ಫಾಲೋ ಅನಿವಾರ್ಯವಾದರೆ ಆಯ್ಕೆ ಸರಿಯಿರಲಿ

ಜಗತ್ತಿನಲ್ಲಿ ನಮಗಿಂತ ಉತ್ತಮವಾದವರು, ಉನ್ನತರಾದವರು ಅನೇಕರಿರುತ್ತಾರೆ. ಅವರ ಮಾತು, ಚಿಂತನೆ, ಯೋಚನಾ ವಿಧಾನ- ಎಲ್ಲವೂ ನಮಗಿಷ್ಟವಾಗುತ್ತಿರುತ್ತವೆ. ಸಾಮಾನ್ಯ ಸ್ಥಿತಿಯಲ್ಲಾದರೆ ನಾವು ಅವರ ಪ್ರಭಾವದಿಂದ ತಪ್ಪಿಸಿಕೊಂಡು, ನಮ್ಮದೇ ಶೈಲಿಯಲ್ಲಿ ಬದುಕುತ್ತಿರುತ್ತೇವೆ. ಆದರೆ ಬದುಕು ಯಾವಾಗಲೂ ಒಂದೇ ರೀತಿ ಇರುವುದಿಲ್ಲವಲ್ಲ?

ಅಂಥ ಪ್ರಸಂಗವೂ ಬರುತ್ತದೆ!

ಹೆಚ್ಚಿನ ಸಲ ನಾವು ಸ್ವತಂತ್ರರಾಗಿರಬೇಕು ಅಂದುಕೊಳ್ಳುತ್ತೇವೆ. ಸ್ವತಂತ್ರರಾಗಿ ಇದ್ದೂ ಇರುತ್ತೇವೆ. ನಾವು ಯಾರ ಭಕ್ತರೂ ಅಲ್ಲ. ಯಾರಿಗೂ ವೀರಾಭಿಮಾನಿಗಳಲ್ಲ. ಒಂದು ಪಂಥಕ್ಕೆ ಸೇರಿದವರಲ್ಲ. ಗದ್ದುಗೆ, ಗುರುಪೀಠ ಒಪ್ಪಿಕೊಂಡವರಲ್ಲ. ರಾಜಕೀಯ ಪಕ್ಷಗಳ Frameಗೆ ಸಿಕ್ಕು ಬೀಳುವವರಲ್ಲ. ಮುಕ್ತವಾಗಿ ಆಲೋಚಿಸುತ್ತೇವೆ. ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತೇವೆ. ನಮ್ಮ ಪ್ರಶ್ನೆಗಳಿಗೆ ನಾವೇ ಉತ್ತರ ಹುಡುಕುತ್ತೇವೆ.

ಸೆಲೆಬ್ರಿಟಿಗಳು ನಮ್ಮಲ್ಲಿ ಕುತೂಹಲ ಮೂಡಿಸಬಹುದೆ ಹೊರತು ನಾವು ಅವರ ಅಂಧಾಭಿಮಾನಿಗಳಾಗುವುದಿಲ್ಲ. ನಮಗೆ ನಮ್ಮದೇ ಆದ ವ್ಯಕ್ತಿತ್ವವಿರುತ್ತದೆ. ನಾವು ಯಾರನ್ನೂ ಅನುಕರಿಸುವುದಿಲ್ಲ. ನಮ್ಮದೇ ಶೈಲಿಯಲ್ಲಿ ಮಾತನಾಡುತ್ತೇವೆ. ಯೋಚನೆಗೆ ನಮ್ಮದೇ ಧಾಟಿ. Fine. . ಅಂತಹುದೊಂದು ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಯಾವತ್ತಿಗೂ ಒಳ್ಳೆಯದೇ.

ಈ ಸಮಾಜದಲ್ಲಿ ಯಾವುದಕ್ಕಾದರೂ ಕೊರತೆಯಿದೆ ಅನ್ನುವುದಾದರೆ, ಅದು ಒರಿಜಿನಾಲಿಟಿಗೆ. ಪತ್ರಕರ್ತರು, ಬರಹಗಾರರು-ಯಾರನ್ನೇ ನೋಡಿದರೂ ಶುದ್ಧ ಇಮಿಟೇಟರುಗಳಂತೆ ಕಾಣುತ್ತಾರೆ. ಒಂದು ಸಲ ಒಬ್ಬ ಲೇಖಕ ಮಿತ್ರ ಮುಷ್ಟಿಯ ತುದಿಯಲ್ಲಿ ಸಿಗರೇಟು ಸಿಕ್ಕಿಸಿಕೊಂಡು ಗಟ್ಟಿಯಾಗಿ ಜುರಿಕೆ ಎಳೆಯುತ್ತ, ಕೆಮ್ಮುತ್ತ ಒದ್ದಾಡುತ್ತಿದ್ದ. ಯಾಕೆ ಹೀಗೆ ಅಂತ ಕೇಳಿದುದಕ್ಕೆ ‘ಲಂಕೇಶ್ ನನ್ನ ಫೇವರೆಟ್ ಬರಹಗಾರರು. ಅವರು ಸಿಗರೇಟು ಸೇದುವುದು ಹೀಗೇ’ ಅಂತ ಉತ್ತರಿಸಿದ್ದ. ಲಂಕೇಶ್ ನನಗೂ ಮೆಚ್ಚುಗೆಯಾಗುತ್ತಾರೆ. ಅವರ ಬರಹಗಳನ್ನು ಇಷ್ಟಪಡುತ್ತೇನೆ. ಅವರ ಗದ್ಯ ಸುಂದರ. ಆದರೆ ನಾನು ಬರೆಯಲು ಕುಳಿತಾಗ ನನಗೆ ಅಪ್ಪಿತಪ್ಪಿಯೂ ಲಂಕೇಶರು ನೆನಪಾಗುವುದಿಲ್ಲ. ನಾನು ಕೇವಲ ನನ್ನಂತೆ ಬರೆಯುತ್ತೇನೆ. ಅಕಸ್ಮಾತ್ ಯಾರದಾದರೂ ಶೈಲಿ ನನಗೆ ಇಷ್ಟವಾಯಿತು ಅಂದರೆ ಶತಪ್ರಯತ್ನ ಮಾಡಿಯಾದರೂ ಸರಿ, ಅದನ್ನು ತಿರಸ್ಕರಿಸಿ, ಅವರ ಪ್ರಭಾವದಿಂದ ತಪ್ಪಿಸಿಕೊಂಡು ಬರೆಯಲು ಪ್ರಯತ್ನಿಸುತ್ತೇನೆ. ನಾನು ಮೆಚ್ಚುವ ಅನೇಕ ಲೇಖಕರಿದ್ದಾರೆ: ಚಲಂ, ಖುಷ್ವಂತ್ ಸಿಂಗ್, ಅರ್ನೆಸ್ಟ್ ಹೆಮಿಂಗ್ವೆ, ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್-ಹೀಗೆ. ಆದರೆ ಅವರ್ಯಾರ ಶೈಲಿಯನ್ನೂ ನಾನು ಅನುಕರಿಸುವುದಿಲ್ಲ.

ಮಾತು ಕೂಡ ಅಷ್ಟೆ. ವೇದಿಕೆಗಳಲ್ಲಿ ನಿಂತು ಮಾತನಾಡುವುದು ಒಂದು ಕಲೆ. ಕೆಲವರು ಅದನ್ನೇ ಕಸುಬು ಮಾಡಿಕೊಂಡಿರುತ್ತಾರೆ. ಅಂಥವರ ಒಂದು ಭಾಷಣವನ್ನು Enjoy ಮಾಡಬಹುದು. ಆಮೇಲೆ ಹತ್ತು ಭಾಷಣ ಕೇಳಿ ನೋಡಿ. ಅವೆಲ್ಲವೂ ಒಂದೇ ತೆರವಾಗಿರುತ್ತವೆ. ಯಾವ ವೇದಿಕೆಗೆ ಕರೆದರೂ ಒಂದೇ ಥರ ಮಾತನಾಡುತ್ತಿರುತ್ತಾರೆ. ಸಮಸ್ಯೆಯೇನೆಂದರೆ, ಅವರು ಯಾರನ್ನೋ ಅನುಕರಿಸುತ್ತಿರುತ್ತಾರೆ. ನಗೆಹಬ್ಬಗಳಿಗೆ ಹೋದರೆ ಹಾಗೆ ಒರಿಜಿನಾಲಿಟಿಯಿಲ್ಲದೆ ಯಾರನ್ನೋ ಅನುಕರಿಸುತ್ತ, ಒಂದೇ ಧಾಟಿಯಲ್ಲಿ ಮಾತನಾಡುವ ಒಂದು ಗುಂಪೇ ನಿಮಗೆ ಸಿಕ್ಕು ಬಿಡುತ್ತದೆ.

ನೀವು ಕಮ್ಯುನಿಸ್ಟ್ ನಾಯಕರ ಭಾಷಣಗಳನ್ನು ಕೇಳಿ. ಬಲಪಂಥೀಯ ನಾಯಕರ ಇನ್ನೊಂದು ಭಾಷಣ ಕೇಳಿ. ಇಬ್ಬರೂ ಬೇರೆ ಬೇರೆ ಗುಂಪಿನವರು. ಆದರೆ ಎರಡೂ ಗುಂಪಿನಲ್ಲಿ ಒಂದೇ ತರಹದ ಭಾಷಣ ಮಾಡುವ ಹತ್ತತ್ತು ಜನ ಸಿಗುತ್ತಾರೆ. ಒಂದೇ ಧಾಟಿ, ಒಂದೇ ಸಬ್ಜೆಕ್ಟು. ಹಾವೇರಿಯಲ್ಲೂ ಅದೇ ಭಾಷಣ. ಹಾರ್ವರ್ಡ್​ನಲ್ಲೂ ಅದೇ ಭಾಷಣ. ಹಾಗೆ Repeat ಆಗದ ಹಾಗೆ, ಕೊಂಚವೂ ಬೋರ್ ಆಗದ ಹಾಗೆ, ಪ್ರತಿ ಸಲವೂ ಹೊಚ್ಚ ಹೊಸ ವಿಚಾರಗಳೊಂದಿಗೆ, ಯಾರನ್ನೂ ಅನುಕರಿಸಿದ ಹಾಗೆ ಸಾವಿರಾರು ತಾಸು ಮಾತನಾಡಿದವರೆಂದರೆ-ಓಶೋ!

ಮಾತಾಗಲೀ, ಬರವಣಿಗೆಯಾಗಲೀ, ನಡವಳಿಕೆ ಯಾಗಲೀ ಹುಟ್ಟುವುದು ನಮ್ಮ ಆಲೋಚನೆಯಿಂದ. ಆಲೋಚನೆಯಲ್ಲೇ ಒರಿಜಿನಾಲಿಟಿ ಇಲ್ಲವೆಂದ ಮೇಲೆ ಮಾಡಿದ ಪ್ರತಿಯೊಂದೂ ಅನುಕರಣೆಯೇ ಆಗಿಬಿಡುತ್ತದೆ. ನಮ್ಮದೇ ಶೈಲಿಯ ಬರವಣಿಗೆ, ಮಾತು ರೂಪಿಸಿಕೊಳ್ಳಲಿಕ್ಕೆ ಮನುಷ್ಯನಿಗೆ ಒಂದು ಧ್ಯಾನ ಬೇಕು. ಬುದ್ಧಿಪೂರ್ವಕವಾಗಿ ಪ್ರಭಾವಗಳಿಂದ ತಪ್ಪಿಸಿಕೊಂಡು ಬರೆಯಬೇಕು. ಕಷ್ಟಪಟ್ಟು ಬೇರೆ ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಬೇಕು. ಕಲೆ ಹಾಕಿದ ಸಾಮಗ್ರಿ ಮೇಲೆ ಕೈಯೂರಿ ಕುಳಿತು ಯಾವ ಚೌಕಟ್ಟಿನಲ್ಲಿ ಇದನ್ನು ಬರೆದರೆ ಚೆಂದ ಅಂತ ಧೇನಿಸಬೇಕು. ಕೆಲವೊಮ್ಮೆ ನಮ್ಮ ಸ್ಪುರಣೆ, ನಮ್ಮ ಕ್ರಿಯಾಶೀಲತೆ, ಇಂಟ್ಯೂಷನ್ ಈ ಹಂತದಲ್ಲಿ ತುಂಬ ಕೆಲಸ ಮಾಡಿ ಬಿಡುತ್ತದೆ.

ಅದರ ಮೇಲೆ ವಿಶ್ವಾಸವಿಡುವುದೇ ಒಳ್ಳೆಯದು. ಯಾರದೋ ಪ್ರಭಾವಕ್ಕೆ ಸಿಲುಕಿದಂತೆ ಬರೆಯುವುದಕ್ಕಿಂತ, ನೀವು ರೂಪಿಸಿಕೊಂಡ ನಿಮ್ಮದೇ ಶೈಲಿಯಲ್ಲಿ ಬರೆಯವುದು, ಮಾತನಾಡುವುದು, ವರ್ತಿಸುವುದು ಒಳ್ಳೆಯದು- ನಿಮ್ಮ ಶೈಲಿ ಸ್ವಲ್ಪ ಸಪ್ಪೆಯೆನ್ನಿಸಿದರೂ ಪರವಾಗಿಲ್ಲ. ನನ್ನನ್ನು ತುಂಬ ಅನುಕರಿಸಿ ಥೇಟು ನನ್ನಂತೆಯೇ ಬರೆಯುವ ಪತ್ರಕರ್ತನೊಬ್ಬನಿಗೆ ಚೀಟಿ ಬರೆದು ಕೊಟ್ಟಿದ್ದೆ-‘ನನ್ನನ್ನು ಬಿಡು. ಬೇರೆ ಏನನ್ನಾದರೂ ಓದು’.

ಆದರೆ ಆರಂಭದಲ್ಲಿ ಹೇಳಿದೆನಲ್ಲ? ಅಂಥ ಪ್ರಸಂಗವೂ ಬರುತ್ತದೆ. ಅನಿವಾರ್ಯವಾಗಿ ಯಾರನ್ನಾದರೂ Follow ಮಾಡಲೇ ಬೇಕಾದ ಪ್ರಸಂಗ. ಅಂಥ ಪ್ರಸಂಗ ಬಂದಾಗ Follow the best. ಜಗತ್ತಿನಲ್ಲಿ ನಮಗಿಂತ ಉತ್ತಮವಾದವರು, ಉನ್ನತರಾದವರು ಅನೇಕರಿರುತ್ತಾರೆ. ಅವರ ಮಾತು, ಚಿಂತನೆ, ಯೋಚನಾ ವಿಧಾನ, ವ್ಯವಹಾರ- ಎಲ್ಲವೂ ನಮಗಿಷ್ಟವಾಗುತ್ತಿರುತ್ತವೆ. ಸಾಮಾನ್ಯ ಸ್ಥಿತಿಯಲ್ಲಾದರೆ ನಾವು ಅವರ ಪ್ರಭಾವದಿಂದ ತಪ್ಪಿಸಿಕೊಂಡು, ನಮ್ಮದೇ ಶೈಲಿಯಲ್ಲಿ ಬದುಕುತ್ತಿರುತ್ತೇವೆ. ಆದರೆ ಬದುಕು ಯಾವಾಗಲೂ ಒಂದೇ ರೀತಿ ಇರುವುದಿಲ್ಲವಲ್ಲ? ಕೆಲವೊಮ್ಮೆ ಫಜೀತಿಗೆ ಕೆಡವಿ ಬಿಡುತ್ತದೆ. ಎಂಥ ಇಕ್ಕಟ್ಟಿಗೆ ಸಿಲುಕಿಕೊಂಡು ಬಿಡುತ್ತೇವೆಂದರೆ, ಹೇಗೆ ಹೆಜ್ಜೆಯಿಡಬೇಕೆಂಬುದೇ ತೋಚುವುದಿಲ್ಲ. ಕತ್ತಲಲ್ಲಿ ತಡವರಿಸುವಂತಾಗಿ ಬಿಡುತ್ತದೆ. ಅಂಥ ಸಮಯದಲ್ಲಿ ಆತುರ ಪಟ್ಟು ಏನನ್ನೂ ಮಾಡಬಾರದು. ಹಾಗೆ ಮಾಡುವುದನ್ನು Knee jerk reaction ಅನ್ನುತ್ತಾರೆ. ಅದರಿಂದ ಯಡವಟ್ಟುಗಳಾಗುವುದೇ ಜಾಸ್ತಿ. ಬದಲಿಗೆ ನಾವು ಸಿಕ್ಕು ಬಿದ್ದಿರುವ ಉಸುಬು ಎಂತಹುದು? ಅಂಧಕಾರ ಎಷ್ಟಿದೆ? ಸುಮ್ಮನೆ ಕುಳಿತು ಯೋಚಿಸಬೇಕು.

ಆ ನಂತರ ನಿಧಾನವಾಗಿ ಅಪ್ಪ ನೆನಪಾಗುತ್ತಾನೆ. ಈ ಪರಿಸ್ಥಿತಿಯಲ್ಲಿ ಆತ ಇದ್ದಿದ್ದರೆ ಏನು ಮಾಡುತ್ತಿದ್ದ? ಹೇಗೆ ನಿಭಾಯಿಸುತ್ತಿದ್ದ? ಹೇಗೆ ದಾಟಿಕೊಳ್ಳುತ್ತಿದ್ದ? ಈಗ ಎದುರಿಗಿದ್ದಿದ್ದರೆ ಅಪ್ಪ ಏನು ಸಲಹೆ ಕೊಡುತ್ತಿದ್ದ? ಅನ್ನಿಸತೊಡಗುತ್ತದೆ. ಅದು ಅಪ್ಪನೇ ಆಗಬೇಕೆಂದಿಲ್ಲ. ಅಣ್ಣ, ಮೇಷ್ಟ್ರು, ಹಿರಿಯ, ಗೆಳೆಯ, ಲೇಖಕ-ಯಾರು ಬೇಕಾದರೂ ಆಗಬಹುದು. ಅವರ ಪೈಕಿಯೇ The best ಅನ್ನಿಸಿದ ಒಬ್ಬರನ್ನು ಆಯ್ದುಕೊಳ್ಳಿ. ನೆನಪಿರಲಿ, ನೀವು ಈಗ ಯಾರಾದರೊಬ್ಬರನ್ನು Follow ಮಾಡಲೇ ಬೇಕು. ಅಂದ ಮೇಲೆ ಅತ್ಯುತ್ತಮವಾದವರನ್ನೇ Follow ಮಾಡಿ. ಕೆಲಸಕ್ಕೆ ಬಾರದ ರಾಜಕೀಯ ನಾಯಕನನ್ನೋ, ಸಿನಿಮಾನಟನನ್ನೋ, ರೌಡಿಯನ್ನೋ, ಸಿದ್ಧಾಂತರೋಗ ಹಿಡಿದವರನ್ನೋ ಅನುಸರಿಸ ಬೇಡಿ. ಜೀವನದಲ್ಲಿ ಎಲ್ಲವನ್ನೂ ಸ್ವತಂತ್ರವಾಗಿ ಕಲಿಯುವುದು ಸಾಧ್ಯವಿಲ್ಲ. ಗುರುಗಳು ಬೇಕು. ಪರಮ ಗುರುಗಳೂ ಬೇಕು. ಆದರೆ ಗುರುವೇ ಮಾರುವೇಷ ಧರಿಸಿ ನಿಮ್ಮಲ್ಲಿ ಕಾಯ ಪ್ರವೇಶ ಮಾಡಿಬಿಡಬಾರದು. ಅಲ್ಲವೆ?

(ಲೇಖಕರು ಹಿರಿಯ ಪತ್ರಕರ್ತರು)

One Reply to “ಫಾಲೋ ಅನಿವಾರ್ಯವಾದರೆ ಆಯ್ಕೆ ಸರಿಯಿರಲಿ”

  1. Your writing inspire all. Keep writing forever. In kannada inspirational writing are less. Keep filling the gap sir.

Leave a Reply

Your email address will not be published. Required fields are marked *