ಸಾರ್ಥಕತೆ ತರುವ ಆ ಮಾತು…

‘ನಾನು ಹೇಳಿದಂಗೇ ಆಯ್ತು ನೋಡಿ!’ ಎನ್ನುವವರು ‘ನಾನು ಹಾಗೆ ಮಾಡಬಾರದು’ ಅಂತ ಭಾವಿಸುವುದಿಲ್ಲ. ಲಂಚಕೋರತನ, ವಂಚನೆ-ಎಲ್ಲವೂ ಕಂಟ್ರೋಲಿಗೆ ಬರುವುದು ‘ನಾನು’ ಆ ಕೆಲಸ ಮಾಡಬಾರದು ಅಂದುಕೊಳ್ಳುವುದರಿಂದ ಮಾತ್ರ.

‘ನೋಡಿದ್ಯಾ… ನಾನು ಹೇಳಿದಂಗೇ ಆಯ್ತು! ನಾನು ಮೊದಲೇ ಹೇಳಿರ್ಲಿಲ್ವಾ?’ ಅಂತ ನಾವೆಲ್ಲ ಒಂದಲ್ಲ ಒಂದು ಸಲ ಉದ್ಗರಿಸಿರುತ್ತೇವೆ. ಹೆಮ್ಮೆಪಟ್ಟು ಮೀಸೆ ಹುರಿ ಮಾಡಿರುತ್ತೇವೆ. ‘ನಾನು ಅಂದ್ಹಾಗೇ ಆಯ್ತು’ ಅನ್ನೋದರ ಹಿಂದೆ ನಮ್ಮ ಅನುಭವ ಗೆದ್ದಿತು, ನಮ್ಮ ವಿವೇಕ ಗೆದ್ದಿತು, ನಮ್ಮ wisdom ಗೆದ್ದಿತು ಅನ್ನುವಂಥ ಭಾವವಿರುತ್ತದೆ.

ಜನಸಾಮಾನ್ಯರಿಗೆ ಹೀಗೆ ಉದ್ಗರಿಸಿ, ಮೀಸೆ ಹುರಿ ಮಾಡುವ ಅವಕಾಶ ತುಂಬ ಅಪರೂಪಕ್ಕೆ ಸಿಗಬಹುದೇನೋ? ಆದರೆ ಪತ್ರಕರ್ತರಿಗೆ ಮೇಲಿಂದ ಮೇಲೆ ಇಂಥ ಅವಕಾಶ ದೊರೆಯುತ್ತದೆ. ಕನ್ನಡ ಪತ್ರಿಕೆಯೊಂದರ ನಿವೃತ್ತ ಸಂಪಾದಕರಂತೂ ತಮ್ಮ ಬರಹವನ್ನು ‘ನಾನು ಕಳೆದ ವಾರ ಹೇಳಿದಂತೆಯೇ ಆಯಿತು!’ ಅಂತಲೇ ಆರಂಭಿಸುತ್ತಿದ್ದರು. ಪ್ರತಿನಿತ್ಯದ ಆಗುಹೋಗುಗಳನ್ನು ಗಮನಿಸುವವರಿಗೆ, ಅದರ ಕುರಿತೇ ಯೋಚಿಸುವವರಿಗೆ, ವಿವರ ಕಲೆಹಾಕುವವರಿಗೆ ಸಹಜವಾಗಿಯೇ-ನಾಳೆ ಹೊತ್ತಿಗೆ ಈ ವಿಷಯ ಏನಾದೀತು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗಿ ಬಿಡುತ್ತದೆ. ಅದಕ್ಕೆ ಅಂಥ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ಕೊಂಚಮಾತ್ರದ ಅನುಭವ ಮತ್ತು ಕಾಮನ್​ಸೆನ್ಸು, ಸಾಕು. ಸಾವಿರಾರು ಕ್ರೖೆಂ ವರದಿಗಳನ್ನು ಬರೆದವನಿಗೆ ಒಂದು ಹತ್ಯೆ ಹೀಗೇ ಆಗಿದ್ದೀತು ಅಂತ ಊಹಿಸುವುದು ಕಷ್ಟದ ಮಾತಲ್ಲ.

ಆದರೆ, ‘ನಾನು ಹೇಳಿದಂಗೇ ಆಯ್ತು ನೋಡಿ!’ ಅಂತ ಉದ್ಗರಿಸುವವರು ‘ನಾನು ಹಾಗೆ ಮಾಡಬಾರದು’ ಅಂತ ಅಂದುಕೊಳ್ಳಬೇಕಾದ ಅವಶ್ಯಕತೆಯೂ ಇದೆ ಎಂಬುದನ್ನು ಮರೆತು ಬಿಡುತ್ತೇವೆ. ‘ನಾನು ಹೇಳಿರ್ಲಿಲ್ವಾ? ಈ ಸಲ ನೀನು ಪಾಸಾಗಲ್ಲ ಅಂತ?’ ಎಂದು ಫೇಲಾದವನೊಬ್ಬನನ್ನು ಹಂಗಿಸುವ ಮೇಷ್ಟ್ರು, ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸುವ ಮುನ್ನ ಮೇಷ್ಟ್ರಾದ ‘ನಾನು’ ಈ ಕೆಲಸ ಮಾಡಬಾರದು ಅಂತ ಒಂದು ಕ್ಷಣ ಅಂದುಕೊಂಡುಬಿಟ್ಟರೆ ಸಾಕು! ಆತನಿಂದ ಘಟಿಸಬಹುದಾದ ಅತಿ ದೊಡ್ಡ ಅಪರಾಧ ತಪ್ಪಿಹೋಗುತ್ತದೆ.

ಇದು ಕೇವಲ ಪತ್ರಕರ್ತರಿಗೆ, ಶಿಕ್ಷಕರಿಗೆ, ರಾಜಕಾರಣಿಗಳಿಗೆ ಸಂಬಂಧಿಸಿದ ಮಾತಲ್ಲ. ನೀವು ಯಾರೇ ಆಗಿರಿ ನಿಮ್ಮ ವಯಸ್ಸು ಬೆಳೆಯುವುದರೊಂದಿಗೆ ಸುತ್ತಲಿನ ಸಮಾಜದ ದೃಷ್ಟಿಯಲ್ಲಿ ನಿಮ್ಮ ಗೌರವ ಮತ್ತು ಜವಾಬ್ದಾರಿಗಳೂ ಬೆಳೆಯುತ್ತಿರುತ್ತವೆ. ನಿನ್ನೆ ಹಾಗಿದ್ದವರು, ಅವತ್ತಾಗಲೇ ನೀವು ಹಾಗಲ್ಲ! ನಿಮ್ಮ ತಮ್ಮ ಬೆಳೆಯತೊಡಗಿದ್ದಾನೆ. ತಂಗಿಗೆ ಎಲ್ಲ ಅರ್ಥವಾಗುವ ವಯಸ್ಸು, ಸಿಗರೇಟು ಹಚ್ಚುವ ಮುನ್ನ, ಕ್ಲಾಸ್ ಬಂಕ್ ಮಾಡುವ ಮುನ್ನ, ಮೊದಲ ಬಿಯರ್ ಕುಡಿಯುವ ಮುನ್ನ ಒಂದು ಸಲ ‘ನಾನು’ ಈ ಕೆಲಸ ಮಾಡಬಾರದು ಅಂದುಕೊಂಡು ನೋಡಿ.

ಅಂಥ ಕೆಲಸವನ್ನು ಆಗಿಂದಾಗ್ಗೆ drop ಮಾಡಿ ನೋಡಿ. ನಿಮ್ಮಲ್ಲಿನ positive ego ಎಷ್ಟು ಉಬ್ಬಿ ನಲಿಯುತ್ತದೋ! ಅದರಿಂದ ಉಂಟಾಗುವ ಸಮಾಧಾನ, ಸಂತೋಷ ಕ್ಲಾಸ್ ಬಂಕ್ ಮಾಡುವುದರಿಂದ, ಸಿಗರೇಟಿನಿಂದ, ಬಿಯರ್ ಕುಡಿಯುವುದರಿಂದ ಖಂಡಿತ ಆಗದು. ‘ಅವರೆಲ್ಲ ಸೇದ್ತಿಲ್ವಾ? ಕುಡೀತಿಲ್ವಾ? ಅದಕ್ಕೇ ಕುಡ್ದೆ!’ ಅಂತ ಉತ್ತರ ಕೊಟ್ಟುಕೊಳ್ಳುವ ನಾವು ಹಾಗೆ ಸೇದುವ-ಕುಡಿಯುವ ಪ್ರಕ್ರಿಯೆಯಲ್ಲಿ ಜಾಣತನದಿಂದ ‘ನಾನು’ ಎಂಬ Factor ಬೇಕೆಂತಲೇ ಹೊರಗಿಟ್ಟು ಬಿಡುತ್ತೇವೆ. ನನ್ನ ಓರಗೆಯವರಿಗೆಲ್ಲ ‘ನಾನು’ ಕುಡಿಯೋದು ಕಲಿಸಿದೆ ಅಂತ ಯಾರೂ ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ನಾಲ್ಕು ಜನ ಮೆಚ್ಚುತ್ತಾರೆ ಅಥವಾ ನಮ್ಮದೇ ego ಉಬ್ಬಿ ನಲಿಯುತ್ತದೆ ಅಂತ ಗ್ಯಾರಂಟಿಯಾದಾಗ ‘ನಾನು’ ಮಾಡಿದ್ದು ಗೊತ್ತಾ-ಅಂತ ಬೀಗತೊಡಗುತ್ತೇವೆ.

ನಿಜ, ಒಮ್ಮೊಮ್ಮೆ ಯಾರ ಮೇಲೋ ತುಂಬ ಸಿಟ್ಟು ಬರುತ್ತದೆ. ಅವರು ನಮಗಿಂತ ಬಲಹೀನರು ಅಂತಲೂ ಗೊತ್ತು. ಎದ್ದು ಹೋಗಿ ಎರಡು ಒದೆ ಒದ್ದೂ ಬಿಡಬಹುದು. ಆದರೆ ಅಂಥ ಕೆಲಸ ‘ನಾನು’ ಮಾಡಬಾರದು ಅಂತ ನಿರ್ಧರಿಸಿ, ಅವಡುಗಚ್ಚಿಕೊಂಡು ಸುಮ್ಮನಾಗಿ ಬಿಡಿ. ಆಮೇಲೆ ನಿಮಗೆ ನಿಮ್ಮ ಬಗ್ಗೆಯೇ ಅದೆಂಥ ಗೌರವ ಮೂಡುತ್ತದೋ ನೋಡಿ. ಇದೆಲ್ಲ ದೊಡ್ಡಮಟ್ಟದ ತಪು್ಪ ಅಥವಾ ಅಪರಾಧಗಳಿಗೆ ಸಂಬಂಧಿಸಿದ ಮಾತೇ ಆಗಬೇಕೆಂದಿಲ್ಲ. ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಯೊಬ್ಬನ ಡೈರಿ ತೆಗೆದು ನೋಡಿ? ‘ಅಪ್ಪ-ಅಮ್ಮ ನನ್ನ ಮೇಲೆ ಇಟ್ಟ ನಂಬಿಕೆ ಉಳಿಸಿಕೊಳ್ಳಲಾಗುತ್ತಿಲ್ಲ. ನಾನು ದುಡಿದು ಅವರನ್ನು ಸಾಕಬೇಕು. ಬದಲಿಗೆ ಅವರೇ ಸಾಕುವಂತಾಗಿದೆ…’ ಎಂಬ ಧಾಟಿಯ ಸಾಲುಗಳಿರುತ್ತವೆ. ಲೆಕ್ಕಾ ಹಾಕಿದರೆ ಆರರ ಪೈಕಿ ಎರಡು ಸೆಮಿಸ್ಟರಿನಲ್ಲಿ ಫೇಲಾಗಿರುತ್ತಾನೆ! ಕ್ಲಾಸಿಗೆ ಬಂಕ್ ಹೊಡೆಯುವ ಕ್ಷಣದಿಂದ ಹಿಡಿದು, ಪುಸ್ತಕದ ಕಡೆ ತಿರುಗಿಯೇ ನೋಡದೆ ತಿಂಗಳುಗಟ್ಟಲೆ ಓತ್ಲಾ ಹೊಡೆಯುವುದರ ತನಕ- ಪ್ರತಿ ಹಂತದಲ್ಲೂ ‘ಛೇ, ನಾನು ಈ ಕೆಲಸ ಮಾಡಬಾರದು’ ಅಂದುಕೊಂಡು ಬಿಟ್ಟಿದ್ದಿದ್ದರೆ, ಡೈರಿಯಲ್ಲಿ ಅಂಥ ಸಾಲು ಹುಟ್ಟುವ ಅವಕಾಶವೇ ಇರುತ್ತಿರಲಿಲ್ಲ. ಅಲ್ವೆ!

ಹಾದರವಾದರೂ, ಲಂಚಕೋರತನವಾದರೂ, ದೌರ್ಜನ್ಯವಾದರೂ, ವಂಚನೆಯಾದರೂ-ಎಲ್ಲವೂ ಕಂಟ್ರೋಲಿಗೆ ಬರುವುದು ‘ನಾನು’ ಆ ಕೆಲಸ ಮಾಡಬಾರದು ಅಂದುಕೊಳ್ಳುವುದರಿಂದ ಮಾತ್ರ.

ಕೆಲವರಿರುತ್ತಾರೆ, ನ್ಯಾಯ -ಅನ್ಯಾಯದ ವಿಷಯ ಬಂದಾಗ ‘ಏ, ಆ ಮನುಷ್ಯ ಅನ್ಯಾಯ ಮಾಡಲ್ಲ ಕಣಯ್ಯಾ’ ಅಂತ ಎಲ್ಲರಿಂದಲೂ ಅನ್ನಿಸಿಕೊಂಡಿರುತ್ತಾರೆ. ‘ಛೇ ಛೇ, ಅವರು ದುಡ್ಡು-ಕಾಸು ಮುಟ್ಟೋರಲ್ಲ’ ಅನ್ನಿಸಿಕೊಂಡಿರುತ್ತಾರೆ. ‘ನನ್ನ ಮಗಳು ಅಂಥವಳಲ್ಲ’ ಅನ್ನಿಸಿಕೊಂಡ ಹುಡುಗಿಯರಿರುತ್ತಾರೆ. ಅವರ್ಯಾರೂ ಈ ಭೂಮಿಯ ಮೇಲೆ ವಿಶೇಷವಾಗಿ ಸೃಷ್ಟಿಯಾದ special people ಅಲ್ಲ. ಶುದ್ಧಹಸ್ತದ ಅಧಿಕಾರಿ, ಪ್ರಾಮಾಣಿಕ ಪತ್ರಕರ್ತ, ಮನೆಗೆಲಸ ಮಾಡೇನಾದರೂ ಸರಿ; ಹಾದರ ಮಾಡಲಾರೆ ಅಂತ ತೀರ್ವನಿಸಿದ ಬಡಗೃಹಿಣಿ-ಇವರೆಲ್ಲರೂ ನಮ್ಮಂಥವರೇ, ನಿಮ್ಮಂಥವರೇ. ಅವರಲ್ಲಿರುವ ಒಂದೇ ವಿಶೇಷ ಗುಣವೆಂದರೆ ‘ನಾನು’ ಆ ಕೆಲಸ ಮಾಡಬಾರದು-ಅಂತ ಬದುಕಿನ ಪ್ರತಿ ಹಂತದಲ್ಲೂ ಅಂದುಕೊಳ್ಳುವುದು. ‘ಇವತ್ತಿನ ಸಮಾಜವೇ ಹಾಗೆ, ಎಲ್ಲ ನಡೆಯುತ್ತೆ ಬಿಡಿ, ತಪು್ಪ ಮಾಡಿದೋನು ನಾನು ಒಬ್ಬನೇನಾ, ನ್ಯಾಯಾ-ನೀತಿ ಅಂತ ಹೋದರೆ ಉಪವಾಸವೇ ಗತಿ, ಅವರೆಲ್ಲ ಮಾಡ್ತಿರುವಾಗ ನಾನೊಬ್ಬ ಪ್ರಾಮಾಣಿಕವಾಗಿ ಉಳಿದರೆ ಏನುಪಯೋಗ, ನಾನೇನು ಯಾರೂ ಮಾಡದಿರೋ ತಪು್ಪ ಮಾಡಿದೀನಾ?’ ಎಂಬಂತಹ ಸಮರ್ಥನೆಗಳು ಆ ಕ್ಷಣಕ್ಕೆ ಮುದ ನೀಡಬಹುದಷ್ಟೆ. ಇಂಥ ಸಮರ್ಥನೆಗಳಲ್ಲಿ ‘ನಾನು’ ಎಂಬುದಿರುವುದೇ ಇಲ್ಲ. ‘ಅವರ್ಯಾರೋ’ ಮಾಡಿದರಾದ್ದರಿಂದ ನಾನೂ ಮಾಡಿದೆ ಎಂಬ ಗೊಣಗು, ಒಂದು excuse ಅಥವಾ ಒಂದು ಅಪಾಲಜಿ ಇರುತ್ತದೆ.

‘ನಾನು ಅಂಥ ಕೆಲಸ ಮಾಡಲ್ಲ’ ಅಂತ ನಿರ್ಧರಿಸುವುದರಲ್ಲಿ ನಿಜವಾದ positive ಆದ ego ಇರುತ್ತದೆ. ಅದು ತುಂಬ ಸಹಾಯವನ್ನೂ ಮಾಡುತ್ತದೆ. ಮೊದಮೊದಲಿಗೆ ‘ನಾನು’ ಲಂಚ ತಗೊಳಲ್ಲ ಅಂದುಕೊಂಡು ಆನಂದ ಪಡುತ್ತಿರುತ್ತೇವೆ. ಕ್ರಮೇಣ ‘ಅವನು ಹಂಗೆಲ್ಲ ದುಡ್ಡು ಮುಟ್ಟಲ್ಲ ಬಿಡಿ’ ಎಂಬ ಪ್ರಶಂಸೆ ಕಿವಿಗೆ ಬೀಳತೊಡಗುತ್ತದೆ. ಕಡೆಗೊಂದು ದಿನ, ‘ನಿಜವಾದ ಪ್ರಾಮಾಣಿಕ ಕಣಯ್ಯಾ!’ ಎಂಬ ನಮ್ಮ ಬಗೆಗಿನ ಮಾತು ನಮ್ಮ ಮಕ್ಕಳ ಕಿವಿಗೆ ಬೀಳತೊಡಗುತ್ತದೆ. ಬದುಕು ಸಾರ್ಥಕ ಅನ್ನಿಸುವುದು ಆವಾಗಲೇ!

(ಲೇಖಕರು ಹಿರಿಯ ಪತ್ರಕರ್ತರು)

2 Replies to “ಸಾರ್ಥಕತೆ ತರುವ ಆ ಮಾತು…”

  1. Nivu helo thara prathiyobbaru adre nam society li swalpa changes baruthe hage

    sir request plz astrology myth or truth bariri sir e maata manthra mooda nambike jasti agide

  2. ‘ನಾನು ಹಾಗೆ ಮಾಡಬಾರದು’, ‘ನಾನು ಅಂಥ ಕೆಲಸ ಮಾಡಲ್ಲ’ ಮತ್ತು ‘ಯಾರು ಏನಾದರೂ ಮಾಡಿಕೊಳ್ಳಲಿ, ನಾನು ಮಾತ್ರ ಅಂಥ ಕೆಲಸಗಳನ್ನು ಮಾಡುವುದಿಲ್ಲ’ ಇಂತಹ ಮಾತುಗಳು ಕೇವಲ ಮಾನಸಿಕವಾಗಿ ಧೃಡವಾಗಿರುವವರಿಗೆ ಮತ್ತು ಜೀವನದ ಮೇಲೆ ನಿಷ್ಠೆ ಇರುವವರಿಗೆ ಮಾತ್ರ ಹೆಮ್ಮೆಯಿಂದ ಹೇಳಲು ಸಾಧ್ಯ. ಇಂದಿನ ದಿನಗಳಲ್ಲಿ ಎಷ್ಟೋ ಮಾನಸಿಕ ಅಸ್ವಸ್ಥರು ಮಕ್ಕಳ ಮೇಲೆ ಅತ್ಯಾಚಾರವೆಸಗುವುದಕ್ಕೆ ಹೇಸುವುದಿಲ್ಲ, ಇಂತಹ ವಿಚಾರಗಳನ್ನು ನೋಡಿದಾಗ ಕೇಳಿದಾಗ ನಮ್ಮನ್ನು ನಾವು ಸಮಾಧಾನ ಮಾಡಿಕೊಳ್ಳುವುದೇ ದುಸ್ಸಾಹಸವಾಗಿಬಿಡುತ್ತದೆ, ಅಂತಹದರಲ್ಲಿ ಈ ಕ್ರಿಮಿಗಳಿಗೆ ಒಳ್ಳೆಯ ಸಂಸ್ಕಾರವನ್ನು ಎಲ್ಲಿ ಹೇಗೆ ಕೊಡುವುದು ಅಥವಾ ಕೊಡಿಸುವುದು ಎಂಬ ವಿಚಾರಗಳನ್ನು ಮಂಥನ ಮಾಡಲು ತುಂಬಾ ಇಚ್ಛಾಶಕ್ತಿಯುಳ್ಳವರಿಂದ ಮಾತ್ರ ಸಾಧ್ಯ. ಬಹಳ ಬೇಗ technology ಲಂಚಕೋರತನವನ್ನು ಹದ್ದುಬಸ್ತಿಗೆ ತರಬಹುದಾಗಿದೆ. ಆದರೆ ಮನುಷ್ಯನಲ್ಲಿ ವಂಚನೆಯ ಗುಣಗಳು, ಹಾದರತನ, ದೌರ್ಜನ್ಯ, ದುಷ್ಟತನ, ಅಪ್ರಾಮಾಣಿಕತೆ, ಸ್ವಾರ್ಥತೆ, ದುರಾಲೋಚನೆ, ದುರಹಂಕಾರ, ಒರಟುತನ, ಕ್ರೌರ್ಯತೆ, ಪೀಡಕತನ, ಕುಟಿಲತೆ, ಧೂರ್ತತೆ, ವಿಚಾರಶೂನ್ಯತೆ, ದುರಾಸೆಗಳನ್ನು ನಿರ್ಮೂಲನಗೊಳಿಸಬೇಕಾದರೆ ಮೂಲ ಶಿಕ್ಷಣದ ಜೊತೆ ಜೊತೆಗೆ ಸಾರ್ವಜನಿಕರಿಗೂ ವರ್ಷ ವರ್ಷವೂ ಕಾರ್ಯಾಗಾರಗಳನ್ನು ನಡೆಸಿ ಮೇಲಿಂದ ಮೇಲೆ ಸುಶಿಕ್ಷಿತಗೊಳಿಸಬೇಕಾಗುತ್ತದೆ ಮತ್ತು ಎಲ್ಲರಲ್ಲೂ ಅರಿವನ್ನು ಮೂಡಿಸಿ ಎಚ್ಚರಿಸಬೇಕಾಗುತ್ತದೆ. ಹಾಗಾದಲ್ಲಿ ಮಾತ್ರ ರಾಮರಾಜ್ಯ ಮರುಸ್ಥಾಪನೆಯಾಗಬಹುದು. ಹಾಗೆ ಬೇರೆಯವರು ನಮ್ಮನ್ನು ನೋಡಿ ಮೂಗಿನ ಮೇಲೆ ಬೆಟ್ಟು ಇಟ್ಟುಕೊಳ್ಳಬಹುದು. – ಗುಂಜ್ಮ೦ಜ (GUNJMANJA)

Comments are closed.