಾಗುವುದು.

| ನವಾಬ್ ಶೇಖ್, ಜಲಮಂಡಳಿ ಸಹಾಯಕ ಇಂಜಿನಿಯರ್

ಆನೆ ಪಾರ್ಕ್ ರಸ್ತೆ ಅಧ್ವಾನ!

ಆನೆ ಪಾರ್ಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ರಸ್ತೆಗಳೆಲ್ಲ ಗುಂಡಿಮಯ ವಾಗಿವೆ. ಮಳೆ ಬಂತೆಂದರೆ ರಸ್ತೆಯೆಲ್ಲ ಜಲಾವೃತಗೊಂಡು ವಾಹನಗಳ ಓಡಾಟ ದುಸ್ತರವಾಗುತ್ತದೆ. ಸವಾರರು ಜೀವವನ್ನು ಕೈಯಲ್ಲಿಟ್ಟುಕೊಂಡೇ ಓಡಾಡಬೇಕಾದ ದುಃಸ್ಥಿತಿ ಇದೆ. ಬಡಾವಣೆಯ ರಸ್ತೆಗಳು ಬಹುತೇಕ ಹಾಳಾಗಿವೆ. ಫುಟ್​ಪಾತ್​ಗಳು ಕಿತ್ತುಬಂದಿವೆ. ಕಾಮಗಾರಿ ನೆಪದಲ್ಲಿ ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *