More

    ರವಿ ಬೆಳಗೆರೆ ಅಂಕಣ| ಮನಸು ಸರಿಯಿಟ್ಟುಕೊಳ್ಳಲಿಕ್ಕೆ ಅವರೇನೇನು ಮಾಡುತ್ತಿದ್ದರೋ?

    ‘ಸಿಟ್ಟು ಮಾಡಿಕೊಂಡಾಗ ಎಷ್ಟು ಚೆನ್ನಾಗಿ ಕಾಣ್ತೀಯ’ ಅಂತ ಮುನಿದ ಗೆಳತಿಗೋ, ಹೆಂಡತಿಗೋ ಹೇಳಲಿಕ್ಕೆ ಚೆಂದ. ಏಕೆಂದರೆ, ಅವರದು ಹುಸಿ ಮುನಿಸು. ಆದರೆ ಸಿಟ್ಟು ಬಂದ ಮನುಷ್ಯನ ಮುಖ ನೋಡಿದ್ದೀರಾ?

    ಪ್ರೀತಿಯ ಮಾತಾಡುತ್ತ ಕುಳಿತಾಗ ಕಣ್ಣುಗಳು ಸಾಫ್ಟ್ ಆಗಿರುತ್ತವೆ: ಗಮನಿಸಿ ನೋಡಿ. ಆದರೆ ಕಾಮದ ಚಡಪಡಿಕೆ ಆರಂಭವಾಗಿ ಮನುಷ್ಯ ಉನ್ಮತ್ತನಾಗುತ್ತಿದ್ದಂತೆಯೇ ಆ ಕಣ್ಣುಗಳ ಅಸಲಿಯತ್ತೇ ಬೇರೆ. ಮದುವೆ ಮನೆಯ ಹೆಂಗಳೆಯರ ಗುಂಪಿನ ನಡುವೆ ತನ್ನ ಗೆಳತಿಯನ್ನು ರವಿ ಬೆಳಗೆರೆ ಅಂಕಣ| ಮನಸು ಸರಿಯಿಟ್ಟುಕೊಳ್ಳಲಿಕ್ಕೆ ಅವರೇನೇನು ಮಾಡುತ್ತಿದ್ದರೋ?ಹುಡುಕುವ ಹುಡುಗನ ಕಣ್ಣಿಗೂ, ಬಸ್​ಸ್ಟಾಪಿನಲ್ಲಿ ನಿಂತುಕೊಂಡ ಹೆಂಗಸರತ್ತ ಎಗಾದಿಗಾ ನೋಡುವ ಗಂಡಸಿನ ಕಣ್ಣಿಗೂ ಎಂಥ ವ್ಯತ್ಯಾಸವಿರುತ್ತದೋ ಗಮನಿಸಿ. ಗಮನಿಸಬೇಕಾದದ್ದು ಅದನ್ನಷ್ಟೇ ಅಲ್ಲ- ಅರಿಷಡ್ವರ್ಗಗಳು ಅಂತ ಯಾವ್ಯಾವುದನ್ನು ಕ್ಲಾಸಿಫೈ ಮಾಡಿದ್ದಾರೋ, ಅವೆಲ್ಲವೂ ನಮ್ಮ ಕಣ್ಣುಚಹರೆ ಬದಲಿಸುತ್ತವೆ. ಕಾಮದ ಚಡಪಡಿಕೆ, ಕ್ರೋಧದ ಉನ್ಮಾದ, ಮದವೇರಿದ ಮುಹೂರ್ತ, ಲೋಭದ ಘಳಿಗೆಗಳು, ಮಾತ್ಸರ್ಯದ ಮಡುವಿನಲ್ಲಿನ ಹೊಯ್ದಾಟ, ಮೋಹದ ಪರಾಕಾಷ್ಠೆ ತಲುಪಿದ ಸ್ಥಿತಿ-ಇವೆಲ್ಲವೂ ನಮ್ಮ ಕಣ್ಣು ಮತ್ತು ಚಹರೆಯನ್ನು ವಿಕಾರಗೊಳಿಸುತ್ತವೆ.

    ಎಂಥ ಮಾಮೂಲು ರೂಪದವರಾದರೂ ಸಂತೋಷವಾಗಿ ಮನಬಿಚ್ಚಿ ನಗುವಾಗ ಚೆಂದ ಕಾಣುತ್ತಾರೆ. ಆದರೆ ಪರಮ ಸ್ಪುರದ್ರೂಪಿ ಕೂಡ ಯಾರನ್ನಾದರೂ ಗೇಲಿ ಮಾಡಿ, ಅಪಹಾಸ್ಯ ಮಾಡಿ, ಸ್ಯಾಡಿಸ್ಟ್ ವರ್ತನೆ ತೋರಿಸಿ ನಕ್ಕಾಗ ಮುಖ ಕುರೂಪಕ್ಕೆ ತಿರುಗುತ್ತದೆ. ಹುಸಿಕೋಪ ಮುಖವನ್ನು ಮುದ್ದಾಗಿ ಕಾಣುವಂತೆ ಮಾಡುತ್ತದೆ. ಸಾತ್ವಿಕ ಸಿಟ್ಟು ನಿಮ್ಮ ಬಗ್ಗೆ ಗೌರವ ಮೂಡುವಂತೆ ಮಾಡುತ್ತದೆ. ಆದರೆ, ಒಂದು ಸಿಡುಕು ಧರಿಸಿಕೊಂಡು ಬಿಡಿ? ನಿಮಗೆ ನೀವೇ ಅಗ್ಲಿ ಅನ್ನಿಸತೊಡಗುತ್ತೀರಿ. Face is the index of mind ಅನ್ನುವುದು ಉಳಿದೆಲ್ಲ ಸಂದರ್ಭಗಳಲ್ಲಿ ಸತ್ಯವಾಗದೆ ಇರಬಹುದು. ಆದರೆ ಸಿಟ್ಟು, ಕಾಮ, ದುರಾಸೆ, ಸಲ್ಲದ ಮೋಹ ಮತ್ತು ಹೊಟ್ಟೆ ಸಂಕಟಗಳಿಗೆ ಬಿದ್ದಾಗ ನಮ್ಮ ನಿಯಂತ್ರಣ ಮೀರಿ ನಾವು ಕುರೂಪಿಗಳಾಗಿ ಕಾಣತೊಡಗುತ್ತೇವೆ. ಇನ್ನೂ ಒಂದು ಗಮನಿಸಿ- ನಾವು ನಗುವಾಗ ಮುಖ ಮುಚ್ಚಿಕೊಳ್ಳುವುದಿಲ್ಲ. ಆದರೆ ಮುಖ ಮುಚ್ಚಿಕೊಂಡು ಅಳುತ್ತೇವೆ. ಅಳುವಾಗ ಅಸಹ್ಯವಾಗಿ ಕಾಣುತ್ತೇವೆ ಎಂಬುದಕ್ಕಲ್ಲ ನಿಸ್ಸಹಾಯಕರಾಗಿ ಕಾಣುತ್ತೇವೆ ಎಂಬ ಕಾರಣಕ್ಕೆ ಮುಖ ಮುಚ್ಚಿಕೊಳ್ಳುತ್ತೇವೆ. ತೀರ ಮುಖ ಮುಚ್ಚಿಕೊಳ್ಳಲಿಕ್ಕೂ ಆಗದಂತೆ ಅಳುತ್ತಿದ್ದೇವೆಂದರೆ, ನಾವು ನಿಸ್ಸಹಾಯಕತೆಯ ಪರಮಾವಧಿ ತಲುಪಿದ್ದೇವೆ ಅಂತಲೇ ಅರ್ಥ. ಪ್ರೇಮಮಯ ಸ್ಥಿತಿಯಲ್ಲಿರುವ ಮುಖದ ಸೌಂದರ್ಯ ಕಾಮದ ಹಂತಕ್ಕೆ ತಲುಪುವ ಹೊತ್ತಿಗೆ ವಿರೂಪಗೊಂಡು ಬಿಡುತ್ತದೆ. ಭಾವನೆಗಳಂತೆಯೇ ಮುಖದ ಸ್ನಾಯುಗಳಲ್ಲೂ ಆ ಅಗ್ರೆಸಿವ್​ನೆಸ್ ವ್ಯಕ್ತಗೊಂಡು ಬಿಡುತ್ತದೆ.

    ವಿಪರೀತ ಲೋಭಿಯೊಬ್ಬನು ಹಣ ಕೊಡಲೇ ಬೇಕಾದಂತಹ ಸ್ಥಿತಿಯಲ್ಲಿದ್ದಾಗ ಅವನ ಮುಖ ಹೇಗೆ ಬದಲಾಗುತ್ತದೋ ಗಮನಿಸಿ. ಅಂಥದೇ ಅಗ್ಲಿನೆಸ್ ಮೋಹಿ, ಮತ್ಸರಿಯ ಮುಖದಲ್ಲಿ ಕಂಡುಬಿಡುತ್ತದೆ. ಅವರು ಶತಪ್ರಯತ್ನ ಮಾಡಿದರೂ ಅದನ್ನು ಅವಿತಿಡಲಾರರು.

    ಮುಖ್ಯವಾಗಿ ಕಣ್ಣು ರಹಸ್ಯವನ್ನು ಬಿಟ್ಟುಕೊಟ್ಟು ಬಿಡುತ್ತದೆ. ಕೆಲವರನ್ನು ನೋಡಿದ ಕೂಡಲೇ ‘ಈತ ಗರ್ವಿಷ್ಠ’ ಅನ್ನಿಸಿಬಿಡುತ್ತದೆ. ಅಂಡರ್​ವರ್ಲ್ಡ್​ಗೆ ಬರುವ ಹುಡುಗರನ್ನು ನೋಡಿದ್ದೇನಲ್ಲ? ಕೊಲೆ, ಸುಲಿಗೆ, ಮಾನಭಂಗಗಳನ್ನು ಮಾಡುತ್ತ ಮಾಡುತ್ತ ಅವರ ಕಣ್ಣೇ ಬದಲಾಗಿಬಿಡುತ್ತವೆ. ಮೊದಲಿನ ಸೌಮ್ಯಭಾವ ಉಳಿಯುವುದೇ ಇಲ್ಲ. ಎಷ್ಟೇ ವಿನಯ ತೋರಿಸಲೆತ್ನಿಸಿದರೂ ವ್ಯಕ್ತಿತ್ವದಲ್ಲಾದ ಬದಲಾವಣೆ ವ್ಯಕ್ತವಾಗಿಯೇ ಬಿಡುತ್ತದೆ. ಹೇಗೆ ರೋಗವನ್ನ ಅಥವಾ ಆರೋಗ್ಯವನ್ನ ಮುಖದಿಂದ ತೊಡೆದು ಹಾಕಲು ಸಾಧ್ಯವಿಲ್ಲವೋ ಹಾಗೆಯೇ ಅರಿಷಡ್ವರ್ಗಗಳ ರಿಫ್ಲೆಕ್ಷನ್​ಗಳನ್ನು ಮುಚ್ಚಿಡಲಾಗುವುದಿಲ್ಲ.

    ಪುಟ್ಟ ಮಗುವಿನ ಮಂದಹಾಸ, ಅದು ಶಾಲೆಗೆ ಸೇರುವ ಹೊತ್ತಿಗಾಗಲೇ ಮರೆಯಾಗಿಬಿಡುತ್ತದೆ. ಎಂಟು ವರ್ಷದ ಮುದ್ದಾದ ಹುಡುಗಿಯ ಮುಖವನ್ನು ಮಾತ್ಸರ್ಯ ಕೆಡಿಸಿಬಿಡುತ್ತದೆ. ಆರೋಗ್ಯವಂತ-ಸ್ಪುರದ್ರೂಪಿ ಯುವಕನ ಮುಖವನ್ನು ಕ್ರೋಧ ಕೆಡಿಸಿದಂತೆಯೇ ಮಧ್ಯವಯಸ್ಕನ ಮುಖವನ್ನು ಲೋಭ, ಮೋಹಗಳು ಕೆಡಿಸುತ್ತವೆ. ಶ್ರೀಮಂತನ ಮದ, ಇಳಿವಯಸ್ಸಿನವನ ಕಾಮ ಎರಡೂ ಅಸಹ್ಯಕರ. ಆದರೆ ರಮಣ ಮಹರ್ಷಿಯ ನಗು, ಮದರ್ ಥೆರೇಸಾರ ಮೌನ, ಬಾಬಾ ಅಮ್ಟೆಯ ಬೊಚ್ಚುಬಾಯಿ, ಗಾಂಧೀಜಿಯ ನಗೆ-ಅವೆಲ್ಲ ಎಷ್ಟು ಚೆಂದ ಅಲ್ಲವೇ?

    ಮನಸ್ಸನ್ನು ಸರಿಯಿಟ್ಟುಕೊಳ್ಳಲಿಕ್ಕೆ ಅವರು ಏನೇನು ಮಾಡುತ್ತಿದ್ದರೋ? ಹಾಗಾಗಿ ಅವರ ಮುಖಗಳು ತುಂಬ ಚೆಂದವೆನಿಸುತ್ತವೆ! ಅಲ್ಲಿ ಸ್ಪುರದ್ರೂಪ ಇರದಿದ್ದರೂ…

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts