ಅಹಂಕಾ(ಖಾ)ರ

| ಡಾ.ಕೆ.ಪಿ. ಪುತ್ತೂರಾಯ

ಅಹಂಕಾರ-ದರ್ಪ-ಜಂಭ-ಮದ-ಸೊಕ್ಕು- ಎಲ್ಲವೂ ದುರ್ಗಣವನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸುವ ಭಿನ್ನ ಭಿನ್ನ ಪದಗಳು. ಪಶು ಪಕ್ಷಿಗಳಲ್ಲಿ, ಪ್ರಾಣಿಗಳಲ್ಲಿ, ಈ ಗುಣವನ್ನು ನಾವು ಕಾಣಲಾರೆವು. ಉದಾಹರಣೆಗೆ, ಸೌಂದರ್ಯವನ್ನೇ ಮೂರ್ತಿವೆತ್ತಿರುವ ನವಿಲಿಗೆ ಯಾವ ಜಂಭವೂ ಇಲ್ಲ. ಅತ್ಯಂತ ಬಲಶಾಲಿಯಾದ ಹುಲಿ, ಸಿಂಹಗಳಿಗೆ ಯಾವ ದರ್ಪವೂ ಇಲ್ಲ. ಸುಮಧುರವಾಗಿ ಹಾಡಬಲ್ಲ ಕೋಗಿಲೆಗೆ ಯಾವ ಸೊಕ್ಕೂ ಇಲ್ಲ. ಎಲ್ಲಾ ಇರೋದು ಮನುಷ್ಯರಿಗೇನೇ. ಈ ದುರ್ಗಣ ಕೆಲವರ ಮನಸ್ಸಿನೊಳಗೆ ಮನೆ ಮಾಡಿ ಬಿಡುತ್ತವೆ.

ನಾವು ಎಷ್ಟೇ ವಿದ್ಯಾವಂತರೂ, ವಿಚಾರವಂತರೂ ಆಗಿದ್ದರೂ, ಕೆಲವು ವಿಷಯಗಳು ನಮ್ಮ ಮನೋಸ್ಥಿತಿಯನ್ನು ವಿಚಲಿತಗೊಳಿಸಿ ನಮ್ಮ ನಡೆನುಡಿಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ತರಿಸಿ, ಜನರ ಪ್ರೀತಿ-ಗೌರವಗಳನ್ನು ಕಳೆದುಕೊಳ್ಳುವಂತೆ ಮಾಡಬಹುದು. ನಮ್ಮ ವಿವೇಕವನ್ನು ವಿನಾಶಗೊಳಿಸಿ ಅಹಂಕಾರವನ್ನು ತಂದೊಡ್ಡಬಲ್ಲ ವಿಷಯಗಳೆಂದರೆ-

ಅಧಿಕಾರ: ಮನುಷ್ಯನ ನಿಜರೂಪವನ್ನು ಕಾಣಬೇಕಾದರೆ, ಅವನಿಗೆ ಅಧಿಕಾರವನ್ನು ಕೊಟ್ಟು ನೋಡು – ಎಂಬ ಮಾತಿದೆ. ನಮಗರಿವಿಲ್ಲದೇನೇ, ಅಧಿಕಾರದ ಪಿತ್ತ ನೆತ್ತಿಗೇರಿಬಿಡುತ್ತದೆ. ಇದು ನಮ್ಮ ಮಾತುಗಳಲ್ಲಿ, ವರ್ತನೆಯಲ್ಲಿ ಎದ್ದು ಕಾಣುತ್ತದೆ. ಅಧಿಕಾರಕ್ಕೆ ಎರಡು ಸಾಮರ್ಥ್ಯಗಳಿವೆ – ಒಂದು, ಇತರರಲ್ಲಿ ಭಯ ಹುಟ್ಟಿಸುವಂಥದ್ದು. ಇನ್ನೊಂದು ಗೌರವ ಹೆಚ್ಚಿಸುವಂತದ್ದು. ಮೊದಲನೆಯದು ತಾತ್ಕಾಲಿಕ; ಎರಡನೆಯದು ಶಾಶ್ವತ. ಬೆಲ್ಲ ಇದ್ದಲ್ಲಿ ಮಾತ್ರ ಇರುವೆಗಳ ದಂಡು, ಬೆಲ್ಲ ಖಾಲಿಯಾದಾಗ, ಇರುವೆಗಳು ಜಾಗ ಖಾಲಿ ಮಾಡುತ್ತವೆ. ಅಂತೆಯೇ, ಅಧಿಕಾರವಿದ್ದಾಗ ಮಾತ್ರ ಜನ ನಮ್ಮ ಸುತ್ತ ಮುತ್ತ; ಅಧಿಕಾರವಿಲ್ಲದಾಗ ನೋಡುವವರೇ ಇಲ್ಲ, ನಮ್ಮತ್ತ.

ಅಪರಿಮಿತವಾದ ಸ್ವತ್ತು-ಸಂಪತ್ತು: ಇವು ಕೂಡ ನಮ್ಮ ವಿವೇಕವನ್ನು ಕಸಿದುಕೊಳ್ಳಲು ಹೊಂಚು ಹಾಕುತ್ತಿರುತ್ತವೆ. ಆಗರ್ಭ ಶ್ರೀಮಂತರು ಸಾಮಾನ್ಯವಾಗಿ ಸಾಮಾನ್ಯರ ಜತೆ ಸಂಪರ್ಕ ಇಟ್ಟುಕೊಳ್ಳುವುದಿಲ್ಲ. ತಮ್ಮ ಅಧಿಕಾರ-ಅಂತಸ್ತುಗಳಿಗೆ ಸರಿದೂಗುವವರನ್ನು ಮಾತ್ರ ಮಾತನಾಡಿಸುತ್ತಾರೆ.

ಯೌವನ : ಅದರಿಂದ ಪ್ರಾಪ್ತವಾಗುವ ತೋಳು ಬಲ, ಶಕ್ತಿ ಸಾಮರ್ಥ್ಯಗಳು ಕೂಡ ನಮ್ಮ ಸ್ಥಿಮಿತ ಕಳೆದುಕೊಳ್ಳುವಂತೆ ಮಾಡಬಹುದು. ಯುವಕರಲ್ಲಿ ಕಾಣುವ ಹುಚ್ಚು ಧೈರ್ಯಗಳು, ಭ್ರಾಂತಿಗಳು, ಏನೇನೋ ಭ್ರಮೆಗಳು ಇದಕ್ಕೆ ನಿದರ್ಶನ. ಈ ಕಾರಣದಿಂದಲೇ, ಮಾನಸಿಕ ಪ್ರಬುದ್ಧತೆ ಮತ್ತು ಪರಿಪಕ್ವತೆಗಳು ನಮ್ಮಿಂದ ದೂರವಾಗುತ್ತವೆ. ಯೌವನದಲ್ಲಿ ಸೊಕ್ಕು, ಮುಪ್ಪು ಬಂದಾಗ ಮೈಯೆಲ್ಲಾ ಸುಕ್ಕು ಅಲ್ಲವೇ !

ರೂಪ : ಅತಿಯಾದ ಸೌಂದರ್ಯದಿಂದ ಉದ್ಭವಿಸಬಹುದಾದ ಮದವನ್ನು ‘ರೂಪಮದ’ವೆಂದು ಕರೆಯಲಾಗಿದೆ. ಚೆಲುವೆಗೆ ಅವಳ ರೂಪ, ಆಕೆಯನ್ನು ಮೈ ಮರೆಯುವಂತೆ ಮಾಡುತ್ತದೆ. ಯಾವುದೋ ಒಂದು ಭಾವನಾ ಪ್ರಪಂಚದಲ್ಲಿ, ಕಲ್ಪನಾ ಲೋಕದಲ್ಲಿ ಆಕೆ ವಿಹರಿಸುತ್ತಿರುತ್ತಾಳೆ.

ಖ್ಯಾತಿ : ಖ್ಯಾತಿ ಕೂಡ ವಿವೇಕವನ್ನು ನಾಶ ಮಾಡಬಲ್ಲುದು. ತಮ್ಮ ಪ್ರತಿಭೆಗೂ ಮೀರಿದ ಮನ್ನಣೆಗಳು, ಪ್ರಶಸ್ತಿ, ಪುರಸ್ಕಾರಗಳು, ಪ್ರಚಾರಗಳು ಕೆಲವರನ್ನು ನಿಂತ ನೆಲದಿಂದ ಕಾಲು ತಪ್ಪಿಸುವಂತೆ ಮಾಡುತ್ತವೆ. ಇಂಥವರು ಉಪ್ಪು ನೀರು ಕುಡಿದಂತೆ ಹೆಚ್ಚಾಗುವ ದಾಹದಂತೆ, ಇನ್ನಷ್ಟು ಖ್ಯಾತಿಗಾಗಿ ಹಾತೊರೆಯುತ್ತಿರುತ್ತಾರೆ. ಈ ಸತ್ಯವನ್ನರಿತೇ ಡಿ.ವಿ.ಜಿ. ಯವರು, ‘ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ, ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು, ಮನ್ನಣೆಯ ದಾಹ ವೀಯೆಲ್ಲಕಂ ತೀಕ್ಷ್ಣತಮ, ತಿನ್ನುವುದಾತ್ಮವನೆ ಮಂಕುತಿಮ್ಮ. ನಮಗೆ ಮನ್ನಣೆ ಬೇಕು ಎನ್ನುವುದರ ಹಿಂದಿರೋದು ‘ನಾನು’ ಎಂಬ ಭಾವ. ಇದನ್ನ ಹೆಚ್ಚಿಸೋದು ‘ನನಗೆ’ ಎಂಬ ಭಾವ. ಒಟ್ಟಿನಲ್ಲಿ ‘ನಾನು’ ಎನ್ನುವುದೊಂದು ಹಾಳು ದೌರ್ಬಲ್ಯ, ‘ನನಗೆ’ ಎನ್ನುವುದದರ ಹೆಚ್ಚಿಸುವ ಮೌಲ್ಯ. ‘ನನ್ನಿಂದಲೇ’ ಎನ್ನುವ ಅಮಲೇರಿ ತಲೆಗೆ, ‘ನಾನಾರು’ ಎನ್ನುವುದೆ ಮರೆಯುವುದೆ ಕೊನೆಗೆ.

ಒಟ್ಟಿನಲ್ಲಿ, ಮೇಲೆ ಹೇಳಿದ, ಎಲ್ಲಾ ವಿಷಯಗಳು ಮನುಷ್ಯನನ್ನು ಅವಿವೇಕಿಯಾಗಿ ಮಾಡಬಲ್ಲವು. ವಿಪರ್ಯಾಸವೆಂದರೆ, ಇದು ಅವರಿಗೆ ಗೊತ್ತಾಗುವುದೇ ಇಲ್ಲ, ಇತರರ ಗಮನಕ್ಕೆ ಮಾತ್ರ ಬೇಗನೆ ಬಂದು ಬಿಡುತ್ತದೆ. ಇಂಥವರು ಸಾಮಾನ್ಯವಾಗಿ ತಮ್ಮದೇ ಆದ ಭಾವನಾ ಪ್ರಪಂಚದಲ್ಲಿ ವಿಹರಿಸುತ್ತಿರುತ್ತಾರೆ. ಇವರಿಗೆ ಬಹಳವಾಗಿ ಪ್ರದರ್ಶನದ ಮತ್ತು ಪ್ರಚಾರದ ಹುಚ್ಚು ಇರುತ್ತದೆ. ಮಾತ್ರವೇ ಅಲ್ಲ ಒಂದು ತರಹದ ಮೇಲರಿಮೆ ಇವರನ್ನು ಆವರಿಸಿಕೊಂಡಿರುತ್ತದೆ.

ಅಹಂಕಾರದಿಂದಾಗುವ ನಷ್ಟಗಳು: ಸಾಮಾನ್ಯವಾಗಿ ದರ್ಪದಲ್ಲಿರುವವರು ಜನಸಾಮಾನ್ಯರ ಜತೆ ಬೆರೆಯದ ಕಾರಣ ಮತ್ತು ಜನರು ಕೂಡಾ ಇವರಿಂದ ದೂರದಲ್ಲಿರಲು ಬಯಸುವ ಕಾರಣ ಏಕಾಂಗಿಗಳಾಗುತ್ತಾರೆ. ಈ ಸತ್ಯವನ್ನರಿತೇ ಕವಿ ಜಿ.ಎಸ್. ಶಿವರುದ್ರಪ್ಪನವರು, ‘ಹತ್ತಿರವಿದ್ದರೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನಗಳ ಈ ಬಾಳಿನಲಿ’ ಎಂದಿದ್ದಾರೆ.

ಮನಸ್ಸು ಮನಸ್ಸುಗಳ ನಡುವೆ, ಮಾರೆತ್ತರದ ಗೋಡೆಯನ್ನೇ ಕಟ್ಟಿಕೊಂಡು, ಒಬ್ಬರ ಮುಖ ಇನ್ನೊಬ್ಬರು ನೋಡದೆ, ಮಾತು ಬಿಟ್ಟವರು, ದೂರವಿರುವವರು ನಮ್ಮ ಸಮಾಜದಲ್ಲಿ, ಸಂಸಾರದಲ್ಲಿ ಎಷ್ಟು ಜನರಿಲ್ಲ?

ನಮ್ಮ ದರ್ಪ ಜಂಭಗಳಿಗೆ ಕಾರಣವಾದ ಯಾವುದೇ ವಿಷಯಗಳು ಶಾಶ್ವತವಲ್ಲದ ವಿಚಾರಗಳೆಂಬ ಸತ್ಯಾಂಶದ ಅರಿವು ಇವರಿಗೆ ಇರುವುದಿಲ್ಲ. ಅಧಿಕಾರದಲ್ಲಿದ್ದವರು ಅಧಿಕಾರ ಕಳೆದುಕೊಂಡಾಗ ಹಲ್ಲಿಲ್ಲದ ಹುಲಿಗಳಂತಾಗುತ್ತಾರೆ. ನೀರಿಲ್ಲದ ಮೀನಿನಂತಾಗುತ್ತಾರೆ. ಈ ಸತ್ಯವನ್ನು ಸಾರುವ ಸಂಸ್ಕೃತ ಶ್ಲೋಕವೊಂದು ಹೀಗಿದೆ: ‘ ಅಧಿಕಾರಂಚ, ಗರ್ಭಂಚ, ಋಣಂಚ, ಶ್ವಾನ ಮೈಥುನಂಚ – ಆಗಮನೇ ಆನಂದಂ, ನಿರ್ಗಮನೇ ಪ್ರಾಣಸಂಕಟಂ ಎಂಬುದಾಗಿ, ಮತ್ತೆ ಇದೇ ಮಾತನ್ನು ಅರ್ಧ ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್, ಸಾಯುವ ಕಾಲಕ್ಕೆ ಹೇಳುತ್ತಾನೆ ‘ಓಛಿಛಿಟ ಞಢ ಜಚ್ಞಛಠ ಟ್ಠಠಿಠಜಿಛಛಿ, ಡಿಜಜ್ಝಿಛಿ ಚ್ಠಿ್ಟಜ್ಞಿಜ ಞಢ ಚಿಟಛಢ, ಠಟ ಠಿಜಚಠಿ, ್ಝಠಿ ಠಿಜಛಿ ಡಿಟ್ಟ್ಝ kಟಡಿ, ಠಿಜಚಠಿ ಞಚ್ಞ ಡಿಜಟ ಡಿಟ್ಞ ಠಿಜಛಿ ಡಿಟ್ಟ್ಝ, ಜಚಛ ್ಞಠಿಜಜ್ಞಿಜ ಜ್ಞಿ ಜಚ್ಞಛ ಡಿಜಛ್ಞಿ ಜಛಿ ್ಝ್ಛ ಠಿಜಛಿ ಡಿಟ್ಟ್ಝ.‘ ಅಂತೆಯೇ, ರೂಪ-ಯೌವನಗಳಿಗೆ, ಶಕ್ತಿ ಸಾಮರ್ಥ್ಯ, ಸಂಪತ್ತು-ಅಂತಸ್ತುಗಳು ಕೂಡ ಶಾಶ್ವತವಲ್ಲ. ಕೋಟ್ಯಧಿಪತಿಗಳಾಗಿದ್ದವರು ಭಿಕ್ಷಾಧಿಪತಿಗಳಾಗಿದ್ದನ್ನೂ ಕಂಡಿದ್ದೇವೆ. ದರ್ಪದಿಂದ ಆಳಿದ ರಾಜ-ಮಹಾರಾಜರು ಮಣ್ಣಾಗಿ ಹೋದುದನ್ನೂ ನೋಡಿದ್ದೇವೆ. ತುಕ್ಕು ಮಾತ್ರ ಉಕ್ಕನ್ನು ನಾಶ ಮಾಡಬಲ್ಲುದು. ಅಂತೆಯೇ ಸೊಕ್ಕು ಮಾತ್ರ ಎಂಥವನನ್ನೂ ನಾಶ ಮಾಡಬಲ್ಲುದು. ಅದು ಮರದೊಳಗಿನ ಹುಳುವಿನಂತೆ; ನಮ್ಮನ್ನೇ ಕೊರೆದು ನಮ್ಮನ್ನೇ ನಾಶಮಾಡುತ್ತದೆ. ಅಹಂಕಾರಿಗಳು ಒಂದಲ್ಲ ಒಂದು ದಿನ ನೆಲಕಚ್ಚುವುದಂತೂ ಶತಸಿದ್ಧ.

ಆದರೆ, ತುಂಬಿದ ಕೊಡ ತುಳುಕದು ಎಂಬ ಮಾತಿನಂತೆ, ಜ್ಞಾನಿಗಳನ್ನು ಇಂತಹ ದೌರ್ಬಲ್ಯಗಳು ಕಾಡಲಾರವು. ‘ಅಲ್ಪ ವಿದ್ಯಾ ಮಹಾ ಗರ್ವಿ’ ಎಂಬ ಮಾತಿನಂತೆ, ಚಿಲ್ಲರೆ ನಾಣ್ಯಗಳೇ ಹೆಚ್ಚು ಸದ್ದು ಮಾಡೋದು; ನೋಟುಗಳಲ್ಲ ! ಆದುದರಿಂದ ಎಷ್ಟೇ ಅಧಿಕಾರ ಅಂತಸ್ತುಗಳಿರಲಿ, ರೂಪ ಲಾವಣ್ಯಗಳಿರಲಿ, ಶಕ್ತಿ-ಸಾಮರ್ಥ್ಯಗಳಿರಲಿ, – ಎಲ್ಲವೂ ವಿನಮ್ರತಾ ಭಾವದಿಂದ ಸ್ವೀಕರಿಸೋದೇ ಎಂದೆಂದಿಗೂ ಶ್ರೇಯಸ್ಕರ. ಏನಿದ್ದರೂ ಅಹಂಕಾರ ಸ್ವಲ್ಪ ’ಖಾರ’ವೇ ಸರಿ.

One Reply to “ಅಹಂಕಾ(ಖಾ)ರ”

Comments are closed.