ವಿಚಿತ್ರಭಾರತದ ವಿಕ್ಷಿಪ್ತತೆಯ ರೋಗ

‘ಮೆಲಂಕಲಿ’ (Melancholy) ಎಂಬುದು ನಿಷ್ಕಾರಣ ಮಾನಸಿಕ ಅಸ್ವಸ್ಥತೆಯ ರೋಗ. ದೊಡ್ಡವರೆಂಬುವರಿಗೂ ಇದು ಆಗಾಗ ಬರುತ್ತದೆ. ಸಮಾಜಗಳಿಗೂ ಬರುತ್ತದೆ. ಇದರ ವಿರುದ್ಧವಾದ ಮನಃಸ್ಥಿತಿಯನ್ನು ‘ಅನವಸಾದ’ (non resort to mental depression) ಎಂದು ಯೋಗಶಾಸ್ತ್ರ ವಿಧಿಸಿ, ಜೀವನಸಾಫಲ್ಯದ, ಪರಿಪೂರ್ಣತೆಯ, ಅಮೃತತ್ತ್ವ ಸಾಧನೆಗೆ ಇದು ಒಂದು ಅವಶ್ಯವಾದದ್ದು ಎಂದು ಹೇಳಿ ಮೋಕ್ಷಮಾರ್ಗದ ಗಮನಕ್ಕೆ ‘ಸಾಧನ ಸಪ್ತಕ’ಗಳಲ್ಲಿ ಸೇರಿಸಿದೆ. ವಿವೇಕ, ವಿಮೋಕ, ಅಭ್ಯಾಸ, ಕ್ರಿಯಾ, ಕಲ್ಯಾಣ, ಅನವಸಾದ, ಅನುದ್ಧರ್ಷ- ಎಂಬುವು ಇವು. ಆಹಾರಶುದ್ಧಿ, ಕಾಮಕ್ಕೆ ವಶವಾಗದೆ ಇರುವುದು, ಯೋಗವನ್ನು ಸತತವಾಗಿ ಮಾಡುತ್ತಿರುವುದು, ಸತ್ಕರ್ಮನಿರತತೆ, ಕಲ್ಯಾಣಚಿಂತನೆ, ಅನಗತ್ಯ ದುಃಖ ಸುಳಿಯಲ್ಲಿ ಸಿಕ್ಕಿ ಬೀಳದೇಇರುವುದು, ಹಿಗ್ಗದೆ, ಸಾಧನೆ ಮುಗಿಯಿತೆಂಬ ಸುಳ್ಳು ಭರವಸೆಯಿಲ್ಲದೆ ಇರುವುದು- ಇವೇ ಆ ಸಪ್ತಕಗಳು.

ಬ್ರಹ್ಮಸೂತ್ರಗಳಿಗೆ ಸಂಗ್ರಹಟೀಕೆ- ‘ವಾಕ್ಯಗ್ರಂಥ’ವನ್ನು ಬರೆದ ಟಂಕಾಚಾರ್ಯರೆಂಬ ಅಪರ ನಾಮಧೇಯವುಳ್ಳ ಬ್ರಹ್ಮನಂದಿ ಎಂಬ ಆತ್ರೇಯ ಗೋತ್ರದ ಆಚಾರ್ಯರು ಈ ಭಾವವನ್ನು ಎತ್ತಿಹಿಡಿದು, ಈ ಎಲ್ಲದಕ್ಕೂ ಶ್ರುತಿಗಳ ಆಧಾರ ತೋರಿಸಿರುವುದನ್ನು ಶ್ರೀರಾಮಾನುಜರು ತಮ್ಮ ಶ್ರೀಭಾಷ್ಯದಲ್ಲಿ ಉಲ್ಲೇಖಿಸಿದ್ದಾರೆ. ಪ್ರಾಚೀನರ ಮಾರ್ಗದರ್ಶನ ಇದು. ಇಲ್ಲಿ ಕಠೋಪನಿಷತ್ತಿನ- ‘ನಾವಿರತೋ ದುಶ್ಚರಿತಾನ್ ನಾ ಶಾಂತೋ ನಾಸಮಾಹಿತಃ | ನಾಶಾಂತ ಮಾನಸೋ ವಾಹಿ ಪ್ರಜ್ಞಾನೆನೈನಂ ಆಪ್ನುಯಾತ್ ||’ ಎಂಬ ಸೂಕ್ತಿ ಸ್ಮರಣೀಯ. ದುಶ್ಚರಿತ್ರದಲ್ಲಿರದೆ, ಶಾಂತಿಯಿಂದಿರುತ್ತ, ಬಹಿರಿಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಮನಸ್ಸನ್ನೂ ವಶದಲ್ಲಿಟ್ಟು ಸಾಧನೆ ಮಾಡಿದರೆ ದೇವರು ಪ್ರಾಪ್ಯ. ಬರೀ ಪ್ರಜ್ಞೆ, ಬುದ್ಧಿ, ಓದು, ಶ್ರವಣಗಳಿಗೆ ದೇವರು ಒಲಿಯುವುದಿಲ್ಲ ಎಂದು ಯಮ ನಚಿಕೇತನಿಗೆ ಹೇಳುವ ಮಾತು ಇದು. ಅಯ್ಯಾ! ನೀವು ಆರ್ಯರಾದರೂ ಸರಿ, ದ್ರಾವಿಡರಾದರೂ ಸರಿ, ಔತ್ತರೇಯರೋ ದಾಕ್ಷಿಣಾತ್ಯರೋ, ಯಾವ ಜಾತಿಯೋ ಪ್ರಾಂತ್ಯವೋ ಆದರೂ, ಭಾರತೀಯತೆಯ ಉನ್ನತಪ್ರಜ್ಞೆಯಲ್ಲಿದ್ದು, ಸರ್ವಾಂಗೀಣ ರಾಷ್ಟ್ರ ಉನ್ನತಿಯನ್ನು ಸಾಧಿಸಬೇಕಾದುದು ಯೋಗ್ಯ, ಶ್ಲಾಘ್ಯ. ಆದರೆ ಆಕ್ರಮಣಕಾರರ ನಿರಂತರ ದಾಳಿಯಿಂದ ಗುಲಾಮಿ ಬುದ್ಧಿಗೆ ಶರಣಾದ ಕೆಲವು ನಗರಗಳ ಭಾರತೀಯರಿಗೆ ಈ ಮೆಲಂಕಲಿ ರೋಗ ಹಿಡಿದು, ನಿರಾಶಾವಾದದ ಬಿಗಿಯಪು್ಪಗೆಯಲ್ಲಿ ಈಗ ಸಾಮೂಹಿಕ ‘ಹರಕೇರಿ’ ಎಂಬ ದುಃಸ್ಥಿತಿ

ಬಂದಿದೆ. ಜಗತ್ತಿನ ಇತಿಹಾಸದಲ್ಲಿ ಅಳಿದುಹೋದ ಜನಾಂಗಗಳ ನಿರ್ನಾಮಕ್ಕೂ ಈ ರೋಗ ಕಾರಣ- ಎಸ್ಕಿಮೋ, ಆಸ್ಟೆಕ್ಸ್, ರೆಡ್ ಇಂಡಿಯನ್ಸ್, ಆಫ್ರಿಕೆಯ ಅನೇಕ ಬುಡಕಟ್ಟುಗಳು, ಭಾರತದಲ್ಲೇ ಅನೇಕ ಗುಡ್ಡಗಾಡು ಜನಾಂಗಗಳು ಹೇಗೆ ನಾಮಾವಶೇಷ ಆದರೆಂದು Anthropology ಶಾಸ್ತ್ರ ಓದಿ ತಿಳಿಯಿರಿ. ರೋಮನ್ ಸೇನೆಯ ಆರ್ಭಟದಾಳಿಯಿಂದ, ನಾಲ್ಕೈದು ಶತಮಾನಗಳ ಐರೋಪ್ಯ ವಸಾಹತುಕಾರರ ದಾಳಿಗಳಿಂದ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕ, ವಿಶ್ವದ ಇನ್ನಿತರ ಭಾಗಗಳಲ್ಲಿ ದುರ್ಬಲ ಜನಾಂಗಗಳು ಈ ಮಾನಸಿಕ ಅಸ್ವಸ್ಥತೆಯನ್ನು, ವಿಕ್ಷಿಪ್ತತೆಯಿಂದ ಹೇಗೆ ಸತ್ತರೆಂಬುದನ್ನು ಇಂದಿನ ನಾವು ತುರ್ತಾಗಿ ತಿಳಿಯುವುದಿದೆ. ಮನಃಸ್ಥೈರ್ಯ ಕೊಡುವುದು ಭಾರತೀಯ ಯೋಗ, ಗೀತೆ ಉಪನಿಷತ್ತುಗಳೇ ಹೊರತು ಢೋಂಗಿ ಬುದ್ಧಿಜೀವಿಗಳಲ್ಲ.

ನನ್ನ ಹುಟ್ಟೂರಿನಲ್ಲಿ, ನನ್ನ ಬಾಲ್ಯದಲ್ಲಿ ನಾನು ಕುಟುಂಬದಲ್ಲೂ, ಸಮಾಜದಲ್ಲೂ ಈ ವಿಚಿತ್ರರೋಗದ ದುಷ್ಪಲಗಳನ್ನೂ, ತುತ್ತಾದವರನ್ನೂ ಕಂಡಿದ್ದೇನೆ. ಒಬ್ಬ ಮಧ್ಯವಯಸ್ಸಿನ ಗೃಹಿಣಿ, ಚಿಕ್ಕವಯಸ್ಸಿನಲ್ಲೇ ವಿವಾಹವಾಗಿ, ಹಡೆದ ಮನೆಯಲ್ಲೂ, ಹೊಕ್ಕ ಮನೆಯಲ್ಲೂ ಜೀವನದುದ್ದಕ್ಕೂ ಯಾವುದಾದರೊಂದು ಸುಖವನ್ನೂ ಕಾಣದ ದುರ್ದೈವಿ; ನಮ್ಮ ಶ್ರೀವೈಷ್ಣವ ಕೇರಿಯಾಚೆಗೆ ಅರ್ಧ ಫರ್ಲಾಂಗು ದೂರದಲ್ಲಿ ದಕ್ಷಿಣಕ್ಕೆ ಒಂದು ಸ್ಮಶಾನ. ಇಂಥವು ಪೇಟೆಯಾಚೆಗೂ, ಊರಿನಾಚೆಯ ಹಲಸಿನ ಮರದ ದೊಡ್ಡಿಯಾಚೆಗೂ ಹೀಗೆ 3-4 ಇದ್ದವು. ಕೆಳವರ್ಗದವರು ಯಾರಾದರೂ ಸತ್ತರೆ, ತಮಟೆ ಬಾರಿಸುತ್ತ, ಹೆಣದ ಮೇಲೆ ಕಡಲೆಪುರಿ, ಬಿಡಿಹೂವು ಎರಚಿತ್ತುಕೊಳ್ಳುತ್ತ, ಹೆಣವನ್ನು ಹೂಳಲು ನಮ್ಮ ಮನೆಯಾಚೆಯ ಸ್ಮಶಾನಕ್ಕೆ ಕೆಲವರು ಬರುತ್ತಿದ್ದರು. ಅಲ್ಲೇ ಒಂದು ಮೂಲೆಯಲ್ಲಿ ಬ್ರಾಹ್ಮಣರ ಹೆಣ ಸುಡಲೂ ಒಂದಷ್ಟು ಜಾಗ ಬಿಟ್ಟಿದ್ದರು. ಬ್ರಾಹ್ಮಣೇತರರ ಹೆಣಗಳನ್ನು ಒಯ್ಯುವಾಗ ತಮಟೆ ಬಾರಿಸುತ್ತಿದ್ದವರದು ಒಂದು ಬಗೆಯ ಲಯ,one type of rhytm, drum beat. ಮಾರಮ್ಮನ ಉತ್ಸವದ್ದು ಬೇರೆ ರೀತಿಯದು. ನನ್ನ ಕುಟುಂಬದ ದುರ್ದೈವಿ ಗೃಹಿಣಿಗೆ, ಹೆಣ ಒಯ್ಯುವ ತಮಟೆಶಬ್ದ ಕೇಳಿದೊಡನೆ, ಅಡುಗೆಯನ್ನೂ ಬಿಟ್ಟು ಜಗುಲಿಯ ಕೊನೆಗೆ ಹೋಗಿ ಕುಳಿತು ಅಳುತ್ತಿದ್ದಳು. ಇದು ಪದೇಪದೆ ನಡೆಯುತ್ತಾ ಇದ್ದು ಒಂದು ದಿನ ನಾನು ಕೇಳಿದೆ: ‘ಯಾರೋ ಸತ್ತರೆ ನೀನೇಕೆ ಹೀಗೆ ತನ್ಮಯವಾಗಿ ಅಳುವೆ?’ ಅಂತ. ‘ಅಳು ಬರುತ್ತದೆ, ಏಕೆಂದರೆ ಏನು ಹೇಳಲಿ?’- ಅವಳ ಉತ್ತರ. ‘ಅವರು- ಹೆಣ್ಣೋ ಗಂಡೋ- ಯಾರು ಸತ್ತರು ಎಂತ ಗೊತ್ತೇ? ನಿನಗೆ ಪರಿಚಯವೇ? ಯಾರು?’ ಎಂದರೆ, ಮುದುಕಿಯ ಉತ್ತರ- ‘ಅವರಾರೋ ಗೊತ್ತಿಲ್ಲ; ಗೊತ್ತಿಲ್ಲವಾದರೇನು? ಸತ್ತರು, ಅಳುತ್ತೇನೆ’ ಅಂತ. ಇದೊಂದು ರೋಗ. ಇದನ್ನು ಇಂಗ್ಲಿಷಿನಲ್ಲಿ ಬೇರೆಬೇರೆ ಹೆಸರುಗಳಲ್ಲಿ ಗುರುತಿಸುತ್ತಾರೆ. ಭಾವನೆ-Sentiment& – ಇರಬೇಕು, ಸರಿ. Sentimentality- ಭಾವನಾತಿಶಯ, ಭಾವನಾತಿರೇಕ, ಭಾವಾವೇಶ ಒಳ್ಳೆಯದಲ್ಲ. ಇಲ್ಲಿ ಬುದ್ಧಿಯ ಹಿಡಿತ ಇರುವುದಿಲ್ಲ. ಅದು ಮನಸ್ಸನ್ನು, ಸದಾ ರೋಗವನ್ನು ಪ್ರೀತಿಸುವಂತೆ ಮಾಡುತ್ತದೆ. ಕ್ರಮೇಣ ನಿರಾಸೆಯ ಅತಿರೇಕ, depression, frustration ಉಂಟಾಗಿ ಸಾವಿಗೆ ಒಗ್ಗಿಕೊಳ್ಳುವ, ಅನ್ಯಾಯದ ವಿರುದ್ಧ ಪ್ರತಿಭಟನೆಯ ಶಕ್ತಿಯನ್ನೇ ಅಳಿಸುವ, ಮನುಷ್ಯನನ್ನು ನಿರ್ವೀರ್ಯ ಮಾಡುವ ಸ್ಥಿತಿಗೆ ತರುತ್ತದೆ. ‘ಉತ್ತಿಷ್ಠತ ಜಾಗ್ರತ’, ‘ಪಶ್ಯೇಮ ಶರದಃ ಶತಂ’ ಇತ್ಯಾದಿ ಉಪನಿಷತ್ ದರ್ಶನಕ್ಕೆ ವಿರುದ್ಧವಾದ ಸ್ಥಿತಿ. ಸ್ವಾಮಿ ವಿವೇಕಾನಂದರು, ದಯಾನಂದರು, ಅರವಿಂದರು, ರಾಜಾರಾಮ್ ಮೋಹನ್​ರಾಯ್, ಈಶ್ವರಚಂದ್ರ ವಿದ್ಯಾಸಾಗರರು ನಿರಂತರ ಹೋರಾಟಮಾಡಿದ್ದು ಈ ಸಾಯುವ ಮನೋಭಾವದ ವಿರುದ್ಧ. ಬ್ರಿಟಿಷರು ಭಾರತೀಯರನ್ನು ಈ ದುಃಸ್ಥಿತಿಗೆ ತಂದಿದ್ದರು. ಆದರೇನು? ಭಾರತದ ಅನೇಕ ಭಾಗಗಳಲ್ಲಿ ಇಂದಿಗೂ ಈ ರೋಗ ಇದ್ದೇ ಇದೆ. ವಿಶೇಷವಾಗಿ ತಮಿಳುನಾಡಿನಲ್ಲಿ.

ಮೈಲಾಪುರದಲ್ಲಿ ಮೊದಲ ರಾಮಕೃಷ್ಣಮಠ ಶ್ರೀರಾಮಕೃಷ್ಣಾನಂದರಿಂದ ಸ್ಥಾಪಿತವಾದದ್ದು ಚರಿತ್ರೆ. ಆದರೆ ಕೆಲವರ್ಗಗಳಿಗೆ ವಿವೇಕಾನಂದರ ಯತ್ನ, ಸಂದೇಶ ತಲುಪಿದಂತೆ ಕಾಣುತ್ತಿಲ್ಲ. ಅಣ್ಣಾದುರೈ, ಎಂಜಿಆರ್, ಜಯಲಲಿತಾ ಇನ್ನಿತರ ನಾಯಕರು ತೀರಿಕೊಂಡಾಗ ಅಭಿಮಾನಿಗಳು ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡರು? ಏಕೆ? ಅವರು ಸತ್ತರೆ ಅವರಿಗಾಗಿ ಇವರೂ ಸತ್ತರೆ ಯಾರಿಗೆ ಭಾಗ್ಯ? ಸಿನಿಮಾ ನಟರು ಸತ್ತಾಗ ಇಲ್ಲೂ ಅಂಥದು ನಡೆದಿರುವುದು ಆರೋಗ್ಯಕರವಲ್ಲ.

‘ಹಿಂದಿ, ಸಂಸ್ಕೃತಗಳು ಉತ್ತರದವು! ಆರ್ಯರದು; ನಾವು ದ್ರಾವಿಡರು. ನಮಗೆ ಇವುಗಳಿಂದ ಆಪತ್ತು’ ಎಂಬ ಭಯ ಹುಟ್ಟಿಸಿದವರು, ಪ್ರಚುರಿಸಿದವರು, ಅದಕ್ಕಾಗಿ ರಾಜಕೀಯ ಪಕ್ಷ ಕಟ್ಟಿದವರು ಇದಕ್ಕೆ ಹೊಣೆ. ತಮಿಳರಿಗೆ ಈ ಭಯದಿಂದ ಮುಕ್ತಿ ಇಲ್ಲವೇ? ಇದು ರಾಷ್ಟ್ರೀಯ ಆರೋಗ್ಯ ಸಮಗ್ರತೆ, ಭಾವೈಕ್ಯದ ಪ್ರಶ್ನೆ. ಇದು ತಮಿಳರಿಗೆ- ತಿಳಿಯದಂತೆ ಮಾಡುತ್ತ ಮತಾಂತರಕ್ಕೆ ಎಳೆದು ನೆಲೆ ಹಾಳುಮಾಡುತ್ತಿರುವ ವಿದೇಶಿ ಮಿಷನರಿಗಳೂ, ಇಸ್ಲಾಂ ಸಂಸ್ಥೆಗಳೂ ರೋಗವನ್ನು ದೃಢಪಡಿಸುತ್ತಿವೆ. ಯಾವ ಮತಾನುಯಾಯಿಗಳಲ್ಲಿ ಆತ್ಮಹತ್ಯಾದಳ (Suicide Squad) ಇರುತ್ತದೋ ಅಲ್ಲಿ ‘ನನಗೆ ನನ್ನ ಮತಕ್ಕೆ ಉಳಿಗಾಲವಿಲ್ಲ’ ಎಂಬ ಹತಾಶಭಾವನೆ ಇರುವುದು ಶಕ್ಯ. ಯಾವುದು ಧರ್ಮವೋ, ಆಕಾಶದಂತೆ ಹರವೋ, ಅಕೃತಕವೋ ‘ಅದು ಅಳಿವಿಲ್ಲದ್ದು, ಸನಾತನ’ ಎಂಬ ನಂಬಿಕೆ ಇರುವಲ್ಲಿ ಈ ಮನವಿಕ್ಷಿಪ್ತತೆಗೆ ಅವಕಾಶ ಇರಲಾರದು. ಆದುದರಿಂದ ಸಮುದಾಯಗಳು ಬದುಕಿನ ಬಗೆಗೆ ಸರಿಯಾದ ದೃಷ್ಟಿ ಹೊಂದಿರಬೇಕಾದರೆ ಸಾವಿನ ಬಗೆಗೂ ಸರಿಯಾದ ದೃಷ್ಟಿ ಇರಬೇಕು. ‘ಸತ್ತರೇನು? ಪುನರ್ಜನ್ಮವಿದೆ! ಪರಿಪೂರ್ಣತೆ ಬರುವ ತನಕ’, ‘ಅನೇಕ ಜನ್ಮಸಂಸಿದ್ಧಾಃ ತತೋಯಾತಿ ಪರಾಂಗತಿಂ’ ಎಂಬ ಶ್ರದ್ಧೆ ಇರುವಲ್ಲಿ ಮರಣಕ್ಕೆ ಅಂಜಿಕೆ ಇರಲಾರದು. ‘ಮರಣವೇ ಮಹಾನವಮಿ’ ಎಂದ ಬಸವಣ್ಣನವರ ಮಾತಿಗೆ ಇದೇ ಅರ್ಥ ಹೊರತು, ಸಾಯುವುದರ ಸ್ವಾಗತಭಾವ ಅಲ್ಲ. ‘ಶರಣನು ಕೊನೆಗೆ ಶಿವನನ್ನೇ ಸೇರುತ್ತಾನೆ’ ಎಂಬ ದೃಢಭಾವ. ಕನಕದಾಸರು ಹೇಳಿಲ್ಲವೇ? ‘ಸತ್ತವರಿಗಳಲೇಕೆ? ತನ್ನನ್ನು ಹೆತ್ತವರು ಹೊತ್ತವರು, ಸತ್ತು ಹೋಗುವರಲ್ಲದೆ ಇರುವರೇ’ ಎಂಬ ‘ಹರಿಭಕ್ತಿಸಾರ’ದ ಪದ್ಯವೂ ಅನುಸಂಧೇಯ. ಬೌದ್ಧವು ಥೇರಾವಾದದ ನಿರಾಸೆಯಿಂದ, ಮಹಾಯಾನವು ಮೇಲೆದ್ದು ಬೋಧಿಸತ್ವನ ಆವಿಷ್ಕಾರದ ಮಜಲುಗಳನ್ನು ಜನ್ಮಜನ್ಮಾಂತರ ಪರಂಪರೆಯಲ್ಲಿ ಎತ್ತಿಹಿಡಿದುದೂ ಇತಿಹಾಸ. ಆತ್ಮಕ್ಕೆ ಆವಿಷ್ಕಾರ Evolution ಹೇಳಿದ ಉಪದೇಶ ಸುಭಾಷ್​ಚಂದ್ರರ ಜೀವನಕ್ಕೇ ಸ್ಪೂರ್ತಿ ಇತ್ತಿತ್ತು, ಈ ವಾಕ್ಯ ‘ಆತ್ಮದೀಪೋಭವ’ ಎಂಬುದು. ಆತ್ಮ ಶಬ್ದದ ನಿರ್ವಚನವನ್ನು ಆನಂದಗಿರೀ ಸ್ವಾಮಿಗಳು ‘ಆತ್ಮಾ- ಆಪ್ನೋತೇಃ, ಅತ್ತೇಃ, ಅಟತೇಃ’ ಎಂದೇ ವಿವರಿಸಿದ್ದಾರೆ. ‘ಯಾವುದು ಪರಿಪೂರ್ಣತೆಯನ್ನು ಹೊಂದುತ್ತದೋ, ಕರ್ಮಫಲ ಅನುಭವಿಸುತ್ತದೋ, ಜನ್ಮಾಂತರಗಳಲ್ಲಿ ಸುತ್ತುತ್ತದೋ ಅದು ಆತ್ಮ’. ಈ ವಿವರಣೆಯಲ್ಲಿ ಆಶಾಭಾವನೆ ಇದೆ. ‘ಆತ್ಮವೂ ಇಲ್ಲ, ದೇವರೂ ಇಲ್ಲ, ಜಗತ್ತೂ ಇಲ್ಲ’ ಎಂಬಲ್ಲಿ ನಿರಾಸೆಯಿದೆ. ‘ಈಗಿರುವುದು ಗೊತ್ತು. ಇದೊಂದು ಬಂದೀಖಾನೆ; ಹಿಂದೂ ಇಲ್ಲ, ಮುಂದೂ ಇಲ್ಲ’ ಎಂಬ Existentialism ಎಂಬ ಈಚಿನ ದುರ್ವಾದ ನಂಬಿದರೂ ಹಾಳಾಗುತ್ತೇವೆ. ಇಂದಿನ ಬುದ್ಧಿಜೀವಿಗಳು ಕೈಜೋಡಿಸಿ, ಸಮಾಜದ ಕೆಳವರ್ಗಗಳನ್ನೂ, ದಾರಿತಪ್ಪಿದ ಸಾಹಿತಿವರ್ಗವನ್ನೂ, ಸಾಮಾಜಿಕ ಮುಖಂಡತ್ವ ವಹಿಸಿದ ಅರಬೆರಕೆ ಜ್ಞಾನದ ನಾಯಕರನ್ನೂ ಮೇಲೆತ್ತಬೇಕಾಗಿದೆ. ಅದೇ ವಿವೇಕಾನಂದರ, ಅರವಿಂದರ ದಾರಿ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)