ಅಪರಾಧದ ಸುಳಿಯಲ್ಲಿ ರಾಗಿಣಿ, ರಿಷಿ

ಬೆಂಗಳೂರು: ಭಿನ್ನ ಕಥಾಹಂದರದ ಕಾರಣಕ್ಕಾಗಿ ‘ದಿ ಟೆರರಿಸ್ಟ್’ ಮತ್ತು ‘ಕವಲುದಾರಿ’ ಸಿನಿಮಾಗಳು ಕುತೂಹಲ ಕೆರಳಿಸಿವೆ. ರಾಗಿಣಿ ಮುಖ್ಯಭೂಮಿಕೆ ನಿಭಾಯಿಸಿರುವ ‘ದಿ ಟೆರರಿಸ್ಟ್’ ಟ್ರೇಲರ್ ಅನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದರೆ, ಅಮೆರಿಕದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನದಲ್ಲಿ ‘ಕವಲುದಾರಿ’ ಟೀಸರ್ ಬಿತ್ತರಗೊಳಿಸಿದ್ದಾರೆ ಪುನೀತ್ ರಾಜ್​ಕುಮಾರ್. ಈ ಎರಡೂ ಸಿನಿಮಾಗಳದ್ದು ಕ್ರೖೆಂ ಥ್ರಿಲ್ಲರ್ ಪ್ರಕಾರ ಎಂಬುದು ವಿಶೇಷ.

ಈ ದಾರಿಯಲ್ಲಿ ಹಲವು ಕವಲುಗಳು

‘ಆಪರೇಷನ್ ಅಲಮೇಲಮ್ಮ’ ಯಶಸ್ಸಿನ ನಂತರ ನಟ ರಿಷಿ ‘ಕವಲುದಾರಿ’ ಚಿತ್ರದ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ. ಇದು ಪುನೀತ್ ರಾಜ್​ಕುಮಾರ್ ನಿರ್ಮಾಣ ಸಂಸ್ಥೆಯಡಿಯಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರ ಎಂಬುದು ವಿಶೇಷ. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಖ್ಯಾತಿಯ ಹೇಮಂತ್ ಎಂ. ರಾವ್ ಈ ಚಿತ್ರಕ್ಕೆ ಆಕ್ಷನ್-ಕಟ್’ ಹೇಳಿದ್ದಾರೆ. ಹಾಗಾಗಿ ‘ಕವಲುದಾರಿ’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗ ಸಿನಿಮಾ ಹೇಗಿರಲಿದೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ರಿಷಿ ಸಂಚಾರಿ ಪೊಲೀಸ್. ಅರಮನೆ ಸಮೀಪದಲ್ಲಿರುವ ರಸ್ತೆಯ ಕಾಮಗಾರಿ ಸಮಯದಲ್ಲಿ ಮನುಷ್ಯರ ಮೂಳೆಗಳು ಸಿಗುತ್ತವೆ. ರಿಷಿ ಟ್ರಾಫಿಕ್ ಪೊಲೀಸ್ ಆಗಿದ್ದರೂ, ಮೂಳೆಗಳ ಹಿಂದಿನ ರಹಸ್ಯ ತಿಳಿದುಕೊಳ್ಳಲು ತನಿಖೆ ಆರಂಭಿಸುತ್ತಾರೆ. ಮೇಲಧಿಕಾರಿಗಳ ಬೈಗುಳ. ಇಂಥ ಬಿಡಿ ಬಿಡಿ ಅಂಶಗಳ ಮೂಲಕ ನಿರೀಕ್ಷೆಯ ಮೈಲೇಜ್ ಹೆಚ್ಚಿಸುವ ಕೆಲಸ ಮಾಡಿದ್ದಾರೆ ನಿರ್ದೇಶಕ ಹೇಮಂತ್ ರಾವ್. ‘ಕವಲುದಾರಿ’ಯಲ್ಲಿ ಅಚ್ಯುತ್​ಕುಮಾರ್ ಅವರದ್ದು ಪತ್ರಕರ್ತನ ಪಾತ್ರ. ಅನಂತ್​ನಾಗ್ ಕೂಡ ಟೀಸರ್​ನಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ಬಗ್ಗೆ ನಿರ್ದೇಶಕರು ಗೌಪ್ಯತೆ ಕಾಯ್ದುಕೊಂಡಿದ್ದಾರೆ.

ಭಯ, ಬಾಂಬ್ ಮತ್ತು ಬೆಂಗಳೂರು

ಬೆಂಗಳೂರಿನ ಚರ್ಚ್​ಸಿ್ಟ್ರಟ್​ನಲ್ಲಿ ನಡೆದ ಬಾಂಬ್ ದಾಳಿಯಿಂದ ಪ್ರೇರಣೆ ಪಡೆದು ನಿರ್ವಣಗೊಂಡಿರುವ ಸಿನಿಮಾ ‘ದಿ ಟೆರರಿಸ್ಟ್’. ಪಿ.ಸಿ. ಶೇಖರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಈಗಾಗಲೇ ಪೋಸ್ಟರ್ ಮೂಲಕ ಸದ್ದು ಮಾಡಿತ್ತು. ಈಗಿನದ್ದು ಟ್ರೇಲರ್ ಸರದಿ. ಇಷ್ಟು ದಿನ ಗ್ಲಾಮರ್, ಡಿ-ಗ್ಲಾಮ್ ಹಾಗೂ ಪೊಲೀಸ್ ಅಧಿಕಾರಿ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದ ನಟಿ ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ಭಿನ್ನ ಗೆಟಪ್​ನಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಟ್ರೇಲರ್ ನೋಡಿದವರಿಗೆ ರಾಗಿಣಿ ಪಾತ್ರ ಹೀಗೆಯೇ ಇರಲಿದೆ ಎಂಬ ಗಟ್ಟಿ ತೀರ್ವನಕ್ಕೆ ಬರುವುದು ಸ್ವಲ್ಪ ಕಷ್ಟವಾಗಬಹುದು. ಅಷ್ಟರ ಮಟ್ಟಿಗೆ ರಹಸ್ಯ ಕಾಯ್ದುಕೊಳ್ಳುತ್ತಲೇ ಟ್ರೇಲರ್ ಸಿದ್ಧಪಡಿಸಿದ್ದಾರೆ ನಿರ್ದೇಶಕರು. ‘ಕೆಲವೊಂದು ಯುದ್ಧಗಳು ಶಾಂತಿ ಪಡೆಯು ವುದಕ್ಕೋಸ್ಕರವೇ ನಡೆಯುತ್ತವೆ..’, ‘ನಮ್ಮ ಭಯ ನಮ್ಮ ಸಾವಿಗೆ ಕಾರಣವಾಗುತ್ತೆ ಎನ್ನುವುದಾದರೆ ನಾವ್ ಸಾಯಬಾರದು, ನಮ್ ಭಯಾನಾ ಸಾಯಿಸ್ಬೇಕು’ ಎಂಬಿತ್ಯಾದಿ ಖಡಕ್ ಸಂಭಾಷಣೆಗಳು ಟ್ರೇಲರ್ ತೂಕವನ್ನು ಹೆಚ್ಚಿಸಿವೆ.