ಕೋಪವ ಗೆದ್ದರೆ ಬದುಕೇ ಗೆದ್ದಂತೆ

‘ಕೋಪದ ಕೈಗೆ ಬುದ್ಧಿಯನ್ನು ಕೊಡಬೇಡ, ಬದಲಿಗೆ ಬುದ್ಧಿಯ ಕೈಗೆ ಕೋಪವನ್ನು ಕೊಡು’ ಎಂದು ತಿಳಿದವರು ಹೇಳುವ ಮಾತು ಅಕ್ಷರಶಃ ಸತ್ಯ. ಏಕೆಂದರೆ ಕೋಪದ ಹೊತ್ತಿನಲ್ಲಿ ನಾವು ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಊಹಿಸಲೂ ಅಸಾಧ್ಯ. ಅದಕ್ಕಾಗಿ ಕೋಪ ಬಂದಾಗ ಯೋಚಿಸಿ ನಿರ್ಧಾರಗಳನ್ನು ಕೈಗೊಂಡಲ್ಲಿ ಯಾವುದೇ ಅವಾಂತರಗಳು ನಡೆಯದಂತೆ ತಡೆಗಟ್ಟಬಹುದು.

| ಸಂತೋಷ್​ರಾವ್ ಪೆರ್ಮುಡ

‘ಬಿಸಿಯಾದ ವರ್ತನೆಗೆ ಬಿಸಿಯಾಗಿ ವರ್ತಿಸುವುದು ರಾಕ್ಷಸಿ ಗುಣ, ಸಿಹಿಯಾದ ವರ್ತನೆಗೆ ಸಿಹಿಯಾಗಿ ವರ್ತಿಸುವುದು ಮನುಷ್ಯ ಸಹಜವಾದ ಗುಣ, ಆದರೆ ಬಿಸಿಯಾದ ವರ್ತನೆಗೆ ಸಿಹಿಯಾಗಿ ವರ್ತಿಸುವುದು ದೈವೀ ಗುಣ’ ಎಂದಿದ್ದಾರೆ ಬಲ್ಲವರು. ಇದರರ್ಥ ನಮ್ಮೆದುರಿರುವ ವ್ಯಕ್ತಿಯು ಅತ್ಯಂತ ಕೋಪದಲ್ಲಿದ್ದಾಗ ಆ ವ್ಯಕ್ತಿಯೊಂದಿಗೆ ಕೋಪದಿಂದಲೇ ವರ್ತಿಸುವುದು ರಾಕ್ಷಸಿ ಪ್ರವೃತ್ತಿ ಎಂದೂ, ಶಾಂತವಾಗಿರುವ ವ್ಯಕ್ತಿಯ ಮುಂದೆ ನಾವೂ ಶಾಂತವಾಗಿಯೇ ವ್ಯವಹರಿಸುವುದು ಮನುಷ್ಯ ಸಹಜವಾದ ಗುಣವೆಂದೂ, ಕೋಪಗೊಂಡಿರುವ ವ್ಯಕ್ತಿಯನ್ನು ನಾವು ಶಾಂತ ಸ್ವಭಾವದಿಂದ ಮಾತನಾಡಿಸಿ ಆತನ ಹೃದಯವನ್ನು ಗೆಲ್ಲುವುದು ದೈವತ್ವದ ಗುಣ. ಹಾಗಂತ ಕೋಪವೇ ಬರಬಾರದು ಎಂದೇನಲ್ಲ. ಆದರೆ ಕೋಪ ಎಲ್ಲಿ? ಹೇಗೆ? ಎಷ್ಟು? ಯಾವಾಗ? ಎಂಬ ವಿವೇಚನೆ ಸದಾ ನಮ್ಮಲ್ಲಿ ಇರುವುದು ಅತ್ಯಂತ ಒಳ್ಳೆಯದು. ಮನಸ್ಸು ಕನ್ನಡಿ ಮತ್ತು ಹಾಲು ಇದ್ದ ಹಾಗೆ. ಇವು ಒಂದು ಬಾರಿ ಒಡೆದರೆ ಮತ್ತೆ ಅವುಗಳನ್ನು ಯಾವುದೇ ಕಾರಣಕ್ಕೂ ಜೋಡಿಸಲು ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ ಕಾರಣ. ಆದ್ದರಿಂದ ಮುನಿಸಿಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸಿ ಹಾಗೂ ಕೋಪವನ್ನು ಮುಂದೂಡುವುದು ಒಳಿತು. ಸಿಟ್ಟಿಗೆದ್ದ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ವಿವೇಚನೆಯನ್ನು ನಾವು ಹೊಂದಿರಬೇಕು.

ಸಂಬಂಧಗಳು ಅತ್ಯಂತ ಪವಿತ್ರ: ಸಿಟ್ಟು ನೆತ್ತಿಗೇರಿರುವ ಸಂದರ್ಭದಲ್ಲಿ ಎದುಗಿರುವವರ ಸಂಬಂಧ ಕಡಿದುಕೊಳ್ಳುವ ಮಾತನ್ನು ಯಾವುದೇ ಕಾರಣಕ್ಕೂ ಆಡಲೇಬಾರದು. ಕೋಪದ ವೇಗದಲ್ಲಿ ಸಂಬಂಧವನ್ನು ಕಡಿದುಕೊಳ್ಳುವ ಮಾತನಾಡಿದಾಗ ನಾವು ಆ ಸಂದರ್ಭದಲ್ಲಿ ಗೆದ್ದೆವೆಂದು ಬೀಗಬಹುದು, ಆದರೆ ಇದರಿಂದ ದೀರ್ಘಕಾಲಿಕವಾಗಿ ನಾವೇ ವ್ಯಕ್ತಿಯನ್ನು ಅಥವಾ ಸಂಸ್ಥೆಯನ್ನು ಕಳೆದುಕೊಂಡು ಮುಂದೊಂದು ದಿನ ದುಃಖ ಪಡಬೇಕಾದ ಸಂದರ್ಭ ಬರುತ್ತದೆ.

ಕೆಟ್ಟ ಭಾಷೆ ಬೇಡ: ಕೆಟ್ಟದಾಗಿ ಕೋಪ ಬಂದು ಇನ್ನೇನು ಎರಡೇಟು ಬಿಗಿದು ಬಿಡಬೇಕು ಎನ್ನುವಂಥ ಸಂದರ್ಭದಲ್ಲೂ ಕೆಟ್ಟ ಭಾಷೆ ಬಳಕೆ ಬೇಡ. ನಾವು ಬಳಸುವ ಒಂದು ಶಬ್ದವು ಎರಡು ಮನಸ್ಸುಗಳನ್ನು ವಿಘಟಿಸಲು ಹೆಚ್ಚು ಹೊತ್ತು ಬೇಕಾಗುವುದಿಲ್ಲ. ನಮ್ಮ ಸಿಡುಕು ಬುದ್ಧಿಯನ್ನು ತಿಳಿದಿರುವವರು ನಮಗೆ ಕೋಪ ಬಂದಿರುವ ಸಂದರ್ಭದಲ್ಲಿ ನಮಗೆ ಹೊಂದಿಕೊಂಡು ಹೋಗಬಹುದು. ಆದರೆ ಸಿಟ್ಟು ಬಂದಾಗ ಅವಾಚ್ಯ ಶಬ್ದಗಳನ್ನು ಬಳಸಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಹಾಗೂ ನಮ್ಮ ಮೇಲೆ ಆ ವ್ಯಕ್ತಿ ಇಟ್ಟಿರುವ ಅಭಿಪ್ರಾಯವನ್ನು ನಕಾರಾತ್ಮಕವಾಗಿ ಬದಲಾಯಿಸಬಹುದು.

ನಕಾರಾತ್ಮಕ ಚಿಂತನೆ ಸಲ್ಲದು: ಕೋಪ ಬಂದಾಗ ನಕಾರಾತ್ಮಕ ಯೋಚನೆ ಬರುವುದು ಸಹಜ. ಎದುರಿಗಿರುವ ವ್ಯಕ್ತಿಯನ್ನು ಸಾಯಿಸುವಷ್ಟು ಕೋಪ ಮೂಡಬಹುದು. ಅಂತಹ ಸಂದರ್ಭದಲ್ಲಿ ಕೋಪಗೊಂಡಿರುವ ವ್ಯಕ್ತಿಯೊಂದಿಗೆ ಕಳೆದಿರುವ ಮಧುರ ಕ್ಷಣಗಳನ್ನು ನೆನಪಿಸಿಕೊಳ್ಳಿ, ಇದು ಆ ಕ್ಷಣದಲ್ಲಿ ಕಷ್ಟ ಎನಿಸಿದರೂ, ಹಾಗೆ ಮಾಡುವುದು ಅನಿವಾರ್ಯ.

ತಕ್ಷಣದ ಪ್ರತಿಕ್ರಿಯೆ ಬೇಡ: ಕೋಪ ಬಂದಿರುವ ವಿಚಾರ ಎಷ್ಟೇ ತೀಕ್ಷ್ಣವಾಗಿದ್ದರೂ ಸರಿ, ಯಾವುದೇ ಕಾರಣಕ್ಕೂ ಆ ಕ್ಷಣದಲ್ಲಿ ನಿಮ್ಮ ಭಾವನೆಯನ್ನು ತಿಳಿಸುವ ಮೂಲಕ ಯಾವುದೇ ಪ್ರತಿಕ್ರಿಯೆಯನ್ನು ನೀಡಬೇಡಿ. ಬದಲಾಗಿ ಆ ಸಂದರ್ಭದಲ್ಲಿ ಮನಸ್ಸಿನಲ್ಲಿ ಒಂದರಿಂದ ನೂರರವರೆಗಿನ ಅಂಕೆಗಳನ್ನು ನಿರಂತರವಾಗಿ ಗಣನೆ ಮಾಡುತ್ತಾ ನಿಮ್ಮ ಏಕಾಗ್ರತೆಯನ್ನು ಬೇರೆಡೆಗೆ ತಿರುಗಿಸುವ ಪ್ರಮಾಣಿಕ ಪ್ರಯತ್ನ ಮಾಡಿ. ಇದರಿಂದ ನಿಧಾನವಾಗಿ ನಿಮ್ಮ ಕೋಪವನ್ನು ನೀವೇ ತಣಿಸಿಕೊಳ್ಳುವ ಮೂಲಕ ಕೋಪ ಬಂದಿರುವ ವಿಚಾರವನ್ನು ಆ ಕ್ಷಣದಲ್ಲಿ ಆ ಘಟನೆ ನಡೆದೇ ಇಲ್ಲವೆಂಬಂತೆ ಇದ್ದುಬಿಡಿ.

ಕೈ ಮಾಡಬೇಡಿ: ನಾವು ಯಾರನ್ನು ಹೆಚ್ಚಾಗಿ ಇಷ್ಟಪಡುತ್ತೇವೋ ಅವರ ಮೇಲೆಯೇ ಸಿಟ್ಟು ಬರುವುದು ಜಾಸ್ತಿ. ಹಾಗೆಂದು ಯಾವುದೇ ಕಾರಣಕ್ಕೂ ಅವರ ಮೇಲೆ ಬಲ ಪ್ರಯೋಗ ಮಾಡುವ ಹಕ್ಕು ಇರುವುದಿಲ್ಲ. ಸಿಟ್ಟಿನ ರಭಸದಲ್ಲಿ ಎದುರಿಗಿದ್ದ ವ್ಯಕ್ತಿಯ ಮೇಲೆ ಕೈ ಮಾಡುವುದು, ಹೊಡೆಯುವುದು ಹಾಗೂ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆಯುವುದು ಬೇಡ.

ನಡತೆಯ ಬಗ್ಗೆ ಮಾತು ಬೇಡ

ಕೋಪದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಎದುರಿಗಿರುವ ವ್ಯಕ್ತಿಯ ಅಥವಾ ಯಾವುದೇ ವ್ಯಕ್ತಿಯ ನಡತೆಯ ಬಗ್ಗೆ ಕೆಟ್ಟದಾದ ಮಾತುಗಳನ್ನು ಆಡಲೇ ಬೇಡಿರಿ. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎಂಬ ಗಾದೆ ಸದಾ ಮನಸ್ಸಿನಲ್ಲಿ ಇರಬೇಕು.

ಕೋಪದ ಮೂಲ…

ಕೋಪದ ಮೂಲ ಏನು ಎಂಬುದಕ್ಕೆ ಇಲ್ಲೊಂದು ಚಿಕ್ಕ ಉದಾಹರಣೆ: ಗಂಡನಿಗೆ ಅವನ ಮಾಲೀಕ ಕೆಲಸದ ನಿಮಿತ್ತ ಬೈದಿರುತ್ತಾನೆ, ಆದರೆ ಮಾಲೀಕನಿಗೆ ತಿರುಗಿ ಬೈಯಲು ಆಗದ ಆತ ಸಿಟ್ಟಿನೊಂದಿಗೆ ಮನೆಗೆ ಬರುತ್ತಾನೆ. ಅವನಿಗೆ ಎದುರಾಗುವುದು ಹೆಂಡತಿ. ಆಕೆ ಗಂಡನ ಕುಶಲೋಪರಿ ವಿಚಾರಿಸಿಕೊಂಡರೂ ಗಂಡನ ಮೂಡಿನಲ್ಲಿ ಮಾಲೀಕನೇ ತುಂಬಿರುವ ಕಾರಣ, ಅದನ್ನು ಹೆಂಡತಿಯ ಮೇಲೆ ತೀರಿಸಿಕೊಳ್ಳುತ್ತಾನೆ. ಆಕೆಗೆ ಹಿಗ್ಗಾಮುಗ್ಗ ಬೈಯುತ್ತಾನೆ. ಗಂಡನಿಗೆ ತಿರುಗಿ ಮಾತನಾಡಲು ಆಗದ ಹೆಂಡತಿಯು ಸಿಟ್ಟಿನಿಂದ ಅಡುಗೆ ಮನೆ ಸೇರಿಕೊಳ್ಳುತ್ತಾಳೆ. ಆ ಸಂದರ್ಭದಲ್ಲಿ ಹೊಟ್ಟೆ ಹಸಿದುಕೊಂಡು ತನ್ನ ಮಗು ಅಮ್ಮನ ಸೆರಗು ಹಿಡಿದುಕೊಂಡು ‘ಅಮ್ಮಾ ಅಮ್ಮಾ ತಿನ್ನಲು ಏನಾದರೂ ಕೊಡು’ ಎಂದು ದುಂಬಾಲು ಬೀಳುತ್ತದೆ. ಗಂಡನ ಮೇಲಿನ ಸಿಟ್ಟಿನ ರಭಸದಲ್ಲಿದ್ದ ತಾಯಿಯು ಮಗುವನ್ನು ಹಿಡಿದುಕೊಂಡು ಸರಿಯಾಗಿ ಬಾರಿಸುತ್ತಾಳೆ. ಮಗುವು ಜೋರಾಗಿ ಅಳುತ್ತಾ ಅಮ್ಮನ ಮೇಲಿನ ಸಿಟ್ಟಿನಿಂದ ಹೊರಗೆ ಜಗುಲಿಯಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಜೋರಾಗಿ ಹೊಡೆಯುವ ಮೂಲಕ ತನ್ನ ಸಿಟ್ಟನ್ನು ತೀರಿಸಿಕೊಳ್ಳುತ್ತದೆ. ನೋವಿನಿಂದ ಚೀರಾಡುತ್ತಾ ಸಿಟ್ಟಿಗೆದ್ದ ನಾಯಿಯು, ತನಗೆ ಅನ್ನ ಹಾಕಲು ಬಂದ ಯಜಮಾನನಿಗೆ ಕಚ್ಚಿ ಸಿಟ್ಟು ತೀರಿಸಿಕೊಳ್ಳುತ್ತದೆ.

ಇಲ್ಲಿ ತಿಳಿಯಬೇಕಾದ ಪ್ರಮುಖ ಅಂಶವೆಂದರೆ ತನ್ನ ಸಿಟ್ಟು ತನ್ನ ಅಂತ್ಯವನ್ನೇ ತರುತ್ತದೆ ಎನ್ನುವುದು. ಕಂಪನಿಯ ಯಜಮಾನನ ಸಿಟ್ಟನ್ನು ಗಂಡ ಕಚೇರಿಯಲ್ಲಿಯೇ ಬಿಟ್ಟು ಬಂದಿದ್ದರೆ, ಹೆಂಡತಿಯ ಮೇಲೆ, ಹೆಂಡತಿ ಮಗುವಿನ ಮೇಲೆ, ಮಗು ನಾಯಿಯ ಮೇಲೆ, ನಾಯಿಯು ಮರಳಿ ಆತನ ಮೇಲೆ ಸಿಟ್ಟಾಗಿ ಕಚ್ಚುವ ಸಂದರ್ಭವೇ ಬರುತ್ತಿರಲಿಲ್ಲ. ಅದಕ್ಕೇ ಹೇಳುವುದು ಕೋಪವನ್ನು ಗೆದ್ದಲ್ಲಿ ಸರ್ವವನ್ನೂ ಗೆದ್ದಂತೆ ಎಂದು.

ದೇಹದ ಮೇಲೆ ಆಕ್ರಮಣ

ಕೋಪವು ಮೇಲ್ನೋಟಕ್ಕೆ ಮನಸ್ಸಿನ ಭಾವನೆಯ ಒಂದು ಪ್ರಕಾರವಾಗಿ ಕಾಣಿಸಿದರೂ ಕೋಪ ಬಂದಾಗ ಮನುಷ್ಯನ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತವೆ. ಕೋಪ ಬಂದಾಗ ಮೆದುಳಿನಲ್ಲಿ ಆಡ್ರಿನಲಿನ್ ಹಾಗೂ ನಾರ್ ಆಡ್ರಿನಲಿನ್ ಎಂಬ ಹಾರ್ವೇನ್ ಹೆಚ್ಚಾಗಿ ಸ್ರವಿಸಿ, ಹೃದಯದ ಬಡಿತ ಹಾಗೂ ರಕ್ತದ ಒತ್ತಡವೂ ಅಧಿಕವಾಗಿಸುತ್ತದೆ. ಈ ಹಾರ್ವೇನ್ ಸ್ರವಿಕೆಯು ಕ್ಷಣಿಕವಾದರೂ ಆಗಿಂದಾಗ್ಗೆ ಈ ಸ್ರವಿಕೆಯಿಂದ ದೀರ್ಘಕಾಲಿಕವಾಗಿ ದೇಹಕ್ಕೆ ಗಾಢ ಪರಿಣಾಮವನ್ನು ಬೀರುವ ಸಾಧ್ಯತೆಗಳು ಅಧಿಕವೆಂದು ಒಂದು ಅಧ್ಯಯನವು ತಿಳಿಸುತ್ತದೆ. ಆದ್ದರಿಂದ ಕೋಪವನ್ನು ನಿಯಂತ್ರಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ದೀರ್ಘವಾಗಿ ಉಸಿರಾಡಿ

ಕೋಪ ಬಂದ ಕ್ಷಣದಲ್ಲಿ ಆ ಪ್ರದೇಶದಿಂದ ಬೇರೆಡೆಗೆ ಹೋಗಿ. ದೀರ್ಘವಾಗಿ ಉಸಿರನ್ನು ಎಳೆದುಕೊಂಡು ಪ್ರಾಣಾಯಾಮದ ಕ್ರಮದಲ್ಲಿ ಉಸಿರಾಟದ ಪ್ರಕ್ರಿಯೆಯನ್ನು ನಡೆಸುವ ಮೂಲಕ ಗಮನವನ್ನು ಬೇರೆಡೆ ತಿರುಗಿಸಿ. ಒಂದರಿಂದ ನೂರರವರೆಗಿನ ಅಂಕಿಗಳನ್ನು ಅವರೋಹಣ ಕ್ರಮದಲ್ಲಿ ಎಣಿಸಬೇಕು. ಇದರಿಂದ ಕೋಪ ಶಮನವಾಗುತ್ತದೆ.

ಬರೆದುಕೊಳ್ಳಿ

ಕೋಪ ಶಮನಗೊಂಡ ನಂತರದಲ್ಲಿ ಡೈರಿಯಲ್ಲಿ ಕೋಪ ಬಂದಿರುವ ವಿಚಾರವನ್ನು ವಿಸ್ತೃತವಾಗಿ ಹಾಗೂ ವಸ್ತುನಿಷ್ಠವಾಗಿ ಮತ್ತು ಕೋಪದ ಸಂದರ್ಭದಲ್ಲಿ ಮನಸ್ಸಿನೊಳಗೆ ಮೂಡಿರುವ ವಿವಿಧ ವಿಚಾರಗಳನ್ನು ಬರೆಯಿರಿ ಮತ್ತು ಆ ವಿಚಾರದ ಕುರಿತು ನಿಮ್ಮನ್ನು ನೀವೇ ವಿಮಶಿಸಿಕೊಂಡು ಅಂತಿಮ ನಿರ್ಧಾರಕ್ಕೆ ಬರಬೇಕು. ಈಗಲೂ ಕೋಪ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಅಂತಿಮವಾಗಿ ಮನೋವೈದ್ಯರನ್ನು ಭೇಟಿಯಾಗಿ ಆಪ್ತ ಸಮಾಲೋಚನೆಯನ್ನು ಪಡೆದುಕೊಳ್ಳಲು ಮರೆಯಬಾರದು.