ರಿಯಾಲ್ಟಿ ಕ್ಷೇತ್ರಕ್ಕೆ ಶುಕ್ರದೆಸೆ ಬಂದೀತೆ?

| ಹೊಸಹಟ್ಟಿ ಕುಮಾರ ಬೆಂಗಳೂರು

ರಿಯಾಲ್ಟಿ ಕ್ಷೇತ್ರಕ್ಕೆ 2018ರ ಮೊದಲ ತ್ರೖೆಮಾಸಿಕ ನೀರಸವಾಗಿದ್ದರೂ ನಂತರದಲ್ಲಿ ಚೇತರಿಕೆ ಕಾಣಿಸಿಕೊಂಡಿತು. ಕೇಂದ್ರ ಸರ್ಕಾರ ರಿಯಾಲ್ಟಿ ಕ್ಷೇತ್ರದ ಮೇಲೆ ವಿಧಿಸುತ್ತಿದ್ದ ಜಿಎಸ್​ಟಿ ದರ ಕಡಿಮೆ ಮಾಡಿದ ಪರಿಣಾಮ ವಹಿವಾಟು ತೀವ್ರಗೊಂಡಿತು. ಕಳೆದ ವರ್ಷ ಶೇ.40ರಷ್ಟು ಮಾರಾಟ ಹೆಚ್ಚಳವಾಗಿದೆ. ಬೆಂಗಳೂರು ಹಾಗೂ ಮೈಸೂರು ನಗರಗಳಲ್ಲಿ ಹೆಚ್ಚು ಮನೆ ಮಾರಾಟ ಆಗಿವೆ.

ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಸುಮಾರು 1.25 ಲಕ್ಷ ಚದರ ಅಡಿಗಳಷ್ಟು ನಿವೇಶನ ಮಾರಾಟವಾಗಿದ್ದವು. ಜಿಎಸ್​ಟಿ ಮಂಡಳಿ ಸಭೆಯಲ್ಲಿ ರಿಯಲ್ ಎಸ್ಟೇಟ್ ವಹಿವಾಟಿಗೆ ವಿಧಿಸುತ್ತಿದ್ದ ದರವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದ ಬಳಿಕ ಮಾರಾಟ ಇನ್ನಷ್ಟು ತೀವ್ರಗೊಂಡಿತು. 2018ರ ಕೊನೆ ಭಾಗದಲ್ಲಿ ವಹಿವಾಟು ಅಧಿಕಗೊಂಡು ಹೊಸ ಯೋಜನೆ ಆರಂಭಿಸಲು ಉತ್ತಮ ಭರವಸೆ ಮೂಡಿಸಿತು. ಜಿಎಸ್​ಟಿ ದರ ಕಡಿತವು, ನಿವೇಶನ ಮಾರಾಟ ಹಾಗೂ ಖರೀದಿ ಮೇಲಷ್ಟೇ ಅಲ್ಲ; ಜಾಗ, ಗುತ್ತಿಗೆ ಕೊಡುವ ಹಾಗೂ ಪಡೆಯುವ ಕ್ರಮದ ಮೇಲೂ ಪರಿಣಾಮ ಬೀರಿದೆ. ಗುತ್ತಿಗೆ ದರ ಕಡಿಮೆಯಾದ್ದರಿಂದ ವಹಿವಾಟು ಚೇತರಿಕೆ ಕಂಡಿತು. ಮಾರುಕಟ್ಟೆಯ ಕೊನೆ ವ್ಯಕ್ತಿಗೂ ಇದರ ಪ್ರಯೋಜನ ತಲುಪಿದೆ. ಹೀಗಾಗಿ ಗುತ್ತಿಗೆ ಜಾಗಕ್ಕೆ ಬೇಡಿಕೆ ಹೆಚ್ಚಾದಂತೆ ರಿಯಾಲ್ಟಿ ಕಂಪನಿಗಳು ಹೊಸ ಯೋಜನೆ ಆರಂಭಿಸಲು ಮುಂದಾದವು. ಇದೇ ವಹಿವಾಟು ನಿರೀಕ್ಷೆಗಳನ್ನು ಕಂಪನಿಗಳು 2019ರ ವರ್ಷದಲ್ಲೂ ಹೊಂದಿವೆ.

ಮನೆಗಳ ಪೂರೈಕೆ ಕಡಿಮೆ: ಕಳೆದ ವರ್ಷ ಮನೆಗಳ ಪೂರೈಕೆ ಬೇಡಿಕೆಗಿಂತ ಕಡಿಮೆ ಇತ್ತು. ಮೊದಲ ಎರಡು ತ್ರೖೆ ಮಾಸಿಕದಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚು ಇರಲಿಲ್ಲ. ನಂತರದ ತಿಂಗಳುಗಳಲ್ಲಿ ಹೆಚ್ಚಾಯಿತು. ಬೇಡಿಕೆಗೆ ತಕ್ಕಂತೆ ಮನೆಗಳ ಪೂರೈಕೆ ಆಗಲಿಲ್ಲ. ಹೀಗಾಗಿ ವಹಿವಾಟು ಹಿನ್ನಡೆಯಾಯಿತು. ಆದರೆ 2019ರಲ್ಲಿ ಬೇಡಿಕೆಗೆ ಅನುಗುಣವಾಗಿ ಮನೆಗಳ ಪೂರೈಕೆಯನ್ನು ಸರಿಯಾಗಿ ಕಾಪಾಡಿಕೊಳ್ಳಲು ನಿರ್ಧರಿಸಲಾಗಿದೆ ಎನ್ನುತ್ತವೆ ರಿಯಾಲ್ಟಿ ಕಂಪನಿಗಳು. ‘ಕಳೆದ ವರ್ಷದ ಆರಂಭದಲ್ಲಿ ನಮಗೆ ಮನೆಗಳ ಬೇಡಿಕೆ ಕಂಡು ಬರಲಿಲ್ಲ. ನಂತರ ದಿಢೀರ್ ಬೇಡಿಕೆ ವ್ಯಕ್ತವಾಯಿತು. ಹೀಗಾಗಿ ಮನೆಗಳ ಪೂರೈಕೆ ನಿಗದಿತವಾಗಿ ಮಾಡಲು ಸಾಧ್ಯವಾಗಲಿಲ್ಲ’ ಎಂಬುದು ಕಂಪನಿಗಳ ಹೇಳಿಕೆ.

ಅನುಮೋದನೆ ತಡ
ಕಳೆದ ವರ್ಷ ರಿಯಾಲ್ಟಿ ಕ್ಷೇತ್ರದಲ್ಲಿ ಚೇತರಿಕೆ ಕಂಡುಬಂದರೂ ಸರ್ಕಾರದಿಂದ ಯೋಜನೆಗಳಿಗೆ ಸಿಗುವ ಅನುಮೋದನೆಯಲ್ಲಿ ವಿಳಂಬವಾಯಿತು. ಇದರಿಂದಾಗಿ ಮನೆಗಳ ಪೂರೈಕೆ ಕಡಿಮೆಯಾಗಲು ಕಾರಣವಾಯಿತು. ಈ ವರ್ಷ ಸರ್ಕಾರ ರಿಯಾಲ್ಟಿ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡಿದರೆ ವಹಿವಾಟು ಇನ್ನಷ್ಟು ವೇಗವಾಗಲಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ‘ಫೆಲಿಸಿಟಿ ಅಡೋಬ್ ಎಲ್​ಎಲ್​ಪಿ’ ಸಂಸ್ಥಾಪಕ ಪ್ರಣವ್ ಶರ್ಮ.

ರಿಯಾಲ್ಟಿ ಕ್ಷೇತ್ರದಲ್ಲಿ ಪ್ರಗತಿ
‘ಪ್ರಸ್ತುತ ವರ್ಷ ರಿಯಾಲ್ಟಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯ ನಿರೀಕ್ಷೆ ಹೊಂದಲಾಗಿದೆ. ಈ ಬಾರಿಯೂ ಕೇಂದ್ರ ಸರ್ಕಾರ ಜಿಎಸ್​ಟಿ ದರ ಪರಿಶೀಲನೆ ಮಾಡುವ ಸುಳಿವು ನೀಡಿರುವುದರಿಂದ ದರ ಇನ್ನಷ್ಟು ಕುಸಿಯಲಿದೆ. ಇದರಿಂದ ಯೋಜನೆಗಳ ಮಾರಾಟ ತೀವ್ರಗೊಳ್ಳಲಿದೆ. ರಾಜ್ಯ ಸರ್ಕಾರ ಕೂಡ ಕ್ಷೇತ್ರಕ್ಕೆ ಬಜೆಟ್​ನಲ್ಲಿ ಹಲವು ಕೊಡುಗೆ ಘೋಷಿಸಿದರೆ ಮಾರಾಟ ಮಾಡಬಹುದು’ ಎನ್ನುತ್ತಾರೆ ಬ್ರಿಗೇಡ್ ಗ್ರೂಪ್​ನ ಮಾರ್ಕೆಟಿಂಗ್ ವಿಭಾಗದ ಹಿರಿಯ ಉಪಾಧ್ಯಕ್ಷ ವಿಶ್ವ ಪ್ರತಾಪ್ ದೇಸು.

ರೇರಾ ಕಾಯ್ದೆ ದೀರ್ಘಾವಧಿ ಪರಿಣಾಮ
‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ’ ರಾಜ್ಯದಲ್ಲೂ ಜಾರಿಯಾಗುತ್ತಿದೆ. ಕಾಯ್ದೆಯಿಂದ ದಿಢೀರ್ ಬದಲಾವಣೆ ಸಾಧ್ಯವಿಲ್ಲ. ಬದಲಿಗೆ ದೀರ್ಘಾವಧಿಯಲ್ಲಿ ಉತ್ತಮ ಪರಿಣಾಮ ದೊರೆಯಲಿದೆ. ಕಾಯ್ದೆ ಸಂಪೂರ್ಣವಾಗಿ ಜಾರಿಯಾದರೆ ನಿಜವಾದ ಉದ್ಯಮಿಗಳು ಮಾತ್ರ ಕ್ಷೇತ್ರದಲ್ಲಿ ಉಳಿಯುತ್ತಾರೆ, ಉಳಿದವರು ಬಾಗಿಲು ಹಾಕುತ್ತಾರೆ’ ಎನ್ನುತ್ತಾರೆ ವೈಷ್ಣವಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಗೋವಿಂದರಾಜು.

(ಪ್ರತಿಕ್ರಿಯಿಸಿ: [email protected])