More

    ಸತತ ಸೋಲುಗಳಿಂದ ಕಂಗೆಟ್ಟಿದ್ದೀರಾ… ಇಲ್ಲೂ ಸಿಗಬಹುದು ಗೆಲ್ಲೋದಕ್ಕೆ ಇರುವ ಟಿಪ್ಸ್​ ! ​

    ಅಡಿಡಾಸ್ ಮತ್ತು ಪ್ಯೂಮಾ ಕಂಪನಿಗಳ ಹುಟ್ಟು ಮತ್ತು ಉತ್ಕರ್ಷವನ್ನೂ, ಅವನ್ನು ಹಿಂದಿಕ್ಕಿ ನೈಕಿ ನಂಬರ್ ವನ್ ಬ್ರಾಂಡ್ ಆಗಿದ್ದನ್ನೂ ಕಳೆದೆರಡು ಲೇಖನಗಳಲ್ಲಿ ಓದಿದ್ದೀರಿ. ಈ ಲೇಖನದಲ್ಲಿ ಮೈಕೆಲ್ ಜೋರ್ಡಾನ್ ಹೇಗೆ ನೈಕಿಯ ಜತೆ ಸಹಿ ಮಾಡುವಂತಾಯಿತು ಮತ್ತು ಇದೊಂದು ಹೆಜ್ಜೆ ನೈಕಿಯ ಭವಿಷ್ಯವನ್ನೇ ಹೇಗೆ ಬದಲಾಯಿಸಿತು ಎಂಬುದನ್ನು ನೋಡೋಣ.

    ಸತತ ಸೋಲುಗಳಿಂದ ಕಂಗೆಟ್ಟಿದ್ದೀರಾ... ಇಲ್ಲೂ ಸಿಗಬಹುದು ಗೆಲ್ಲೋದಕ್ಕೆ ಇರುವ ಟಿಪ್ಸ್​ ! ​1983ರಲ್ಲಿ ನೈಕಿ ಕಂಪನಿಯ ಬಳಿ ಹೆಸರುವಾಸಿಯಾದ ಆಟಗಾರರು ಬೆರಳೆಣಿಕೆಯಷ್ಟಿದ್ದರು. ಅಡಿಡಾಸ್ ನಂಬರ್ ಒನ್ ಬ್ರಾಂಡ್ ಆಗಿತ್ತು. ಮೈಕೆಲ್ ಜೋರ್ಡಾನ್ ಆಗ ಉದಯೋನ್ಮುಖ ಆಟಗಾರ. ಈತ ಭವಿಷ್ಯದ ಬಾಸ್ಕೆಟ್​ಬಾಲ್ ತಾರೆಯಾಗುತ್ತಾನೆಂದು ಎಲ್ಲರೂ ಭವಿಷ್ಯ ನುಡಿದಿದ್ದರು. ಎಲ್ಲ ಶೂ ಬ್ರಾಂಡ್​ಗಳೂ ಮೈಕೆಲ್​ರನ್ನು ಸಹಿ ಮಾಡಿಸಲು ಕಾತರರಾಗಿದ್ದರೂ ಆತ ಅಡಿಡಾಸ್ ಜತೆ ಒಪ್ಪಂದ ಮಾಡಿಕೊಳ್ಳಲು ಕಾತರನಾಗಿದ್ದ. ಬರೀ ಜೋರ್ಡಾನ್ ಮಾತ್ರವಲ್ಲ, ಎಲ್ಲ ಆಟಗಾರರಿಗೂ ಅಡಿಡಾಸ್ ಅಂದರೆ ಸೆಳೆತ. ಗೆದ್ದವರ ಜತೆಯೇ ತಾನೇ ಎಲ್ಲರೂ ಇರಲು ಬಯಸುವುದು? ಅದಕ್ಕೆ ಆಟಗಾರರೇನು ಹೊರತಾಗಿರಲಿಲ್ಲ. ಆದರೆ ಅಡಿಡಾಸ್ ಯಾಕೋ ಜೋರ್ಡಾನ್ ಜತೆ ಒಪ್ಪಂದ ಮಾಡಿಕೊಳ್ಳುವುದರಲ್ಲಿ ಎಡವಿತು. ತನ್ನ ಕಾಲ ಮೇಲೆ ತಾನೇ ಕಲ್ಲಲ್ಲ, ಬಂಡೆಗಲ್ಲನ್ನೇ ಹಾಕಿಕೊಂಡಿತು!

    ಜೋರ್ಡಾನ್ ಆಗತಾನೇ ಎನ್​ಬಿಎ ಪ್ರವೇಶಿಸಿದ್ದ. ಆತ ಒಂದೂ ಪಂದ್ಯವನ್ನು ಆಡಿರಲಿಲ್ಲ. ಅಡಿಡಾಸ್​ನಿಂದ ಜೋರ್ಡಾನ್​ಗೆ ವಿಶೇಷ ಆಹ್ವಾನವೂ ಬಂದಿರಲಿಲ್ಲ. ಆದ್ದರಿಂದ ಆತ ಬಹಳ ನಿರಾಶನಾಗಿದ್ದ. ಹಾಗಂತ ಅಡಿಡಾಸ್ ಜೋರ್ಡಾನ್​ನನ್ನು ಗಮನಿಸಿರಲಿಲ್ಲ ಎಂದಲ್ಲ, ಬೇರೆಲ್ಲ ಸೂಪರ್ ಸ್ಟಾರ್​ಗಳಿಗೆ ಕೊಡುವಂತೆ ಅಡಿಡಾಸ್ ಜೋರ್ಡಾನ್​ಗೂ ಒಂದು ಲಕ್ಷ ಡಾಲರ್ ಪ್ರತಿವರ್ಷ ಕೊಡುವ ಒಪ್ಪಂದಕ್ಕೆ ಮುಂದಾಯಿತು. ತನ್ನನ್ನು ವಿಶೇಷವಾಗಿ ಗುರ್ತಿಸಬೇಕು ಎಂದು ಬಯಸಿದ್ದ ಜೋರ್ಡಾನ್​ಗೂ, ಮಗನ ವಿಶೇಷ ಪ್ರತಿಭೆಗೆ ವಿಶೇಷವಾದ ಮೊತ್ತವನ್ನೇ ಸಹಜವಾಗಿ ನಿರೀಕ್ಷಿಸುತ್ತಿದ್ದ ಮೈಕೆಲ್ ತಂದೆಗೂ ಅಡಿಡಾಸ್​ನ ‘ಎಲ್ಲ ಸೂಪರ್ ಸ್ಟಾರ್​ಗಳಂತೆ ನೀವೂ’ ಎಂಬ ಸಾಮಾನ್ಯೀಕರಣ ಕೊಂಚವೂ ಒಪ್ಪಿಗೆಯಾಗಲಿಲ್ಲ.

    1983ರಲ್ಲಿ ನೈಕಿಯ ಮೊದಲ ತ್ರೖೆಮಾಸಿಕ ಆಯವ್ಯಯ ನಷ್ಟವನ್ನು ತೋರಿಸುತ್ತಿತ್ತು. ಈ ಸಂದರ್ಭದಲ್ಲಿ ನೈಕಿಗೆ ಎನ್​ಬಿಎ ಆಟಗಾರನೊಬ್ಬನ ಅವಶ್ಯಕತೆ ಬಹಳವಿತ್ತು. 1984ರ ಸುಮಾರಿಗೆ ಎನ್​ಬಿಎಯ ಪ್ರತಿಭಾನ್ವಿತ ಮತ್ತು ಮುಂದೆ ಹೆಸರು ಮಾಡಬಲ್ಲ ಸಾಮರ್ಥ್ಯವಿರುವ ಆಟಗಾರನಿಗಾಗಿ ನೈಕಿ ತೀವ್ರ ಹುಡುಕಾಟ ನಡೆಸಿತು. ಮೈಕೆಲ್ ಜೋರ್ಡಾನ್ ತಮ್ಮ ಕಂಪನಿಯನ್ನು ಮೇಲೆತ್ತಬಲ್ಲ ಆ ಆಟಗಾರ ಎಂದು ನೈಕಿ ನಿರ್ಧರಿಸಿತು. ಆದರೆ ಮಜ ನೋಡಿ! ಅಡಿಡಾಸ್ ಬ್ರಾಂಡ್ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಜೋರ್ಡಾನ್ ನೈಕಿಯೊಂದಿಗೆ ಮೀಟಿಂಗ್ ನಡೆಸಲೂ ತಯಾರಿರಲಿಲ್ಲ! ಈಗ ನಂಬರ್ ಒನ್ ಬ್ರಾಂಡ್ ಆಗಿರುವ ನೈಕಿ ಎಲ್ಲಿ? ಎನ್​ಬಿಎಯಲ್ಲಿ ಒಂದೂ ಪಂದ್ಯವಾಡದ ಹೊಸ ಆಟಗಾರನೊಬ್ಬ ಮಾತುಕತೆಗೇ ನಿರಾಕರಿಸಿದ ಆ ಕಂಪನಿಯೆಲ್ಲಿ?

    ಆದರೆ ನೈಕಿಯ ಮಾಲಿಕ ಫಿಲ್ ನೈಟ್ ಈ ನಿರಾಕರಣೆಯಿಂದ ವಿಚಲಿತವಾಗಲಿಲ್ಲ. ಅದನ್ನು ತನ್ನ ಅವಮಾನ ಎಂದು ತಿಳಿದುಕೊಳ್ಳಲಿಲ್ಲ. ಅರೇ ಈ ಹೊಸ ಹುಡುಗ ತನ್ನ ಕಂಪನಿಯ ಜತೆ ಮಾತೂ ಆಡಲು ನಿರಾಕರಿಸಿದನಲ್ಲ ಎಂದು ಕೋಪಿಸಿಕೊಂಡು ತನ್ನ ಪ್ರಯತ್ನ ಬಿಟ್ಟುಬಿಡಲಿಲ್ಲ! ಫಿಲ್​ಗೆ ಗೊತ್ತಿತ್ತು! ಮೈಕೆಲ್ ಜೋರ್ಡಾನ್ ಅಷ್ಟು ಸುಲಭದಲ್ಲಿ ಬಿಟ್ಟು ಕೊಡುವಂತಹ ಆಟಗಾರ ಅಲ್ಲವೆಂದು! ಆತನ ಜತೆ ಸೇರಿದರೆ ನೈಕಿ ಎರುವ ಎತ್ತರದ ಬಗ್ಗೆ ಫಿಲ್ ಊಹಿಸಿದ್ದ. ಇತ್ತ ಜೋರ್ಡಾನ್ ತನ್ನ ಏಜೆಂಟ್​ಗೆ ಹೇಳಿದ್ದ ‘ಏನಾದರೂ ಆಗಲಿ ನಾನು ಅಡಿಡಾಸ್​ಗೇ ಸಹಿ ಹಾಕಬೇಕು ಅಷ್ಟೇ’.

    ಫಿಲ್ ತನ್ನ ಪ್ರಯತ್ನವನ್ನು ತೀವ್ರಗೊಳಿಸಿದ. ಆತನ ಸತತ ಪ್ರಯತ್ನ ಮೈಕೆಲ್ ತನ್ನ ತಂದೆ-ತಾಯಿಯೊಂದಿಗೆ ನೈಕಿ ಜತೆ ಮಾತುಕತೆಗೆ ಬರುವಂತೆ ಮಾಡಿತು. ಮೀಟಿಂಗ್​ಗೆ ಹೋದಾಗ ಜೋರ್ಡಾನ್​ಗಾಗಿಯೇ ವಿನ್ಯಾಸ ಮಾಡಿದ್ದ ಕಪ್ಪು ಮತ್ತು ಕೆಂಪು ಬಣ್ಣದ ಶೂ ಅನ್ನು ನೀಡಲಾಯಿತು. ನೈಕಿಯ ಈ ನಡವಳಿಕೆ ಜೋರ್ಡಾನ್​ಗೆ ಬಹಳ ಇಷ್ಟವಾಯಿತು, ತಾನು ಅವರ ಜತೆ ಡೀಲ್​ಗೆ ಸಹಿ ಹಾಕಲು ಈ ಅಂಶವೂ ಕಾರಣವಾಗಿತ್ತು ಎಂದು ಆಮೇಲೆ ಸಂದರ್ಶನವೊಂದರಲ್ಲಿ ಹೇಳಿದ್ದ ಜೋರ್ಡಾನ್. ಬೇರೆಲ್ಲ ಕಂಪನಿಗಳಲ್ಲಿ ಅವರು ಕೊಟ್ಟ ಶೂಗಳನ್ನು ಆಟಗಾರರು ಹಾಕಬೇಕಿತ್ತು. ಆದರೆ ಇಲ್ಲಿ ಜೋರ್ಡಾನ್ ಆಸಕ್ತಿ, ಇಷ್ಟವನ್ನು ಗಮನಿಸಿ ಕಂಪನಿಯೊಂದು ಮೊದಲಬಾರಿ ಶೂ ತಯಾರಿಸಿತ್ತು! ಅಷ್ಟೇ ಅಲ್ಲ ನೈಕಿ ಆ ಕಾಲಕ್ಕೆ ಆಫರ್ ಮಾಡಿದ ಮೊತ್ತ ಎಲ್ಲರೂ ಅಚ್ಚರಿಪಡುವಂತಹುದ್ದಾಗಿತ್ತು! ವರ್ಷಕ್ಕೆ ಐದು ಲಕ್ಷ ಡಾಲರ್​ಗಳಂತೆ ಐದು ವರ್ಷದ ಒಪ್ಪಂದ! ಅದು ಬಾಸ್ಕೆಟ್​ಬಾಲ್ ಮಾತ್ರವಲ್ಲ ಜಗತ್ತಿನ ಯಾವುದೇ ಆಟಗಾರ ಪಡೆಯಲಿರುವ ಅತೀ ಹೆಚ್ಚಿನ ಮೊತ್ತವಾಗಿತ್ತು!

    ಈ ಸಂದರ್ಭದಲ್ಲಿ ಒಂದೂ ಮುಖ್ಯ ಪಂದ್ಯವಾಡದ ಆಟಗಾರನ ಜತೆ ಡೀಲ್ ನಡೆಸಿ ತಾನು ಬಹುದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿರುವುದು ನೈಕಿಯ ಮಾಲಿಕ ಫಿಲ್ ನೈಟ್​ಗೆ ಗೊತ್ತಿತ್ತು. ಅದಕ್ಕೆ ಜೋರ್ಡಾನ್ ಎದುರಿಗೆ ಮೂರು ಸವಾಲುಗಳನ್ನಿಟ್ಟು ಈ ಮೂರರಲ್ಲಿ ಒಂದು ಕರಾರನ್ನು ಪೂರ್ತಿಗೊಳಿಸಬೇಕು, ಇಲ್ಲವಾದರೆ ಎರಡು ವರ್ಷ ಮೊದಲೇ ಅಂದರೆ ಮೂರುವರ್ಷಕ್ಕೆ ಒಪ್ಪಂದ ಕೊನೆಗೊಳ್ಳುತ್ತದೆ ಎಂಬುದನ್ನು ಹೇಳಲಾಯಿತು. ಆ ಮೂರು ಸವಾಲುಗಳೆಂದರೆ ಮೊದಲನೆಯದು ವರ್ಷದ ರೂಕಿ ಪ್ರಶಸ್ತಿ ಪಡೆಯುವುದು, ಎರಡನೆಯದು ಆಲ್ ಸ್ಟಾರ್ ಆಗುವುದು, ಮೂರನೆಯದು ಎನ್​ಬಿಎಯಲ್ಲಿ ಸರಾಸರಿ ಇಪ್ಪತ್ತು ಪಿಪಿಜಿ ಪಡೆಯುವುದು. ಇವು ಯಾವುದೂ ಆಗದಿದ್ದರೆ ಮೂರು ವರ್ಷದಲ್ಲಿ ಕನಿಷ್ಟ ನಲವತ್ತು ಲಕ್ಷ ಡಾಲರ್ ಮೌಲ್ಯದ ಶೂಗಳು ಮಾರಾಟವಾಗಬೇಕು ಎಂಬುದು ಮತ್ತೊಂದು ಕರಾರಾಗಿತ್ತು.

    ಆದರೆ ಜೋರ್ಡಾನ್​ಗೆ ಇನ್ನೂ ಅಡಿಡಾಸ್ ಜತೆ ಒಪ್ಪಂದ ಮಾಡಿಕೊಳ್ಳುವ ಮನಸ್ಸು! ಆಗ ಆತ ನೈಕಿ ಕೊಟ್ಟ ಆಫರ್ ಅನ್ನು ಅಡಿಡಾಸ್ ಕೊಟ್ಟರೆ ತತಕ್ಷಣ ಅಡಿಡಾಸ್ ಜತೆ ಒಪ್ಪಂದ ಮಾಡಿಕೊಳ್ಳುವುದಾಗಿ ಹೇಳಿ ಕಳುಹಿಸಿದ! ಆಗ ಅಡಿಡಾಸ್ ಅದನ್ನು ತಿರಸ್ಕರಿಸಿತು. ಬಹುಶಃ ಅಡಿಡಾಸ್ ಮಾಡಿದ ಬಹುದೊಡ್ಡ ತಪ್ಪು ಇದು! ಯಶಸ್ಸಿನ ಅಲೆಯಲ್ಲಿ ತೇಲುವಾಗ ಈ ರೀತಿಯ ಸಣ್ಣದೊಂದು ಅಜಾಗರೂಕತೆ ಇಣುಕಿದ್ದು ಸಹಜವೇನೋ! ಆದರೆ ಜೋರ್ಡಾನ್​ರನ್ನು ತಿರಸ್ಕರಿಸಿದ್ದಕ್ಕಿಂತ ಅದಕ್ಕೆ ಕಂಪನಿ ಹೇಳಿದ ಕಾರಣ ವಿಚಿತ್ರವಾಗಿತ್ತು. ಅದೇನೆಂದರೆ ಶೂ ಜಾಹೀರಾತಿಗೆ ಜೋರ್ಡಾನ್ ಎತ್ತರ ಬಹಳ ಕಡಿಮೆ ಎಂಬುದು! ಈ ಕಾರಣ ನೀಡುವ ಮೂಲಕ ಜೋರ್ಡಾನ್​ನೊಂದಿಗೆ ಒಪ್ಪಂದವನ್ನು ಅಡಿಡಾಸ್ ನಿರಾಕರಿಸಿತು! ಅಂದಹಾಗೆ ಜೋರ್ಡಾನ್ ಎತ್ತರ 6.6 ಅಡಿಗಳು!

    ನಂತರ ಜೋರ್ಡಾನ್ ನೈಕಿಯೊಂದಿಗಿನ ಒಪ್ಪಂದಕ್ಕೆ ಸಹಿ ಮಾಡಿದ. ಪಾಪ! ಅಡಿಡಾಸ್​ಗೇನು ಗೊತ್ತಿತ್ತು, ತಾವು ಎತ್ತರ ಸಾಲದೆಂದು ನಿರಾಕರಿಸಿದ ಆರಡಿ ಆರಿಂಚು ಎತ್ತರದ ಈ ಹುಡುಗ ಬಾಸ್ಕೆಟ್ ಬಾಲ್​ಗೇ ಪರ್ಯಾಯಪದವಾಗಿ ಬೆಳೆದು ನಿಲ್ಲುತ್ತಾನೆಂದು! ಮೂರುವರ್ಷದೊಳಗೆ ಪೂರೈಸಬೇಕಿದ್ದ ಮೂರು ಸವಾಲುಗಳ ಪೈಕಿ ಒಂದನ್ನು ಸಾಧಿಸಬೇಕಿದ್ದ ಸವಾಲು ಹೊಂದಿದ್ದ ಜೋರ್ಡಾನ್ ಮೂರನ್ನೂ ಒಂದೇ ವರ್ಷದೊಳಗೆ ಸಾಧಿಸಿಬಿಟ್ಟ! ಅದೂ ಅತ್ಯುತ್ತಮ ಪ್ರದರ್ಶನದೊಂದಿಗೆ! ಜೋರ್ಡಾನ್ ಎಳೆಯರ ಆರಾಧ್ಯದೈವವೇ ಆದ! ’Be Like Mike’ ಎನ್ನುವುದು ಮಕ್ಕಳ ಬಾಯಲ್ಲಿ ನಲಿಯುವ ವಾಕ್ಯವಾಯಿತು.

    ನೈಕಿ ಸಹಿ ಮಾಡಿದ ಅತ್ಯತ್ತಮ ಡೀಲ್ ಇದಾಯಿತು! ನೈಕಿ ಶೂಗಳ ಮಾರಾಟ ಉತ್ತುಂಗಕ್ಕೇರಿತು! 1984ರಲ್ಲಿ ಜೋರ್ಡಾನ್​ಗೋಸ್ಕರ ವಿಶೇಷವಾಗಿ ತಯಾರಿಸಿದ್ದ ಶೂ ಅದೇ ವರ್ಷ ಏರ್ ಜೋರ್ಡಾನ್ ಎಂಬ ಹೆಸರಿನೊಂದಿಗೆ ಬಿಡುಗಡೆಯಾಯಿತು. ಮೂರು ವರ್ಷದಲ್ಲಿ ನಾಲ್ಕು ಮಿಲಿಯನ್ ವ್ಯವಹಾರ ಹಿಗ್ಗಿಸುವ ಕರಾರು ಹಾಕಲಾಗಿತ್ತಷ್ಟೇ! ಒಂದೇ ವರ್ಷದಲ್ಲಿ ಏರ್​ಜೋರ್ಡಾನ್ ನೂರು ಮಿಲಿಯನ್ ಡಾಲರ್ ವ್ಯವಹಾರ ಮಾಡಿಬಿಟ್ಟಿತು! ಅಂದಿನ ಕಪ್ಪು, ಕೆಂಪು ಬಣ್ಣದ ಏರ್ ಜೋರ್ಡಾನ್ ಕಾಲಾಂತರದಲ್ಲಿ ವಿವಿಧ ವಿನ್ಯಾಸ, ಬಣ್ಣಗಳನ್ನು ಪಡೆದುಕೊಂಡು ಇಂದಿಗೂ ಅತಿ ಹೆಚ್ಚು ಮಾರಾಟವಾಗುತ್ತಿರುವ ಖ್ಯಾತಿ ಹೊಂದಿದೆ. ಕಂಪನಿಗೆ, ಜೋರ್ಡಾನ್​ಗೆ ಬಿಲಿಯಗಟ್ಟಲೆ ಲಾಭ ತಂದುಕೊಟ್ಟಿದೆ!

    ಅಂದು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಇಂದು ನೈಕಿಯನ್ನು ಈ ಸ್ಥಾನಕ್ಕೆ ತಂದುನಿಲ್ಲಿಸಿದೆ ಅಂದರೆ ಯಾವುದೇ ಅತಿಶಯೋಕ್ತಿ ಅಲ್ಲ! ಒಂದು ವೇಳೆ ಅಡಿಡಾಸ್ ಈ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿದ್ದರೆ ಬಹುಶಃ ಅದು ಇಂದು ನೈಕಿಯ ಜಾಗದಲ್ಲಿರುತ್ತಿತ್ತು! ಅಂದರೆ ಅಡಿಡಾಸ್​ನ ನಂಬರ್ ಒನ್ ಸ್ಥಾನ ಅಬಾಧಿತವಾಗಿರುತ್ತಿತ್ತು! ಅಷ್ಟೇ ಅಲ್ಲ, ನೈಕಿಯ ಗುಣಮಟ್ಟ, ಒಳ್ಳೆಯ ಮಾರ್ಕೆಟಿಂಗ್ ಇವೆರಡೂ ಜೋರ್ಡಾನ್​ನಂತಹ ಬ್ರಾಂಡ್ ರಾಯಭಾರಿಯ ಜತೆ ಸೇರಿದ್ದರ ಪರಿಣಾಮವೇ ಇಂದು ನೈಕಿ ಏರಿರುವ ಎತ್ತರ.

    ವ್ಯವಹಾರವಿರಲಿ ಅಥವಾ ಬದುಕಿನ ತೀರ್ವನಗಳಿರಲಿ ಆರಂಭಿಕ ಅಡೆತಡೆಗಳನ್ನು ಮೀರಿ ಸತತ ಪ್ರಯತ್ನ ಮಾಡುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ನೈಕಿಯ ಕಥೆ ಹೇಳುತ್ತದೆ. ಅದೇ ರೀತಿ ಕಠಿಣ ಪರಿಶ್ರಮದಿಂದ ಅರ್ಹತೆಯನ್ನು ಗಳಿಸಿಕೊಂಡರೆ, ತನ್ನ ಯೋಗ್ಯತೆಯ ಬಗ್ಗೆ ಆತ್ಮವಿಶ್ವಾಸವಿದ್ದರೆ ಅವಕಾಶ ಹೇಗೆ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಮೈಕೆಲ್ ಜೋರ್ಡಾನ್ ಒಂದು ಅತ್ಯುತ್ತಮ ಉದಾಹರಣೆ.

    (ಲೇಖಕರು ಉಪನ್ಯಾಸಕರು, ಕವಯಿತ್ರಿ)

    ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿಂದಿಗಿಂತಲೂ ಬಹಳ ವಿಭಿನ್ನವಾಗಿರಲಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts