ಒಳ್ಳೆತನ ಕೂಡ ಪ್ರೇಮದಂತೆಯೇ ಭಾಸವಾಗುತ್ತೆ

ಮೇಡ್ ಫಾರ್ ಈಚ್ ಅದರ್!

ಕೆಲವು ಜೋಡಿಗಳು ನಿಜಕ್ಕೂ ಹಾಗಿರುತ್ತವೆ. ಅವರು ಸುಳ್ಳೇ ರೇಗುವುದಿಲ್ಲ. ಜೋರಾಗಿ ಮಾತಾಡುವುದಿಲ್ಲ. ಹತ್ತು ಮಂದಿ ಕೆಟ್ಟ ಕುತೂಹಲದಿಂದ ನೋಡುವಂತೆ ವರ್ತಿಸುವುದಿಲ್ಲ. ತಮ್ಮ ಗೆಳೆತನವನ್ನು ಮನೆಮಂದಿಯಿಂದ, ಗೆಳೆಯರಿಂದ ಮುಚ್ಚಿಟ್ಟಿರುವುದೂ ಇಲ್ಲ. ಅವನು ಅವಳಿಗೋಸ್ಕರ ಎಂದು ಬದುಕುತ್ತಿರುತ್ತಾನೆ. ಅವಳನ್ನು ಮೆಚ್ಚಿಸಲೆಂದೇ ಓದುತ್ತಿರುತ್ತಾನೆ. ಅವಳಿಗಿಷ್ಟ ಎಂಬ ಕಾರಣಕ್ಕೇ ಸಾಲ ಮಾಡಿ ಬೈಕು ಖರೀದಿಸುತ್ತಾನೆ. ಅವಳಿಗೆ ಇಷ್ಟವಾಗೋದಿಲ್ಲ ಎಂಬ ಕಾರಣದಿಂದಲೇ ಸಿಗರೇಟು ಬಿಟ್ಟಿರುತ್ತಾನೆ. ಶಿಸ್ತಿನ ಜೀವನಕ್ಕೆ ಒಗ್ಗಿಕೊಂಡಿರುತ್ತಾನೆ. ಅವಳು ಮಾತಿನ ಮಧ್ಯೆ-‘ಮದುವೆಯಾದ ಎರಡೇ ವರ್ಷದಲ್ಲಿ ಮನೆ ಕಟ್ಟಿಸಿಬಿಡೋಣ’ ಅಂದರೆ ಪ್ಯಾದೆಯಂತೆ ಅದಕ್ಕೂ ಒಪ್ಪಿರುತ್ತಾನೆ. ಭೂಪ, ಅಷ್ಟಕ್ಕೇ ಸುಮ್ಮನಾಗದೆ, ಹತ್ತು ಮಂದಿಯ ಮುಂದೆ ತನ್ನ ಪ್ರೇಮಾಯಣದ ಕತೆಯನ್ನು ಹೇಳಿಕೊಂಡಿರುತ್ತಾನೆ. ‘ನಾವಿಬ್ರೂ ಒಟ್ಟಿಗೇ ದೇವಸ್ಥಾನಕ್ಕೆ ಹೋಗಿ ಬಂದಿದೀವಿ ಕಣ್ರೋ. ಅವಳ ಹಣೆಗೆ ನಾನು ಕುಂಕುಮ ಇಟ್ಟಿದ್ದೀನಿ. ಅಂದ ಮೇಲೆ ನಮ್ದು ಮದುವೆ ಆಗೇ ಹೋಯ್ತು ಎಂದರ್ಥ’ ಎಂದೂ ಕೊಚ್ಚಿಕೊಂಡಿರುತ್ತಾನೆ.

ಈ ಕಡೆ ಹುಡುಗಿಯಾದರೂ ಅಷ್ಟೇ- ಅವಳಿಗೂ ಅವನೇ ಪ್ರಪಂಚ. ಅವನಿಲ್ಲದ ಬದುಕನ್ನು ಅವಳು ಕನಸಲ್ಲೂ ಕಲ್ಪಿಸಿಕೊಂಡವಳಲ್ಲ. ‘ಬದುಕು ಅನ್ನೋದಿದ್ರೆ ಅವನ ಜೊತೇಲಿ. ಅವನು ದುಡಿದ್ರೂ ಸೈ. ಒಂದು ವೇಳೆ ಆತ ದುಡಿಮೆಗೆ ಹೋಗಲಿಲ್ಲ ಅಂದ್ರೆ ನಾನೇ ದುಡೀತೇನೆ. ಗಂಡ ಅನ್ನಿಸಿಕೊಂಡವನನ್ನು ಸಾಕಿದ್ರೆ ತಪ್ಪೇನು’ ಎಂದೂ ಮಾತಾಡುತ್ತಾಳೆ. ಮದುವೆಯ ನಂತರದ ಬದುಕಿನ ಬಗ್ಗೆ ಹತ್ತು ಮಂದಿ ಗೆಳತಿಯರೊಂದಿಗೆ ಹೇಳಿಕೊಂಡು ಖುಷಿಪಟ್ಟಿರುತ್ತಾಳೆ.

ಆದರೆ, ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕಾಗಿ ಆ ಮಧುರ ಸಂಬಂಧ ದಿಢೀರನೆ ಕಿತ್ತು ಹೋಗುತ್ತದೆ. ಪ್ರೇಮ ರದ್ದಾಗುತ್ತದೆ. ಆಟ ಕೊನೆಯಾಗುತ್ತದೆ. ಮಾತು ನಿಂತುಹೋಗುತ್ತದೆ. ಅದುವರೆಗೂ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ರ್ಪಾನ ಹೊರಗೆ ಮೂಲೆಯೊಂದರಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಹರಟೆಗೆ ಸಿಗುತ್ತಿದ್ದ ಹುಡುಗಿ; ಹುಡುಗನ ಕೈ ಬೆರಳುಗಳೊಂದಿಗೆ ಆಟವಾಡುತ್ತಿದ್ದ ಹುಡುಗಿ ದಿಢೀರನೆ ವರಸೆ ಬದಲಿಸುತ್ತಾಳೆ. ಅದೇ ದಾರಿಯಲ್ಲಿ ಕಾದು ನಿಂತ ಹುಡುಗನತ್ತ ತಿರುಗಿ ಕೂಡ ನೋಡದೆ ಎಕ್ಸ್​ಪ್ರೆಸ್ ವೇಗದಲ್ಲಿ ಸ್ಕೂಟಿ ಓಡಿಸುತ್ತಾಳೆ. ಸ್ವಲ್ಪ ಬುದ್ಧಿವಂತೆಯಾಗಿದ್ದರೆ, ಸೀದಾ ಹುಡುಗನ ಬಳಿ ಬಂದು, ಕೈ ಮುಗಿದು ‘ನಂಗೆ ಯಾಕೋ ಈ ಸಂಬಂಧ ಇಷ್ಟವಾಗ್ತಾ ಇಲ್ಲ. ಹಾಗಾಗಿ ಎದ್ದು ಹೋಗ್ತಾ ಇದೀನಿ. ತಪು್ಪ ತಿಳ್ಕೋಬೇಡ. ಬೇಸರ ಮಾಡ್ಕೋಬೇಡ. ಖುಷಿಯಾಗಿರು. ನೆಮ್ಮದಿಯಾಗಿರು. ಬದುಕಲ್ಲಿ ಮಹತ್ವದ್ದನ್ನು ಸಾಧಿಸು. ನಾನು ಅದನ್ನು ದೂರದಿಂದ್ಲೇ ನೋಡಿ ಖುಷಿಪಡ್ತೀನಿ’ ಎಂದು ವೇದಾಂತದ ಮಾತಾಡಿ ಹೋಗಿಬಿಡುತ್ತಾಳೆ.

ಹೀಗೆ, ಬೇಡ ಅನ್ನಿಸಿದ ಸಂಬಂಧಗಳನ್ನು ದೂರ ಮಾಡಿಕೊಳ್ಳುವುದರಲ್ಲಿ ಹುಡುಗರೇನೂ ಕಡಿಮೆಯಿಲ್ಲ. ಒಂದು ಕಾಲದಲ್ಲಿ ‘ನೀನಿಲ್ಲ ಅಂದ್ರೆ ಸತ್ತೇ ಹೋಗ್ತೀನಿ’ ಅನ್ನುತ್ತಿದ್ದ ಹುಡುಗನೇ-‘ಮನೇಲಿ ಕಷ್ಟ ಇದೆ. ತಂಗಿಗೆ ಮದುವೆಯಾಗಿಲ್ಲ. ಅಪ್ಪ ಹಾರ್ಟ್ ಪೇಷೇಂಟು. ನಮ್ಮಮ್ಮ ನಿನಗೆ ಹೊಂದಿಕೆಯಾಗಲ್ಲ. ಹಾಗಾಗಿ ನಾವು ದೂರ ಆಗೋಣ’ ಎಂದೇ ಬಿಡುತ್ತಾರೆ.

ಹೀಗೆ, ಬದುಕೆಂದರೆ ಇಷ್ಟೇ ಎಂದು ಭಾವಿಸಿರುತ್ತೇವಲ್ಲ? ಅದು ಕೈತಪ್ಪಿ ಹೋದಾಗ ಆಗುವ ನೋವನ್ನು ಭರಿಸುವುದು ಕಷ್ಟ. ಆ ಸಂದರ್ಭದಲ್ಲಿ ಹೆಚ್ಚಿನವರು ಬೇರೊಂದು ಪ್ರೇಮದೆಡೆಗೆ, ಬೇರೊಂದು ಸಂಬಂಧದೆಡೆಗೆ, ಬೇರೊಂದು ಗೆಳೆತನದೆಡೆಗೆ ಕೈ ಚಾಚಿ ಬಿಡುತ್ತಾರೆ. ಆ ಮೂಲಕ ಅಲ್ಲಿ ಕಳೆದುಕೊಂಡಿದ್ದನ್ನು ಇಲ್ಲಿ ಮರಳಿ ಪಡೆಯುವ ಹಂಚಿಕೆ ಹೂಡುತ್ತಾರೆ. ಕೈ ಕೊಟ್ಟ ಹುಡುಗನ ಮೇಲೆ ಸಿಟ್ಟಾದ ಹುಡುಗಿಯರಂತೂ, ಹೊಸ ಬಾಯ್ಫ್ರೆಂಡ್ ಬೈಕ್​ನಲ್ಲಿ ಅವನಿಗೆ ಅಂಟಿಕೊಂಡು ಕುಳಿತು, ಇವನಿಗೆ ಕಾಣಿಸುವಂತೆಯೇ ಹತ್ತಾರು ಬಾರಿ ಓಡಾಡಿ ಖುಷಿಪಡುತ್ತಾರೆ. ಆದರೆ, ನೆನಪಿರಲಿ: ಇಂಥ ಬಿಡುಬೀಸಾದ ವರ್ತನೆ, ತುಂಬ ಸಂದರ್ಭದಲ್ಲಿ ಅನಾಹುತಕ್ಕೆ, ತಪು್ಪ ತಿಳಿವಳಿಕೆಗೆ ಕಾರಣವಾಗಿ ಬಿಡುತ್ತದೆ. ಪರಿಣಾಮ, ಆಗಷ್ಟೇ ಶುರುವಾದ ಹೊಸ ಪ್ರೇಮವೂ ದಿಢೀರನೆ ಹಳಸಿ ಹೋಗಿ, ಹಳೆಯದರ ಜೊತೆಗೆ ಹೊಸ ನೋವೂ ಕೈ ಹಿಡಿಯುತ್ತದೆ.

ಮೇಲೆ ವಿವರಿಸಿದಂಥ ರೀತಿಯ ಸಂಬಂಧಕ್ಕಿಂತಲೂ ಡಿಫರೆಂಟ್ ಅನ್ನಿಸುವ ಇನ್ನೊಂದು ಬಾಂಧವ್ಯವೂ ಇದೆ. ತುಂಬ ಸಂದರ್ಭದಲ್ಲಿ ಎದುರು ಮನೆಯ ಹುಡುಗಿ, ಸ್ವಂತ ಅತ್ತೆಯ ಮಗ, ತಂಗಿಯ ಗೆಳತಿ, ಮಹಡಿ ಮನೆಯ ಆಂಟಿ, ಕಾಲೇಜಿನ ಸಹಪಾಠಿ… ಇವರೆಲ್ಲ ತುಂಬ ಮುಕ್ತವಾಗಿ ಮಾತಾಡುತ್ತಾರೆ. ವಿಪರೀತ ಅನ್ನಿಸುವಷ್ಟು ಹಚ್ಚಿಕೊಳ್ಳುತ್ತಾರೆ. ಎರಡೇ ಎರಡು ದಿನ ಸಿಗದೇ ಹೋದ್ರೆ-‘ಅಯ್ಯಪ್ಪ ನಂಗಂತೂ ತಲೆಚಿಟ್ಟು ಹಿಡಿದು ಹೋಗಿತ್ತು. ನೀನು ಇಲ್ದೇ ಇದ್ರೆ ಬದುಕು ಕಷ್ಟ-ಕಷ್ಟ’ ಅಂದಿರುತ್ತಾರೆ. ದೇವಸ್ಥಾನಕ್ಕೆ ಕರೆದೊಯ್ದು ಅರ್ಚನೆ ಮಾಡಿಸಿರುತ್ತಾರೆ. ಕುಟುಂಬದ ಗ್ರೂಪ್ ಫೋಟೋ ಸೆಷೆನ್​ನಲ್ಲಿ ಒತ್ತಿಕೊಂಡು ನಿಂತಿರುತ್ತಾರೆ ಮತ್ತು ಮೇಲಿಂದ ಮೇಲೆ ಕಣ್ಣು ಹೊಡೆದಿರುತ್ತಾರೆ.

ಉಹುಂ, ಅಲ್ಲಿ ಆಸೆ ಇರುವುದಿಲ್ಲ. ‘ಐ ಲವ್ ಯೂ’ ಎಂಬಂಥ ಭಾವವಿರುವುದಿಲ್ಲ. ಬದಲಿಗೆ ಅಲ್ಲಿ ಶುದ್ಧ ಸ್ನೇಹವಿರುತ್ತದೆ, ಗೆಳೆತನವಿರುತ್ತದೆ. ಒಡಹುಟ್ಟಿದವರಿಂದ ಬಯಸುವಂಥ ಮಮತೆ ಇರುತ್ತದೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ಮುಕ್ತವಾಗಿ ಮಾತಾಡುವುದನ್ನು, ‘ನೀನಿಲ್ಲದಿದ್ರೆ ತುಂಬ ಹಿಂಸೆ ಅನಿಸುತ್ತೆ’ ಎಂಬ ಆರ್ದ್ರತೆಯನ್ನು ತುಂಬ ಜನ ತಪ್ಪಾಗಿಯೇ ಅರ್ಥ ಮಾಡಿಕೊಳ್ಳುತ್ತಾರೆ. ನಂತರ-ಮೊದಲೇ ನಿರ್ಧರಿಸಿದವರಂತೆ ಅದೊಂದು ದಿನ ಹೋಗಿ ಒಗರೊಗರು, ಒರಟೊರಟು ದನಿಯಲ್ಲಿ ‘ಐ ಲವ್ ಯೂ’ ಅಂದುಬಿಡುತ್ತಾರೆ. ಪರಿಣಾಮ, ಒಂದು ಮಧುರವಾದ ಸಂಬಂಧ ವಿನಾಕಾರಣ ಸತ್ತುಹೋಗುತ್ತದೆ. ಆ ನಂತರದ ಯಾತನೆ ಬಿಡಿ, ಅದು ಬದುಕಿಡೀ ನಮ್ಮ ಜೊತೆಗೇ ಇರುತ್ತದೆ, ತೋಳ ಮೇಲಿನ ಮಚ್ಚೆಯಂತೆ.

ಇಂಥ ಯಡವಟ್ಟಿನ ಕೈಗೆ ಬುದ್ಧಿ ಕೊಡದೇ ಬದುಕುವುದಿದೆಯಲ್ಲ- ಅದೇ ಜೀವನ Try that.

(ಲೇಖಕರು ಹಿರಿಯ ಪತ್ರಕರ್ತರು)

2 Replies to “ಒಳ್ಳೆತನ ಕೂಡ ಪ್ರೇಮದಂತೆಯೇ ಭಾಸವಾಗುತ್ತೆ”

  1. ಹೌದು ಎಷ್ಟೋ ಬಾರಿ ಹುಡುಗಿಯರು ಹುಡುಗರಿಗೆ ಚೆನ್ನಾಗಿ ಸಲಿಗೆ ಕೊಟ್ಟು, ಮುಕ್ತವಾಗಿ whatsapp ನಲ್ಲಿ chat ಮಾಡಿ, ಇನ್ನೇನು Valentine’s day ಹತ್ತಿರ ಬಂತು ಅಂದಾಗ ಕಾದು ಕುಳಿತು, ಹುಡುಗರ I Love You ಬಂದಕೂಡಲೇ ವಿಚಿತ್ರವಾಗಿ ಆಡಿ, ಮಾತೇ ಬಿಟ್ಟುಬಿಡುತ್ತಾರೆ. ಎಷ್ಟೋ ಬಾರಿ ಸ್ನೇಹವನ್ನು ಸಂಬಂಧವಾಗಿ ಬೆಸೆಯಲು ಸರಿಯಾದ ಮಾರ್ಗವೇ ತೋಚದಂತಾಗುತ್ತದೆ, ಯಾರು ಮುಂದುವರಿಯಬೇಕು ? ಹೇಗೆ ಮುಂದುವರಿಯಬೇಕು ? ಇಂದೊಂದು ಎಂದಿಗೂ ಬಗೆಹರಿಯದ ಜಟಿಲವಾದ ಸಮಸ್ಯೆಯಾಗೆ ಉಳಿದು ಬಿಟ್ಟಿದೆ. – ಗುಂಜ್ಮ೦ಜ (GUNJMANJA)

    1. ಕರೆಕ್ಟ್ ಆಗಿ ಹೇಳಿದ್ರಿ ಮಂಜ ಅವರೇ.. ಅದೂ ಅಲ್ಲದೆ ಹೆಚ್ಚಿನ ಸ್ತ್ರೀಪುರುಷ ಸ್ನೇಹಗಳು.. ಹಾಸಿಗೆಯಲ್ಲೇ ಕೊನೆಯಾಗುತ್ತವೆ.. ಎಲ್ಲೋ 4-5 ಪ್ರತಿಶತ ಸರಿ ಇರಬಹುದು.. ಹೀಗಿರುವಾಗ ಹಿಂದಿನವರ ಆದರ್ಶ ಗಳನ್ನ ಪಾಲಿಸೋದೆ ಒಳ್ಳೇದಲ್ವಾ

Leave a Reply

Your email address will not be published. Required fields are marked *