ಮನಸ್ಸಿಗೆ ಪೆಟ್ಟು ಕೊಡಬೇಡಿ…

ತುಂಬ ಸಲ ಹಾಗಾಗುತ್ತದೆ. ಅಥವಾ ಹಾಗಾಗುವುದೇ ಜಾಸ್ತಿ. ಯಾರೋ ನಮ್ಮ ಮೇಲೆ ರೇಗಿರುತ್ತಾರೆ. ಅವರು ರೇಗಿದರು ಎಂಬುದಕ್ಕಿಂತ, ಇನ್ಯಾರೆದುರಿಗೋ ರೇಗಿದರು ಅನ್ನೋದೇ ಹೆಚ್ಚು ನೋವು ಕೊಟ್ಟಿರುತ್ತದೆ. ಬೇಕಾದರೆ ಒಳಕ್ಕೆ ಕರೆದು ಕಪಾಳಕ್ಕೆರಡು ಕೊಟ್ಟಿದ್ದರೂ ಈ ಪರಿ ನೋವಾಗುತ್ತಿರಲಿಲ್ಲ. ಆದರೆ ಅವರೆಲ್ಲರೆದುರಿಗೆ ಬೈದುಬಿಟ್ಟರಲ್ಲ? ಮನಸು ವಿಪರೀತ ತಳಮಳಿಸುತ್ತದೆ.

ಸಂತೋಷವಾದರೂ, ದುಃಖವಾದರೂ, ಸನ್ಮಾನವಾದರೂ, ಅವಮಾನವಾದರೂ- ಅವು ನಮಗಿಂತ ಹೆಚ್ಚಾಗಿ ನಮ್ಮ ಸುತ್ತಲಿನವರೊಂದಿಗೆ, ನಮ್ಮಪ್ರೀತಿಪಾತ್ರರೊಂದಿಗೆ ಹೇಗೋ relate ಆಗಿಬಿಟ್ಟಿರುತ್ತವೆ. ನೀವು ಗಮನಿಸಿ ನೋಡಿ: ಲೇಖಕರು, ಕಲಾವಿದರ ಆತ್ಮಚರಿತ್ರೆಗಳನ್ನು ಓದಿದಾಗ ಅವುಗಳಲ್ಲಿ ‘ನನಗೆ ಅಮೆರಿಕದಲ್ಲಿ ಸನ್ಮಾನ ನಡೆದಾಗ….’ ಎಂದ ಧಾಟಿಯ ಒಂದೆರಡು ಛಾಪ್ಟರುಗಳಿದ್ದೇ ಇರುತ್ತವೆ. ‘ಅಮೆರಿಕದ ಇಲಿನಾಯ್್ಸಲ್ಲಿ

ಕನ್ನಡ ಸಂಘದವರಿಂದ ಸನ್ಮಾನ’ ಅಂತ ಒಂದು ಫೋಟೋ ಹಾಕಿ ಅದಕ್ಕೊಂದು ಅಡಿಟಿಪ್ಪಣಿ ಹಾಕಿರುತ್ತಾರೆ. ನನ್ನ ಕಲೆ, ಸಾಹಿತ್ಯ, ಸಂಗೀತ, ದೊಡ್ಡಸ್ತಿಕೆ- ಇತ್ಯಾದಿಗಳನ್ನು ಗುರುತಿಸಿದ್ದು ಕೇವಲ ನೀವಷ್ಟೇ ಅಲ್ಲ; ಅಮೆರಿಕದಲ್ಲಿರುವ ಕನ್ನಡಿಗರೂ ಗುರುತಿಸಿದರು ಎಂದು ಹೇಳಿಕೊಳ್ಳುವ ತವಕ, ಹೇಳಿಕೊಂಡರೇನೇ ಸಂತೋಷ.

ಈ ಸಂತೋಷದ ಇನ್ನೊಂದು ಇಮ್ಮೀಡಿಯೆಟ್ ಸ್ವರೂಪವೆಂದರೆ ಅಮೆರಿಕದಲ್ಲಿ ಸಾಧಿಸಿದ್ದನ್ನ, ಬೆಳೆದದ್ದನ್ನ, ಗಳಿಸಿದ್ದನ್ನ-ಇಲ್ಲಿರುವ ನಮ್ಮವರು ನೋಡಲಿಲ್ಲವಲ್ಲ ಎಂಬ ದುಃಖ! ಇದೊಂಥರಾ, ‘ಗಂಡ ಹೊಗಳಿ ಮುದ್ದಾಡಿದ; ಆದರೆ ಹಾಳಾದೋಳು, ನಾದಿನಿ ನೋಡಲೇ ಇಲ್ಲವಲ್ಲಾ?’ ಎಂಬಂತಹುದು. ಅದಕ್ಕೆಂದೇ, ಅಲ್ಲಿರುವವರು ಇಲ್ಲಿಗೆ ಬಂದಾಗ ಅಲ್ಲಿಂದ ತಮ್ಮ ಮನೆಯ, ಕಾರಿನ ಫೋಟೋ ತರುತ್ತಾರೆ. ನಾಯಿಯ ಫೊಟೋ ತರುತ್ತಾರೆ. ತಮ್ಮ ಸಂಬಳವನ್ನು ಮೊದಲು ಡಾಲರುಗಳಲ್ಲಿ ಹೇಳುತ್ತಾರೆ. ನಂತರ ರೂಪಾಯಿಗಳಲ್ಲಿ ಕನ್ವರ್ಟ್ ಮಾಡಿ ಹೇಳುತ್ತಾರೆ. “Bloody India’ ಅಂತಲೇ ಮಾತು ಶುರುವಿಡುತ್ತಾರೆ. ‘ಆದರೂ ನಮ್ಮ ದೇಶವೇ ಮೇಲು’ ಅಂತ ಮುಗಿಸುತ್ತಾರೆ.

ಮನುಷ್ಯನ ಸ್ವಭಾವವೇ ಹಾಗೆ. ತನಗೆ ಏನೇ ಆದರೂ ಅದು ತನ್ನವರಿಗೆ ಗೊತ್ತಾಗಬೇಕು. ಗೆದ್ದದ್ದು, ಉಂಡದ್ದು, ಹೆಸರು ಮಾಡಿದ್ದು, ಹೆಣ್ಣನ್ನು ಆಳಿದ್ದು, ಸಮುದ್ರ ದಾಟಿದ್ದು, ದುಡ್ಡು ಮಾಡಿದ್ದು ಎಲ್ಲವೂ ತನ್ನವರಿಗೆ ಗೊತ್ತಾಗಬೇಕು. ಗೊತ್ತಾಗದಿದ್ದರೆ, ತಾನೆಷ್ಟು ಬೆಳೆದರೂ ಅಸಲು ಬೆಳೆದೇ ಇಲ್ಲವೆಂಬ ಅಸಮಾಧಾನ.

ವೈಫಲ್ಯಗಳು ಕೂಡ ಅಷ್ಟೇ. ಅವುಗಳನ್ನು ನಾವು ಕೆಲವೇ ಮಂದಿಯ ಮುಂದೆ ಹೇಳಿಕೊಳ್ಳುತ್ತೇವೆ. ತೀರ ಇಜ್ಜೋಡಿಗೆ, ಯಡವಟ್ಟು ಗಂಡನಿಗೆ ಈಡಾದ ಹೆಂಡತಿ ಯಾರದೋ ಮದುವೆ ಮನೆಗೆ ಬಂದಾಗ ಅಪ್ಪಟ ಪೀತಾಂಬರವನ್ನೇ ಉಟ್ಟು ಬಂದಿರುತ್ತಾಳೆ. ಕೊರಳಲ್ಲಿ ಬಂಗಾರ, ಮೂಗಿನ ನತ್ತಿಗೆ ವಜ್ರ, ಕಿವಿಯಲ್ಲಿ ಫಳಫಳ. ಕಣ್ಣಲ್ಲಿ ಹೆಮ್ಮೆ, ಓಡಾಡುವ ರಭಸವೇ ಸಾಕು, ಹುಡುಗಿ ಖುಷಿಯಾಗಿದ್ದಾಳೆಂದು ನಿರ್ಧರಿಸುವುದಕ್ಕೆ. ಆದರೆ ಒಬ್ಬ ಆತ್ಮೀಯ ಗೆಳತಿ ಸಿಕ್ಕುಬಿಡಲಿ? ರಾತ್ರಿ ಆರತಕ್ಷತೆ ಮುಗಿದು ಎಲ್ಲ ಹೋಗಿ ಭಣಭಣ ಮದುವೆ ಹಂದರದ ಕೆಳಗೆ ಅರೆಗತ್ತಲೆಯಲ್ಲಿ ಇಬ್ಬರೇ ಕುಳಿತಾಗ ಉಕ್ಕಿಬರುವ ದುಃಖದ ಹೆಸರು ಕಡಲು. ಅವಳ ಎಲ್ಲ ಸಂಕಟ, ಒಬ್ಬಂಟಿತನ, ಗಂಡನ ಮನೆಯ ಅನಾದರ, ಅತ್ತೆಯ ಕುಟುಕು, ಗಂಡನ ಒರಟುತನ-ಎಲ್ಲವನ್ನೂ ಆತ್ಮೀಯಳೆದುರು ಹೇಳಿಕೊಂಡಾಗಲೇ ಸಮಾಧಾನ. ಮತ್ತೆ ಎದ್ದು ಮನೆಗೆ ಹೊರಡುವ ಹೊತ್ತಿಗೆ ಅದೇ ಬಿರುಸು. ಅದೇ ಚಿನ್ನ, ವಜ್ರ, ಫಳಫಳ.

ದಿನವಿಡೀ ಮನೆಯಲ್ಲಿ ಅದಿಲ್ಲ ಇದಿಲ್ಲ ಅಂತ ನಮ್ಮೊಳಗೇ ಗೊಣಗಿಕೊಳ್ಳುವ ನಾವು ಕೂಡ ಸಂಜೆ ಯಾರೋ ಸಿಕ್ಕಾಗ, ಮಾತಿನ ಮಧ್ಯೆ ‘ನಮಗೇನ್ರೀ ಕಡಿಮೆಯಾಗಿದೆ…’ ಅಂತಲೇ ಮಾತಿಗಾರಂಭಿಸುತ್ತೇವೆ. ಅದು ಡಂಭಾಚಾರವಲ್ಲ, ಬೂಟಾಟಿಕೆಯಲ್ಲ, ಏನೋ ಇಲ್ಲದ್ದನ್ನು ಹೇಳಿಕೊಂಡು ಬೀಗಬೇಕೆಂಬ ಹಂಬಲವೂ ಅಲ್ಲ. ಅದು ನಮ್ಮ egoವನ್ನು ನಾವೇ ಪ್ರಯತ್ನಪೂರ್ವಕವಾಗಿ protect ಮಾಡಿಕೊಳ್ಳುವ ಸಹಜ ಕ್ರಿಯೆ! ಆಗಷ್ಟೆ ಲಾಕಪ್ಪಿನಲ್ಲಿ ಪೊಲೀಸರಿಂದ ಒದೆ ತಿಂದು ಬಂದವನು ಕೂಡ ‘ನನ್ನನ್ಯಾವನಿದಾನೆ ಮುಟ್ಟೋನು?’ ಎಂಬ ಧರತಿಯಲ್ಲೇ ಓಡಾಡಲು ಯತ್ನಿಸುತ್ತಾನೆ. ಒಳಮನೆಯಲ್ಲಿ ಗಂಡನಿಂದ ಅಸಹನೀಯವಾದ ಬೈಗುಳ ತಿಂದು ಬಂದ ಗೃಹಿಣಿ ಬಾಗಿಲಲ್ಲಿ ಓರಗಿತ್ತಿಯನ್ನು ನೋಡುತ್ತಿದ್ದಂತೆಯೇ ಎಲ್ಲ ಮರೆತವಳಂತೆ ಒಂದು ನಗೆಯರಳಿಸುತ್ತಾಳೆ. ಶರಂಪರ ಜಗಳ ಆಡುತ್ತಿರುವವರ ಮನೆಗೆ ಇದ್ದಕ್ಕಿದ್ದಂತೆ ಅನಿರೀಕ್ಷಿತ ಅತಿಥಿಯಾಗಿ ಹೋಗಿ ನೋಡಿ? ತಕ್ಷಣ ಜಗಳ ಮುಗಿದು, ಅಲ್ಲಿ ಆಹ್ಲಾದ ಹರಡುತ್ತದೆ.

ನೆನಪಿರಲಿ, ಅದ್ಯಾವುದೂ ನಾಟಕೀಯವಲ್ಲ, ಅಸಹಜವಲ್ಲ, ಡಂಭಾಚಾರವಲ್ಲ. ಗಂಡ ಹೊಡೆದನೆಂಬ ದುಃಖಕ್ಕಿಂತ ನಾದಿನಿ ನಕ್ಕ ದುಃಖ ಹೆಚ್ಚು ದಾರುಣವಾದದ್ದು. ಗಂಡನ ಏಟು ಕೇವಲ ಕೆನ್ನೆಗೆ ಬಿದ್ದಿರುತ್ತದೆ. ನಾದಿನಿಯ ನಗು ಮನಸ್ಸಿಗೆ ಬಿದ್ದ ಪೆಟ್ಟು! ಆತ ಅಮೆರಿಕದಿಂದ ಮನೆಯ ಫೋಟೋ ತರುವುದು ತಪ್ಪಲ್ಲ. ಆಕೆ ಮದುವೆ ಮನೆಗೆ ವಜ್ರ ಮುಡಿದುಕೊಂಡು ಜರ್ಬಾಗಿ ಹೋಗುವುದೂ ತಪ್ಪಲ್ಲ. ಬಾಗಿಲಿಗೆ ಬಂದ ಓರಗಿತ್ತಿಗೆ ಕಾಣದಂತೆ ಕಣ್ಣೊರೆಸಿಕೊಂಡು ಮುಗುಳ್ನಕ್ಕ ಗೃಹಿಣಿಯದು ಅಸಲು ತಪ್ಪಲ್ಲವೇ ಅಲ್ಲ.

ತಪ್ಪಿರುವುದು ನಮ್ಮಲ್ಲಿ! ಅದೆಂಥ ಸಿಟ್ಟೇ ಬರಲಿ, ಪಕ್ಕಕ್ಕೆ ಕರೆದು ಬೈಯಬಹುದಲ್ಲ? ನಾವು ಹಾಗೆ ಮಾಡಿರುವುದಿಲ್ಲ. ಎಲ್ಲರ ಎದುರಿನಲ್ಲೇ ಹೆಂಡತಿಯ ಮೇಲೆ ಸಿರ್ರೆಂದಿರುತ್ತೇವೆ. ಮಕ್ಕಳನ್ನು ಗದರಿಕೊಂಡಿರುತ್ತೇವೆ. ಕೆಲಸದವರನ್ನು ಬೈದಿರುತ್ತೇವೆ. ಅವರನ್ನೆಲ್ಲ ನಾವು ತುಂಬ ಪ್ರೀತಿಸುತ್ತಿರಬಹುದು. ಒಡವೆ, ಸೀರೆ, ದುಡ್ಡು, ಊಟ-ಬಟ್ಟೆ ಏನೆಲ್ಲ ಕೊಟ್ಟಿರಬಹುದು. ನಿಜಕ್ಕೂ ಅಕ್ಕರೆಯಿಂದ ನೋಡಿಕೊಂಡಿರಬಹುದು. ಅಷ್ಟೆಲ್ಲ ಮಾಡಿದ್ದೇವೆ ಅಂದ ಮೇಲೆ ಅವರನ್ನು ಗದರಿಸುವ, ಬಯ್ಯುವ ಹಕ್ಕು ನಮಗಿರುವುದಿಲ್ಲವಾ? ಖಂಡಿತ ಇರಬಹುದು. ಆದರೆ ಬಯ್ಯುವ ಮುನ್ನ ಎಚ್ಚರಿಕೆಯಿರಬೇಕು. ಅಲ್ಲಿ ನಾದಿನಿ ಇರಬಾರದು!

ಬೈಯ್ಯುವುದು, ಗದರಿಸುವುದು punish ಮಾಡುವುದು- ಇವೆಲ್ಲ ಕೂಡ ಮುದ್ದು ಮಾಡಿದಷ್ಟೇ privateಆದ, ಪರ್ಸನಲ್ ಆದ ಸಂಗತಿಗಳು. ಹೇಗೆ ಹೆಂಡತಿಯನ್ನು ಹತ್ತು ಮಂದಿಯೆದುರು ಮುದ್ದು ಮಾಡುವುದಿಲ್ಲವೋ, ಹಾಗೆಯೇ ಹತ್ತು ಮಂದಿಯೆದುರು ಬಯ್ಯಲೂಬಾರದು.

ನಾಳೆಯಿಂದ ಪ್ರಯತ್ನಿಸಿ ನೋಡಿ, ನಿಮ್ಮ ಅಸಮಾಧಾನವನ್ನು, ಸಿಡಿಮಿಡಿಯನ್ನು, ಕೋಪವನ್ನು, ಅದ್ಯಾರ ಮೇಲೆ ಬಂದಿದೆಯೋ ಅವರಿಗಷ್ಟೇ convey ಮಾಡಿ ನೋಡಿ?

ಅವರಿಗೆ ನಿಮ್ಮೆಡೆಗೆ ಪ್ರೀತಿಯ ಜೊತೆಗೆ respect ಬೆಳೆಯುತ್ತದೆ.

(ಲೇಖಕರು ಹಿರಿಯ ಪತ್ರಕರ್ತರು)

One Reply to “ಮನಸ್ಸಿಗೆ ಪೆಟ್ಟು ಕೊಡಬೇಡಿ…”

  1. ಇವತ್ತು ರವಿ ಬೆಳಗೆರೆಯವರು ಒಂದು ಮುತ್ತಿನಂತ ಮಾತನ್ನು ಆಡಿದ್ದಾರೆ. ಬಯ್ಯುವುದು, ಗದರಿಸುವುದು, punish ಮಾಡುವುದು ಇದೆಲ್ಲಾ ಹೆಂಡತಿಯನ್ನು ಮುದ್ದುಮಾಡುವಷ್ಟೇ private ಬಾತ್ ಗಳು (ಸಂಗತಿಗಳು ). ಇದನ್ನು private ಆಗೇ ನಮ್ಮ ಸಿಟ್ಟು ಅಸಮಾಧಾನವನ್ನ ಆ ವ್ಯಕ್ತಿಗೆ ತಿಳಿಸೋಣ. ಆದರೆ ನಾವು ಬಯ್ಯುವುದು ಗದರಿಸುವುದು ಸಿಟ್ಟುಬಂದಾಗ ಮಾತ್ರ, ಆ ಕ್ಷಣ ಎಲ್ಲಾ ಆಗಬೇಕು. ಅಲ್ಲೇ ಇರುವುದು ಒಬ್ಬ ತಪಸ್ವಿಯ ತಪಸ್ಸು. ಆ ಕ್ಷಣದಲ್ಲಿ ಹೇಗೆ ಮನಸ್ಸನ್ನು ಹತೋಟಿಗೆ ತೆಗೆದುಕೊಂಡು, ಸುಮ್ಮನಿದ್ದು, ಸಮಯಾವಕಾಶಕ್ಕೆ ಕಾದು ಆ ವ್ಯಕ್ತಿಗೆ ತಮ್ಮ ಅಸಮಾಧಾನವನ್ನು ತಿಳಿಯಪಡಿಸುವುದು. ಈ ಗುಣದಲ್ಲಿ ನೈಪುಣ್ಯತೆಯನ್ನು ಪಡೆದು ಅಭ್ಯಾಸ ಮಾಡಿದರೆ, ನಿಜವಾಗಿಯೂ ರವಿಯವರು ಹೇಳಿದಹಾಗೆ ಆ ವ್ಯಕ್ತಿಯ ವೈರತ್ವವನ್ನು ಗಳಿಸುವುದರ ಬದಲು ಪ್ರೀತಿಯ ಜೊತೆಗೆ ಗೌರವನ್ನೂ ಸಂಪಾದಿಸಬಹುದು. – ಗುಂಜ್ಮ೦ಜ (GUNJMANJA)

Comments are closed.