ಲಿಮ್ಕಾ ದಾಖಲೆಯತ್ತ ಪಾಕ ಪ್ರವೀಣ

9,000 ರೀತಿಯ ತಿನಿಸು ಮಾಡುವ ಶರತ್ ಸಾಧನೆ ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಮಗನ ಸಾಧನೆ ಕಂಡು ಶರತ್ ಹೆತ್ತವರ ಸಂತಸಕ್ಕೆ ಪಾರವೇ ಇಲ್ಲ. ಸದ್ಯ ಮುಂಬೈನಲ್ಲಿ ಅಮೆರಿಕ ಮೂಲದ ಕಾರ್ನಿವಲ್ ಕ್ರೂಸ್​ಲೈನ್ ಹಡಗಿನಲ್ಲಿ ಬಾಣಸಿಗರಾಗಿ ಸೇವೆ ಸಲ್ಲಿಸುತ್ತಿರುವ ಶರತ್ ಅವರಿಗೆ ವಿವಿಧ ರಾಷ್ಟ್ರಗಳ ಹೋಟೆಲ್ ಉದ್ಯಮಿಗಳು ಭರ್ಜರಿ ಉದ್ಯೋಗದ ಆಫರ್ ನೀಡುತ್ತಿದ್ದಾರೆ.

| ಮಾದರಹಳ್ಳಿ ರಾಜು

2018ರ ಏಪ್ರಿಲ್ 27. ಅಂದು ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜು ಕ್ಯಾಂಪಸ್​ನಲ್ಲಿ ‘ಲಾಂಗೆಸ್ಟ್ ಸೋಲೋ ಕುಕ್ಕಿಂಗ್ ಮ್ಯಾರಥಾನ್ ಈವೆಂಟ್ಸ್’ನಲ್ಲಿ ಅಡುಗೆಯ ಘಮಲು. ಅಲ್ಲಿ ಎಲ್ಲರ ಗಮನ ಸೆಳೆದದ್ದು ಮಂಡ್ಯದ 26 ವರ್ಷದ ಯುವಕ ಎಂ.ಶರತ್​ಕುಮಾರ್. ಇವರು ಒಂದೇ ಸಮನೆ ಮಾಡಿದ 197 ಬಗೆಯ ಖಾದ್ಯ ಸೇರಿದ್ದವರ ಬಾಯಲ್ಲಿ ನೀರೂರಿಸಿದ್ದರೆ, ಇನ್ನೊಂದೆಡೆ, ಸೇರಿದವರು ನಿಬ್ಬೆರಗಾಗಿ ನೋಡುತ್ತಿದ್ದರು. ಬೀಟ್​ರೂಟ್ ಹಲ್ವಾ, ಪಿಜ್ಜಾ, ಚಿಕನ್, ಕುಕ್ಕೀಸ್, ಬಿಸ್ಕಿಟ್, ಕೇಕ್… ಹೀಗೆ ಶಾಖಾಹಾರಿ, ಮಾಂಸಾಹಾರಿ ಎಲ್ಲ ಖಾದ್ಯಗಳನ್ನೂ ಒಟ್ಟೊಟ್ಟಿಗೇ ತಯಾರಿಸುತ್ತಿದ್ದ ಶರತ್ ಇದಕ್ಕೆ ತೆಗೆದುಕೊಂಡ ಅವಧಿ ಎಷ್ಟು ಗೊತ್ತೇ? ಬರೋಬ್ಬರಿ 60 ಗಂಟೆ! ಅಂದರೆ ಸರಿಸುಮಾರು ಮೂರು ದಿನ. ಇಷ್ಟೂ ಗಂಟೆಗಳು ಅವರು ನಿಂತುಕೊಂಡೇ ಖಾದ್ಯಗಳನ್ನು ತಯಾರಿಸಿದ್ದರು. ನಿದ್ದೆಗೆಟ್ಟು, ವಿಶ್ರಾಂತಿಯನ್ನೂ ಪಡೆಯದೇ, ಕಾಲೇಜಿನ ಕೆಲವು ಸ್ನೇಹಿತರು ಹಾಗೂ ವಿದ್ಯಾರ್ಥಿಗಳು ಬಾಯಿಗೆ ಇಡುತ್ತಿದ್ದ ಚಾಕೊಲೆಟ್, ಬಾಳೆಹಣ್ಣು ತಿನ್ನುವುದನ್ನು ಬಿಟ್ಟರೆ ಬೇರೆ ಆಹಾರವನ್ನೇ ಸೇವಿಸದೆ ಅಡುಗೆ ತಯಾರಿಯಲ್ಲಿ ತೊಡಗಿದ್ದರು. ಬೆನ್ನಿಗೊಂದು ಚಿಕ್ಕ ನೀರಿನ ಚೀಲ ಇಟ್ಟುಕೊಂಡಿದ್ದರು. ಅದರಲ್ಲೊಂದು ಪೈಪು ಇತ್ತು. ಬಾಯಾರಿಕೆಯಾದಾಗ ಪೈಪಿನ ಮೂಲಕ ನೀರು ಹೀರುತ್ತಿದ್ದರು ಅಷ್ಟೇ. ಅವರ ಈ ಶ್ರಮ ಫಲ ಕೊಟ್ಟಿದ್ದು, ‘ಇಂಡಿಯಾ ಬುಕ್ ಆಫ್ ರೆಕಾರ್ಡ್’, ‘ಏಷ್ಯಾ ಬುಕ್ ಆಫ್ ರೆಕಾರ್ಡ್’ ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಈಗಾಗಲೇ ಸೇರ್ಪಡೆಗೊಂಡಿದೆ. ಲಿಮ್ಕಾ ಪುಸ್ತಕಕ್ಕೂ ಇವರ ಸಾಧನೆ ಪುರಸ್ಕೃತಗೊಂಡಿದ್ದು, ಸದ್ಯದಲ್ಲೇ ರೆಕಾರ್ಡ್​ನ ಸರ್ಟಿಫಿಕೇಟ್ ಕೈ ಸೇರಲಿದೆ.

ಬೆಂಗಳೂರಿನಲ್ಲಿ ಹೋಟೆಲ್ ಮ್ಯಾನೇಜ್​ವೆುಂಟ್ ಕೋರ್ಸ್

ಶರತ್, ಮಂಡ್ಯದ ಪೇಟೆ ಬೀದಿ ನಿವಾಸಿ ಜವಳಿ ವ್ಯಾಪಾರಿ ಮೋಹನ್-ಮಂಜುಳಾ ದಂಪತಿ ಪುತ್ರ. ಮಂಡ್ಯದಲ್ಲೇ ಪಿಯುಸಿವರೆಗೂ ವ್ಯಾಸಂಗ ಮಾಡಿದ ಇವರು, ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್​ವೆುಂಟ್ ಕೋರ್ಸ್ ಮುಗಿಸಿದ್ದಾರೆ. ಅಮ್ಮ ಅಡುಗೆ ಮಾಡುವಾಗ ಬಾಲ್ಯದಿಂದಲೂ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದ ಶರತ್ ಅವರಿಗೆ ಅದೇ ಇಷ್ಟ ಆಗಿಬಿಟ್ಟಿತ್ತು. ಹಾಗಾಗಿ, ತಮ್ಮ ಇಷ್ಟದಂತೆ ಬೆಂಗಳೂರಿನಲ್ಲಿ 2014ರಲ್ಲಿ ಹೋಟೆಲ್ ಮ್ಯಾನೇಜ್​ವೆುಂಟ್ ಕೋರ್ಸ್ ಮುಗಿಸಿದರು. ಕೋರ್ಸ್ ಜತೆಗೆ ಅಡುಗೆ ತಯಾರಿಕೆಯಲ್ಲಿ ಯಾರೆಲ್ಲಾ, ಯಾವ್ಯಾವ ಸಾಧನೆ ಮಾಡಿದ್ದಾರೆ ಎನ್ನುವ ಸಂಶೋಧನೆ ಆರಂಭಿಸಿದಾಗ ಇದುವರೆಗೆ ಸತತ 42 ಗಂಟೆಗಳ ಕಾಲ ನಿರಂತರ ಅಡುಗೆ ಮಾಡಿದ ಸಾಧನೆ ಇದೆ ಎಂಬುದನ್ನು ಅರಿತರು. ಆ ದಾಖಲೆ ಮುರಿಯಬೇಕೆಂಬ ಛಲದಿಂದ ನಾನಾ ಶೈಲಿಯ 9 ಸಾವಿರಕ್ಕೂ ಹೆಚ್ಚು ಬಗೆಯ ಆಹಾರ ತಯಾರಿಕೆ ಕಲಿತರು. ಅದರ ಫಲವಾಗಿ ಇದೀಗ ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ‘ವಿದೇಶದಿಂದ ಹಲವು ಆಫರ್​ಗಳು ಬರುತ್ತಿವೆ. ಆದರೆ, ನನಗೆ ಅದು ಇಷ್ಟವಿಲ್ಲ. ನನ್ನ ದೇಶಕ್ಕೆ ನನ್ನ ಸೇವೆ ಮೀಸಲು. ಏನೇ ಸಾಧನೆ/ಸೇವೆ ಮಾಡಿದರೂ ನನ್ನ ದೇಶಕ್ಕಾಗಿ ಮಾಡುತ್ತೇನೆ. ಸತತ 60 ಗಂಟೆ ನಿಂತು ಖಾದ್ಯಗಳನ್ನು ತಯಾರಿಸಲು ನಮ್ಮ ಪ್ರೊಫೆಸರ್​ಗಳು, ಸಹಪಾಠಿಗಳ ಸಹಕಾರ ಹೆಚ್ಚಾಗಿತ್ತು. ಮಂಡ್ಯದಲ್ಲೊಂದು ಹೊಸ ಸಾಧನೆ ಮಾಡುವ ಕನಸಿದೆ. ಅದಕ್ಕಾಗಿ ಕಾಯುತ್ತಿದ್ದೇನೆ’ ಎನ್ನುತ್ತಾರೆ ಶರತ್.

ಮಗ ತನ್ನಿಚ್ಛೆಯಂತೆ ಓದಿದ, ಏನೋ ಓದುತ್ತಾನೆ ಎಲ್ಲರಂತೆ ಎಂದುಕೊಂಡಿದ್ದೆವು. ಆದರೀಗ ಅವನ ಸಾಧನೆ ಕಂಡು ಅಪಾರ ಸಂತಸವಾಗುತ್ತಿದೆ. ಅವನ ಓದಿಗೂ ನಮ್ಮಿಂದ ಹಣ ಪಡೆಯಲಿಲ್ಲ. ನಮ್ಮ ಮಗನ ಸಾಧನೆ, ಛಲ ನಮಗೆ ಹೆಮ್ಮೆ ತಂದಿದೆ.

| ಮೋಹನ್, ಮಂಜುಳಾ ಶರತ್ ಪಾಲಕರು