More

    ರವಿ ಬೆಳಗೆರೆ ಅಂಕಣ: ನಿಮಗೆ ನೀವೇ ಅಂಥದೊಂದು ಮಂತ್ರ ಹೇಳಿಕೊಂಡು ನೋಡಿ!

    ಅದನ್ನು affirmation ಅಂತಾರೆ.

    ರವಿ ಬೆಳಗೆರೆ ಅಂಕಣ: ನಿಮಗೆ ನೀವೇ ಅಂಥದೊಂದು ಮಂತ್ರ ಹೇಳಿಕೊಂಡು ನೋಡಿ!ನನಗೆ ನಾನೇ ಏನನ್ನಾದರೂ ಹೇಳಿಕೊಳ್ಳುತ್ತಿರು ತ್ತೇನೆ: ಪದೇಪದೆ. ಮೂಲತಃ ನಾನು ಬಲಹೀನ ವ್ಯಕ್ತಿತ್ವದವನಲ್ಲ-ಬಲಹೀನತೆಗಳಿರುವುದು ನಿಜ. ಆದರೆ ಅವು ದೇಹಕ್ಕೆ ಸಂಬಂಧಿಸಿದವು. ಮಾನಸಿಕವಾಗಿ ದೃಢವಾಗಿರುವ, ಇರಬಯಸುವ, ತೀರ ಗಾಬರಿಯ ಸ್ಥಿತಿಯಲ್ಲೂ ಸ್ಥಿರವಾಗಿ ನಿಲ್ಲುವ, ಕಂಪಿಸದ, ಶರಣಾಗದ ಸ್ವಭಾವ ನನಗಿಷ್ಟ. ಸಿಟ್ಟು ನನ್ನನ್ನು ಆಳುತ್ತಿದ್ದ ಕಾಲವೊಂದಿತ್ತು. ಕೆಲವರು ಅದನ್ನು ರೂಢಿಸಿಕೊಂಡು ಬಿಡುತ್ತಾರೆ. ಜನ್ಮತಃ ಯಾರೂ ಸಿಟ್ಟಿನವರಿರುವುದಿಲ್ಲ. ‘ಸಿಟ್ಟು ಹೆರಿಡಿಟರಿ ಕಣ್ರೀ’ ಅನ್ನುತ್ತಿರುತ್ತಾರೆ. ತಂದೆಯಂತೆಯೇ ಮಗನೂ ಸಿಟ್ಟಿನವನು ಅಥವಾ ಅವರ ಮನೆಯವರೆಲ್ಲ ದೂರ್ವಾಸ ಸಂಕುಲದವರು ಎಂಬಂಥ ಮಾತು ಕೇಳುತ್ತಿರುತ್ತೇವೆ. ಅದು ಜನ್ಮತಃ ಬಂದ ಸಿಟ್ಟಲ್ಲ. ಅಪ್ಪನನ್ನು ನೋಡುತ್ತ ಮಗ ಬೆಳೆಸಿಕೊಳ್ಳುವ ಗುಣ. ಅಣ್ಣನನ್ನು ನೋಡಿ ತಮ್ಮ ರೂಢಿಸಿಕೊಳ್ಳುವ ಧೂರ್ತತನ. ಮಕ್ಕಳು ಅಪ್ಪನನ್ನು ಪೂರ್ತಿ ಪಕ್ಕಕ್ಕಿಟ್ಟು ಅಮ್ಮನನ್ನೇ ನೋಡಿ ಬೆಳೆಯುವ ಸಂಸಾರಗಳೂ ಇವೆ. ನನ್ನ ಮಕ್ಕಳ ಪೈಕಿ ಯಾರೂ ಸಿಟ್ಟಿನವರಲ್ಲ. ಮಗನಂತೂ ಸಾವಿರ ಸಮಾಧಾನಗಳು ಮೈವೆತ್ತಂತಿರುವ soft fellow.

    ಆದರೆ ಸಿಟ್ಟು ಕೆಲವು ಬಾರಿ ಸಾಂರ್ದಭಿಕವಾಗಿ ಬರುತ್ತದೆ. ಮನುಷ್ಯ ಬದುಕಿನಲ್ಲಿ ಉಚ್ಛ್ರಾಯಕ್ಕೆ ಬರಲು, ಸೆಟ್ಲ್ ಆಗಲು ಅಥವಾ ಪ್ರವರ್ಧಮಾನಕ್ಕೆ ಬರಲು ಹೋರಾಡುತ್ತಿರುವಾಗ ಕೆಲಬಾರಿ ಅದರ ಒತ್ತಡ ಭರಿಸಲಾಗದೆ ಅಕ್ಕಪಕ್ಕದವರ ಮೇಲೆ ‘ಸಿರ್ರ್’ ಅನ್ನುತ್ತಿರುತ್ತಾನೆ. ನನ್ನ ವರದಿಗಾರರ ಮೇಲೆ, ಇತರೆ ಸಿಬ್ಬಂದಿ ಮೇಲೆ ನಾನು ಅತಿರೇಕವೆನಿಸುವಷ್ಟು ರೇಗುತ್ತಿದ್ದುದೇ ಆ struggle periodನಲ್ಲಿ. ಅದು ‘ಅಂದುಕೊಂಡ ಕೆಲಸವಾಗಲಿಲ್ಲವಲ್ಲ’ ಎಂಬ ಕಾರಣಕ್ಕೆ ಬರುತ್ತಿದ್ದ ಸಿಟ್ಟು. ಮನೆಯಲ್ಲೂ ಹರಿಹಾಯುತ್ತಿದ್ದೆ. ‘ಅಪ್ಪಾ, This is too much. ಎಲ್ರಿಗೂ ಇದು hectic ಅನ್ಸೋಕೆ ಶುರುವಾಗಿದೆ. Stop shouting’ ಅಂತ ಹಿರಿಯ ಮಗಳು ಅಂದಳು ನೋಡಿ. ಮನೆಮಂದಿಯ ಮೇಲೆ ರೇಗುವುದನ್ನು ಅವತ್ತೇ ಬಿಟ್ಟು ಬಿಟ್ಟೆ. ಮುಂದೆ ಬದುಕೂ ಸ್ಥಿರಗೊಂಡಿತು. ಹೋರಾಟಗಳು ಇವತ್ತಿಗೂ ನಿಂತಿಲ್ಲ. ಆದರೆ ಎಲ್ಲದಕ್ಕೂ ಒಂದು ವ್ಯವಸ್ಥೆ ಅಂತ ಆಗಿದೆ. ಶಾಲೆಗೆ, ಆಫೀಸಿಗೆ, ವರದಿಗಾರಿಕೆಗೆ-ಹೀಗೆ ಎಲ್ಲದರ ಉಸ್ತುವಾರಿಗೂ ಜನ-ಗೆಳೆಯರು ಇದ್ದಾರೆ. ಇದೆಲ್ಲದರ ಜೊತೆಗೆ ನನ್ನ ವ್ಯಕ್ತಿತ್ವದಲ್ಲೂ ಬದಲಾವಣೆಗಳಾಗಿವೆ. ಅಜಛ್ಟಿನ ಜಾಗಕ್ಕೆ ಮತ್ತೇನೋ ಬಂದು ಕುಳಿತಿದೆ.

    ಸಿಟ್ಟಿನ ಇನ್ನೊಂದು ರೂಪವೇ ಭಯ. ನಿಮಗಿದು ವಿಚಿತ್ರವೆನ್ನಿಸಬಹುದು. ಪ್ರಾಣಿಯೊಂದು ಆಕ್ರಮಣ ಮಾಡುವುದು ಕೇವಲ ತನ್ನ ಹಸಿವಿಗಲ್ಲ. ಬೇಟೆಗಲ್ಲ. ಅನೇಕ ಸಲ ತನ್ನ ಭಯ ಅದನ್ನು ಇನ್ನೊಂದು ಪ್ರಾಣಿಯ ಮೇಲೆ ಎರಗುವಂತೆ ಮಾಡುತ್ತದೆ. ಹಾವಿನ ಉದಾಹರಣೆ ತೆಗೆದುಕೊಳ್ಳಿ: ಅದು ಬೆನ್ನತ್ತಿ ಬಂದು ಕಚ್ಚುವುದಿಲ್ಲ. ದ್ವೇಷ ಸಾಧಿಸುತ್ತೆ, ಹುಡುಕಿಕೊಂಡು ಬರುತ್ತೆ, ನಿಧಿ ಕಾಯುತ್ತೆ ಎನ್ನುವುದೆಲ್ಲ ಶುದ್ಧ ಮೂರ್ಖ ನಂಬಿಕೆ. ಅದರ ಮೇಲೆ ಗೊತ್ತಿಲ್ಲದೆ ಕಾಲಿಟ್ಟರೆ, ಹಿಡಿಯಲು ಹೋದರೆ, ಕೊಲ್ಲಲು ಯತ್ನಿಸಿದರೆ ಮಾತ್ರ ತನ್ನ defenceಗಾಗಿ ಕಚ್ಚುತ್ತೆ. ಹಾವಿಗೆ ವಿಷವಿರುವುದು ಮನುಷ್ಯನನ್ನು ಕೊಲ್ಲಲಿಕ್ಕಲ್ಲ. ತನ್ನ ಬೇಟೆಯನ್ನು ನಿಷ್ಕ್ರಿಯಗೊಳಿಸಿ ತಿಂದು ಮುಗಿಸಲಿಕ್ಕೆ. ಮನುಷ್ಯನ ವಿಷಯದಲ್ಲಿ ‘ಭಯ’ದ ಈ factor ಇದಕ್ಕಿಂತ ತುಂಬ ಭಿನ್ನವಾಗೇನೂ ಕೆಲಸ ಮಾಡುವುದಿಲ್ಲ. ನಾವು ಯೋಚನೆ ಮಾಡಬಲ್ಲವರಾದ್ದರಿಂದ ನಮಗೆ ಪ್ರಾಣಭಯದ ಹೊರತಾಗಿಯೂ ಕೆಲವು ಭಯಗಳು ಆವರಿಸಿಕೊಳ್ಳುತ್ತಿರುತ್ತವೆ. ಮರ್ಯಾದೆಗೆ ಸಂಬಂಧಿಸಿದ ಭಯ, ಹಿರಿಯರೆಡೆಗಿನ ಭಯ, ಶಿಕ್ಷೆಯ ಭಯ, ಕಳೆದುಕೊಳ್ಳುವ ಭಯ, ನಿರಾಶರಾಗುವ ಭಯ, ಬುದ್ಧಿವಂತಿಕೆಯ ಕೊರತೆಯಾದೀತೆಂಬ ಭಯ, ಹಿಂದುಳಿದುಬಿಡುವ ಭಯ, ತಿರಸ್ಕೃತರಾದೇವೆಂಬ ಭಯ, ಕೂಡಿಟ್ಟದ್ದು ಕರಗೀತೆಂಬ ಭಯ, ಕಳುವಾದೀತೆಂಬ ಭಯ, ಸುಖದಿಂದ ವಂಚಿತರಾಗುವ ಭಯ, ಸಿಕ್ಕ ಸುಖ ತಪ್ಪೀತೆಂಬ ಭಯ-ಹೀಗೆ ಸಾವಿರ ಭಯಗಳಿವೆ ಮನುಷ್ಯನಿಗೆ. ನೀವು ಇಂಟರ್​ನೆಟ್​ನಲ್ಲಿ ಸುಮ್ಮನೆ phobia ಅಂತ ಕೊಟ್ಟು ನೋಡಿ? ಸಾವಿರ ತರಹದ ಭಯಗಳ ಪಟ್ಟಿ ಸಿಗುತ್ತದೆ.

    ಆಗ, ಅಂಥ ಸಂದರ್ಭಗಳಲ್ಲಿ ಕೆಲಸಕ್ಕೆ ಬರುವುದೇ affirmation ಎಂಬ ನಿರಂತರ ಮಂತ್ರ. ಕೆಲವು ವಿಜ್ಞಾನಿಗಳು, ನ್ಯೂರೋ ಸೈಂಟಿಸ್ಟ್ ಅನ್ನಿಸಿಕೊಂಡವರು ಕೂಡ ಈ ಮಾತು ಖಚಿತಪಡಿಸಿದ್ದಾರೆ. ನಿಮಗೆ ಕಷ್ಟ ಬಂದಾಗ ‘ಶ್ರೀರಾಮ ಜೈರಾಮ… ಶ್ರೀರಾಮ ಜೈರಾಮ’ ಅಂತ ಅಂದ್ಕೋತಾ ಇರು ಅಂತ ನಿಮ್ಮ ತಾಯಿಯೋ, ಅಜ್ಜಿಯೋ ಹೇಳುತ್ತಿರಲಿಲ್ಲವೇ? ಅದು affirmation ಇನ್ನೊಂದು ರೂಪ ಅಷ್ಟೆ. ನಮ್ಮ ಕಷ್ಟವನ್ನು ಪರಿಹರಿಸುವುದು ನಿಮಗೆ ನೀವೇ ಪದೇಪದೆ ಹೇಳಿಕೊಳ್ಳುವ ಆ ಪುನರುಕ್ತಿ. ‘ನಾನು ಆ ಘಟನೆಯನ್ನು ಮರೆಯುತ್ತೇನೆ’ Yes! ಹಾಗಂತ ಪದೇಪದೆ ಹೇಳಿಕೊಳ್ಳಿ. ‘ಕುಡಿತ ಬಿಡುತ್ತೇನೆ’ ಹಾಗಂತ ಪದೇಪದೆ ಹೇಳಿಕೊಳ್ಳಿ. ವಿಜ್ಞಾನಿಗಳ ಪ್ರಕಾರ ಮಿದುಳಿಗೆ ನಿರಂತರವಾಗಿ ನೀವು ನೀಡುವ ಈ ಸಂದೇಶ ಒಂದು particular ಆದ ಕೆಮಿಕಲ್ ಬಿಡುಗಡೆಯಾಗಲು ಕಾರಣವಾಗುತ್ತದೆ. ಅದು ನಿಮ್ಮ ಮನೋನಿರ್ಧಾರವನ್ನು ಸ್ಥಿರಗೊಳಿಸುತ್ತದೆ. ಇದು ಸುಮ್ಮನೆ ಏನೋ hopeful ಆಗಿ ಹೇಳುತ್ತಿರುವ ಸಂಗತಿ ಅಂದುಕೊಳ್ಳಬೇಡಿ. ಅಂತೆಯೇ ‘ನಂಗೆ ಈ ಸಲ ಲಾಟ್ರಿ ಹೊಡೆದೇ ಹೊಡೆಯುತ್ತೆ’ ಅಂತ ಪದೇಪದೆ ಅಂದುಕೊಂಡ್ರೆ ಎಂಥದೋ ಕೆಮಿಕಲ್ಲು ಬಿಡುಗಡೆಯಾಗಿ ಲಾಟರಿ ಹೊಡೆಯುತ್ತೆ ಅಂದುಕೊಳ್ಳಬೇಡಿ. ಮನಸು ಕಂಪಿಸಿದಾಗ, ಅಧೀರರಾದಾಗ, ಚಟಗಳನ್ನು ಬಿಡುವಾಗ, ದುಃಖ ಮರೆತು overcome ಆಗಬೇಕಾದ ಸಂದರ್ಭ ಬಂದಾಗ, ಸಿಟ್ಟು ತಡೆಯದಾದಾಗ, ಊಹೆಯ ಮತ್ತು ನಿಜದ ಭಯಗಳು ಕಾಡಿದಾಗ ‘yes, ನಾನು ಗೆಲ್ತೀನಿ, ಯಶಸ್ವಿಯಾಗ್ತೀನಿ’ ಎಂಬಂಥ ಮಾತುಗಳನ್ನು ಪದೇಪದೆ ಹೇಳಿಕೊಳ್ಳಿ. ಇಂಟರ್​ವ್ಯೂಗಳಿಗೆ ಹೋಗುವ ಮುನ್ನ ಇಂಥ ಟ್ರಿಕ್ ಕೆಲಸ ಮಾಡುತ್ತದೆ. ಒಂದು ಕೆಲಸ ಮಾಡಿ ಮುಗಿಸಬೇಕು ಅಂತ ನಿರ್ಧರಿಸಿದಾಗ ನಾನು ಅನಿವಾರ್ಯವಾಗಿ ಈ ಮಂತ್ರ ಪಠಣ ಪ್ರಾರಂಭಿಸುತ್ತೇನೆ. ದಿನವಿಡೀ ಎಂಥದೋ ಕೆಲಸ, ಆಡಳಿತ ಸಂಬಂಧಿ ಅನಿವಾರ್ಯತೆಗಳು, ಸಭೆಗಳು, ಸುದ್ದಿ, ಗೆಳೆಯರು-ಹೀಗೆ ಸಮಯ ಕಳೆದು ಹೋಗುತ್ತಿದ್ದರೆ ‘ಅಂದುಕೊಂಡ ಕೆಲಸ ಮಾಡಲಾಗುತ್ತಿಲ್ಲವಲ್ಲ’ ಅಂತ ನನಗೆ ನನ್ನ ಮೇಲೆಯೇ ಸಿಟ್ಟು ಬರುತ್ತಿರುತ್ತದೆ. ರಾತ್ರಿ ಹೊತ್ತಿಗೆ ಸುಸ್ತು ನೆಲಕ್ಕೆ ಕೆಡವುತ್ತೆ ಅನ್ನಿಸಿದಾಗ ‘no, ಇವತ್ತಿನದಿಷ್ಟು ಕೆಲಸ ಮಾಡಿ ಮುಗಿಸಿಯೇ ಮಲಗುತ್ತೇನೆ’ ಅಂತ ಪದೇಪದೆ ಹೇಳಿಕೊಳ್ಳುತ್ತೇನೆ. ತಕ್ಷಣ ಮನಸ್ಸು ಸ್ಪ್ರಿಂಗು. ಇಲ್ಲದಿದ್ದರೆ ಇಷ್ಟು ಕೆಲಸ ಮಾಡಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ.

    ಹೇಳಿದೆನಲ್ಲ? ಭಯ ಮತ್ತು ಸಿಟ್ಟು ಎಂಬೆರಡು ಬಲಹೀನತೆಗಳು ಹೊರಟು ಹೋದರೆ, ಅವುಗಳನ್ನು ನಾವು ಗೆಲ್ಲಬಲ್ಲೆವಾದರೆ ನಿಜಕ್ಕೂ ನಾವು ಎಲ್ಲರೂ ಪ್ರೀತಿಸುವಂಥ ವ್ಯಕ್ತಿತ್ವದವರಾಗುತ್ತೇವೆ. ಬದುಕಿಗೆ ಅದಕ್ಕಿಂತ ಏನು ಬೇಕು?

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts