ಭಕ್ತಿಯ ಸಂಕೇತವಾದ ಹಬ್ಬ

| ವರುಣ ಹೆಗಡೆ ಬೆಂಗಳೂರು

ಜೀವನದಲ್ಲಿ ನೆಮ್ಮದಿ ದೊರೆಯಬೇಕಾದರೆ ಆರೋಗ್ಯದ ಜತೆಗೆ ಸಂಪತ್ತು ಕೂಡ ಮುಖ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಂಪತ್ತಿನ ಅಧಿದೇವತೆ ಲಕ್ಮೀಯನ್ನು ಆರಾಧಿಸುತ್ತಾರೆ. ವರಗಳನ್ನು ದಯಪಾಲಿಸುವುದರ ಜತೆಗೆ ಶ್ರೇಷ್ಠಳಾಗಿರುವುದರಿಂದ ಲಕ್ಷ್ಮೀ ದೇವಿಯನ್ನು ವರಮಹಾಲಕ್ಷ್ಮೀ ಎಂದೇ ಸಂಭೋದಿಸಲಾಗುತ್ತದೆ. ಬದಲಾದ ಸನ್ನಿವೇಶದಲ್ಲಿ ನಗರದಲ್ಲಿ ವರಮಹಾಲಕ್ಷ್ಮೀ ಹಬ್ಬದ ಆಚರಣೆ ಪ್ರತಿಷ್ಠೆ ಸಂಕೇತ ಎನಿಸಿದೆ.

ವರಮಹಾಲಕ್ಷ್ಮೀಯನ್ನು ಆರಾಧಿಸಿದರೆ ಸಂಪತ್ತು, ಧಾನ್ಯ, ಸುಖ, ಸಂತೋಷ, ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ಹೀಗಾಗಿ ರಾಜ್ಯದ ಎಲ್ಲೆಡೆ ಅದ್ದೂರಿಯಾಗಿ ವರಮಹಾಲಕ್ಮೀ ವ್ರತ ನಡೆಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಉಪವಾಸವಿದ್ದು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಮನೆ ಮುಂದೆ ರಂಗೋಲಿ, ತಳಿರು ತೋರಣ ಸಾಮಾನ್ಯವಾಗಿರುತ್ತದೆ. ಈ ಹಬ್ಬದ ಸೊಗಡು ನಗರದ ಜನತೆಯನ್ನೂ ಆಕರ್ಷಿಸಿದ್ದು, ಆಧುನಿಕತೆಯ ಅಬ್ಬರದಲ್ಲೂ ಪುರಾತನ ಆಚರಣೆಗಳು ಮುನ್ನೆಲೆಗೆ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಬಗೆ ಬಗೆಯ ಅಲಂಕಾರ

ದೇವಿಯ ಅಲಂಕಾರದಲ್ಲೂ ವೈವಿಧ್ಯತೆ ಕಾಣಬಹುದು. ಲಕ್ಷ್ಮೀ ಸಂಪತ್ತಿನ ದೇವತೆ ಆಗಿರುವುದರಿಂದ ಹಣದಿಂದ ಅಲಂಕಾರ ಮಾಡುತ್ತಾರೆ. ನಾಣ್ಯದ ಜತೆಗೆ 100, 500, 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ದೇವಿಯ ಮುಂದೆ ಜೋಡಿಸಿಟ್ಟು ಆರಾಧನೆ ಮಾಡುವುದು ಸಾಮಾನ್ಯವಾಗಿದೆ. ಅದೇ ರೀತಿ ಕಮಲದ ಹೂಗಳೆಂದರೆ ಲಕ್ಷ್ಮೀದೇವಿಗೆ ಬಹಳ ಪ್ರಿಯವಾಗಿರುವುದರಿಂದ ಕಲಶದ ಅಕ್ಕಪಕ್ಕದಲ್ಲಿ ಹೂಗಳನ್ನು ಇಟ್ಟು ಸಹ ಅಲಂಕಾರ ಮಾಡಲಾಗುತ್ತದೆ. ಇನ್ನು ಪೂಜಾ ಕೋಣೆಯಲ್ಲಿ ಕೆಂಪು ಬಣ್ಣದ ಲೈಟ್, ಕೆಂಪು ಹೂಗಳು, ಕೆಂಪು ಬಣ್ಣದ ರಂಗೋಲಿ, ದೇವಿಗೆ ಕೆಂಪು ಸೀರೆ ಉಡಿಸಿ, ಕೆಂಪು ಹರಳಿನ ಆಭರಣ, ಕೆಂಪು ಗಾಜಿನ ಬಳೆಯನ್ನು ಹಾಕಿ ಪೂಜಿಸಲಾಗುತ್ತದೆ.

ವಾರದಿಂದಲೇ ಹಬ್ಬದ ತಯಾರಿ

ರಾಜಧಾನಿ ಬೆಂಗಳೂರಿನ ಮಹಿಳೆಯರು ವಾರದ ಮುಂಚಿನಿಂದಲೇ ತಯಾರಿ ನಡೆಸಿ, ದೇವಿಯನ್ನು ವಿಶಿಷ್ಟವಾಗಿ ಅಲಂಕರಿಸಿ ಹಬ್ಬವನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸುತ್ತಾರೆ. ಇನ್ನು ವರಮಹಾಲಕ್ಷ್ಮೀ ಹಬ್ಬದಲ್ಲಿ ಧಾರ್ವಿುಕ ವಿಧಿ-ವಿಧಾನಗಳು ಎಷ್ಟು ಮುಖ್ಯವೋ ಅಲಂಕಾರಪ್ರಿಯಳಾದ ದೇವಿಯನ್ನು ಅಲಂಕರಿಸುವುದು ಕೂಡ ಅಷ್ಟೇ ಮುಖ್ಯ. ಹೀಗಾಗಿ ನಗರದ ಹೆಂಗಳೆಯರು ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಬಂಗಾರ, ಬೆಳ್ಳಿ, ರೇಷ್ಮೆವಸ್ತ್ರ, ವಿಧ-ವಿಧವಾದ ಹೂಗಳಿಂದ ಅಲಂಕರಿಸುವ ಮೂಲಕ ದೇವಿಯನ್ನು ಸಂತುಷ್ಟಗೊಳಿಸುವಲ್ಲಿ ನಿರತರಾಗಿರುತ್ತಾರೆ.

ಹಬ್ಬಕ್ಕೆ ಸೀರೆ ಟ್ರೆಂಡ್

ಹಬ್ಬ ಎಂದ ಮೇಲೆ ಸಾಮಾನ್ಯ ಸೀರೆಯುಡುವ ಮಾತೇ ಇಲ್ಲ. ಹಬ್ಬಕ್ಕೆಂದೇ ವಿಶೇಷ ಹಾಗೂ ಅದ್ದೂರಿ ಸೀರೆಗಳನ್ನು ಖರೀದಿಸುತ್ತಾರೆ. ಸೀರೆ ಎಂದರೆ ಮಾರುದೂರ ಓಡುವ ನಗರದ ಯುವತಿಯರು ಸಹ ಹಬ್ಬದ ಪ್ರಯುಕ್ತ ಹೊಸ ಸೀರೆ ಧರಿಸಿ ಸಂಭ್ರಮಿಸುತ್ತಾರೆ. ಹಬ್ಬದ ದಿನದಂದು ದೇವಸ್ಥಾನಕ್ಕೆ ತೆರಳಿ ಶ್ರದ್ಧಾ ಭಕ್ತಿಯಿಂದ ದೇವರನ್ನು ಆರಾಧಿಸುತ್ತಾರೆ. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಅಲಂಕಾರಿಕ ವಸ್ತು, ಹಣ್ಣು, ಹೂವುಗಳನ್ನು ಮುಗಿಬಿದ್ದು ಖರೀದಿಸುತ್ತಾರೆ.