More

    ದಣಿವರಿಯದ ಸ್ಪೂರ್ತಿಯಿಂದಲೇ ಅದ್ಭುತ ಯಶಸ್ಸು ಸಾಧ್ಯ!

    ಎಲನ್ ಮಸ್ಕ್, ಆಧುನಿಕ ಜಗತ್ತಿನ ಓರ್ವ ಅದ್ಭುತ ವ್ಯಕ್ತಿ. ಕೇವಲ ಅದ್ಭುತ ಎಂದರೆ ಅದು ಮಸ್ಕ್​ಗೆ ಮಾಡುವ ಅವಮಾನ. ಇವರನ್ನು ಅತ್ಯದ್ಭುತ ವ್ಯಕ್ತಿ ಎನ್ನುವುದೇ ಸರಿ. ವರ್ಣನೆಗೆ ನಿಲುಕದ ವ್ಯಕ್ತಿತ್ವ ಎನ್ನಬಹುದಾದ, ಭವಿಷ್ಯದ ಬಗ್ಗೆ ಅಸಾಧಾರಣ ದೂರದೃಷ್ಟಿಯುಳ್ಳ ಇಂತಹ ವ್ಯಕ್ತಿಗಳು ಶತಮಾನದಲ್ಲಲ್ಲ, ಸಹಸ್ರಮಾನದಲ್ಲಿಯೂ ಹುಟ್ಟುವುದು ಬೆರಳೆಣಿಕೆಯಷ್ಟೇ! ಒಟ್ಟಿನಲ್ಲಿ ಎಲನ್ ಮಸ್ಕ್ ಓರ್ವ ವ್ಯಕ್ತಿಯಲ್ಲ ಶಕ್ತಿ! ವರ್ತಮಾನದಲ್ಲಿ ಕೂತು ಭವಿಷ್ಯವನ್ನು ನಿಯಂತ್ರಿಸುವ ದೃಷ್ಟಿಕೋನ ಹೊಂದಿರುವ ಎಲನ್ ನಮ್ಮ ನಡುವಿನ ಜಗತ್ತಿನ ಜೀವಂತ ಅದ್ಭುತ.

    ದಣಿವರಿಯದ ಸ್ಪೂರ್ತಿಯಿಂದಲೇ ಅದ್ಭುತ ಯಶಸ್ಸು ಸಾಧ್ಯ!ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪೈಕಿ ಮುಂಚೂಣಿಯಲ್ಲಿರುವ ಎಲನ್ ಪ್ರಕಾರ ಯಾವ ಕೆಲಸವೂ ಅಸಾಧ್ಯವಲ್ಲ, ಮಾಡುವ ರೀತಿಯನ್ನು ಬದಲಾಯಿಸಿಕೊಳ್ಳುವುದು ಮುಖ್ಯ. ಸಾಧಾರಣ ವ್ಯಕ್ತಿ ಕೆಲಸದಲ್ಲಿ ಸೋತರೆ ಕೆಲಸವೇ ಅಸಾಧ್ಯ ಎಂದುಕೊಳ್ಳುತ್ತಾನೆ. ಆದರೆ ಅಸಾಧಾರಣ ವ್ಯಕ್ತಿ ತಾನು ಪ್ರಯತ್ನಿಸಿದ ವಿಧಾನ ಸರಿಯಿಲ್ಲವೆಂದು ಮತ್ತೆ ಮತ್ತೆ ಪ್ರಯತ್ನಿಸುತ್ತಾನೆ. ಒಂದಲ್ಲದಿದ್ದರೆ ಮತ್ತೊಂದು ಹೊಸದಾರಿ ಹುಡುಕಿ ಕೆಲಸ ಪೂರ್ಣಗೊಳಿಸುತ್ತಾನೆ. ಈ ಪೈಕಿ ಎರಡನೇ ವರ್ಗಕ್ಕೆ ಸೇರುವವರು ಎಲನ್.

    ಇತರರು ಅಸಾಧ್ಯ ಎನ್ನುವಂಥ ಗುರಿಯನ್ನಿಟ್ಟುಕೊಂಡು ತಮ್ಮಿಂದ ತಾವೇ ಅಪಾರ ನಿರೀಕ್ಷೆಯನ್ನಿಟ್ಟುಕೊಂಡು ಅದನ್ನು ಸಾಧಿಸಲು ಶತಪ್ರಯತ್ನ ಪಡುತ್ತಿದ್ದ ಪರಿಶ್ರಮಿ ಎಲನ್. ಅವರದ್ದು ದಿನದ ಏಳು ದಿನವೂ ಕೆಲಸವೇ! ಗಂಟೆಗಳ ಪರಿವೆಯಿಲ್ಲದೇ ಕೆಲಸ! ಹಾಗಾಗಿ ಜಗತ್ತಿನ ಕಣ್ಣಿನಲ್ಲಿ ಎಲನ್ ಜಾದೂಗಾರ! ಮಾಡಲು ಸುಲಭವೆಂದು ಒಂದು ಕೆಲಸ ಮಾಡುವುದಲ್ಲ, ಯಾವುದನ್ನು ಮಾಡಲೇಬೇಕು ಅದನ್ನು ಮಾಡುವುದು ಮುಖ್ಯ ಎಂಬುದು ಅವರ ಧ್ಯೇಯ! ಝಿಪ್2, ಎಕ್ಸ್.ಕಾಮ್ ಪೇಪಾಲ್, ಸ್ಪೇಸ್ ಎಕ್ಸ್, ಟೆಸ್ಲಾ, ಸೋಲಾರ್ ಸಿಟಿ, ಹೈಪರ್ ಲೂಪ್, ಓಪನ್ HI(ಕೃತಕ ಬುದ್ಧಿಮತ್ತೆ) ನ್ಯೂರಾಲಿಂಕ್​ನಂಥ ಹತ್ತಾರು ವಿಭಿನ್ನ ಕಂಪನಿಗಳ ಸ್ಥಾಪಕ. ಇವುಗಳಲ್ಲಿ ಸ್ಪೇಸ್ ಎಕ್ಸ್, ಟೆಸ್ಲಾ, ಸೋಲಾರ್ ಸಿಟಿಗಳಂತಹ ಕಂಪನಿಗಳ ಬಗ್ಗೆ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ.

    1971ರ ಜೂನ್ 28ರಂದು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜನನ. ತಂದೆ ಅಲ್ಲಿಯವರೇ. ತಾಯಿ ಕೆನಡಿಯನ್. ಚಿಕ್ಕಂದಿನಿಂದಲೇ ಕಂಪ್ಯೂಟರ್​ನಲ್ಲಿ ಆಸಕ್ತಿ ಹೊಂದಿದ್ದ ಹುಡುಗ ಎಲನ್. ಓದಿನಲ್ಲಿ ಬ್ರಹ್ಮರಾಕ್ಷಸ! ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಹತ್ತರಿಂದ ಹದಿನೈದು ಗಂಟೆಗಳ ಕಾಲ ಓದುವ ಅಪರೂಪದವ! ಹನೆ್ನರಡರ ಹರಯದಲ್ಲೇ ಹೊಸದೊಂದು ಕಂಪ್ಯೂಟರ್ ಗೇಮ್ ಮಾಡಿ ಅದನ್ನು ಕಂಪನಿಯೊಂದಕ್ಕೆ ಐನೂರು ಡಾಲರ್​ಗೆ ಮಾರಿದ್ದ ಹುಡುಗ!

    ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯನ್ನು ಎಲನ್ ಇಷ್ಟ ಪಡುತ್ತಿರಲಿಲ್ಲ. ಹಾಗಾಗಿ ಅಲ್ಲಿನ ಸೇನೆಯಲ್ಲಿ ಕಡ್ಡಾಯ ಸೇವೆ ಸಲ್ಲಿಸದೆ ವಿದ್ಯಾಭ್ಯಾಸಕ್ಕಾಗಿ ಕೆನಡಾಕ್ಕೆ ತೆರಳಿದ. ಮತ್ತು ಅಮೆರಿಕದಲ್ಲಿ ಲಭ್ಯವಿರುವ ಹೆಚ್ಚಿನ ಆರ್ಥಿಕ ಅವಕಾಶಗಳೂ ಅದಕ್ಕೆ ಕಾರಣವಾಯಿತು. ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರಗಳಲ್ಲಿ ಪದವಿ ಪಡೆದ ನಂತರ ಮುಂದಿನ ಓದಿಗಾಗಿ ಭೌತಶಾಸ್ತ್ರ ವಿಭಾಗಕ್ಕೆ ಪ್ರವೇಶ ಪಡೆದರೂ ಮುಂದುವರಿಸಲಿಲ್ಲ. ಏಕೆಂದರೆ ಸಾಫ್ಟ್​ವೇರ್ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯ ಇರುವುದು ಸಹಜ ಉದ್ಯಮಶೀಲ ಲಕ್ಷಣಗಳುಳ್ಳ ಎಲನ್​ಗೆ ಗೊತ್ತಿತ್ತು. 1995ರಲ್ಲಿ ಸಹೋದರ ಕಿಂಬಲ್ ಜತೆ ಸೇರಿ ಝಿಪ್2 ಎಂಬ ಸಾಫ್ಟ್ ವೇರ್ ಕಂಪನಿ ಪ್ರಾರಂಭಿಸಿದ. ಕಂಪನಿಗೆ ಹಣಕಾಸಿನ ಬಂಡವಾಳವೂ ದೊರೆತು ಕಂಪನಿ ಬೆಳೆಯತೊಡಗಿತು. ಈ ಚಿಕ್ಕ ಹುಡುಗ ಸಿಇಓ ಆಗುವುದೇ ಎಂದು ಕಂಪನಿಯ ನಿರ್ದೇಶಕರೆಲ್ಲ ಸೇರಿ ಇವನನ್ನು ಕೆಳಗಿಳಿಸಿದರು. ನಂತರ ಆ ಕಂಪನಿಯನ್ನು ಕಾಂಪ್ಯಾಕ್​ಗೆ ಮಾರಲಾಯಿತು. ಎಲನ್​ನ ಶೇರು ಏಳು ಶೇಕಡ ಇದ್ದ ಕಾರಣ ಅವನಿಗೆ 22 ಮಿಲಿಯನ್ ಡಾಲರ್ ಸಿಕ್ಕಿತು, ಅಂದರೆ ಸುಮಾರು 150 ಕೋಟಿ ರೂಪಾಯಿಗಳು! ಇದು 1999ರ ಸಂಗತಿ. ಬೇರೆ ಯುವಕರಾಗಿದ್ದರೆ ಅಷ್ಟು ಹಣವನ್ನಿಟ್ಟುಕೊಂಡು ಆರಾಮಾಗಿ ಇರುತ್ತಿದ್ದರೇನೋ. ಆದರೆ ಎಲನ್ ಅಷ್ಟೂ ಹಣವನ್ನು ಭವಿಷ್ಯದ ಪ್ರಾಜೆಕ್ಟುಗಳಿಗೆ ಹಾಕಿಬಿಟ್ಟರು! ಸಾಧಾರಣ ವ್ಯಕ್ತಿಗಳ ದೃಷ್ಟಿಯಲ್ಲಿ ಅದು ಮೂರ್ಖನಿರ್ಧಾರ. ಆದರೆ ಎಲನ್ ಭವಿಷ್ಯವನ್ನು ನಿಯಂತ್ರಿಸಬಲ್ಲ ಬುದ್ಧಿವಂತ. ಆನ್​ಲೈನ್ ಬ್ಯಾಂಕಿಂಗ್​ಗೆ ಸಂಬಂಧಿಸಿದ ಎಕ್ಸ್.ಕಾಮ್ ಎಂಬ ಕಂಪನಿ ತೆರೆದರು. ಆನ್​ಲೈನ್ ಬ್ಯಾಂಕಿಂಗ್ ಎಂಬುದು ಆಗಿನ್ನೂ ಕಣ್ಣು ಬಿಡುತ್ತಿರುವ ಶಿಶುವಾಗಿತ್ತು. ಆದರೆ ಎಲನ್ ಅದಕ್ಕೆಂದೇ ಕಂಪನಿಯೊಂದನ್ನು ತೆರೆದಾಗಿತ್ತು ಎಂದರೆ ಅವರ ದೂರದೃಷ್ಟಿತ್ವದ ಬಗ್ಗೆ ಇನ್ನೇನು ತಾನೇ ಹೇಳಬಹುದು? ಇದೇ ಕಂಪನಿ ಮುಂದೆ ಪೇಪಾಲ್ ಎಂದು ಹೆಸರು ಪಡೆಯಿತು. ಆದರೆ ಇಲ್ಲಿಯೂ ಸಿಇಓ ಪಟ್ಟದಿಂದ ಎಲನ್​ರನ್ನು ಕೆಳಗಿಳಿಸಲಾಯಿತು! ಇ-ಬೇ ಕಂಪನಿಗೆ ಪೇಪಾಲ್ ಮಾರಾಟವಾದ ಮೇಲೆ 165 ಮಿಲಿಯನ್ ಡಾಲರ್ ಪಡೆದು ಹೊರಬಿದ್ದರು ಎಲನ್!

    ಹಳೆ ಕಂಪನಿ ಕೈಬಿಟ್ಟಿತೆಂದು ಅಳುತ್ತ ಕೂರುವ ಪೈಕಿಯಲ್ಲ ಈ ಭೂಪ! ಹೊಸ ವಿಚಾರ ಮಾಡಲು ಪುರುಸೊತ್ತಾಯಿತೆಂದು ಯೋಚಿಸಿದರು. ಈ ಬಾರಿ ಯೋಚನೆ ಭರ್ಜರಿಯಾಗೇ ಇತ್ತು! ಭೂಮಿಯಿಂದ ಆಚೆ! ಮನುಷ್ಯ ಜನಾಂಗದ ಉಳಿವಿಗೆ ಭವಿಷ್ಯದಲ್ಲಿ ಇತರ ಗ್ರಹಗಳ ಮೇಲೆ ವಾಸ ಅನಿವಾರ್ಯ ಎಂಬುದು ಮಸ್ಕ್ ಅಭಿಪ್ರಾಯವಾಗಿತ್ತು. ಮಂಗಳ ಗ್ರಹವನ್ನು ಏಕೆ ಮನುಷ್ಯ ವಾಸಸ್ಥಾನವನ್ನಾಗಿಸಬಾರದು ಎಂದು ಯೋಚಿಸಿದರು. ರಷ್ಯಾಕ್ಕೆ ಹೋಗಿ ಮಂಗಳಗ್ರಹಕ್ಕೆ ಹೋಗಲು ರಾಕೆಟ್​ಗಳನ್ನು ಖರೀದಿಸಲು ಮಾತುಕತೆ ನಡೆಸಿದರು! ಅವರ ದರ ದುಬಾರಿಯೆಂದು ವಾಪಾಸಾಗುವಾಗ ಹೊಸದೊಂದು ಯೋಚನೆ ಬಂತು, ತಾನೇಕೆ ರಾಕೆಟ್​ಗಳನ್ನು ತಯಾರಿಸಬಾರದು? ನೆನಪಿರಲಿ, ಎಲನ್ ರಾಕೆಟ್ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದವರಲ್ಲ, ಪುಸ್ತಕಗಳನ್ನು ಓದಿ ಓದಿ ರಾಕೆಟ್ ವಿಜ್ಞಾನವನ್ನೇ ಅರೆದು ಕುಡಿದ ಅಪ್ರತಿಮ ಬುದ್ಧಿವಂತ.

    ಪರಿಣಾಮವಾಗಿ ಸ್ಥಾಪಿತವಾಗಿದ್ದೇ ಸ್ಪೇಸ್ ಎಕ್ಸ್ ಕಂಪನಿ! ರಾಕೆಟ್​ಗಳ ಉತ್ಪಾದನಾ ವೆಚ್ಚವನ್ನು ಏಕೆ ತಗ್ಗಿಸಬಾರದು? ಪುನಃ ಉಪಯೋಗಿಸುವ ರಾಕೆಟ್ ತಯಾರಿಸಿದರೆ ಹೇಗೆ? ಪುನರ್ಬಳಕೆಯ ರಾಕೆಟ್? ಇವನಿಗೆ ತಲೆಕೆಟ್ಟಿದೆ ಎಂದುಕೊಂಡರು ಜನ! ಕಡಿಮೆ ಖರ್ಚಿನಲ್ಲಿ ರಾಕೆಟ್ ತಯಾರಿಸುವುದು, ಉಪಗ್ರಹ ಉಡಾವಣೆ ಮಾಡುವುದು ಮತ್ತು ರಾಕೆಟ್ ಅನ್ನು ಸುರಕ್ಷಿತವಾಗಿ ವಾಪಸ್ ತರುವುದು! ಯಾವ ಕಂಪನಿಯೂ ಇವರ ಜತೆ ಕೈಜೋಡಿಸಲು ಸಿದ್ಧವಾಗಲಿಲ್ಲ.

    ಅಂತೂ ಮೊದಲ ರಾಕೆಟ್ ಉಡಾವಣೆಗೆ ಹೊರಟಿತು. ಆದರೆ ಆ ಸಂದರ್ಭದಲ್ಲಿ ಇಂಜಿನ್​ಗೆ ಬೆಂಕಿ ಬಿದ್ದು ಭಾರೀ ನಷ್ಟವಾಯಿತು. ಎರಡನೇ ಸಲ ರಾಕೆಟ್ ಕಕ್ಷೆ ತಲುಪದೆ ವಾಪಸಾಯಿತು, ಮೂರನೇ ಸಲ ಸ್ಪೇಸ್​ಗೆ ಹೋದರೂ ದಾರಿ ತಪ್ಪಿತು. ಆಘಾತದ ಮೇಲೆ ಆಘಾತ! ಅಲ್ಲಿಯವರೆಗೆ ಎಲನ್ ದುಡಿದದ್ದೆಲ್ಲ ಕರಗಿಹೋಯಿತು. ಇನ್ನೇನು ದಿವಾಳಿಯಾಗುವ ಪರಿಸ್ಥಿತಿ, ಆದರೆ ಎಲನ್ ಅಷ್ಟು ಸುಲಭಕ್ಕೆ ಸೋಲೊಪ್ಪಿಕೊಳ್ಳುವವರಲ್ಲ! ಕೆಲವೇ ತಿಂಗಳಲ್ಲಿ ನಾಲ್ಕನೇ ಬಾರಿ ರಾಕೆಟ್ ಲಾಂಚ್ ಮಾಡುತ್ತೇನೆಂದು ಘೊಷಿಸಿದ. ಇವೆಲ್ಲ ವರ್ಷಗಟ್ಟಲೆ ಹಿಡಿಯುವ ಪ್ರಾಜೆಕ್ಟ್ ಗಳು! ಆದರೆ ಎಲನ್​ಗೆ ರಿಸ್ಕ್ ಎಂದರೆ ಇಷ್ಟ. ಬಂಗಲೆ, ಆಸ್ತಿ ಮಾರಿ ಬಾಡಿಗೆಮನೆ ಮಾಡಿ ಉಳಿದರು. ಅಂತೂ ನಾಲ್ಕನೇ ಬಾರಿ ರಾಕೆಟ್ ಯಶಸ್ವಿಯಾಯಿತು. ನಾಸಾ ಜತೆಗೆ ಬೃಹತ್ ಮೊತ್ತದ ಒಪ್ಪಂದಕ್ಕೂ ಸಹಿಯಾಯಿತು! ನಾಸಾ, ಇಸ್ರೋದಂಥ ಕಂಪನಿಗಳಿಂದಲೇ ಸಾಧ್ಯವಾಗದ ಸಾಧನೆಯನ್ನು ಈ ವ್ಯಕ್ತಿ ಮಾಡಿ ತೋರಿಸಿದರು! ಇವತ್ತು ಎಲನ್ ನಾಸಾದ ಉಪಕರಣಗಳು, ಕಾಗೋ ಮತ್ತು ಉಪಗ್ರಹಗಳನ್ನು ಉಡಾವಣೆ ಮಾಡಲು ರಾಕೆಟ್ ಒದಗಿಸುತ್ತಾರೆ.

    ಜತೆಗೆ ಟೆಸ್ಲಾ ಮೋಟರ್ಸ್​ನಲ್ಲೂ ಹಣ ಹೂಡಿದರು! ಅಲ್ಲಿ ಎಲನ್ ಎಂಥ ಪ್ರಭಾವ ಬೀರಿದರೆಂದರೆ ಕೆಲಕಾಲದಲ್ಲಿಯೇ ಟೆಸ್ಲಾ ಮೋಟರ್ಸ್​ನ ಸಿಇಓ ಆದರು! ಮೊದಲ ವಿದ್ಯುತ್​ಚಾಲಿತ ಕಾರೂ ತಯಾರಾಯಿತು. ಆದರೆ ಉತ್ಪಾದನಾ ವೆಚ್ಚ ಒಂದು ಲಕ್ಷ ಡಾಲರ್​ಗಿಂತ ಅಧಿಕವಾಯಿತು! ಕಾರು ವ್ಯಾಪಾರವಾಗುವುದಾದರೂ ಹೇಗೆ? ಮೂರನೇ ಪ್ರಯತ್ನದಲ್ಲಿ ಆ ವೆಚ್ಚ ಕಡಿಮೆಯಾದ ಮೇಲೆ ವ್ಯಾಪಾರ ಜೋರಾಯಿತು! ಕಳೆದ ವರ್ಷ ಟೆಸ್ಲಾದ ಹೊಸ ಸೈಬರ್​ಟ್ರಕ್ ಎಲೆಕ್ಟ್ರಿಕ್ ವಾಹನ ಬಿಡುಗಡೆಯಾದ ಎರಡೇ ದಿನಗಳಲ್ಲಿ 1.87 ಲಕ್ಷ ವಾಹನಗಳು ಬುಕ್ ಮಾಡಲ್ಪಟ್ಟವು! ಅದೂ ಯಾವ ಜಾಹೀರಾತು ಇಲ್ಲದೇ! ಇದು ಎಲನ್ ಮಸ್ಕ್ ಹೆಸರಿಗಿರುವ ವಿಶ್ವಾಸಾರ್ಹತೆ!

    ಎಲನ್ ಮಸ್ಕ್ ಈ ಭೂಮಿಯ ಉಳಿವಿಗೆ ಏನನ್ನಾದರೂ ಮಾಡುವ ಜವಾಬ್ದಾರಿ ನಮ್ಮದು ಎಂದೇ ನಂಬಿದವರು. ಭೂಮಿ ಇದ್ದರೆ ತಾನೇ ಮನುಕುಲ ಉಳಿದೀತು ಎಂಬ ಕಾಳಜಿ. ಸೋಲಾರ್ ಸಿಟಿ ಸ್ಥಾಪನೆ, ಪೆಟ್ರೋಲ್, ಡೀಸೆಲ್ಲುಗಳ ಗೊಡವೆಯಿಲ್ಲದ ಟೆಸ್ಲಾ ಕಾರು ಇವೆಲ್ಲ ಅದೇ ಕಾಳಜಿಯ ಪರಿಣಾಮಗಳು. ಮಂಗಳನಲ್ಲಿ ಮಾನವನ ವಾಸ್ತವ್ಯದ ಬಗ್ಗೆ ಗಂಭೀರ ಚಿಂತನೆ, ಪ್ರಯೋಗ ನಡೆಸಿದ್ದಾರೆ. 2010ರಲ್ಲಿ ಬಿಲ್ ಗೇಟ್ಸ್ ಮತ್ತು ವಾರೆನ್ ಬಫೆಟ್ ಪ್ರಾರಂಭಿಸಿದ ‘ದ ಗಿವಿಂಗ್ ಪ್ಲೆಡ್’ ಅಭಿಯಾನದಲ್ಲಿ ಎಲನ್ ಕೂಡ ಸೇರಿ ಸಮಾಜದೆಡೆಗೆ ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದ್ದಾರೆ.

    ಎಲನ್ ಎಂದೂ ವೈಫಲ್ಯವನ್ನು ಸೋಲು ಎಂದು ಪರಿಗಣಿಸಲಿಲ್ಲ, ಬದಲಾಗಿ ಕಲಿಕೆ ಎಂದು ಪರಿಗಣಿಸಿದರು. ತಮ್ಮದೇ ಕಂಪನಿಗಳಿಂದ ಅವರನ್ನು ತೆಗೆದು ಹಾಕಲಾಗಿತ್ತು, ರಾಕೆಟ್, ಇಲೆಕ್ಟ್ರಿಕ್ ಕಾರು ಯಾವುದರಲ್ಲೂ ಗೆಲುವು ತಕ್ಷಣವೇ ಕೈಹಿಡಿಯಲಿಲ್ಲ. ಸೋಲಿನಿಂದ ಬಿಡಿಸಿಕೊಂಡು ಗೆಲುವಿನ ಬೆನ್ನಟ್ಟಿ ಹೋದವರು ಎಲನ್. ಅವರ ಪ್ರಕಾರ ಸೋಲು ಒಂದು ಆಯ್ಕೆಯಷ್ಟೇ. ಅದನ್ನು ಬಿಟ್ಟು ಗೆಲುವನ್ನು ಆಯ್ಕೆ ಮಾಡುವವರಿಗೆ ಗೆಲುವೇ ಸಿಗುತ್ತದೆ ಎಂಬುದು ಅವರ ಅಂಬೋಣ. ಅವರೀಗ ಅಮೆರಿಕದ ಪ್ರಜೆ. ಜಗತ್ತಿನ ಐವತ್ತು ಟಾಪ್ ಬಿಲಿಯನರುಗಳ ಪಟ್ಟಿಯಲ್ಲಿ ಇದ್ದ ಎಲನ್ ಮಸ್ಕ್ ಈಗ ಹತ್ತರೊಳಗಿನ ಸ್ಥಾನಕ್ಕೇರಿದ್ದಾರೆ! ಜಗತ್ಪ್ರಸಿದ್ಧ ಐರನ್ ಮ್ಯಾನ್ ಪಾತ್ರಕ್ಕೆ ಎಲನ್ ವ್ಯಕ್ತಿತ್ವವೇ ಸ್ಪೂರ್ತಿ! ವ್ಯಕ್ತಿಯೊಬ್ಬ ಛಲ, ದೃಢಮನಸ್ಸು, ಸತತ ಪರಿಶ್ರಮ, ಸದಾ ಹೊಸದನ್ನು ಕಲಿಯುವ ಹಂಬಲ, ದಣಿವರಿಯದ ಸ್ಪೂರ್ತಿಯಿಂದ ಕಣ್ಣಕ್ಷಿತಿಜವನ್ನು ಮೀರಿ ಮುನ್ನಡೆಯಬಹುದು ಎಂಬುದಕ್ಕೆ ಉದಾಹರಣೆ ಎಲನ್ ಮಸ್ಕ್!

    (ಲೇಖಕರು ಉಪನ್ಯಾಸಕರು, ಕವಯಿತ್ರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts