More

    ಪ್ರಾಚೀನ ಜ್ಞಾನ| ಉದಾತ್ತ ಸಂಸ್ಕೃತಿಯಲ್ಲಿನ ನಿಗೂಢಾರ್ಥಗಳು

    ಪ್ರತಿಯೊಂದು ಜೀವಿಯಲ್ಲಿ, ಪ್ರಾಣಿಯಲ್ಲಿ, ವಸ್ತುವಿನಲ್ಲಿ, ದೈವಿಕ ಅಂಶವನ್ನು ಕಾಣುವ ಮನೋಭಾವ ಹಿಂದುಧರ್ಮದಲ್ಲಿದೆ. ಅಣು-ರೇಣು, ತೃಣ-ಕಾಷ್ಠಗಳಲ್ಲಿ ದೇವತ್ವವನ್ನು ಕಾಣುವ, ಪೂಜಿಸುವ ಮಾನಸಿಕತೆ ನಮ್ಮದು. ತುಳಸಿ, ಎಕ್ಕೆ, ಬಿಲ್ವಪತ್ರೆ, ಗರಿಕೆ, ದರ್ಬೆ ಮುಂತಾದವುಗಳಲ್ಲಿ ಹೂ, ಗಂಧ, ಗೋವು ಮುಂತಾದ ಪ್ರಾಣಿಗಳಲ್ಲಿಯೂ ದೇವತ್ವವನ್ನು ಕಾಣುತ್ತೇವೆ. ಮೀನು, ಆಮೆ, ವರಾಹ, ಸಿಂಹ ಮುಂತಾದ ಪ್ರಾಣಿಗಳ ರೂಪದಲ್ಲೂ ದೇವರನ್ನು ಕಾಣುತ್ತೇವೆ. ಆನೆ, ಕುದುರೆ, ಕೋತಿಗಳು, ಶಂಖದಂತಹ ಜೀವಿಗಳಲ್ಲೂ ದೇವರನ್ನು ಕಂಡಿರುವಂತಹ ಉದಾತ್ತ ಸಂಸ್ಕೃತಿ ನಮ್ಮದು.

    ಪ್ರಕೃತಿಯಲ್ಲಿರುವ ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶವೆಂಬ ಪಂಚಭೂತಗಳಿಂದಲೇ ಜೀವರಾಶಿಗಳ ಸೃಷ್ಟಿಯಾಗುತ್ತದೆ. ಬೀಜವೊಂದನ್ನು ಮೊಳಕೆ ಬರಿಸಲು ನೀರಿನಲ್ಲಿ ನೆನೆಸಿ, ಶಾಖ ಕೊಡಬೇಕು. ಮೊಳೆತ ಬೀಜವು ಗಿಡವಾಗಿ ಬೆಳೆದು, ಮರವಾಗಿ ಫಲ ಕೊಡಬೇಕಾದರೆ ಅದನ್ನು ಮಣ್ಣಿನಲ್ಲಿ ಬಿತ್ತಬೇಕು. ಗಾಳಿಯ ಮೃದು ಸ್ಪರ್ಶದೊಂದಿಗೆ, ಆಕಾಶದ ಚಪ್ಪರದ ಅಡಿಯಲ್ಲಿ ಅದನ್ನು ಜೋಪಾನವಾಗಿ ಬೆಳೆಸಬೇಕು. ಪಂಚಭೂತಗಳ ಯಾವುದಾದರೊಂದು ಅಂಶವು ಅದಕ್ಕೆ ಲಭಿಸದಿದ್ದಲ್ಲಿ ಅಥವಾ ಕೊರತೆಯಾದಲ್ಲಿ ಆ ಬೀಜವು ಮೊಳಕೆಯೊಡೆಯದು, ಮೊಳಕೆಯೊಡೆದರೂ ಗಿಡವಾಗದು, ಗಿಡವಾದರೂ ಫಲ ಕೊಡದು. ಫಲ ಕೊಟ್ಟರೂ ಪರಿಪೂರ್ಣ ಫಲವಾಗದೆ ಜೊಳ್ಳಾಗುವುದು. ಆ ಫಲವು ಯಾವ ಪ್ರಯೋಜನಕ್ಕೂ ಬರುವುದಿಲ್ಲ.

    ಪ್ರತಿಯೊಬ್ಬನಲ್ಲಿಯೂ ಒಂದು ವಿಶೇಷ ಗುಣವಿರುವುದು. ದೇವರಲ್ಲಿ ಇರುವುದೆಲ್ಲವೂ ವಿಶೇಷತೆಗಳೇ. ಅದನ್ನೇ ವಿಭೂತಿಶಕ್ತಿ ಎನ್ನುವರು. ದುರ್ಗಣದಲ್ಲಿಯೂ ದೇವರನ್ನು ಕಾಣುವುದು ವಿಶೇಷ. ವೈರದಿಂದಲೂ ದೇವರನ್ನು ಸೇರುವ ಪದ್ಧತಿ ಇದೆ. ವಿರೋಧವೂ ಭಕ್ತಿಯೆನ್ನುವುದನ್ನು ಭಾಗವತವು ಹಲವೆಡೆ ನಿರೂಪಿಸುವುದು. ವಿಶೇಷವಾಗಿ ಜಯ-ವಿಜಯರ ಪ್ರಕರಣದಲ್ಲಿ.

    ‘ಭಕ್ತಿಭಾವವೊಂದೇ ಇರಬೇಕು ಎಂದೇನೂ ಇಲ್ಲ. ಕಾಮದಿಂದಾಗಲಿ, ಕ್ರೋಧದಿಂದಾಗಲಿ, ಭಯದಿಂದಾಗಲಿ, ಭಕ್ತಿಯಿಂದಾಗಲಿ, ಯಾರು ಭಗವಂತನನ್ನು ನಿತ್ಯ ನಿರಂತರವಾಗಿ ತಾದಾತ್ಮ್ಯಂದ ಧ್ಯಾನಿಸುವರೋ ಅವರೆಲ್ಲ ಭಗವಂತನಲ್ಲೇ ತನ್ಮಯರಾಗಿಬಿಡುತ್ತಾರೆ. (ಕಾಮಂ ಕ್ರೋಧಂ ಭಯಂ ಸ್ನೇಹಂ ಐಕ್ಯಂ ಸೌಹೃದಮೇವ ಚ | ನಿತ್ಯಂ ಹರೌ ವಿದಧತೋ ಯಾನ್ತಿ ತನ್ಮಯತಾಂ ಹಿ ತೇ || (ಭಾಗವತ: 10.29.15)’. ‘ನನ್ನ ಬಗೆಗೆ ಕ್ರೋಧಯೋಗದಿಂದ ಏಕಾಗ್ರತೆಯನ್ನು ಪಡೆದು, ಬ್ರಹ್ಮಜ್ಞರು ನೀಡಿದ ಶಾಪದಿಂದ ಬಿಡುಗಡೆಯನ್ನು ಹೊಂದಿ, ಸ್ವಲ್ಪ ಸಮಯದಲ್ಲಿ ನನ್ನ ಬಳಿಗೆ ಮರಳಿ ಬರುವಿರಿ’ (ಮಯಿ ಸಂರಮ್ಭಯೋಗೇನ ನಿಸ್ತೀರ್ಯ ಬ್ರಹ್ಮಹೇಲನಂ | ಪ್ರತ್ಯೇಷ್ಯತಂ ನಿಕಾಶಂ ಮೇ ಕಾಲೇನಾಲ್ಪೀಯಸಾ ಪುನಃ || (ಭಾಗವತ: 3.16.31) ಎಂದು ಹೇಳುವನು. ಜಯ-ವಿಜಯರು ವರ್ಣಿಸಿದ ಪ್ರಕಾರ, ಅವರು ವೈಕುಂಠದ ದ್ವಾರಪಾಲಕರು. ಸನಕ-ಸನಂದನಾದಿಗಳಿಂದ ಶಾಪಗ್ರಸ್ತರಾದವರು. ವಿರೋಧಭಕ್ತಿಯಿಂದ ವಿಷ್ಣುಸಾಮ್ರಾಜ್ಯ ಹೊಂದಿದರು. ಜಯ-ವಿಜಯರ ಮೂರು ಜನ್ಮಾವಳಿಗಳೆಂದರೆ ಹಿರಣ್ಯಾಕ್ಷ-ಹಿರಣ್ಯಕಶಿಪು. ರಾವಣ-ಕುಂಭಕರ್ಣ. ಶಿಶುಪಾಲ-ದಂತವಕ್ತ್ರ. ಒಬ್ಬೊಬ್ಬರ ಜೀವನವೂ ಒಂದೊಂದು ಪಾಠವನ್ನು ಕಲಿಸಿದೆ. ಹಿರಣ್ಯಾಕ್ಷನು ರಕ್ಷಣಾರಹಿತ ಭೂದೇವಿಯ ಮೇಲೆ ಕ್ರೂರವಾಗಿ ದಾಳಿ ಮಾಡಿದನು. ಅವನ ಕ್ರೌರ್ಯ ಎಷ್ಟು ಭಾರಿ ಪರಿಮಾಣದಲ್ಲಿತ್ತೆಂದರೆ ಅವಳ ಅವಯವಗಳು ಮುರಿದು ಮೇಲೆ ನೂಕಲ್ಪಟ್ಟವು. ಆಕಾಶದ ಕಡೆ ಚಾಚಿಕೊಂಡ ಈ ಮುರಿದ ಅವಯವಗಳು ಹಿಮಾಲಯವನ್ನು ರಚಿಸಿದವು. ಭೂಮಿಯನ್ನು ಸಾಗರದ ತಳಕ್ಕೆ ಹೊತ್ತೊಯ್ದಾಗ ವಿಷ್ಣುವು ವರಾಹಾವತಾರವನ್ನು ಧರಿಸಿ ಅವನನ್ನು ಸಂಹರಿಸಿದನು. ಹಿರಣ್ಯಕಶಿಪುವು ಹಿರಣ್ಯಾಕ್ಷನ ಅಣ್ಣ. ಅವನು ಘೊರವಾದ ತಪಸ್ಸನ್ನು ಮಾಡಿ ಬ್ರಹ್ಮನಿಂದ ವರ ಪಡೆದ. ‘ನೀನು ಸೃಷ್ಟಿಸಿರುವ ಯಾವುದೇ ಪ್ರಾಣಿ, ಪಕ್ಷಿ ಮನುಷ್ಯ ದೇವತೆ ದೈತ್ಯ ನಾಗಾದಿಗಳಿಂದಲೂ ನನಗೆ ಮರಣವು ಪ್ರಾಪ್ತವಾಗಬಾರದು. ಒಳಗಾಗಲೀ ಹೊರಗಾಗಲಿ, ಹಗಲು-ರಾತ್ರಿಗಳಲ್ಲಾಗಲಿ, ಯಾವುದೇ ಶಸ್ತ್ರ ಅಸ್ತ್ರಗಳಿಂದಾಗಲಿ, ಭೂಮಿಯಾಕಾಶಾದಿಗಳಲ್ಲಿ ನನಗೆ ಮರಣ ಉಂಟಾಗದಿರಲಿ. ಯುದ್ಧದಲ್ಲಿ ನನಗೆ ಯಾವುದೇ ಎದುರಾಳಿಗಳಿಲ್ಲದೆ ಏಕಛತ್ರಾಧಿಪತಿಯಾಗಿ ಮೆರೆಯುವಂತೆ ವರವನ್ನು ಕರುಣಿಸು’ ಎಂದ. ಬ್ರಹ್ಮ ಹಾಗೆಯೇ ಆಗಲಿ ಎಂದ. ಬ್ರಹ್ಮದೇವ ವರವನ್ನೇನೋ ಕೊಟ್ಟುಬಿಟ್ಟ. ಅವನನ್ನು ವಧಿಸಲು ವಿಷ್ಣು ಅರ್ಧಪ್ರಾಣಿ, ಅರ್ಧಮನುಷ್ಯನ ರೂಪ ತಾಳಬೇಕಾಯಿತು. ಅರ್ಧ ನರ, ಇನ್ನರ್ಧ ಸಿಂಹ. ತನ್ನ ಸ್ವಂತ ಮಗ ಪ್ರಹ್ಲಾದನಿಗೆ ನಾನಾ ರೀತಿಯಿಂದ ಪೀಡೆ ನೀಡಿ ಕೊಲ್ಲಲು ಬಯಸಿದ. ಅದಕ್ಕೆ ಕಾರಣ ‘ತನ್ನ ತಂದೆಗಿಂತ ವಿಷ್ಣುವೇ ಪರಮೇಶ್ವರ’ ಎಂದುದು. ತನ್ನ ಆತ್ಮವೇ ಆದ ಮಗನನ್ನು ಕ್ಷುಲ್ಲಕ ಕಾರಣಕ್ಕಾಗಿ ಕೊಲ್ಲಬಹುದೇ? ಬ್ರಹ್ಮನಲ್ಲಿ ವರವನ್ನು ಕೇಳಿದಾಗಲೇ ಆತನಿಗೆ ವಿಷ್ಣು ಇದ್ದಾನೆ ಎಂದು ತಿಳಿಯದೇ? ತಮ್ಮ ಹಿರಣ್ಯಾಕ್ಷನನ್ನು ಕೊಂದಾಗ ಅವನ ಗಮನಕ್ಕೆ ಬಂದಿರಲಿಲ್ಲವೇ? ಅಣು, ರೇಣು, ತೃಣ, ಕಾಷ್ಠಗಳಲ್ಲಿಯೂ ದೇವನು ವ್ಯಾಪಿ ಎಂಬುದು ನರಸಿಂಹ ಅವತಾರದ ಗಮನಾರ್ಹ ಅಂಶ. ಅದೇ ಹಿಂದೂಧರ್ಮದ ಮೂಲವೂ ಹೌದು. ಎಲ್ಲರಲ್ಲಿಯೂ-ಎಲ್ಲದರಲ್ಲಿಯೂ ದೇವರನ್ನು ಕಾಣುವುದು ವಿಶೇಷತೆ. ಪ್ರತಿಯೊಂದರಲ್ಲಿಯೂ ಒಂದು ಗೂಢಾರ್ಥವಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts