More

    ರವಿ ಬೆಳಗೆರೆ ಅಂಕಣ: ಹಾಲು ಕೊಡದ ಹಸು ಕೇವಲ ಅಹಂಕಾರದ ತಿಪ್ಪೆ ಬೆಳೆಸುತ್ತ ಹೋದಂತೆ!

    ನಿಮಗೂ ಗೊತ್ತು.

    ರವಿ ಬೆಳಗೆರೆ ಅಂಕಣ: ಹಾಲು ಕೊಡದ ಹಸು ಕೇವಲ ಅಹಂಕಾರದ ತಿಪ್ಪೆ ಬೆಳೆಸುತ್ತ ಹೋದಂತೆ!ನಾನು ಅಹಂಕಾರಗಳ ಬಗ್ಗೆ ತುಂಬ ಬರೆದಿದ್ದೇನೆ. ನನಗೂ ಕೆಲವು ತರಹದ fixed ಆದ, ನಿಶ್ಚಿತ ಅಹಂಕಾರಗಳಿವೆ. In fact, ಮನುಷ್ಯ ಒಟ್ಟಾರೆಯಾಗಿ ಬದುಕುವುದೇ ತನ್ನ ಹಂತ ಹಂತದ ಅಹಂಕಾರಗಳಿಗಾಗಿ, ಅವುಗಳನ್ನು persue ಮಾಡುವುದಕ್ಕಾಗಿ. ಈ ಮಾತನ್ನು ನನಗೆ ಮೊದಲು ಮನನ ಮಾಡಿಕೊಟ್ಟವರು ಸತ್ಯಕಾಮ. ನಾನು ‘ಕಸ್ತೂರಿ’ ಪತ್ರಿಕೆಗೆ ಸಂಪಾದಕನಾಗಿ ನೇಮಕಗೊಂಡಾಗ ಅವರಿಗೆ ‘ಈ ಪತ್ರಿಕೆಗೆ ಏನಾದರೂ ಒಳ್ಳೆಯದನ್ನು ಮಾಡಬೇಕಿದೆ. ಹೇಗೆ?’ ಅಂತ ಪತ್ರ ಬರೆದು ಕೇಳಿದ್ದೆ. ‘ನಿನಗೆ ನೀನು ಒಳ್ಳೆಯದನ್ನು ಮಾಡಿಕೊಳ್ಳದ ಹೊರತು ಪತ್ರಿಕೆಗೆ ಒಳ್ಳೆಯದನ್ನು ಮಾಡಲಾರೆ’ ಅಂತ ಒಂದು ಸಾಲಿನ ಉತ್ತರ ಬರೆದಿದ್ದರು ಗುರುವು. ‘ನೀವು ಏಕೆ ಬರೆಯುತ್ತೀರಿ?’ ಅಂತ ಕೇಳಿದಾಗ ಈ ಸಮಾಜದ ಉದ್ಧಾರಕ್ಕಾಗಿ, ಕ್ರಾಂತಿಗಾಗಿ, ಸತ್ಯದ ಅನ್ವೇಷಣೆಗಾಗಿ, ಸೌಂದರ್ಯದ ಉಪಾಸನೆಗಾಗಿ ಅಂತೆಲ್ಲ ಉತ್ತರ ಕೊಡುವ ಲೇಖಕರಿದ್ದಾರೆ. ‘ನನ್ನ ಅಹಂಕಾರಕ್ಕಾಗಿ ಬರೆಯುತ್ತೇನೆ’ ಅಂದವರು ಅದೇ ಗುರುವು: ಸತ್ಯಕಾಮ.

    ಆದರೆ ನಿನ್ನ ಅಹಂಕಾರ ಪಾಸಿಟಿವ್ ಆಗಿದೆಯಾ? ಪ್ರೊಡಕ್ಟಿವ್ ಆಗಿದೆಯಾ? ಸಾತ್ವಿಕವಾಗಿದೆಯಾ? ಅರ್ಥಪೂರ್ಣವಾಗಿದೆಯಾ? ಹೀಗೆ ಅಹಂಕಾರ ಪಡಲಿಕ್ಕೆ ಸರಿಯಾದ ಸಮರ್ಥನೆ ಮತ್ತು ಸತ್ವ ನಿನ್ನಲ್ಲಿ ಇದೆಯಾ? ಹಾಗಂತ ಕೇಳಿಕೊಳ್ಳಲು ತಿಳಿಸಿಕೊಟ್ಟದ್ದು ಇನ್ನೊಬ್ಬ ಗುರುವು: ಅದು ಬದುಕು. Mr. Life… ಅದಕ್ಕಿಂತ ಗುರುವು ಬೇಕೆ?

    ಚಿಕ್ಕಂದಿನಿಂದಲೂ ನಾವು ಮಾಡುವುದೇ ಅದನ್ನಲ್ಲವೆ? ಹೆಚ್ಚು ಮಾರ್ಕ ತಂದೆ, ಇಷ್ಟು ದೂರಕ್ಕೆ ಈಜಿದೆ, ಉಸಿರು ಹಿಡಿಯುವುದೇನು ಕಡಿಮೆ ಮಾತೇ: ಕಬಡ್ಡಿ, ಕಬಡ್ಡಿ ಕಬಡ್ಡಿ…? ನಾನು ತುಂಬ ಒಳ್ಳೆಯವನು ಎಂಬ ಅಹಂಕಾರ. ‘ನನಗೆ ಒಂಚೂರೂ ಅಹಂಕಾರವೇ ಇಲ್ಲ ನೋಡಿ’-ಎಂದು ಅಹಂಕಾರ. ಅವಳು ಒಲಿದಳೆಂಬ, ಇವಳು ಬೆನ್ನು ಬಿದ್ದಳೆಂಬ, ಇಷ್ಟು ದುಡ್ಡು ಮಾಡಿದೆನೆಂಬ, ರಾಜ್ಯವಾಳಿದೆನೆಂಬ, ದೇಶ ಸುತ್ತಿದೆನೆಂಬ, ಕೋಶ ಓದಿದೆನೆಂಬ-ಹೀಗೆ ಅಹಂಕಾರಗಳ ಸಾಲು ಸಾಲೇ ಇದೆ. ಅದನ್ನು ‘ಅಹಂ ದೀಪಾವಳಿ’ ಅನ್ನುತ್ತೇನೆ. ಆದರೆ ದೀಪಾವಳಿಯ ಹೊಕ್ಕುಳಲ್ಲೇ ಅಮಾವಾಸ್ಯೆ ಇದೆ. ಅದನ್ನು ಗಮನಿಸದೆ ಹೋದರೆ, ನೀಗಿಕೊಳ್ಳದೆ ಹೋದರೆ, ಅಮಾವಾಸ್ಯೆಯ ತಿಮಿರಾಹಂಕಾರದಲ್ಲೇ ಬದುಕು ಕಳೆದು ಹೋಗುತ್ತದೆ. ಪಾಡ್ಯದ ಬೆಳಕು ಹರಡುವುದಿಲ್ಲ. ಚತುರ್ದಶಿಯ ನರಕ ಮುಗಿಯುವುದಿಲ್ಲ.

    ಮನುಷ್ಯ ತುಂಬ ಓದಿಕೊಂಡರೆ, ಓದುತ್ತ ಓದುತ್ತ ಮಾಗುತ್ತಾನೆ ಎಂಬ ನಂಬಿಕೆಯೊಂದಿದೆ. ಇದು ನಿಜವೂ ಹೌದು, ಆದರೆ ತುಂಬ ಓದಿಕೊಂಡ ಪ್ರಕಾಂಡ ಪಂಡಿತರು ಕೂಡ ಅವಿವೇಕಿಗಳಂತೆ, ಜಂಬದ ಹುಂಜಗಳಂತೆ ನಡೆದುಕೊಳ್ಳುವುದನ್ನು ನಾನು ನೋಡಿದ್ದೇನೆ. ಜಗತ್ತಿನಲ್ಲಿ ಏನು ಕೇಳಿದರೂ ‘ಗೊತ್ತು ಗೊತ್ತು : ನಂಗೊತ್ತು’ ಎನ್ನುವಂಥ “I know’ ಕಾಯಿಲೆಯಿಂದ ನರಳುವ ಬುದ್ಧಿವಂತ ಮೂರ್ಖರು. ಅವರನ್ನು ಯಾವುದೂ ಮೆಚ್ಚಿಸುವುದಿಲ್ಲ. ಮುದಗೊಳಿಸುವುದಿಲ್ಲ. ‘ಅಬ್ಬ!’ ಎಂಬ ಎಕ್ಸೆ ೖಟ್​ವೆುಂಟ್ ಹುಟ್ಟಿಸುವುದಿಲ್ಲ. ‘ಓ ಅದಾ… ಬಿಡು. ಅದೆಲ್ಲ ತುಂಬ ಮಾಮೂಲಿಯಾದದ್ದು. ನೀನು ಇಟಾಲಿಯನ್ ಕುರಿ ತಿಂದು ಈ ಪರಿ ಖುಷಿ ಪಡಬೇಕಾಗಿಲ್ಲ. ಒಂದು ಸಲ ರಷಿಯಾದ ಕುರಿ ತಿಂದು ನೋಡು. ಆಮೇಲೆ ಇದೆಲ್ಲ ಆರ್ಡಿನರಿ ಅಂತ ಗೊತ್ತಾಗುತ್ತೆ’ ಎಂದು ಮಾತನಾಡುತ್ತಿರುತ್ತಾರೆ. ಅಯ್ಯಾ, ರಜನೀಶ್​ರನ್ನು ಓದಿದ್ದೀಯಾ ಅಂತ ಕೇಳಿ ನೋಡಿ. ‘ಓಹ್, ಅವನು ತುಂಬ ಹಳಬ, ಔಟ್​ಡೇಟೆಡ್. ನೀನು ಫ್ರಾಂಕ್ ಮಾರಿಯೋಸನ್​ನನ್ನು ಓದಬೇಕು…’ ಅಂತ ಶುರುವಿಡುತ್ತಾರೆ. ಅದನ್ನೇ ನಾನುunproductive ಅಹಂಕಾರ ಅನ್ನೋದು. ಈ ಕ್ಷಣ ಎದುರಿಗಿರುವ ಇಟಾಲಿಯನ್ ಕುರಿ, ರಜನೀಶ್ ಬಗ್ಗೆ ಈ ಗೆಳೆಯ ಆಡುತ್ತಿರುವ ಪ್ರಜ್ಞಾವಂತ ಮಾತು, ಮಗುವಿನ ನಿಷ್ಕಂಳಕ ನಗೆ… ಇಂಥವು ಕೇವಲ ಉದಾಹರಣೆಗಳು. ಇವುಗಳನ್ನು ನೀವು ಆ ಕ್ಷಣದ ಮಟ್ಟಿಗೆ ಗ್ರಹಿಸದೆ, ಅನುಭವಿಸದೆ, ಅವುಗಳಿಗೆ ಶರಣಾಗದೆ, ಅವುಗಳನ್ನು ತಿಳಿದುಕೊಳ್ಳದೆ ಹೋದರೆ you are stupid. ನಿಜ, ಸಚಿನ್ ತೆಂಡೂಲ್ಕರ್ ಅದ್ಭುತ ಆಟಗಾರ. ಆದರೆ, ಹೊಸ ಹುಡುಗರೂ ಇವನಷ್ಟೇ ಪ್ರಾಮಿಸಿಂಗ್ ಆಗಿ ಆಡುತ್ತಿದ್ದಾರೆ. ನೋಡಿ, ಆನಂದಿಸಿ, ಪ್ರೋತ್ಸಾಹಿಸಿ, ಅವರನ್ನು ಅಭಿನಂದಿಸಿ. ಹಾಗೆ ಎಂಜಾಯ್ ಮಾಡಬಹುದಾದ ಮನಸಿದೆಯಲ್ಲ ನಿನಗೆ? ಅದಕ್ಕಾಗಿ ಅಹಂಕಾರ ಪಡು. ಈ ಹುಡುಗರು ಆಡುತ್ತಿರುವುದನ್ನು ನೀನು ಎಂಜಾಯ್ ಮಾಡದೆ ಅದ್ಯಾವುದೋ ಶತಮಾನದಲ್ಲಿ ವಿವಿಯನ್ ರಿಚರ್ಡ್ಸ್ ಆಡುತ್ತಿದ್ದುದನ್ನು ‘ನಾನು’ ನೋಡಿದ್ದೆ ಅಂತ ಆನಂದಿಸುತ್ತೇನೆಂದರೆ: ನೀನು ಕ್ರಿಕೆಟ್ಟನ್ನು ಅಭ್ಯಸಿಸಿದವನಲ್ಲ. ನಿನಗೆ ಆ ಆಟದ ಬಗ್ಗೆ ಕೇವಲ ಗೊತ್ತು ಎಂಬ ಅಹಂಕಾರವಿದೆ. ಅದನ್ನು ಎಂಜಾಯ್ ಮಾಡುವ ಮನೋಸ್ಥಿತಿ ಇಲ್ಲ. Poor fellow. ಸುಂದರ ಹುಡುಗಿಯೊಬ್ಬಳನ್ನು ಕಂಡಾಗ ‘ಇವಳೇನು ಮಹಾ? ನೀನು ಒಂದ್ಸಲ ನಾರ್ವೆಗೆ ಹೋಗಿ ಅಲ್ಲಿನ ಸುಂದರಿಯರನ್ನು ನೋಡಬೇಕು…’ ಅಂತ ಮಾತನಾಡುವುದಿದೆಯಲ್ಲ? ಅದು ಹಾಲು ಕೊಡುವುದನ್ನು ನಿಲ್ಲಿಸಿದ ಹಸುವಿನಂಥ ಬದುಕಿನ ಸ್ಥಿತಿ.

    ಹಸು ಎಷ್ಟೇ ಚೆನ್ನಾಗಿರಲಿ. ಸುಂದರವಾಗಿರಲಿ. ಸದೃಢವಾಗಿರಲಿ. ಅದು ಹಾಲು ಕರೆಯುತ್ತ ಇದ್ದಾಗ ಮಾತ್ರ ಉಪಯುಕ್ತ. ಹಾಲು ಕರೆಯೋದನ್ನು ನಿಲ್ಲಿಸಿದ ಹಸು ಕೇವಲ ಮೇವು ತಿಂದು, ಮೆಲುಕು ಹಾಕಿ, ಸಗಣಿಯಿಟ್ಟು, ತಿಪ್ಪೆ ಬೆಳೆಸುತ್ತಾ ಹೋಗುತ್ತದೆ. ನಮ್ಮ ಅಹಂಕಾರ productive ಅಲ್ಲದೆ ಹೋದಾಗ, ಅದು ಬೆಳೆಸುವುದೂ ಶುದ್ಧ ತಿಪ್ಪೆಯೇ. ಹೊಸದೇನನ್ನೂ ಹೇಳಲಾಗದ, ಸೃಷ್ಟಿಸಲಾಗದ, ಬರೆಯಲಾಗದ ಪ್ರಕಾಂಡ ಪಂಡಿತ, ನನ್ನ ಕಣ್ಣಿಗೆ ತಿಪ್ಪೆ ಬೆಳೆಸುತ್ತಿರುವ ಹಸುವಿನಂತೆ ಕಾಣುತ್ತಾನೆ. ಅಹಂಕಾರದ ತಿಪ್ಪೆ ಯಾವಾಗಲೂ ಅನೂಹ್ಯ ವೇಗದಲ್ಲಿ ಬೆಳೆಯುತ್ತ ಹೋಗುತ್ತದೆ.

    ನೀವು ಬೆಳೆಸಿಕೊಳ್ಳುತ್ತಿರುವುದು ಯಾವ ತರಹದ ಅಹಂಕಾರ? ಸುತ್ತ ಇರುವವರಿಗಿಂತ ನನಗೆ ಜಾಸ್ತಿ ಗೊತ್ತು, ಜಾಸ್ತಿ ಹಣವಿದೆ, ಅಧಿಕಾರವಿದೆ, ಸೌಂದರ್ಯವಿದೆ, ಅನುಭವವಿದೆ ಎಂಬ ಅಹಂಕಾರ ಸರಿಯೋ? ಯಾರಿಗೆ ಜಾಸ್ತಿ ಗೊತ್ತು ಮತ್ತು ಯಾರಿಗೆ ಅದನ್ನು ಅನುಭವಿಸುವುದು ಗೊತ್ತೋ, ಅವರೆದುರು ನಾನು ಅಹಂಕಾರ ಕಳಚಿಕೊಂಡು ಅವರಿಂದ ಏನನ್ನು ಬೇಕಾದರೂ ಪಡೆಯಲು ಸಿದ್ಧನಾಗುತ್ತೇನೆ ಎಂಬ ಇನ್ನೊಂದು ತೆರನಾದ ಅಹಂಕಾರ ಸರಿಯೋ? ನಿರ್ಧಾರ ನಿಮ್ಮದು. ‘ಚಿತ್ರಲೇಖಾ’ ಸಿನೆಮಾದಲ್ಲಿ ಸಾಹಿರ್ ಲುಧಿಯಾನ್ವಿ ಬರೆದ ಹಾಡೊಂದಕ್ಕೆ ಮೀನಾಕುಮಾರಿ ಅಭಿನಯಿಸುತ್ತಾ ಹೇಳುತ್ತಾಳೆ: ‘ಹಮ್ ಜನಮ್ ಬಿತಾಕರ್ ಜಾಯೇಂಗೇ-ತುಮ್ ಜನಮ್ ಗವಾಂಕರ್ ಜಾವೋಗೇ!’

    ‘ನಾನು ಈ ಜನ್ಮವನ್ನು ಅನುಭವಿಸಿ ಹೋಗುತ್ತೇನೆ. ನೀನು ಜನುಮ ‘ಕಳೆದು’ ನಿರ್ಗಮಿಸುತ್ತೀಯ!’ ಎಂಥ ಸೂಕ್ತ ಅಹಂಕಾರದ ಮಾತಲ್ಲವೆ?

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts