ಪ್ರಶ್ನೆ-ಪರಿಹಾರ

# ನನಗೆ ಧನಯೋಗ ಚೆನ್ನಾಗಿದೆ ಎಂದು ಜ್ಯೋತಿಷಿಯೊಬ್ಬರು ನಮ್ಮ ತಂದೆಯ ಬಳಿ ನಾನು ಚಿಕ್ಕವಳಿದ್ದಾಗ ಹೇಳಿದ್ದರಂತೆ. ಆದರೆ ಈವರೆಗೂ ಧನಯೋಗದಿಂದ ನಾನು ಪಡೆದ ಸಂಭ್ರಮ ಏನೆಂದು ಅರ್ಥವಾಗುತ್ತಿಲ್ಲ ದಯಮಾಡಿ ವಾಸ್ತವವಾಗಿಯೂ ಧನಯೋಗ ಇದೆಯೇ ಎಂದು ತಿಳಿಸಿ. ಇದ್ದರೆ ಯಾಕೆ ನನಗೆ ಅದು ಫಲಿಸಲಿಲ್ಲ? ಪರಿಹಾರಗಳ ಕುರಿತು ಮಾಹಿತಿ ನೀಡಿ.

| ಹೇಮಾವತಿ ಆದಿತ್ಯ, ಬೀದರ

ಧನಯೋಗದ ವಿಚಾರದಲ್ಲಿ ತಳಪಾಯ ಒದಗಿಸಬೇಕಾದ ಗ್ರಹಗಳ ಸಂಯೋಜನೆ ನಿಮ್ಮ ಜಾತಕದಲ್ಲಿದೆ. ನೀವು ಚಿಕ್ಕವರಿದ್ದಾಗ ಜ್ಯೋತಿಷಿಗಳು ತಿಳಿಸಿದ ಅಭಿಪ್ರಾಯ ಸರಿ ಇದೆ. ಆದರೆ ಇತರ ಗ್ರಹಗಳ ಕಾಟದಿಂದಾಗಿ ಸಾಕಷ್ಟು ಬಾರಿ ಯೋಗಗಳನ್ನು ಹಾಳುಮಾಡುವ ಶಕ್ತಿಗಳೂ ಅದೇ ಜಾತಕದಲ್ಲಿರುತ್ತವೆ. ಸರ್ಪದೋಷ, ಪಿತೃದೋಷ, ಕುಜದೋಷ, ಕರಾಳ ಭೋಗದೋಷ, ವಿಘ್ನಮುಖ ದೋಷಗಳು ಯಾವ ಪ್ರಮಾಣದಲ್ಲಿ ತೊಂದರೆಗೆ ಕಾರಣವಾಗುತ್ತಿವೆ ಎಂಬ ಸಮೀಕರಣಗಳಿಗೂ; ಧನಯೋಗಕ್ಕೂ; ಸುಖ ಮತ್ತು ಭಾಗ್ಯದ ವಿಚಾರದ ಶಕ್ತಿಧಾತುಗಳಿಗೂ ಸಂಬಂಧಗಳಿವೆ. ಪುಷ್ಕಳ ಆರೋಗ್ಯಕರ ಧನಯೋಗ ಇದ್ದರೂ ವಿಘ್ನಮುಖ ದೋಷಗಳು, ಜತೆಗೆ ಮಘಾನಕ್ಷತ್ರದಲ್ಲಿರುವ ಪಂಚಮದ ರಾಹು ಧನಯೋಗವನ್ನು ಕುಗ್ಗಿಸಿದ್ದಾನೆ. ಶನೈಶ್ಚರ ಮತ್ತು ನೀಚನಾದ ಕುಜ ಗ್ರಹಗಳ ನಡುವಿನ ಸಮಸಪ್ತಕ ದೃಷ್ಟಿಯು ಏರಿಳಿತಗಳನ್ನು, ತಲ್ಲಣಗಳನ್ನು, ಏನೂ ಬೇಡ ಎಂಬ ಜಡತ್ವವನ್ನೂ ತರುತ್ತಿರುತ್ತದೆ. ನಾಗರಬೆತ್ತ ಸಸ್ಯದ ಎಲೆಗಳಿಂದ (ಮುಖ್ಯವಾಗಿ ತ್ರಯೋದಶಿಯಂದು. ಈ ಆಧುನಿಕ ಕಾಲದಲ್ಲಿ ಪ್ರತಿದಿನ ತ್ರಿಕಾಲ ಪೂಜೆ ಕಷ್ಟದ ಕೆಲಸ.) ತ್ರಿಕಾಲದಲ್ಲೂ ಶಿವನ ಆರಾಧನೆ ಮಾಡಿ. ಸ್ವರ್ಣಾಕರ್ಷಣ ಶಕ್ತಿ, ಧನಲಾಭ ಲಭ್ಯ.

# ನಮ್ಮದು ದೊಡ್ಡ ಮನೆತನ. ಹಿಂದೆಲ್ಲ ದೊಡ್ಡ ರೀತಿಯಲ್ಲಿ ಶ್ರೀಮಂತಿಕೆಯಲ್ಲಿ ಸಾಗಿಹೋದ ಕಾಲ. ಈಗ ನೆನೆಸಿಕೊಂಡರೆ ಕಣ್ಣೀರು ಬರುತ್ತದೆ. ನಮ್ಮದು (ಅದರಲ್ಲೂ ನನ್ನದು) ದೊಡ್ಡ ಪ್ರಮಾಣದ ವ್ಯಾಪಾರ ವಹಿವಾಟು. ನಮ್ಮ ತಂದೆಯವರ ಕೃಪಾಶೀರ್ವಾದ, ಅವರು ಬಿಟ್ಟುಹೋದ ಆಸ್ತಿ, ಅವರಿಂದ ಪಡೆದ ಅನುಭವ ಇವೆಲ್ಲವುಗಳಿಂದ ಬಹಳ ಎತ್ತರಕ್ಕೆ ಏರಿ (ಇದು ಅಹಂಕಾರವಲ್ಲದಿದ್ದರೂ) ಸೋಲಿರದೆ ಇದ್ದೆ. ಆದರೆ ಈಗ ಮಕ್ಕಳ ಕಾಲದಲ್ಲಿ ದಿನಗಳು ಅದಲುಬದಲಾಗುತ್ತಿವೆ. ಇದು ಎಲ್ಲಿಗೆ ತಲುಪೀತು? ಪರಿಹಾರ ಏನು?

| ಚನ್ನವೀರರಾಜಯ್ಯ ಅರಗೀಅಂಗಡಿ, ಬಾದಾಮಿ

ತಂದೆಯವರನ್ನು ಕೃತಜ್ಞತೆಯಿಂದ ನೆನೆಸಿಕೊಳ್ಳುತ್ತಿರುವುದು ನಿಜಕ್ಕೂ ಅನುಕರಣೀಯ. ಪೂರ್ವಪುಣ್ಯದ ಶಕ್ತಿ ನಿಮ್ಮನ್ನು ಕಾಪಾಡಬೇಕಿದೆ. ಜಾತಕದಲ್ಲಿ ಹಲವಾರು ರೀತಿಯ ಅರಿಷ್ಟ ಯೋಗಗಳು ಎಂದು ಇರುತ್ತವೆ. ರಾಜಯೋಗದ ಕನಕನೋಟವನ್ನೇ ಒದಗಿಸಿದ ಗ್ರಹಗಳು ಅರಿಷ್ಟಯೋಗಕ್ಕೂ ಕುಸಿದುಬೀಳುತ್ತವೆ. ಕುಸಿದುಬೀಳಿಸಿದ್ದ ಗ್ರಹಗಳೇ ಮೇಲೆತ್ತಲು ಸಹಾಯ ಮಾಡುತ್ತವೆ. ಬಿದ್ದಮೇಲೆ ಮತ್ತೆ ಮೇಲಕ್ಕೆಬ್ಬಿಸದ, ಮೇಲಕ್ಕೆಬ್ಬಿಸಿದ ಮೇಲೆ ಮತ್ತೆ ಬೀಳಿಸದ ಗ್ರಹಗಳೂ ಇವೆ. ಗ್ರಹಗಳು ಸಂಪನ್ನತೆಯ ಶಕ್ತಿಯಿಂದಾಗಿ ಆಯಾ ಕಾಲಕ್ಕೆ ಅರಿಷ್ಟವನ್ನೋ ಸ್ವರ್ಣಾಕರ್ಷಣ ಭೈರವನ ಅನುಗ್ರಹವನ್ನೋ ಒದಗಿಸುತ್ತವೆ. ಈಗ ಮಕ್ಕಳನ್ನು ಒಗ್ಗೂಡಿಸಿ ತಿಳಿಸಿ ಮಾತನಾಡಿ. ಮುಂದಿನ ಹದಿನೈದು ವರ್ಷಗಳ ಕಾಲವಾದರೂ ನೀವೇ ವ್ಯವಹಾರಗಳನ್ನು ನಿಯಂತ್ರಿಸಿ. ಪ್ರತಿ ಶುಕ್ರವಾರ ವಿದ್ಯಾಸರಸ್ವತಿ ಹಾಗೂ ಧನಲಕ್ಷ್ಮಿಯ ಸ್ತುತಿ ಸಹಿತ ಶ್ರೀ ತಾರಾ ಯಂತ್ರಾವರಣ ಪೂಜೆಯನ್ನು ಪೂರೈಸಿ. ಮಾಯೆ ಇಂದ್ರನ ಶಕ್ತಿಯಿಂದ ಪ್ರಜ್ವಲಿಸಿದಾಗ ಸಂಪತ್ತು ಲಭ್ಯ.

# ನಾನು ವಿದೇಶವೊಂದರಲ್ಲಿ ವಾಸವಾಗಿದ್ದೇನೆ. ಕೆಲಸದ ಬಗ್ಗೆ ತೃಪ್ತಿ ಇದೆ. ಭಾರತದಲ್ಲಿ ತಂದೆ-ತಾಯಿಗಳಿದ್ದಾರೆ. ಮದುವೆಯಾಗು ಎಂದು ಒತ್ತಡ ಹೇರುತ್ತಿದ್ದಾರೆ. ನನ್ನನ್ನೇ ನಾನು ಪ್ರಶ್ನಿಸಿಕೊಂಡಾಗ ನನಗೆ ಮದುವೆಯಾಗಲು ಮನಸ್ಸೇ ಇಲ್ಲ. ಬಾಲ್ಯದಲ್ಲಿ ಒಬ್ಬಳನ್ನು ಪ್ರೀತಿಸಿದ್ದೆ. ಈಗ ಅವಳು ಬದುಕಿಲ್ಲ. ಅದು ಸಹಜ ಸಾವು. ನನಗೀಗ ಅವಳ ನೆನಪು ಸಾಕು ಎಂಬ ಅಭಿಪ್ರಾಯವಿದೆ. ಏನು ಮಾಡಲಿ?

| ರಾಬರ್ಟ್ ಎಸ್. ಕಂಕನಾಡಿ, ಮಂಗಳೂರು

ಬಾಲ್ಯದ ಪ್ರೀತಿಯನ್ನು, ಅದರ ಆಳವನ್ನು ತಂದೆತಾಯಿಗೆ ತಿಳಿಸಿದ್ದೀರಾ? ನಿಮ್ಮ ಪರದಾಟ ನಿಮ್ಮದು, ನಿಮ್ಮ ತಂದೆತಾಯಿಗಳ ಪರದಾಟ ಅವರದು ಎಂದುಕೊಂಡು ಕೈಕಟ್ಟಿ ಕುಳಿತಿರಲಾಗದು. ಮದುವೆಯ ವಿಚಾರದಲ್ಲಿ ನಿಮ್ಮ ಜಾತಕದಲ್ಲಿ ಹಲವಾರು ರೀತಿಯ ಗಂಟುಗಳಿವೆ. ಮರಣಸ್ಥಳದ ಯಜಮಾನ ಶುಕ್ರನು ಬಾಳಸಂಗಾತಿಯ ಸ್ಥಾನದಲ್ಲಿ ನೀಚನಾಗಿ ಇರುವುದು ಸೂಕ್ತವಲ್ಲ. ನಿಮ್ಮ ಪಾಲಿನ ನೋವು ಸ್ಥಾಯಿಯಾಗಿ ನಿಂತಿದೆ. ಭಾಗ್ಯಾಧಿಪತಿಯು ನಿಮ್ಮ ತಾಯಿಯನ್ನೂ ಸಂಕೇತಿಸುತ್ತ ಬಾಳಸಂಗಾತಿಯ ಮನೆಯ ಯಜಮಾನನಾದ ಬುಧನ ಜತೆಗೆ ಭಾಗ್ಯದಲ್ಲಿ ಕುಳಿತಿದ್ದಾನೆ. ನಡೆದಿರುವುದನ್ನು ಮರೆಯದೆ ವಿಧಿಯಿಲ್ಲ. ಈಗ ಮದುವೆಯಾಗುವುದರಿಂದ ನಿಮ್ಮ ಎಳೆಯ ವಯಸ್ಸಿನ ಪ್ರೀತಿಯ ವಿಷಯದಲ್ಲಿ ಅಪಚಾರ ಎಸಗಿದಂತೆಯೂ ಆಗದು. ದೃಢವಾಗಿಸಬೇಕಾದ ಗುರುವು ದುರ್ಬಲ ಹೌದು. ಆದರೆ ಚಂದ್ರನಿಂದಾಗಿ ದಾರ್ಢ್ಯತೆ ಪಡೆಯುವ ಯೋಗವಿದೆ. ಮದುವೆಯಾಗಿ. ಕೊನೆಗೂ ಬದುಕು ದೊಡ್ಡದು.

# ಮದುವೆಯಾಗಿ ಐದು ವರ್ಷಗಳೇ ಕಳೆದವು. ಸಂತಾನಭಾಗ್ಯ ಹೊಂದಿಲ್ಲ. ವೈದ್ಯಕೀಯ ಸಮಸ್ಯೆಗಳಿವೆ. ಚಿಕಿತ್ಸೆಯೂ ನಡೆದಿದೆ. ಸಂತಾನಭಾಗ್ಯ ಇದೆಯೆ? ಪರಿಹಾರ ಏನು?

| ಕೋಮಲಾ ಪಾಟೀಲ, ಕೊಟ್ಟಾಯಂ

ರಾಹುವು ಪ್ರಧಾನ ದೋಷವಾಗಿದ್ದಾನೆ. ರಾಹುದೋಷ ನಿವಾರಣೆ ಆಗಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಆದರೆ ರಾಹುವಿನಿಂದ ಪೂರ್ವಪುಣ್ಯ ಸ್ಥಾನಾಧಿಪತಿಯು ನರಳಾಟದಲ್ಲಿದ್ದಾನೆ. ಆತನಿಂದ ಸಂತಾನಭಾಗ್ಯಕ್ಕೆ ಬೇಕಾದ ಶಕ್ತಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಕುಜನ ನೆರಳಾದ ಇಂದ್ರನ ಸಾರವನ್ನು, ಫಲಾವಳಿಗಳನ್ನು ಶನೈಶ್ಚರನು ಕಸಿದಿದ್ದಾನೆ. ಹಲವಾರು ಸಂಪನ್ನಶಕ್ತಿಗಳನ್ನು ಕಸಿದುಕೊಂಡ ಗ್ರಹಗಳು ಜಾತಕಕುಂಡಲಿಯ ಕೇಂದ್ರ ಹಾಗೂ ತ್ರಿಕೋನಸ್ಥಾನಗಳನ್ನು ಪ್ರಧಾನವಾಗಿ ಆವರಿಸಿದಾಗ ಚಂಡಿಕಾಳನ್ನು ಆರಾಧಿಸುವ ವಿಚಾರ ಮುಖ್ಯವಾಗಬೇಕು. ಚಂಡಿಕಾಳ ಆರಾಧನೆ ವಿವಿಧವಾಗಿರುತ್ತವೆ. ಸದ್ಯ ಶ್ರೀದೇವಿ ವಾರಾಹಿಯನ್ನು ಸರಳವಾಗಿ ಕುಂಕುಮಾರ್ಚನೆ ಸಹಿತ ಆರಾಧಿಸಿ. ಮನೆಯವರು ಗಣೇಶ ಅಥರ್ವಶೀರ್ಷ ಓದಲಿ. ವೈದ್ಯಕೀಯ ಸಲಹೆಗಳು ಇದ್ದೇ ಇರಲಿ.

# ನನ್ನ ಮೊಮ್ಮಗನ (ಮಗಳ ಮಗ) ಜಾತಕ ಕಳಿಸಿದ್ದೇನೆ. ಇವನ ವಿಚಾರದಲ್ಲಿ ನನ್ನ ಮಗಳು ಮತ್ತು ಅಳಿಯ ಬಳಲಿದ್ದಾರೆ. ಬುದ್ಧಿವಂತ. ಆದರೆ ಏನೋ ಅನ್ಯಶಕ್ತಿ ಆವರಿಸಿದಂತೆ, ಯಾವುದನ್ನು ಮಾಡು ಎಂದು ಹೇಳುತ್ತಾರೋ ಅದನ್ನು ಮಾಡಲಾರ. ಎಲ್ಲದರಲ್ಲೂ ಹಿಂದೆಬಿದ್ದಿದ್ದಾನೆ. ಕೂಗಾಡುತ್ತಾನೆ. ಮೃದುವಾಗಿ ಹೇಳಿದರೂ ಸ್ವೀಕರಿಸುವುದಿಲ್ಲ. ಬಿಗಿಯಾಗಿದ್ದರೂ ಖಿನ್ನತೆಗೆ ಜಾರುತ್ತಾನೆ. ಅಪಾಯಗಳ ಬಗ್ಗೆ ಹೇಳಬಾರದು. ತಾನಾಗಿ ತಿಳಿದುಕೊಳ್ಳಲಾರ. ಇವನು ಒಬ್ಬ ಮನುಷ್ಯನಾಗಲು ಸಾಧ್ಯವೇ?

| ದತ್ತಮಣಿ ಚತುರ್ವೆದಿ, ಭುವನೇಶ್ವರ

ಕಾಪಾಡುವ ಷಟ್ ಶಕ್ತಿಗಳಲ್ಲಿ ಒಂದಾದರೂ ಸಿಗುವಂತಿದ್ದರೆ ಜಾತಕಕುಂಡಲಿಯಲ್ಲಿ ಬೆಳಕು ಹುಡುಕಬಹುದು. ಆದರೆ ಈಗ ಕುಂಡಲಿಯಲ್ಲಿ ಷಟ್ ಶಕ್ತಿಗಳ ಬೆಳಕು ಮಸುಕಾಗಿದೆ. ನವಾಂಶದಲ್ಲಿ ಬೆಳಕಿನ ಹುಡುಕಾಟ ನಡೆಸಬೇಕು. ನಂತರ ಪ್ರತ್ಯಕ್ಷ, ಅನುಮಾನ, ಶಬ್ದ – ಈ ಮೂರು ಪ್ರಮಾಣಗಳಲ್ಲಿ ಒಂದಾದರೂ ನೆರವಿಗೆ ಸಿಗುವುದು ಸಾಧ್ಯವೇ ಎಂದು ಕೆಲವು ಮಾಹಿತಿಗಳನ್ನು ಆಧರಿಸಿ ನವಾಂಶ ಕುಂಡಲಿಯಲ್ಲಿ ನೋಡಬೇಕು. ಶಬ್ದಕ್ಕೆ ಶಕ್ತಿ ಲಭ್ಯವಿದೆ 32ನೇ ವರ್ಷದ ನಂತರ ಅವನದೇ ವಯಸ್ಸಿನ ಸ್ನೇಹಿತನ ಮೂಲಕ ಅಗಾಧವಾದುದನ್ನು ಸಾಧಿಸುತ್ತಾನೆ. ಪ್ರತಿನಿತ್ಯ ಶ್ರೀಗಂಧ ಲೇಪನ ಮಾಡಿದ ಅಕ್ಷತೆ ಹೂವುಗಳನ್ನು ಶ್ರೀ ಲಕ್ಷಿ್ಮ ನರಸಿಂಹನಿಗೆ ಏರಿಸಲಿ. ಸಾಲಿಗ್ರಾಮಕ್ಕೆ ಹಳದಿ ಹೂವನ್ನು ಏರಿಸಲಿ.

# ಬಹಳ ವರ್ಷದ ತನಕ ಮದುವೆ ಆಗಲಿಲ್ಲ. ಮದುವೆ ಮದುವೆ ಎಂದು ಓಡಾಡಿದ್ದೇ ಬೇರೆ ಕಥೆ. ಈಗ ಮದುವೆಯಾಗಿ ಎರಡು ವರ್ಷಗಳಾಗಿವೆ. ಯಾಕಾದರೂ ಮದುವೆ ಬೇಕಿತ್ತು ಎಂಬುದು ನನ್ನ ಈಗಿನ ಕಥೆ. ಮಾತಾಡಿದರೆ ಹುಷಾರ್ ಎಂಬ ಸ್ಥಿತಿ. ಹೇಗೆ ಪಾರಾಗಲಿ?

| ವಿಶ್ವನಾಥ ಹುಂಡಕೈ, ದಾವಣಗೆರೆ

ಹಲವರಿಗೆ ಮದುವೆ ಯೋಗ ಇರುವುದಿಲ್ಲ. ಇನ್ನು ಕೆಲವರಿಗೆ ಧನಯೋಗ ಇರದು. ಸಂತಾನಯೋಗ, ಸ್ವಗೃಹಯೋಗ, ಭಾಗ್ಯ, ಆರೋಗ್ಯ, ಆಯುಸ್ಸು, ಮಾನಸಿಕ ಸ್ವಾಸ್ಥ್ಯ ಸರಿಯಾದ ಕೆಲಸ, ಯಾವುದೋ ಒಂದು ಕೆಲಸ, ಉತ್ತಮ ಗೆಳೆತನ ಇತ್ಯಾದಿ ಯೋಗಗಳಲ್ಲಿ ಒಂದಿದ್ದರೆ ಇನ್ನೊಂದು ಇರದ ಸ್ಥಿತಿ ಇರುತ್ತದೆ. ನಿಮಗೆ ಕಳತ್ರಯೋಗ ದುರ್ಬಲವಾಗಿದೆ. ಅಂತೂ ಒಬ್ಬರು ಸಿಕ್ಕಿದರು. ಆದರೆ ರಾಹುದಶಾಕಾಲ ಬಂದಾಗ ಗೃಹಸ್ಥಾಶ್ರಮ ಸ್ವೀಕರಿಸಿದಿರಿ. ನಿತ್ಯದ ಗೋಳು ಆವರಿಸಿದ ಕರಾಳ ಕಥಾನಕವನ್ನು ಸೂಚ್ಯವಾಗಿ ಹೇಳಿದ್ದೀರಿ. ರುದ್ರಾಕ್ಷ, ಬಿಲ್ವ, ವ್ಯಾಘ್ರನೇತ್ರಪುಷ್ಪ ಒಗ್ಗೂಡಿಸಿ ಅದರ ಮೇಲೆ ಅರಿಶಿಣದ ಕೊನರು ಮತ್ತು ಕಚ್ಚಿ ತಿಂದಿರದ ಒಂದು ನೇರಳೆಬೀಜ ಇರಿಸಿ ಸೋಮ, ಗುರು ಹಾಗೂ ಶನಿವಾರಗಳಂದು ಪ್ರದೋಷಕಾಲದಲ್ಲಿ ಸರಳವಾಗಿ ಆರಾಧನೆ ನಡೆಸಬೇಕು. ನಿಮಗೆ ವೇಳೆ ಇದ್ದರೆ ನೀವೇ ಮಾಡುವುದು ಒಳಿತು. ಎರಡು ಕೆರೆಟ್ ಗೋಮೇದಕ ಹರಳನ್ನು ಸೇರಿಸಿದ ಪಂಚಲೋಹದ ಉಂಗುರವನ್ನು ನಿಮ್ಮ ಬಲಗೈಯ ನಡುಬೆರಳಿಗೆ 2034 ಜನವರಿ 27ರ ತನಕ ಧರಿಸಿ. ಮನೆಯಲ್ಲಿ ಯಾವುದೇ ವಿಷಯಕ್ಕೂ ಚರ್ಚೆಗೆ ಇಳಿಯಬೇಡಿ. ಸೋಲು ನಿಮ್ಮದೇ ಇರುತ್ತದೆ. ಮದುವೆಯಾಗಿದ್ದೀರಿ. ಹೊಂದಾಣಿಕೆಗೆ ಪ್ರಯತ್ನಿಸುವುದು, ನಿತ್ಯದ ಪಡಿಪಾಟಲುಗಳನ್ನು ತಾಳ್ಮೆಯಿಂದ ಸಹಿಸುವುದು ದುಸ್ತರವೇ. ಮಲಗುವ ಮುನ್ನ ಶ್ರೀ ದತ್ತಸ್ತೋತ್ರಗಳನ್ನು ಓದಿ. ಅದೃಷ್ಟದ ವಿಚಾರವಾಗಿ ಸೂಕ್ತ ಜ್ಯೋತಿಷಿಗಳಿಂದ ಇನ್ನಷ್ಟು ಮಾಹಿತಿಗಳನ್ನು ಕೇಳಿ ತಿಳಿದುಕೊಳ್ಳಿ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

(ಪ್ರತಿಕ್ರಿಯಿಸಿ: [email protected], [email protected])

One Reply to “ಪ್ರಶ್ನೆ-ಪರಿಹಾರ”

  1. Nana bavisha tilisi gorogale Date, of, bart, 6/6/1998
    name:mallayya shivapadayya hiremath
    korahalli

Leave a Reply

Your email address will not be published. Required fields are marked *