More

    ರಾಜ್ಯ ರಾಜಧಾನಿಯಲ್ಲಿ ಜನವಸತಿ ಪ್ರದೇಶದ ವ್ಯಾಪ್ತಿ ಹೆಚ್ಚಳ

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಕೇವಲ ಉದ್ಯಮಗಳು ಸ್ಥಾಪಿಸಲಾಗಿದ್ದರೂ, ಜನವಸತಿ ಮಾತ್ರ ಬೆಳವಣಿಗೆಯಾಗಿರಲಿಲ್ಲ. ಆದರೆ ಈಗ ಮೆಟ್ರೋ ತನ್ನ ಸೇವೆಯನ್ನು ವಿಮಾನ ನಿಲ್ದಾಣದವರೆಗೂ ವಿಸ್ತರಣೆ ಮಾಡುತ್ತಿದ್ದು, ಜನವಸತಿಗೂ ವಿಪುಲ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಿನ ಹೊರವಲಯದಲ್ಲಿ ಮನೆಗಳನ್ನು ನಿರ್ವಿುಸಿಕೊಂಡು ಜೀವನ ಮಾಡುವವರಿಗೆ ಉತ್ತಮ ಅವಕಾಶ ಲಭ್ಯವಾಗಿದ್ದು, ಜನರು ವಾಸ ಮಾಡುವ ಸ್ಥಳದವರೆಗೂ ಮೆಟ್ರೋ ತನ್ನ ಸೇವೆಯನ್ನು ನೀಡಲು ಮುಂದಾಗಿದೆ. ಸಂಚಾರ ದಟ್ಟಣೆಯಿಂದ ಬೇಸತ್ತು, ಮೊರೆಹೋದವರಿಗೆ ಶೀಘ್ರದಲ್ಲಿ ಅವರ ಸ್ಥಳ ತಲುಪಿಸುವ ಮೂಲಕ ಉತ್ತಮ ಸೇವೆಯನ್ನು ಮೆಟ್ರೋ ನೀಡುತ್ತಿದೆ. ಈಗ ತನ್ನ ಸೇವೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ವಿಸ್ತರಣೆ ಮಾಡಲು ಮುಂದಾಗಿರುವ ಬಿಎಂಆರ್​ಸಿಎಲ್ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಪೂರಕವಾಗಿದೆ.

    ಹೊರವಲಯದಲ್ಲಿ ಜನವಸತಿ

    ನಗರದ ಕೇಂದ್ರ ಭಾಗದಿಂದ ಸುತ್ತಲಿನ 20 ಕಿ.ಮೀ ದೂರದವರೆಗೆ ಯಾವುದೇ ಆಸ್ತಿಗಳು ಖರೀದಿ ಮಾಡಲು ಸಿಗುವುದಿಲ್ಲ. ಕಳೆದ 10 ವರ್ಷಗಳ ಹಿಂದೆಯೇ ಇಲ್ಲಿ ಮನೆಗಳು ಹಾಗೂ ಉದ್ಯಮಗಳು ಬೆಳವಣಿಗೆಯಾಗಿವೆ. ಹೀಗಿರುವಾಗ ನಗರದ ಕೇಂದ್ರ ಭಾಗದಲ್ಲಿ ಮನೆ ನಿರ್ವಣ, ಉದ್ಯಮ ಅರಂಭಿಸುವುದು ದೊಡ್ಡ ಸವಾಲಾಗಿದೆ. ಆದರೆ ಸಂಪರ್ಕ ಸೇವೆ ಕಾರಣದಿಂದ ಜನರು ಹೊರವಲಯಕ್ಕೆ ಹೋಗಲು ಹಿಂಜರಿಯುತ್ತಿದ್ದರು. ಈಗ ಮೆಟ್ರೋ ಆರಂಭವಾಗುತ್ತಿದ್ದಂತೆ ಹೊರವಲಯದ ಕಡೆಗೆ ಮುಖ ಮಾಡುವವರ ಸೇವೆ ಹೆಚ್ಚಾಗಲಿದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಗಳು ಹೊರವಲಯದಲ್ಲಿ ಜನವಸತಿ ಪ್ರದೇಶಗಳನ್ನು ನಿರ್ವಿುಸಲು ಮುಂದಾಗಿವೆ.

    ಉದ್ಯಮ ಸ್ನೇಹಿ ಏರ್​ಪೋರ್ಟ್ ರಸ್ತೆ

    ದೇಶದ ರಾಜಧಾನಿ ದೆಹಲಿಯ ಹೃದಯಭಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೂರವಿದೆ. ಅದರ ಮುಂದುವರಿದಿರುವ ಭಾಗವಾಗಿ ವಿಮಾನ ನಿಲ್ದಾಣದ ಸಮೀಪವೇ ನಿರ್ವಿುತಗೊಂಡಿರುವುದು ನವದೆಹಲಿ. ದೆಹಲಿಗಿಂತ ಹೆಚ್ಚಿನ ಕೈಗಾರಿಕೆಗಳು, ಹೋಟೆಲ್​ಗಳು, ಸಭಾಂಗಣಗಳು ಹಾಗೂ ಮನೋರಂಜನಾ ವೇದಿಕೆಗಳು ನವದೆಹಲಿಯಲ್ಲಿ ನೆಲೆಯೂರಿವೆ. ಅಂತಾರಾಷ್ಟ್ರೀಯ ಚಟುವಟಿಕೆಗಳು ಕೂಡ ಹೆಚ್ಚಾಗಿ ನಡೆಯುತ್ತಿರುವುದು ಇದೇ ಜಾಗದಲ್ಲಿ. ಇದರಂತೆ ಬೆಂಗಳೂರಿನ ಏರ್​ಪೋರ್ಟ್ ರಸ್ತೆಯಲ್ಲಿಯೂ ಹೆಚ್ಚು ಉದ್ಯಮಗಳು ತಲೆಎತ್ತಲಿದ್ದು, ಇದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಮೆಟ್ರೋ ಸಂಪರ್ಕ ಹತ್ತಿರಗೊಳಿಸಲಿದೆ. ಇದರೊಂದಿಗೆ ಉದ್ಯಮದ ಜತೆಗೆ ಜನವಸತಿ ಬಡಾವಣೆಗಳೂ ಹೆಚ್ಚು ಬೆಳಯಲಿವೆ. ಇದರೊಂದಿಗೆ ನವಬೆಂಗಳೂರು ಇಲ್ಲಿ ಬೆಳವಣಿಗೆಯಾಲಿದೆ.

    ಮೆಟ್ರೋ ಸಂಚಾರದ ಮಾರ್ಗಗಳು

    ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ಹಾಗೂ ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ‘ನಮ್ಮ ಮೆಟ್ರೋ’ ಹಲವು ವರ್ಷಗಳ ಹಿಂದೆಯೇ ಸಂಚಾರ ಸೇವೆ ಆರಂಭಿಸಿದೆ. ಇದೇ ಮಾರ್ಗಗಳ ಮುಂದುವರೆದಿರುವ ಭಾಗವಾಗಿ, ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ, ಬೈಯಪ್ಪನಹಳ್ಳಿಯಿಂದ ವೈಟ್​ಫೀಲ್ಡ್​ವರೆಗೆ ಕಾಮಗಾರಿ ಮಾಡಲಾಗುತ್ತಿದೆ. ಇನ್ನೊಂದು ಮಾರ್ಗದಲ್ಲಿ ನಾಗಸಂದ್ರದಿಂದ ಮುಂದುವರೆದು ಬಿಐಇಸಿ ಮತ್ತು ಯಲಚೇನಹಳ್ಳಿಯಿಂದ ಅಂಜನಾಪುರದವರೆಗೂ ಮಾರ್ಗಗಳ ವಿಸ್ತರಣೆ ಮಾಡುತ್ತಿದೆ. ಕೆ.ಆರ್. ಪುರದಿಂದ ವಿಮಾನ ನಿಲ್ದಾಣದವರೆಗೆ ಒಟ್ಟು 36.5 ಕಿಮೀ ರಸ್ತೆಯಲ್ಲಿ 17 ಮೆಟ್ರೋ ನಿಲ್ದಾಣಗಳನ್ನು ನಿರ್ವಿುಸಲಾಗುವುದು. ಕೆ.ಆರ್. ಪುರ, ಕಸ್ತೂರಿ ನಗರ, ಚನ್ನಸಂದ್ರ, ಹೊರಮಾವು, ಬಾಬುಸಾಬ್ ಪಾಳ್ಯ, ಕಲ್ಯಾಣ ನಗರ, ಎಚ್.ಬಿ.ಆರ್. ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ ಕ್ರಾಸ್, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು, ಕೋಗಿಲೆ ಕ್ರಾಸ್, ಪೆರಿಫೆರಲ್ ರಿಂಗ್ ರಸ್ತೆ ಸೇರಿ ವಿಮಾನ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲಾಗುವುದು. ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದ್ದು, 2 ರಿಂದ 3 ವರ್ಷದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ.

    ಜಮೀನಿಗೆ ಭಾರಿ ಬೇಡಿಕೆ

    15 ವರ್ಷಗಳ ಹಿಂದೆ ಯಲಹಂಕ ದಾಟಿದ ನಂತರ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದಿಲ್ಲ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಆಗುತ್ತಿದ್ದಂತೆಯೇ ಅಲ್ಲಿಯ ಜಮೀನಿಗೆ ಬಂಗಾರದ ಬೆಲೆ ಬಂತು. ಈಗ ಮೆಟ್ರೋ ಸೇವೆಯನ್ನು ಆರಂಭಿಸಲಾಗುತ್ತಿದ್ದು, ವಾಹನ ದಟ್ಟಣೆಗೆ ಪರಿಹಾರಗುವ ಜತೆಗೆ, ಜೀವನ ಸಾಗಿಸಲು ಮನೆ ನಿರ್ವಣಕ್ಕೂ ಅನುಕೂಲವಾಗುತ್ತಿದೆ. ಹೀಗಾಗಿ ಏರ್​ಪೋರ್ಟ್ ರಸ್ತೆ ಸೇರಿ ಎಲ್ಲ ಹೊರವಲಯಗಳ ಭೂಮಿಗಳ ಬೆಲೆಗಳು 2-3 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಸತೀಶ್ ಕೆ.ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts