ಪಕ್ಕದಲ್ಲೇ ಇರುವ ಆದರ್ಶಪುರುಷ ಕಾಣನೇಕೆ?

ದೊಡ್ಡ ದೊಡ್ಡ ಲೇಖಕರು, ಚಿತ್ರಕಾರರು, ಸಂಗೀತಕಾರರು ಅವರವರ ಮನೆಗಳಲ್ಲೇ ನಿಕೃಷ್ಟರಾಗಿ ಬಿಟ್ಟಿರುವುದನ್ನು ನೋಡಿದ್ದೇನೆ. ಕಾಲಕಸದಂತಾಗಿರುವುದನ್ನು ನೋಡಿದ್ದೇನೆ. ಎಸ್ಡಿ ಬರ್ಮನ್​ನನ್ನು ದೇವರಂತೆ ಆರಾಧಿಸುವ ಹುಡುಗನಿಗೆ ತನ್ನ ತಂದೆ ಮದನ್ ಮೋಹನ್ ಎಂಥ ಅಪರೂಪದ ಸಂಗೀತಗಾರ ಎಂಬುದು ಗೊತ್ತೇ ಇರಲಿಲ್ಲ.

ಸಲುಗೆ!

ಅದು ಚೆಂದ. ಅದು ನಿಷ್ಕಳಂಕ ಗೆಳೆತನದಲ್ಲಿರುತ್ತದೆ. ಅಕ್ಕರೆಯಿಂದ ನೋಡಿಕೊಳ್ಳುವ ಅತ್ತಿಗೆಯೊಂದಿಗಿರುತ್ತದೆ. ಪ್ರೀತಿಸುವ ವೃದ್ಧ ಮೇಷ್ಟ್ರೊಂದಿಗಿರುತ್ತದೆ. ನಮಗಿಂತ ತುಂಬ ದೊಡ್ಡವನಾದ ಸೋದರಮಾವನೊಂದಿಗಿರುತ್ತದೆ. ನಿತ್ಯ ಫೋನಿಗೆ ಸಿಗುವ ನಮ್ಮ ಮೆಚ್ಚಿನ ಲೇಖಕನೊಂದಿಗಿರುತ್ತದೆ. ಕಷ್ಟ, ಸುಖ ಹೇಳಿಕೊಳ್ಳುತ್ತಲೇ ನಮ್ಮ ಕಷ್ಟಗಳಿಗಾಗುವ ನಮ್ಮ ಕೆಲಸದವರೊಂದಿಗಿರುತ್ತದೆ. ಅದು ನಿಜಕ್ಕೂ ಚೆಂದ. ಲಿಮಿಟ್ಟು ಮೀರದ ಸಲುಗೆಗಳು ನಿಜಕ್ಕೂ ನಿರುಪದ್ರವಕಾರಿ.

ಆದರೆ ಸದರ? ಸಣ್ಣಗೆ ಬೆಳೆಯುವ ಸಲುಗೆ ಯಾವಾಗ ಸದರಕ್ಕೆ ತಿರುಗುತ್ತದೆ ಅಂತ ಹೇಳುವುದು ಕಷ್ಟ. ಸದರ ಬೆಳೆದ ಸಂಬಂಧದಲ್ಲಿ ಗೌರವದ ಸಸಿ ಚಿಗುರುವುದು ಅಸಾಧ್ಯ. ಸಲುಗೆ ಪ್ರೀತಿಯ ಬಂಧ ಕಟ್ಟುತ್ತದೆ. ಸದರ ಸಂಬಂಧದ ಸ್ವಾಸ್ಥ್ಯ ಕೆಡಿಸುತ್ತದೆ. ಹೆಚ್ಚಿನ ಸಲ ಆಗುವುದೇ ಇದು. ಹೆಂಡತಿಯೊಂದಿಗೆ ಸಲುಗೆ ಅದೆಷ್ಟು ವರ್ಷಗಳಾದರೂ ಕಹಿಗೆ ತಿರುಗುವುದಿಲ್ಲ. ಗಂಡನ ಬಗ್ಗೆ ಬೆಳೆಯುವ ಸದರ ಇಡೀ ದಾಂಪತ್ಯದ ಆಟ ಕೆಡಿಸಿಬಿಡುತ್ತದೆ.

ಒಂದು ಸಲ ನಿಮ್ಮ ಮಗನನ್ನೋ, ತಂಗಿಯನ್ನೋ, ಕಿರಿಯ ಮಿತ್ರನನ್ನೋ ಕರೆದು ಕೇಳಿ: ‘ನಿನ್ನ ದೃಷ್ಟಿಯಲ್ಲಿ ನಿನ್ನ ಜೀವನದ ಆದರ್ಶ ಪುರುಷ ಅಥವಾ ಆದರ್ಶ ಸ್ತ್ರೀ ಯಾರು?’

ಗಾಂಧಿ, ನೆಹರೂ, ಭಗತ್, ಸುಭಾಷ್, ಥೆರೇಸಾ, ಕಿರಣ್ ಬೇಡಿ, ಮೇಧಾ- ಇತ್ಯಾದಿ. ಇವರಲ್ಲಿ ಅನೇಕರು ಬದುಕಿಲ್ಲ. ಬದುಕಿರುವವರ ಪೈಕಿ ಅನೇಕರನ್ನು ಇವರು ನೋಡಿಲ್ಲ. ನೋಡದೇನೇ ಒಬ್ಬ ವ್ಯಕ್ತಿಯನ್ನು ‘ರೋಲ್ ಮಾಡೆಲ್’ ಅಂತ ಒಪ್ಪಿಕೊಂಡು ಬಿಡುವುದು ಒಂದು ವಯಸ್ಸಿನ ಅಭ್ಯಾಸ. ನಮ್ಮೆಲ್ಲರಿಗೂ ಅಂಥದೊಂದು ರೋಲ್ ಮಾಡೆಲ್ ಇರುತ್ತದೆ. ವಯಸ್ಸು ಬದಲಾಗುತ್ತ ಆಗುತ್ತ ಆದರ್ಶ ಪುರುಷರೂ ಬದಲಾಗುತ್ತ ಹೋಗುತ್ತಾರೆ. ಆದರ್ಶಗಳೂ ಬದಲಾಗುತ್ತ ಹೋಗುತ್ತವೆ. ಆದರೆ ಗಂಭೀರವಾಗಿ ಯೋಚಿಸಿ ನೋಡಿ. ನಾವು ಒಮ್ಮೆಯೂ ನೋಡಿರದಂತಹ, ಯಾವುದೋ ಕಾಲಮಾನದ ಒಬ್ಬ ಆದರ್ಶ ಪುರುಷನ ಅಸ್ಪಷ್ಟ ಚಿತ್ರಣಕ್ಕಿಂತ ನಮ್ಮ ಅಕ್ಕಪಕ್ಕದಲ್ಲೇ ಇರುವ, ನಮ್ಮ ಕಣ್ಣಿಗೆ ನಿತ್ಯ ಕಾಣುವ, ತುಂಬ ಸಾಮಾನ್ಯರಾದ ಮನುಷ್ಯರು ನಮಗೆ ರೋಲ್ ಮಾಡೆಲ್​ಗಳಾಗಬೇಕಿತ್ತಲ್ಲವೇ?

ಪ್ರಾಮಾಣಿಕತೆಯಿಂದ ಇಡೀ ದಿನ ಮಕ್ಕಳಿಗೆ ಪಾಠ ಹೇಳುವ ಪಕ್ಕದ ಮನೆಯ ಮೇಷ್ಟ್ರು, ಯಾರನ್ನೂ ವಂಚಿಸದೆ-ಯಾವ ತಪ್ಪೂ ಮಾಡದೆ ತನ್ನ ಕೈಲಾದಷ್ಟು ಪರೋಪಕಾರ ಮಾಡುತ್ತ ಬದುಕಿರುವ ಎದುರು ಮನೆಯ ಅಜ್ಜಿ, ದಿನವಿಡೀ ಶ್ರಮಪಟ್ಟು ದುಡಿಯುವ ಪಂಕ್ಚರ್ ಷಾಪಿನ ಮಧ್ಯವಯಸ್ಕ ಕೆಲಸಗಾರ, ಎಂದಿಗೂ ಹೆಂಡತಿಯನ್ನು ಬಡಿಯದ ನಮ್ಮ ಬೀದಿಯ ಜಾಡಮಾಲಿ ಇವರೆಲ್ಲ ನಮ್ಮ ಕಣ್ಣಿಗೇಕೆ ಆದರ್ಶ ವ್ಯಕ್ತಿಗಳಾಗಿ ಕಾಣಿಸುವುದಿಲ್ಲ?

ಏಕೆಂದರೆ, ಇವರು ಮಾಡುವ ನಿತ್ಯದ ಕೆಲಸಗಳು ಎಷ್ಟೇ ಪ್ರಾಮಾಣಿಕವಾಗಿದ್ದರೂ, ಅವು ನಮ್ಮ ಕಣ್ಣಿಗೆ ಆದರ್ಶಯುತ ಕೆಲಸಗಳಾಗಿ ಕಾಣುವುದಿಲ್ಲ. ಪಾಠ ಹೇಳುವುದು, ಪಂಕ್ಚರ್ ಹಾಕುವುದು, ವಿನಾಕಾರಣ ಯಾರಿಗೋ ನೆರವಾಗುವುದು, ಒಳ್ಳೆಯ ಗಂಡನಾಗಿರುವುದು, ಬೀದಿಪಕ್ಕದ ಮರಕ್ಕೆ ನೀರು ಹೊತ್ತಾಕುವುದು-ಇವೆಲ್ಲ ಅಗಾಧವಾದ ಕೆಲಸಗಳು ಅಂತ ನಮಗೆ ಅನ್ನಿಸುವುದೇ ಇಲ್ಲ. ಅದನ್ನೇನು, ಯಾರು ಬೇಕಾದರೂ ಮಾಡ್ತಾರೆ ಬಿಡಿ ಎಂಬ ಉದಾಸೀನ. ಆದರೆ ‘ನಾವು’ ಮಾಡುತ್ತಿದ್ದೇವಾ? ಮಾಡಲು ಸಾಧ್ಯವಾ? ಉಹುಂ, ನಾವು ಕೇಳಿಕೊಳ್ಳುವುದೇ ಇಲ್ಲ. ಪ್ರಾಮಾಣಿಕವಾದ ಚಿಕ್ಕಪುಟ್ಟ ಕೆಲಸಗಳ ಬಗ್ಗೆ, ವೃತ್ತಿಗಳ ಬಗ್ಗೆ, ಮನುಷ್ಯರ ಬಗ್ಗೆ ನಾವು ಗೌರವ ಉಳಿಸಿಕೊಂಡಿರುವುದಿಲ್ಲವಾದ್ದರಿಂದ ನಮಗೆ ಅವರ್ಯಾರೂ ರೋಲ್ ಮಾಡೆಲ್​ಗಳಂತೆ ಕಾಣುವುದಿಲ್ಲ. ಅವರೆಡೆಗೊಂದು ಸದರ ಬೆಳೆದಿರುತ್ತದೆ. ‘ಇದೇ ಎಲಿಮೆಂಟರಿ ಸ್ಕೂಲು ಮೇಷ್ಟ್ರು ತಾನೇ?’ ಎಂಬ ಅಸಡ್ಡೆ.

ದೊಡ್ಡ ದೊಡ್ಡ ಲೇಖಕರು, ಚಿತ್ರಕಾರರು, ಸಂಗೀತಕಾರರು ಅವರವರ ಮನೆಗಳಲ್ಲೇ ನಿಕೃಷ್ಟರಾಗಿ ಬಿಟ್ಟಿರುವುದನ್ನು ನೋಡಿದ್ದೇನೆ. ಕಾಲಕಸದಂತಾಗಿರುವುದನ್ನು ನೋಡಿದ್ದೇನೆ. ಎಸ್ಡಿ ಬರ್ಮನ್​ನನ್ನು ದೇವರಂತೆ ಆರಾಧಿಸುವ ಹುಡುಗನಿಗೆ ತನ್ನ ತಂದೆ ಮದನ್ ಮೋಹನ್ ಎಂಥ ಅಪರೂಪದ ಸಂಗೀತಗಾರ ಎಂಬುದು ಗೊತ್ತೇ ಇರಲಿಲ್ಲ. ಲೋಕವೆಲ್ಲ ಮೆಚ್ಚಿಕೊಳ್ಳುವಂತೆ ಲೇಖನ ಬರೆಯುವ ಪತ್ರಕರ್ತ, ಅವನ ಹೆಂಡತಿಯ ದೃಷ್ಟಿಯಲ್ಲಿ ಶುದ್ಧ ಅವಿವೇಕಿ. ಕೆಲವೊಮ್ಮೆ ತೀರ ಹತ್ತಿರ ಇರುವುದರಿಂದಲೇ ಇಂಥದೊಂದು ಅಸಡ್ಡೆ-ಸದರ ಬೆಳೆದುಬಿಟ್ಟಿರಬಹುದಾ ಅಂತಲೂ ಅನ್ನಿಸುತ್ತದೆ. ನಾವು ಯಾವತ್ತೂ ನೋಡಿರದ ಗಾಂಧಿ ತೀರ ಸಾಯುವ ಮುನ್ನ ತಮ್ಮ ಬ್ರಹ್ಮಚರ್ಯದ ತಾಕತ್ತು ಪರೀಕ್ಷಿಸಿಕೊಳ್ಳಲು ಪುಟ್ಟ ಹುಡುಗಿಯರನ್ನು ಬೆತ್ತಲೆ ಮಲಗಿಸಿಕೊಳ್ಳುತ್ತಿದ್ದರು. ಅವೆಲ್ಲವನ್ನೂ ಮುಕ್ತವಾಗಿ ಹೇಳಿಕೊಂಡರಾದ್ದರಿಂದ ಅವರು ಮಹಾತ್ಮರಾದರು. ಅರೆರೇ, ನಮ್ಮ ಪಕ್ಕದ ಮನೆಯ ಸ್ಕೂಲು ಮೇಷ್ಟ್ರು ಯಾವತ್ತಿಗೂ ಹೆಂಡತಿಯನ್ನು ಬಡಿಯಲಿಲ್ಲ. ಯಾವತ್ತೂ ತನ್ನ ಬ್ರಹ್ಮಚರ್ಯದ ಪರೀಕ್ಷೆಗಾಗಿ ಕಂಡವರ ಮಕ್ಕಳನ್ನು ಬೆತ್ತಲೆ ಮಲಗಿಸಿಕೊಳ್ಳಲಿಲ್ಲ. ಆತ ಗಾಂಧಿಯನ್ನು ಮೆಚ್ಚುತ್ತಲೇ, ಇವ್ಯಾವ ಪ್ರಯೋಗಗಳನ್ನೂ ಮಾಡದೆ, ‘ಗಾಂಧಿಯಂತೆ’ ಬದುಕಿಬಿಟ್ಟ. ಆದರೂ ಆತ ನಮಗೆ ರೋಲ್ ಮಾಡೆಲ್ ಆಗಲಿಲ್ಲ. ಆತನೊಳಗಿನ ಗಾಂಧಿ ನಮಗೆ ಕಡೆತನಕ ಕಾಣಲಿಲ್ಲ. ಏಕೆಂದರೆ ಆತ ನಮ್ಮ ಪಕ್ಕದ ಮನೆಯಲ್ಲೇ ಇದ್ದ ಮತ್ತು ಪ್ರತಿನಿತ್ಯ ಕಣ್ಣಿಗೆ ಕಾಣುತ್ತಿದ್ದ. ಗೌರವ ಬೆಳೆಯಬೇಕಾದ ಜಾಗದಲ್ಲಿ ಸದರ ಬೆಳೆಯಿತು. ಇದಲ್ಲವೇ ವಿಪರ್ಯಾಸ?

ನೋಡದ ಗುರುವು ದೂರದ ಬೆಟ್ಟದ ಹಾಗೆ. ಅವನೆಡೆಗೊಂದು ವಿನಾಕಾರಣದ ಪೂಜ್ಯಭಾವ ಬೆಳೆದು ಬಿಟ್ಟಿರುತ್ತದೆ. ನನ್ನಲ್ಲಿಗೆ ಬರುವ ಅನೇಕ ಹುಡುಗರು, ‘ಹೇಗೆ ನೀವು ಖುಷ್ವಂತ್​ರನ್ನು ದ್ರೋಣ ಅಂದುಕೊಂಡಿದ್ದೀರೋ, ಹಾಗೆ ನಾನು ನಿಮ್ಮ ಏಕಲವ್ಯನಾಗಿ ಬೆಳೆಯಲು ಬಯಸುತ್ತೇನೆ’ ಅನ್ನುತ್ತಾರೆ. ಹಾಗಂತ ಪತ್ರ ಬರೆಯುತ್ತಾರೆ. ವಿಪರೀತದ ಕಲ್ಪನೆಗಳನ್ನಿಟ್ಟುಕೊಂಡು ನನ್ನಲ್ಲಿಗೆ ಬರುತ್ತಾರೆ. ಬರುವ ತನಕ ಅವರಲ್ಲಿರುವ ಚಿತ್ರವೇ ಬೇರೆ; ಬಂದ ಮೇಲೆ ಅವರಿಗೆ ಅನ್ನಿಸುವುದೇ ಬೇರೆ! ಫೋನ್​ನಲ್ಲಿ ದನಿ ಕೇಳಿದ ಎಷ್ಟೋ ಜನ ‘ಏನ್ಸಾರ್, ಬರೆಯೋದು ನೋಡಿದರೆ ಅಷ್ಟು harsh ಆಗಿರುತ್ತೆ. ದನಿ ಮಾತ್ರ ಎಷ್ಟೊಂದು ಮೃದುವಾಗಿದೆ’ ಅನ್ನುತ್ತಾರೆ. ಅವರಿಗೆ ನನ್ನ ಫೋಟೋ ಮಾತ್ರ ಕಾಣಿಸಿರುತ್ತದೆ. ನನ್ನ ಬರವಣಿಗೆಯ ತೀವ್ರತೆ ಮಾತ್ರ ಅನುಭೂತಿಗೆ ಬಂದಿರುತ್ತದೆ. ಆಹಾ, ಎಂಥ ಧೈರ್ಯ! ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಬಲ್ಲ ಎದೆಗಾರಿಕೆಯಿದೆ ಅಂತೆಲ್ಲ ಮೆಚ್ಚುಗೆ ಬೆಳೆಸಿಕೊಂಡಿರುತ್ತಾರೆ. ಅವರಿಗೆ ನಾನು ಅಗೋಚರ ಆಕೃತಿ. ಗೊತ್ತಿದ್ದೂ ಅಪರಿಚಿತನಾಗಿಯೇ ಉಳಿದುಹೋದ ಮನುಷ್ಯ. ಒಬ್ಬ ದಾರಿ ತಪ್ಪಿದ, ಫೇಲಾದ, ತಿರಸ್ಕೃತಗೊಂಡ ಹುಡುಗ ‘ಯಾವತ್ತೋ ಒಂದಿನ ರವಿ ಥರಾ ನಾನೂ ಯಶಸ್ವಿಯಾಗ್ತೇನೆ’ ಅಂದುಕೊಂಡು ಬಿಡುತ್ತಾನೆ.

ಅವನಿಗೆ ಗೊತ್ತಿಲ್ಲ. ಅವನ ತಂದೆ ನನಗಿಂತಲೂ ಒಳ್ಳೆಯವರು. ಪ್ರಾಮಾಣಿಕರು. ಕಷ್ಟಜೀವಿ. ಅವರು ಸಿಗರೇಟೂ ಸೇದುವುದಿಲ್ಲ. ಅವನ ಮೇಷ್ಟ್ರು ನನಗಿಂತ ನಿಸ್ಪ ೃರು. ನನಗಿಂತ ಧೈರ್ಯಶಾಲಿ. ಅವರಿಗೆ ಬರೆಯಲು ಬಾರದೆ ಇರಬಹುದು. ಆದರೆ ಅವರಿಗೆ ನನಗಿಂತ ಚೆನ್ನಾಗಿ ಬದುಕಲು ಗೊತ್ತಿದೆ. ಅವನು ಬಯಸಿದ ಆದರ್ಶ ಪುರುಷರು ಅವನ ಮನೆಯ ಪಕ್ಕದಲ್ಲೇ ಇದ್ದಾರೆ. ಮನೆಯಲ್ಲೇ ಇದ್ದಾರೆ. ಆದರೆ ಇವನ ಹುಂಬ ಕಣ್ಣಿಗೆ ಸದರದ ಪೊರೆ ಬಂದಿದೆ!

ಇಷ್ಟೆಲ್ಲ ಆಗಿ ನಮ್ಮ ದೇಶದಲ್ಲಿ ಬಾಬಾಗಳು, ಸ್ವಾಮಿಗಳು, ರಾಜಕೀಯ ನಾಯಕರು, ಸಿನೆಮಾ ನಟರು-ಹೀಗೆ ನಾನಾ ವೆರೈಟಿಯ ಜನಕ್ಕೆ ಅದೇಕೆ ಲಕ್ಷಾಂತರ, ಕೋಟ್ಯಂತರ ಭಕ್ತರಿರುತ್ತಾರೆ? ಹಿಂಬಾಲಕರಿರುತ್ತಾರೆ?

ಹಾಗಂತ ಅನೇಕ ಸಲ ಕೇಳಿಕೊಂಡಿದ್ದೇನೆ.

ಏಕಿರುತ್ತಾರೆಂದರೆ, ಬಾಬಾಗಳು, ನಾಯಕರು, ನಟರು ಇವರೆಲ್ಲ ತಮ್ಮ ಸುತ್ತ ಸದಾ ಒಂದು ಪ್ರಭಾವಳಿ, ಒಂದು aura ಸೃಷ್ಟಿಸಿಕೊಂಡಿರುತ್ತಾರೆ. ಅವರ ಪೀಠಗಳು, ಅಧಿಕಾರಗಳು, ಒಣಗಾಂಭೀರ್ಯಗಳು, ಮೇಕಪ್ಪುಗಳು, ವಿಗ್ಗುಗಳು, ರೊಕ್ಕ, ಚಮತ್ಕಾರ ಮುಂತಾದವೆಲ್ಲ ಸೇರಿ ಅವರಾಗಿರುತ್ತಾರೆ. ಅಡ್ಡ ಪಂಚೆ ಬನೀನು ಧರಿಸಿಕೊಂಡು ಬೀದಿ ಪಕ್ಕದ ಮರಕ್ಕೆ ನೀರು ಹಾಕುವ ಮೇಷ್ಟ್ರು ಅವಿವೇಕಿಯಂತೆ ಕಂಡರೆ, ಮಠಾಧೀಶ ದೇವದೂತನಂತೆ ಕಾಣಿಸಿಬಿಡುತ್ತಾನೆ. ವಿಗ್ಗು ಧರಿಸಿದ ನಟನೊಬ್ಬ Hemanನಂತೆ ಗೋಚರವಾಗುತ್ತಾನೆ. ಒಬ್ಬ ನಟಿಗಾಗಿ ಬೆಂಕಿ ಹಚ್ಚಿಕೊಂಡು ಸಾಯುವ ಅವಿವೇಕಿಗೆ, ಮನೆಯಲ್ಲಿ ತನಗೋಸ್ಕರ ಅಡುಗೆ ಮಾಡಿಟ್ಟು ಉಪವಾಸ ಮಲಗುವ ತಾಯಿ ಕೆಲಸಕ್ಕೆ ಬಾರದ ಮುದುಕಿಯಂತೆ ಕಾಣುತ್ತಾಳೆ.

ಈ ತಪ್ಪು ತಿದ್ದಿಕೊಳ್ಳದಿದ್ದರೆ ಗತಿಯೇನು? ಮನೆ ಪಕ್ಕದ ಆದರ್ಶ ಪುರುಷರನ್ನು ಮರೆತು ತಿಪ್ಪೆಗೆಸೆದು ಇನ್ನೆಲ್ಲೋ ಆದರ್ಶ ಹುಡುಕಿಕೊಂಡು ಊರೂರು ತಿರುಗುವ ನಮಗೆ ಕೊನೆಗೆ ದಕ್ಕುತ್ತದಾದರೂ ಏನು?

ನಿಮ್ಮ ತಮ್ಮತಂಗಿಯರನ್ನು ಕೇಳಿ ನೋಡಿ.

(ಲೇಖಕರು ಹಿರಿಯ ಪತ್ರಕರ್ತರು)

Leave a Reply

Your email address will not be published. Required fields are marked *