ಪ್ರಕೃತಿ, ವಿಕೃತಿ, ಸಂಸ್ಕೃತಿ

ಇತ್ತೀಚಿನ ದಿನಗಳಲ್ಲಿ ಪ್ರಕೃತಿ ನಾಶವಾಗುತ್ತಿದೆ; ಪ್ರಕೃತಿ ಸಹಜವಾದ ಗುಣ ಸ್ವಭಾವಗಳು ಮಾಯವಾಗುತ್ತಿದೆ. ಜನರಲ್ಲಿ ವಿಕೃತ ಮನೋಸ್ಥಿತಿಗಳು, ವಿಧ್ವಂಸಕ ಮನೋಪ್ರವೃತ್ತಿಗಳು ಹೆಚ್ಚಾಗುತ್ತಿವೆ. ಸಂಸ್ಕೃತಿ-ಸಂಸ್ಕಾರಗಳು ಮರೆಯಾಗುತ್ತಿವೆ. ಪ್ರಕೃತಿ-ವಿಕೃತಿ-ಸಂಸ್ಕೃತಿ ಈ ಮೂರು ಕೂಡ ಭಿನ್ನ ಭಿನ್ನ ಅರ್ಥ ಆಯಾಮವುಳ್ಳ ವಿಚಾರಗಳು.

ಪ್ರಕೃತಿ ಎಂದರೆ ಸಾಮಾನ್ಯ ಅರ್ಥದಲ್ಲಿ ್ಞಠ್ಠಿ್ಟ ಅಥವಾ ್ಞಠ್ಠಿ್ಟ್ಝ ಎಂಬುದು. ಇದು ನೈಸರ್ಗಿಕವಾಗಿ ಕಾಣಬಹುದಾದ ವಸ್ತು ವಿಷಯಗಳಿರಬಹುದು, ಪ್ರಕೃತಿದತ್ತವಾದ ನಮ್ಮ ದೇಹದ ಅಂಗಾಂಗಗಳಿರಬಹುದು; ವಸ್ತು ಇಲ್ಲವೇ ಪ್ರಾಣಿ ಸಹಜವಾದ ಗುಣ ಧರ್ಮವಿರಬಹುದು. ವಿಕೃತಿ ಎಂದರೆ u್ಞಠ್ಠಿ್ಟ್ಝ ವಿಕೃತವಾದುದು, ಅಸಹಜವಾದುದು, ಅಶ್ಲೀಲವಾದುದು, ಅಸ್ವಾಭಾವಿಕವಾದುದು, ಅನೈತಿಕವಾದುದು ಎಂಬರ್ಥ.

ಪ್ರಕೃತಿದತ್ತವಾದ ಕೊಡುಗೆಗಳನ್ನು ವಿಕಾರಗೊಳಿಸಿದಾಗ, ಇಲ್ಲವೇ ಪ್ರಕೃತಿ ಸಹಜಸ್ವಾಭಾವಿಕವಾದ ಗುಣ ಸ್ವಭಾವಗಳಿಗೆ, ದುರ್ಬುದ್ಧಿಯನ್ನು, ದುರ್ಗಣಗಳನ್ನು, ದುರಾಲೋಚನೆಗಳನ್ನು, ದುರಾಸೆಗಳನ್ನು ಬೆರೆಸಿಕೊಂಡಾಗ, ಅದು ವಿಕೃತಿ ಎಂದೆನಿಸಿಕೊಳ್ಳುತ್ತದೆ. ವ್ಯತಿರಿಕ್ತವಾಗಿ, ಇವಕ್ಕೆ, ಸದ್ಗುಣಗಳನ್ನು, ಸದ್ ವಿಚಾರಗಳನ್ನು, ಸಂಸ್ಕಾರವನ್ನು, ಮೌಲ್ಯಗಳನ್ನು ಬೆರೆಸಿಕೊಂಡಾಗ, ಅದು ಸಂಸ್ಕೃತಿ ಎಂದೆನಿಸಿಕೊಳ್ಳುತ್ತದೆ. ಸಂಸ್ಕೃತಿ ಎಂದರೆ ಸಮ್ಯಕ್​ಕೃತಿ, ಅರ್ಥಾತ್ ಸಭ್ಯ, ಸಂಭಾವಿತ, ಸುಸಂಸ್ಕೃತವಾದ ಕೃತಿ ಎಂದರ್ಥ. ಸಂಸ್ಕೃತಿ ಎಂಬುದು ಸದ್ಗುಣ ಸೂಚಕ, ಸಂಸ್ಕಾರ ಸೂಚಕ ಪದ. ಸಂಸ್ಕರಣಗಳ ಫಲಶ್ರುತಿಯೇ ಸಂಸ್ಕಾರ; ಸಂಸ್ಕಾರಗಳ ಫಲಶ್ರುತಿಯೇ ಸಂಸ್ಕೃತಿ.

ಪ್ರಾಕೃತಿಕವಾಗಿ ನೋಡಿದರೆ ಭೂಮಿ ಪ್ರಕೃತಿ; ಭೂ ಕೃಷಿ ಒಂದು ಸಂಸ್ಕೃತಿ; ಭೂಕಂಪ ಒಂದು ವಿಕೃತಿ. ಮಳೆ ನೀರು ಪ್ರಕೃತಿ; ನೀರಾವರಿ, ನೀರಿನ ಉಳಿತಾಯ ಒಂದು ಸಂಸ್ಕೃತಿ; ಅತಿವೃಷ್ಟಿ, ಅನಾವೃಷ್ಟಿ, ನೆರೆ, ಸುನಾಮಿ ವಿಕೃತಿ. ಗಾಳಿ ಪ್ರಕೃತಿ; ಬಿರುಗಾಳಿ ಚಂಡಮಾರುತ ವಿಕೃತಿ; ನೊಂದವರ ಬಾಳಿಗೆ ಉಸಿರಾಗೋದು ಸಂಸ್ಕೃತಿ. ಜ್ಯೋತಿ ಪ್ರಕೃತಿ; ಜ್ವಾಲೆ ವಿಕೃತಿ; ಮನೆ ಬೆಳಗುವ ನಂದಾದೀಪವಾಗೋದು ಸಂಸ್ಕೃತಿ. ಅಕ್ಕಿ ಪ್ರಕೃತಿ; ಅನ್ನ ಸಂಸ್ಕೃತಿ; ಆದರೆ ಆಹಾರದ ಪೋಲು ವಿಕೃತಿ. ಚಿನ್ನ ಪ್ರಕೃತಿ; ಚಿನ್ನದಿಂದ ತಯಾರಿಸುವ ಆಭರಣ ಸಂಸ್ಕೃತಿ; ಚಿನ್ನಕ್ಕಾಗಿ ಹಾಕುವ ಕನ್ನ, ಮಾಡುವ ಕೊಲೆ, ಕಳವು ವಿಕೃತಿ. ಅರಣ್ಯ ಪ್ರಕೃತಿ; ಅರಣ್ಯ ರಕ್ಷಣೆ ಸಂಸ್ಕೃತಿ; ಅರಣ್ಯನಾಶ ವಿಕೃತಿ. ಕಲ್ಲಬಂಡೆ ಪ್ರಕೃತಿ; ಬಂಡೆಯನ್ನು ಕೆತ್ತಿ ಮಾಡುವ ಸುಂದರ ವಿಗ್ರಹ ಸಂಸ್ಕೃತಿ; ಆದರೆ, ಇತರರಿಗಾಗಿ ಮಿಡಿಯಬೇಕಾದ ಹೃದಯವೂ ಕಲ್ಲುಬಂಡೆಯಂತಿದ್ದರೆ, ಅದು ವಿಕೃತಿ. ಹಸು ಪ್ರಕೃತಿ; ಗೋ ಪೂಜೆ ಸಂಸ್ಕೃತಿ. ಗೋ ಹತ್ಯೆ ವಿಕೃತಿ. ನಮ್ಮ ದೇಶ ಪ್ರಕೃತಿ; ದೇಶ ಪ್ರೇಮ ಸಂಸ್ಕೃತಿ, ದೇಶ ದ್ರೋಹ ವಿಕೃತಿ.

ಶಾರೀರಿಕವಾಗಿ ವಿಶ್ಲೇಷಿಸಿದರೆ ನಮ್ಮ ದೇಹ ಪ್ರಕೃತಿಯ ಕೊಡುಗೆ; ದೇಹದೊಳಗಿನ ದಾಹ, ದುರಾಸೆ ವಿಕೃತಿ; ದೇಹದಿಂದ ಗೈಯುವ ದಾಸೋಹ ಸಂಸ್ಕೃತಿ. ನಮ್ಮ ತಲೆ ಪ್ರಕೃತಿ; ತಲೆಯೊಳಗೆ ಸದ್ಬುದ್ಧಿ, ಸದ್ಗುಣಗಳು, ಸದ್ ವಿಚಾರಗಳು ತುಂಬಿದ್ದರೆ ಸಂಸ್ಕೃತಿ; ಬದಲಾಗಿ, ದುರ್ಗಣಗಳು, ದುರಾಸೆಗಳು, ದುರಾಲೋಚನೆಗಳು ತುಂಬಿದ್ದರೆ ಅದು ವಿಕೃತಿ. ನಮ್ಮ ಮುಖ ಪ್ರಕೃತಿ; ಮುಖದ ಮೇಲೆ ಅಟ್ಟಹಾಸವಿದ್ದರೆ ವಿಕೃತಿ; ಮಂದಹಾಸವಿದ್ದರೆ ಸಂಸ್ಕೃತಿ; ಕಣ್ಣೀರು ಪ್ರಕೃತಿ; ಯಾರಿಗಾದರೂ ಕಣ್ಣೀರು ತರಿಸೋದು ವಿಕೃತಿ; ಯಾರದಾದರೂ ಕಣ್ಣೀರು ಒರೆಸೋದು ಸಂಸ್ಕೃತಿ. ಕಿವಿ ಪ್ರಕೃತಿ; ಕಿವಿಗೊಂದು ಬೆಂಡೋಲೆ ಸಂಸ್ಕೃತಿ; ಇತರರ ಮಾತುಗಳನ್ನು ಕದ್ದಾಲಿಸೋದು ವಿಕೃತಿ. ಕೆನ್ನೆ ಪ್ರಕೃತಿ; ಕೆನ್ನೆ ಸವರಿ ಪ್ರೀತಿಯಿಂದ ಮಾತನಾಡಿಸೋದು ಸಂಸ್ಕೃತಿ; ಕೆನ್ನೆಗೆ ಬಾರಿಸೋದು ವಿಕೃತಿ. ಮೂಗು ಪ್ರಕೃತಿ; ಮೂಗಿಗೊಂದು ಮೂಗುತಿ ಸಂಸ್ಕೃತಿ; ಇತರರ ವಿಚಾರದಲ್ಲಿ ಮೂಗು ತೂರಿಸೋದು ವಿಕೃತಿ. ಸ್ವರ ಪ್ರಕೃತಿ; ಸಂಗೀತ ಸಂಸ್ಕೃತಿ; ಕೂಗಾಟ, ಕಿರುಚಾಟ ವಿಕೃತಿ. ಹೊಟ್ಟೆ ಪ್ರಕೃತಿ; ಹೊಟ್ಟೆಯ ಪಾಡಿಗಾಗಿ ಗೈಯುವ ಕಾಯಕ ಸಂಸ್ಕೃತಿ; ಬಡವರ ಹೊಟ್ಟೆ ಹೊಡೆದು ಹಣ ಮಾಡೋದು ವಿಕೃತಿ. ಕಾಲು ಪ್ರಕೃತಿ; ಕುಣಿತ ಸಂಸ್ಕೃತಿ; ಒದೆತ ವಿಕೃತಿ. ಹೆಜ್ಜೆ ಪ್ರಕೃತಿ; ಗೆಜ್ಜೆ ಸಂಸ್ಕೃತಿ; ಲಜ್ಜೆ ಇಲ್ಲದಿರೋದು ವಿಕೃತಿ. ಅಂತೆಯೇ ಭಗವಂತ ಕೊಟ್ಟ ನಮ್ಮ ಕೈಗಳು ಪ್ರಕೃತಿ; ಕೈಗಳಿಂದ ಮಾಡುವ ಕಪಾಳಮೋಕ್ಷ ವಿಕೃತಿ; ಕೈಗಳಿಂದ ಮಾಡುವ ನಮಸ್ಕಾರ ಮತ್ತು ಕೈ ಚಪ್ಪಾಳೆ ಒಂದು ಸಂಸ್ಕೃತಿ.

ಮಾನಸಿಕವಾಗಿ ನೋಡಿದರೆ ನಮ್ಮ ಮನಸ್ಸು ಪ್ರಕೃತಿ; ಅದು ಗುಣಗಳ ತೊಟ್ಟಿಲಾದರೆ ಸಂಸ್ಕೃತಿ; ಕಸದ ತೊಟ್ಟಯಾದರೆ ವಿಕೃತಿ. ಆಚಾರ ಪ್ರಕೃತಿ; ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ ವಿಕೃತಿ; ಆದರೆ ಸದಾಚಾರ ಸಂಸ್ಕೃತಿ. ಭಯ ಪ್ರಕೃತಿ. ಇದು ಸಹಜವಾದ ಗುಣ. ಆದರೆ ಭಯೋತ್ಪಾದನೆ ವಿಕೃತಿ; ಬದಲಾಗಿ ದಯೋತ್ಪಾದನೆ ಸಂಸ್ಕೃತಿ. ಮಾತು ಪ್ರಕೃತಿ; ಮನ ಅರಳಿಸುವ ಮಾತು ಸಂಸ್ಕೃತಿ; ಮನ ಕೆರಳಿಸುವ ಮಾತು ವಿಕೃತಿ. ಹಾಸ್ಯ ಸಹಜ ಸ್ವಾಭಾವಿಕವಾದ ಪ್ರಕೃತಿ; ತಿಳಿಹಾಸ್ಯ ಸಂಸ್ಕೃತಿ; ಅಪಹಾಸ್ಯ ವಿಕೃತಿ.

ಸಾಂಸಾರಿಕವಾಗಿ ನೋಡಿದರೆ ಗಂಡು ಹೆಣ್ಣು ಪ್ರಕೃತಿ; ಇವರೊಳಗೆ ನಡೆಯುವ ವಿವಾಹ ಒಂದು ಸಂಸ್ಕೃತಿ; ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸಲಿಂಗ ವಿವಾಹ ಒಂದು ವಿಕೃತಿ. ಮದುವೆ ಪ್ರಕೃತಿ; ಅನುಕೂಲ ದಾಂಪತ್ಯ ವಿಕೃತಿ; ಅನುರಾಗ ದಾಂಪತ್ಯ ಒಂದು ಸಂಸ್ಕೃತಿ. ಬಾಲ್ಯದಲ್ಲಿ ಹೆತ್ತವರಿಂದ ಮಕ್ಕಳ ಲಾಲನೆ, ಪಾಲನೆ ಪ್ರಕೃತಿ; ವೃದ್ಧಾಪ್ಯದಲ್ಲಿ ಮಕ್ಕಳಿಂದ ಹೆತ್ತವರ ಸೇವೆ ಸಂಸ್ಕೃತಿ; ವೃದ್ಧಾಶ್ರಮಕ್ಕೆ ಸೇರಿಸೋದು ವಿಕೃತಿ.

ಸಾಮಾಜಿಕವಾಗಿ ನೋಡಿದರೆ ಎನಗಿರಬೇಕೆಂಬ ಮನುಜ ಧರ್ಮ ಪ್ರಕೃತಿ; ನಿನಗೂ ಇದೆಯಲ್ಲಾ ಎಂಬ ಅಸೂಯೆ ವಿಕೃತಿ; ನಿನಗಿದ್ದರೆ, ಎನಗಿದ್ದಂತೆ ಎಂಬ ಭಾವನೆ ಸಂಸ್ಕೃತಿ. ನನ್ನದು ನನ್ನದೇ, ನಿನ್ನದು ನಿನ್ನದೇ ಇದು ಮನುಷ್ಯತ್ವವನ್ನು ಬಿಂಬಿಸುವ ಪ್ರಕೃತಿ; ನನ್ನದು ನನ್ನದೇ; ನಿನ್ನದೂ ನನ್ನದೇ ಇದು ಮೃಗ ಸ್ವಭಾವವನ್ನು ತೋರ್ಪಡಿಸುವ ವಿಕೃತಿ; ನಿನ್ನದು ನಿನ್ನದೇ, ನನ್ನದೂ ನಿನ್ನದೇ ಎಂಬ ಭಾವ ದೈವತ್ವವನ್ನು ವ್ಯಕ್ತಪಡಿಸುವ ಸಂಸ್ಕೃತಿ. ದುಡಿದು ತಿನ್ನೋದು ಪ್ರಕೃತಿ; ಇತರರನ್ನು ದುಡಿಸಿ ತಿನ್ನೋದು ವಿಕೃತಿ; ತಾನು ದುಡಿದು ಇತರರಿಗೆ ತಿನಿಸೋದು ಒಂದು ಸಂಸ್ಕೃತಿ. ಅಂತೆಯೇ ವಿಜ್ಞಾನ ಪ್ರಕೃತಿ; ವಿಜ್ಞಾನದ ಕೊಡುಗೆಗಳನ್ನು, ಮಾನವ ಕಲ್ಯಾಣಕ್ಕೆ ಬಳಸಿಕೊಳ್ಳೋದು ಸಂಸ್ಕೃತಿ; ಮಾನವ ಕುಲದ ಸರ್ವನಾಶಕ್ಕೆ ಉಪಯೋಗಿಸಲು ಮುಂದಾಗುವುದು ವಿಕೃತಿ. ನಮ್ಮೊಳಗಿನ ಮನುಷ್ಯತ್ವ (ಪ್ರಕೃತಿ) ಉಳಿಯಲಿ. ದೈವತ್ವ (ಸಂಸ್ಕೃತಿ) ಬೆಳೆಯಲಿ. ಮೃಗತ್ವ (ವಿಕೃತಿ) ನಾಶವಾಗಲಿ.

ಸಂದೇಶವಿಷ್ಟೆ: ಪ್ರಕೃತಿದತ್ತವಾದ ಕೊಡುಗೆಗಳನ್ನು ಗುಣ ಸ್ವಭಾವಗಳನ್ನು, ವಿಕೃತಿ ರೂಪದಲ್ಲಿ ಪ್ರಕಟವಾಗಲು ಬಿಡದೆ, ಒಂದು ಸಂಸ್ಕೃತಿಯನ್ನಾಗಿ, ಸಂಸ್ಕಾರವನ್ನಾಗಿ ಪರಿವರ್ತಿಸಬೇಕಾದುದು ಎಲ್ಲರ ಆದ್ಯ ಕರ್ತವ್ಯ!

Leave a Reply

Your email address will not be published. Required fields are marked *