More

    ಸತ್ಯ ಹೇಳಿದ್ದಕ್ಕೆ ತೆತ್ತಬೆಲೆ ಸುಳ್ಳು ಹೇಳಿದ್ದಕ್ಕೆ?

    ‘ಸುಲಭಾಃ ಪುರುಷಾ ರಾಜನ್ ಸತತಂ ಪ್ರಿಯವಾದಿನಃ ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ.’

    ಸೀತಾಪಹರಣ ನಡೆಸಬೇಕೆಂಬ ತನ್ನ ದುಷ್ಟಕಾರ್ಯದಲ್ಲಿ ಭಾಗಿಯಾಗಿ ಸಹಾಯವೆಸಗುವಂತೆ ರಾವಣನು ಮಾವನಾದ ಮಾರೀಚನನ್ನು ಕೇಳಿದ. ಆಗ ಮಾರೀಚನು ರಾವಣನ ಬಳಿ, ‘ಮಾರಾಯ ರಾಮನೆಂದರೆ ಸಾಮಾನ್ಯನಲ್ಲ. ವಿಶ್ವಾಮಿತ್ರ ಯಾಗದ ಸಂದರ್ಭದಲ್ಲಿ ಅದನ್ನು ಕೆಡಿಸಲು ಹೋದ ನಮ್ಮನ್ನು ಆತ ಎತ್ತಿ ಸಮುದ್ರಕ್ಕೆ ಎಸೆದ ರಭಸ ನಾನಿನ್ನೂ ಮರೆತಿಲ್ಲ. ರಾಮನಿರಲಿ ರಕಾರವನ್ನು ಕಂಡರೇ ನಾನು ಗದಗುಟ್ಟಿ ನಡುಗುತ್ತೇನೆ. ನಾನಂತೂ ಬರುವುದಿಲ್ಲ. ನೀನು ಸಹ ಅವನ ತಂಟೆಗೆ ಹೋಗಬೇಡ. ಅವನು ಮಹಾಪರಾಕ್ರಮಿ’ ಎನ್ನುತ್ತಾನೆ.

    ಸತ್ಯ ಹೇಳಿದ್ದಕ್ಕೆ ತೆತ್ತಬೆಲೆ ಸುಳ್ಳು ಹೇಳಿದ್ದಕ್ಕೆ?ರಾವಣ ಮೊದಲೇ ದುರಹಂಕಾರಿ. ಬೇರೆಯವರ ಅದೂ ತನ್ನ ವೈರಿಯ ಗುಣಗಾನ ಕೇಳಿ ಸಹಿಸಿಯಾನೆ? ಅವನಿಗೆ ತನ್ನ ಗುಣಗಾನ ಮಾಡುವವರು ಬೇಕು (ಹಿಂದೆಲ್ಲ ರಾಜರುಗಳು ತಮ್ಮ ಆಸ್ಥಾನದಲ್ಲಿ ಹೊಗಳುಭಟರು ಎಂಬ ವಿಶೇಷ ವ್ಯಕ್ತಿಗಳನ್ನು ನೇಮಕ ಮಾಡುತ್ತಿದ್ದರಂತೆ. ಅವರ ಕೆಲಸವೇ ರಾಜನನ್ನು ಹೊಗಳುವುದು. ಹೆಚ್ಚು ಚೆನ್ನಾಗಿ ಹೊಗಳಿ ಬಲ್ಲವನಿಗೆ ಹೆಚ್ಚು ಸಂಬಳ! ಎಂಥ ಆರಾಮಿನ ಆಕರ್ಷಕ ನೌಕರಿ ಅದಾಗಿತ್ತು!) ರಾವಣ ಮಾವನ ಮಾತು ಕೇಳುವ ಅಳಿಯನಂತೂ ಆಗಿರಲಿಲ್ಲ.

    ಮಾರೀಚ ಗದ್ಯದಲ್ಲಿ ಹೇಳಬಹುದಾದುದನ್ನೆಲ್ಲ ಹೇಳಿ ನೋಡಿದ, ಪ್ರಯೋಜನವಾಗಲಿಲ್ಲ. ಕೊನೆಗೆ ಮೇಲಿನ ಶ್ಲೋಕವನ್ನು ಪದ್ಯರೂಪದಲ್ಲಿ ಹೇಳಿ, ಸುಮ್ಮನಾದ (ಬುದ್ಧಿವಾದ ಹೇಳಹೊರಟವರ ಪಾಡೆಲ್ಲ ಹೀಗೇ ಹೇಳಿ ಹೇಳಿ ಗಂಟಲೊಣಗಿ ಕೊನೆಯಲ್ಲಿ ತಾವೇ ಸುಮ್ಮನಾಗುವುದು ಲೋಕರೂಢಿ). ‘ಎಲೈ ರಾಜನೇ, ಯಾವಾಗಲೂ ಸವಿ ಮಾತಾಡುವವರು ಬೇಕಷ್ಟು ಜನ ದೊರಕುತ್ತಾರೆ. ಆದರೆ ಅಪ್ರಿಯವಾಗಿದ್ದರೂ ಹಿತಕರವಾದುದನ್ನು ಹೇಳುವವರು ಹಾಗೂ ಅಂಥ ಅಪ್ರಿಯ ಸತ್ಯವನ್ನು ಕೇಳುವವರು ಬಹಳ ವಿರಳ’ ಎಂಬುದು ಮಾರೀಚನ ಹೇಳಿಕೆ.

    ನಿಜ, ಸತ್ಯವೆಂದಾಕ್ಷಣ ನಮಗೆ ಅದು ಅಪ್ರಿಯವೇ ಸರಿ. ಕಹಿಸತ್ಯ ಎಂದೇ ನಾವದನ್ನು ಕರೆಯುತ್ತೇವೆ. ಸಿಹಿಸತ್ಯಗಳು ಎಲ್ಲೋ ಅಲ್ಲೊಂದು, ಇಲ್ಲೊಂದು ಇರಬಹುದಾದರೂ ಸತ್ಯದ ರುಚಿ ಯಾವಾಗಲೂ ಕಹಿಯೇ ಪಾಪ. ಈ ಕಹಿಗೆ ಅಂಜಿಯೇ ನಾವು ಸತ್ಯವನ್ನು ಆದಷ್ಟು ದೂರವಿರಿಸಿ ಸಿಹಿಯಾದ ಸುಳ್ಳನ್ನೇ ಆಸೆ ಪಡುತ್ತೇವೆ. ‘ನ ಬ್ರೂಯಾತ್ ಸತ್ಯಮಪ್ರಿಯಂ’ ಎಂಬ ಮಾತನ್ನಷ್ಟೇ ಶಿರಸಾವಹಿಸಿ ಸತ್ಯದ ಉಸಾಬರಿಯನ್ನೇ ಬಿಟ್ಟು ಹಾಯಾಗಿ ಸುಳ್ಳಾಡಿಕೊಂಡು ಓಡಾಡಿಕೊಂಡಿದ್ದೇವೆ.

    ಕೆಲವರು ಸತ್ಯ ನುಡಿಯುತ್ತಾರೆ (ಪಾಪ!). ಆದರೆ ಸದ್ಯ ಉಳಿದವರೆಲ್ಲ ಪ್ರಿಯವನ್ನು ನುಡಿಯುತ್ತಿದ್ದಾರೆ ಎಂಬುದು ನಮ್ಮ ಸಮಾಧಾನ. ಕೆಲವರು ನೀರು ಕುಡಿದಷ್ಟೇ ಸುಲಭವಾಗಿ, ಇನ್ನು ಕೆಲವರು ಶರಬತ್ತು ಕುಡಿದಷ್ಟೇ ಆಪ್ಯಾಯಮಾನವಾಗಿ ಪ್ರೀತಿಯಿಂದ, ಸಲೀಸಾಗಿ ಸುಳ್ಳಾಡುತ್ತಾರೆ. ಅವರು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಿದ್ದರೂ ಕೇಳುತ್ತಿದ್ದವರು ಏನೂ ಮಾಡಲಾಗದಷ್ಟು ಪ್ರಾವೀಣ್ಯವನ್ನು ತಮ್ಮದನ್ನಾಗಿಸಿಕೊಂಡಿರುತ್ತಾರೆ. ಆದರೆ ಕೆಲವರಿಗೆ ‘ಯಶಸ್ವಿ ಸುಳ್ಳು’ ಹೇಳಲು ಏನೆಂದರೂ ಬರುವುದೇ ಇಲ್ಲ. ಆಗೀಗ ಸುಳ್ಳಾಡಿ ಮೈಮೇಲೆ ಅಪಾಯ ತಂದುಕೊಳ್ಳುತ್ತಲೇ ಇರುತ್ತಾರೆ.

    ನನ್ನ ಹೈಸ್ಕೂಲು ದಿನಗಳಲ್ಲಿ ನಮ್ಮ ಮಾಸ್ಟ್ರು ನಮ್ಮ ಬಳಿ, ‘ಯಾವಾಗಲೂ ಸತ್ಯಮಾರ್ಗದಲ್ಲಿ ನಡೆಯಬೇಕು. ಅದು ಸುಲಭ ಮಾರ್ಗ. ಏಕೆಂದರೆ ಆ ಮಾರ್ಗದಲ್ಲಿ ಬೇರೆ ಪ್ರಯಾಣಿಕರ ಗಲಾಟೆ ಇರುವುದಿಲ್ಲ’ ಎನ್ನುತ್ತಿದ್ದರು. ಆದರೆ ಬಸ್ಸುಗಳೆಂಬ ಬ್ರಹ್ಮಾಂಡದಲ್ಲಿ ತೂರಿಕೊಂಡು ಪ್ರಯಾಣಿಸುವ ನಾವು ಸಹ ಪ್ರಯಾಣಿಕರ ನೂಕುನುಗ್ಗಲುಗಳನ್ನು ಮೈಗೂಡಿಸಿಕೊಂಡು ಜತೆಗೆ ನುಗ್ಗುವ ಪ್ರಯಾಣಿಕರ ಗೌಜಿಯೇ ಇಲ್ಲದ ಒಂಟಿಮಾರ್ಗ (ಅದೆಷ್ಟು ಶಾಂತವಾಗಿದ್ದರೂ ಏನು ಬಂತು?)ವನ್ನು ಯಾಕಾದರೂ ಇಷ್ಟಪಡುತ್ತೇವೆ? ನಾವು ಹತ್ತ ಬಯಸುವುದು ತುಂಬಿ ತುಳುಕುವ ರೂಟ್ ಬಸ್ಸನ್ನೇ. ನಮ್ಮ ಮಾಸ್ಟರ್ ಅದೆಲ್ಲಿಂದ ಓದಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರೋ ಸುಳ್ಳಿನ ಬಗೆಗೆ ಅನೇಕ ಸತ್ಯಗಳನ್ನು ಆಗಾಗ ಹೇಳಿ ನಮ್ಮನ್ನು ಬೆರಗುಗೊಳಿಸುತ್ತಿದ್ದರು. ‘ಸಾವಿರ ಸುಳ್ಳು ಹೇಳಿ ಒಂದು ಮದುವೆ, ಲಕ್ಷ ಸುಳ್ಳು ಹೇಳಿ ಒಂದು ಸಂಸಾರ, ಕೋಟಿ ಸುಳ್ಳು ಹೇಳಿ ಒಂದು ರಾಷ್ಟ್ರ’ ಎಂಬುದು ಅಂಥ ಸೂಕ್ತಿಗಳಲ್ಲೊಂದು. ಛೇ, ಈ ಹೇಳಿಕೆ ಇರುವುದು ಸುಳ್ಳಿನ ಬಗೆಗಾದರೂ ಅದರಲ್ಲಿರುವುದು ಮಾತ್ರ ಅಪ್ಪಟ ಸತ್ಯ ಎಂಬುದನ್ನು ಸುಳ್ಳು ಎನ್ನಲಾದೀತೇ?

    ಇದೇ ನಮ್ಮ ಮಾಸ್ಟ್ರು ಒಮ್ಮೆ ಕ್ಲಾಸಿನಲ್ಲಿ ವಿದ್ಯಾರ್ಥಿಗಳನ್ನು ಕುರಿತು, ‘ಮಕ್ಕಳೇ ಸತ್ಯಹರಿಶ್ಚಂದ್ರ ನಾಟಕದಿಂದ ಏನು ಪಾಠ ಕಲಿತಿರಿ?’ ಎಂದು ಕೇಳಿದ್ದರಂತೆ. ಆಗ ಒಬ್ಬ ವಿದ್ಯಾರ್ಥಿ ಎದ್ದುನಿಂತು, ‘ಸುಳ್ಳು ಹೇಳುವ ಗಟ್ಸ್ ಇಲ್ಲದ ಹರಿಶ್ಚಂದ್ರ ಸ್ಮಶಾನ ಕಾಯಬೇಕಾಗಿ ಬಂತು’ ಎಂದನಂತೆ. ಇದನ್ನು ಪೂರ್ತಿ ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಮಾಸ್ಟ್ರು ಧರ್ಮಸಂಕಟಕ್ಕೆ ಸಿಕ್ಕಿ, ‘ಸರಿ ನೀನೇನು ಪಾಠ ಕಲಿತೆ?’ ಎಂದು ಇನ್ನೊಬ್ಬ ವಿದ್ಯಾರ್ಥಿ ಬಳಿ ಕೇಳಿದರಂತೆ. ‘ಗೃಹಸ್ಥರು ತುಂಬ ಸಾಲಮಾಡಿ ತೀರಿಸಲು ಆಗದಿದ್ದರೆ ಹೆಂಡತಿ-ಮಕ್ಕಳನ್ನು ಮಾರಬಹುದು ಎಂಬುದೇ ನಾನು ಕಲಿತ ಪಾಠ’ ಎಂದು ಮುಖದ ಮೇಲೆ ಹೇಳಿ ಗತ್ತಿನಲ್ಲಿ ಕೂತನಂತೆ.

    ಸುಳ್ಳು ಹೇಳಲು ಹೇಗೆ ಗಟ್ಸ್ ಬೇಕಾಗುತ್ತದೆಯೋ ಸತ್ಯ ಹೇಳಲು ಸಹ ಅಸೀಮ ಧೈರ್ಯ ಬೇಕು. ಸತ್ಯವೋ, ಸುಳ್ಳೋ ವ್ಯತ್ಯಾಸವೇ ತಿಳಿಯದ ಅಬೋಧ ಮಕ್ಕಳು ಮಾತ್ರ ಇದ್ದುದನ್ನು ಇದ್ದಹಾಗೆ ಗೊಂದಲವಿಲ್ಲದೆ ಹೇಳಿಬಿಡುತ್ತಾರೆ. ಅದಕ್ಕೆ ಮಕ್ಕಳು ಇದ್ದಲ್ಲಿ ಸಂಸಾರದ ಗುಟ್ಟುಗಳನ್ನು ಹೇಳಿಕೊಳ್ಳಬಾರದು ಎಂದೊಂದು ಅಲಿಖಿತ ನಿಯಮವಿದೆ. ಅನೇಕ ಸಲ ಅಪ್ಪ-ಅಮ್ಮಂದಿರೇ ಹೇಳಿ ಸುಳ್ಳಾಡಿಸುವ ಅನಿವಾರ್ಯ ಪ್ರಸಂಗಗಳು ಬರುತ್ತವೆ ಪರಿಣಾಮ ಮಾತ್ರ ಯದ್ವಾತದ್ವಾ.

    ‘ಅಪ್ಪ ಇದಾರೇನೋ ಮರಿ?’

    ‘ನೀವ್ಯಾರು ಹೇಳಿ’

    ‘ನಾನು ಎಲ್​ಐಸಿ ಏಜೆಂಟ್ ರಾಮು ಮಾಮ’.

    ‘ಹೋಹಾಗಾ? ಹಾಗಾದ್ರೆ ಅಪ್ಪನ್ನೇ ಕೇಳಿ, ಬರ್ತೀನಿ ಇರಿ’ ಎಂದು ಒಳಗೆ ಹೋಗಿ ಬಂದು,

    ‘ಅಪ್ಪ ಹೇಳಿದರು ಮತ್ತೆ ಅಪ್ಪ ಮನೆಯಲ್ಲಿಲ್ಲವಂತೆ’ ಎನ್ನುತ್ತದೆ ಅಮಾಯಕ ಮಗು.

    ‘ಕೋಟಿ ಸುಳ್ಳು ಹೇಳಿ ಒಂದು ರಾಷ್ಟ್ರ’ ಎಂಬ ಮಾತು ಈಗಂತೂ ಸತ್ಯಸ್ಯ ಸತ್ಯ. ನೀವು ಯಾವುದೇ ನ್ಯಾಷನಲ್ ಲೆವಲ್ ದೇಶೋದ್ಧಾರಕರು ಕೊಡುವ ಬೇಡಿಕೆಯನ್ನು ಗಮನಿಸಿ. ಕೋಟಿಗಿಂತ ಕಡಿಮೆ ಸುಳ್ಳು ಮಾತೇ ಇಲ್ಲ. ಎಲ್ಲ ವ್ಯವಹಾರಗಳು ಕೋಟಿ ಕೋಟಿಗಟ್ಟಲೆ ಗುಳುಂ ಲೆವೆಲ್ಲಿನಲ್ಲಿಯೇ ನಡೆಯುವುದು. ಇವರನ್ನು ಕೇಳಿದರೆ ಅವರು ಗುಳುಂ ಮಾಡಿದ ಕೋಟಿಯ ಲೆಕ್ಕ, ಅವರನ್ನು ಕೇಳಿದರೆ ಇವರು ಅಪರಾ-ತಪರಾ ಮಾಡಿದ ಕೋಟಿಯ ಅಂಕಿಸಂಖ್ಯೆ ಒದಗಿಸುವರು. ಈ ಅಂಕಿಸಂಖ್ಯೆ ಲೆಕ್ಕಾಚಾರದಲ್ಲಿ ಗ್ರಹಚಾರ ಕೆಟ್ಟ ಯಾವುದಾದರೂ ದೇಶಭಕ್ತ ಪ್ರಾಣಿ, ಕೊಂಯ್ ಕಿರ್ ಎಂದೇನಾದರೂ ಸಪ್ಪಳ ಮಾಡಿತೋ ಮರುದಿನವೇ ಅದಕ್ಕೆ ಕೊಕ್ ಅಥವಾ ಕಿಕ್. ಹೀಗೆ ಕಿಕ್ಕಿಸಿಕೊಂಡ ದೇಶೋದ್ಧಾರಕ ಮರುದಿನವೇ ಕೊಡುವ ಹೇಳಿಕೆ ‘ಸತ್ಯ ಹೇಳಿದ್ದಕ್ಕೆ ತೆತ್ತಬೆಲೆ’ ಎಂದೇ. ‘ಸುಳ್ಳಿಗೆ ತೆತ್ತ ಬೆಲೆ’ ಎಂದೆಲ್ಲಾದರೂ ಓದಿದ್ದೀರಾ?

    ಕಟುಸತ್ಯಗಳನ್ನು ಅಪ್ರಿಯವೆನಿಸದಂತೆ ಹೇಳುವುದು ಒಂದು ಕಲೆಗಾರಿಕೆ. ಮೂರ್ಖ ರಾಜನ ಬಳಿ ಬಂದ ಒಬ್ಬ ಜ್ಯೋತಿಷಿ, ‘ಅಯ್ಯೋ ನಿಮ್ಮ ಮಕ್ಕಳೆಲ್ಲ ನಿಮ್ಮೆದುರೇ ಸಾಯುತ್ತಾರೆ’ ಎಂದು ಕಟುಸತ್ಯವನ್ನು ಹೇಳಿಬಿಟ್ಟ. ಕುಪಿತಗೊಂಡ ರಾಜ ಜ್ಯೋತಿಷಿಯನ್ನು ಗಲ್ಲಿಗೇರಿಸಿದ. ಮರುದಿನ ಇನ್ನೋರ್ವ ಜ್ಯೋತಿಷಿ ಬಂದ, ‘ಆಹಾ ನೀವು ದೀರ್ಘಾಯುಷಿಗಳು. ನಿಮ್ಮ ಮಕ್ಕಳಿಗಿಂತಲೂ ಹೆಚ್ಚು ಕಾಲ ಬಾಳುತ್ತೀರಿ’ ಎಂದು ಹೇಳಿ ಸನ್ಮಾನ ಪಡೆದು ಹೊರಟುಹೋದ.

    ಅಪ್ಪಟ ಸತ್ಯಗಳನ್ನು ಆದಷ್ಟು ಡೈಲ್ಯೂಟ್ ಮಾಡಿ ಸಂಬಂಧಿಸಿದವರ ಕೆಂಗಣ್ಣಿಗೆ ಪಾತ್ರರಾಗದಂತೆ ಮಾಡುವ ಕಲೆಯನ್ನು ಆಕಾಶವಾಣಿ ಹಾಗೂ ತುಂಬ ಹಿಂದಿನ ದೂರದರ್ಶನದವರಿಂದ ಕಲಿಯುವುದು ಬಹಳ ಇದೆ. ನಮ್ಮ ಉಪನ್ಯಾಸಕರೊಬ್ಬರು ತುಂಬ ಸತ್ಯವಾದಿಗಳು ಮತ್ತು ನಿಷ್ಠುರವಾದಿಗಳೂ ಹೌದು. ‘ನಾವು ನಮ್ಮ ಹೊಣೆಗಾರಿಕೆ’ ಎಂಬ ವಿಷಯದ ಮೇಲೆ ಮಾತನಾಡಲು ಆಕಾಶವಾಣಿಗೊಮ್ಮೆ ಹೋದರು ಮತ್ತು ಗುಡುಗಿದರು. ‘ಶುದ್ಧ ಅಯೋಗ್ಯರನ್ನು ಆರಿಸಿ ಕಳಿಸಿದ ನಾವು ಅದರ ಫಲವನ್ನು ಅನುಭವಿಸಲೇಬೇಕಾಗಿದೆ’ ಎಂದುಬಿಟ್ಟರು. ರೆಕಾರ್ಡ್ ಮಾಡಿಕೊಳ್ಳುತ್ತಿದಾತ ಬೆಚ್ಚಿಬಿದ್ದ. ವೃತ್ತಿಗೆ ಹೊಸಬನಾದ್ದರಿಂದ ಹೇಗೆ, ಎಷ್ಟು ತಿದ್ದಬೇಕೆಂದು ತಿಳಿಯದೆ ‘ಯೋಗ್ಯರಲ್ಲದವರನ್ನು ಆರಿಸಿ ಕಳಿಸಿದರೆ ಫಲ ಅನುಭವಿಸಬೇಕಾಗುತ್ತದೆ’ ಎಂದು ತಿದ್ದಿದ. ಆದರೂ ಮೇಲಧಿಕಾರಿಗೆ ಡೈಲ್ಯೂಷನ್ ಸಾಕಾಗಲಿಲ್ಲ. ತಮ್ಮ ವೃತ್ತಿನಿರತ, ಅಪಾಯರಹಿತ ಶೈಲಿಯಲ್ಲಿ, ‘ಯೋಗ್ಯರಾದವರನ್ನು ಆರಿಸಿ ಕಳಿಸುವುದು ನಮ್ಮ ಹೊಣೆಗಾರಿಕೆ’ ಎಂದು ತಿದ್ದಿಬಿಟ್ಟರು. ಉಪನ್ಯಾಸಕರು ಭಾಷಣ ಮುಗಿಸಿ ಹೊರಬರುವಾಗ ‘ಎಂತದು ಮಾರಾಯ್ರೆ ಎಲ್ಲ ಡಂಗಾಡಿಂಗಿ’ ಎಂದು ಉಸುರಿದರು.

    ಸತ್ಯವನ್ನು ಸುಳ್ಳೆನ್ನಿಸುವಂತೆ ಮಾಡುವುದು, ಸುಳ್ಳನ್ನು ಸತ್ಯವೆನಿಸುವಂತೆ ಮಾಡುವುದು ಕೂಡ ಒಂದು ಕಲೆಗಾರಿಕೆ (64 ಕಲೆಗಳಲ್ಲಿ ಇದು ಎಷ್ಟನೇಯದೋ ಲೆಕ್ಕವಿಲ್ಲ). ಸುಳ್ಳಾಡುವ ಮನುಷ್ಯರೆಲ್ಲರೂ ಅಪಾಯಕಾರಿ ಮೃಗಗಳು ಎಂಬ ಅಭಿಪ್ರಾಯದಲ್ಲೇನಾದರೂ ನೀವಿದ್ದರೆ ಸುಮ್ಮನೆ ಖಯಾಲಿಗಾಗಿ ಸುಳ್ಳಾಡಿಕೊಂಡು ಓಡಾಡುತ್ತ ಅನೇಕ ಸಲ ತಮ್ಮ ಮೇಲೇ ಅಪಾಯ ತಂದುಕೊಳ್ಳುವ ಎಡವಟ್ಟು ಜನರನ್ನೂ ಕಾಣಬಹುದು. ‘ಜಮೀನು ಎಷ್ಟಿದೆ?’ ಎಂದು ಕೇಳಿದಾಗ ತನ್ನ ಜಮೀನಿನ ಜೊತೆಗೆ ಪಕ್ಕದವನದ್ದೂ ಸೇರಿಸಿ ‘ಒಂದು ನೂರು ಎಕರೆ ಇದೆ’ ಎಂದು ಹೇಳಿಬಿಡುವುದು, ವಿಚಾರಿಸಲಾಗಿ ತೊಂಬತ್ತೊಂಬತ್ತು ಎಕರೆ ಪಕ್ಕದವನದ್ದು, ಒಂದೆಕರೆ ಮಾತ್ರ ಈತನದ್ದು! ‘ಪರೀಕ್ಷೆ ಹೇಗಾಗಿದೆ?’ ಎಂದು ಕೇಳಿದರೆ ವಿದ್ಯಾರ್ಥಿಗಳು ‘ಚೆನ್ನಾಗಾಗಿದೆ’ ಎಂದೇ ಹೇಳುವುದು. ಪಾಪ ಅವರ ಬೆನ್ನು ಹತ್ತಿಹೋಗಿ ಮಾರ್ಕ್್ಸ ಎಷ್ಟು ಬಂತು ಎಂದೆಲ್ಲ ಸಂಶೋಧನೆಗಿಳಿಯುವುದು ಹೃದಯಹೀನರ ಕೆಲಸ. ನಿರಪಾಯಕಾರಿ ಸುಳ್ಳುಗಳನ್ನು ಕ್ಷಮಿಸಿ ನಕ್ಕುಬಿಡಬಹುದು. ಆದರೆ ಅಪಾಯಕಾರಿ ಸುಳ್ಳುಗಳ ಸರಮಾಲೆಗಳನ್ನೇ ಬಿಡುವ ಸರದಾರರನ್ನು ಎಂದಿಗೂ ನಂಬುವಂತಿಲ್ಲ, ಬಿಡುವಂತೆಯೂ ಇಲ್ಲ. ಕಳ್ಳತನಕ್ಕೆ ಇಂಥ ಶಿಕ್ಷೆ, ಕೊಲೆಗೆ ಇಂಥ ಶಿಕ್ಷೆ ಎಂದೆಲ್ಲ ಶಿಕ್ಷೆಗಳಿದ್ದಂತೆಯೇ ಸುಳ್ಳಾಡಿದ್ದಕ್ಕೆ ಇಷ್ಟು ಶಿಕ್ಷೆ ಎಂದು ನಮೂದಿಸಲ್ಪಟ್ಟಿದ್ದರೆ ‘ಸತ್ಯವಂತರಿಗಿದು ಕಾಲವಲ್ಲ…’ ಎಂಬ ಹಾಡನ್ನು ಹಾಡಬೇಕಾದ ಪಾಡು ಇರುತ್ತಿರಲಿಲ್ಲ.

    (ಲೇಖಕರು ಅರ್ಥಶಾಸ್ತ್ರ ಉಪನ್ಯಾಸಕರು, ಖ್ಯಾತ ಹಾಸ್ಯ ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts