ಕಸದ ಬುಟ್ಟಿ ಸೇರುವ ಕಾಗದ ಹೊಸ ಪುಸ್ತಕವಾದಾಗ…

ಬಳಸಿದ ಪುಸ್ತಕದಲ್ಲಿ ಉಳಿದ ಕಾಗದ ಸಂಗ್ರಹಿಸಿ ಅದರಿಂದ ನೋಟ್​ಪುಸ್ತಕ ತಯಾರಿಸಿ ಹಿಂದುಳಿದ ಶಾಲೆಯ ವಿದ್ಯಾರ್ಥಿಗಳಿಗೆ ಹಂಚುವ ಯೋಚನೆಯೇ ಎಷ್ಟೊಂದು ಉದಾತ್ತವಾದುದಲ್ಲವೇ? ಅಂಥ ಯೋಚನೆಯನ್ನು ಯೋಜನೆಯಾಗಿ ಮಾರ್ಪಡಿಸಿ ಯಶಸ್ವಿಗೊಳಿಸಿದ ಕಥೆ ಇದು.

| ಚಂದ್ರಹಾಸ ಚಾರ್ವಡಿ

ಅಂತಿಮ ಪರೀಕ್ಷೆ ಮುಗಿಯುತ್ತಿದ್ದಂತೆ ಹೆಚ್ಚಿನ ವಿದ್ಯಾರ್ಥಿಗಳ ನೋಟ್ ಬುಕ್​ಗಳು ಗುಜರಿ ಅಂಗಡಿಯ ಕದ ತಟ್ಟುತ್ತವೆ. ಪುಸ್ತಕ ಖರೀದಿ ಮಾಡುವ ಇದ್ದ ಖುಷಿಗಿಂತಲೂ ಗುಜರಿ ಅಂಗಡಿಯವನಿಗೆ ಮಾರಿ ಹಣ ಪಡೆಯುವುದರಲ್ಲಿ ಏನೋ ಒಂಥರಾ ಹೆಚ್ಚಿನ ಸಂಭ್ರಮ. ಪ್ರತಿ ಪುಸ್ತಕದಲ್ಲೂ ಬರೆಯದೆ ಹಾಗೇ ಬಿಟ್ಟ ಸಾಕಷ್ಟು ಪುಟಗಳಿರುತ್ತವೆ. ಅದನ್ನು ಬಳಸುವ ಗೋಜಿಗೆ ಯಾರೂ ಹೋಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅಂತಹ ಅನಿವಾರ್ಯತೆ ಯಾರಿಗೂ ಇಲ್ಲ. ಪುಸ್ತಕ ಪುಟಗಳನ್ನು ಜೋಡಿಸಿ ಮುಂದಿನ ತರಗತಿಗೆ ಬಳಸಿದರೆ ಇತರರೆದುರು ತಾನೆಲ್ಲಿ ಬಡವನೆಂಬ ಹಣೆಪಟ್ಟಿ ಪಡೆಯುತ್ತೇನೊ ಎಂಬ ಭಯ ಬೇರೆ. ದಿನದಿಂದ ದಿನಕ್ಕೆ ಬ್ಯಾಗ್, ಡ್ರೆಸ್, ಪುಸ್ತಕ, ಪೆನ್ ಹೀಗೆ ಎಲ್ಲದರಲ್ಲಿ ಹೊಸತನ ಬಯಸುತ್ತಿರುವಾಗ ಬಳಸಿ ಉಳಿದ ಪುಸ್ತಕದ ಕಾಗದವನ್ನು ತೆಗೆದು ಅದರಿಂದ ಮತ್ತೆ ನೋಟ್ ಪುಸ್ತಕ ತಯಾರಿಸುತ್ತಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಇಂತಹ ಒಂದು ಅಪರೂಪದ ಪ್ರಯತ್ನದಲ್ಲಿ ಉಜಿರೆ ಎಸ್​ಡಿಎಂ ಕಾಲೇಜಿನ ಬಿ.ಬಿ.ಎ ವಿಭಾಗ ಯಶಸ್ಸು ಕಂಡಿದೆ.

ಪೇಪರ್ ಪೂಲ್ ಕ್ಯಾಂಪೇನ್: ಕಾಲೇಜಿನ ಬಿ.ಬಿ.ಎ ವಿಭಾಗದ ಪ್ರಾಧ್ಯಾಪಕರ ಮಾರ್ಗದರ್ಶನದಂತೆ ಬಳಸಿದ ಪುಸ್ತಕದಲ್ಲಿ ಉಳಿದ ಕಾಗದ ಸಂಗ್ರಹಿಸಿ ಅದರಿಂದ ನೋಟ್​ಪುಸ್ತಕ ತಯಾರಿಸಿ ಹಿಂದುಳಿದ ಶಾಲೆಯ ವಿದ್ಯಾರ್ಥಿಗಳಿಗೆ ಹಂಚುವ ಯೋಚನೆಯನ್ನು ಎತ್ತರಕ್ಕೆ ಬೆಳೆಸಿದ ಹೆಗ್ಗಳಿಕೆ ತೃತೀಯ ಬಿ.ಬಿ.ಎ. ವಿದ್ಯಾರ್ಥಿಗಳದ್ದು. ಇದರ ಪ್ರಮುಖ ರೂವಾರಿ ವಿಭಾಗದ ಶರಶ್ಚಂದ್ರ. ಇದಕ್ಕಾಗಿ ವಾಟ್ಸ್​ಆಪ್ ಗ್ರೂಪ್ ಒಂದನ್ನು ತೆರೆದು ಬಳಸಿ ಉಳಿದ ಕಾಗದ ನೀಡುವಂತೆ ಸಂದೇಶವೊಂದನ್ನು ಗ್ರೂಪ್​ಗೆ ಹಾಕಿದರು. ಆರಂಭದಲ್ಲಿ 4000 ಕಾಗದ ಸಂಗ್ರಹಿಸುವ ಗುರಿ ಹೊಂದಿದ್ದರು. ಆದರೆ ಕೇವಲ 15 ದಿನದಲ್ಲೇ 24,900 ಕಾಗದ ಸಂಗ್ರಹವಾಯಿತು. ಇದನ್ನು ಗಾತ್ರದ ಆಧಾರದ ಮೇಲೆ ವರ್ಗೀಕರಿಸಿ ಉಜಿರೆಯ ಮಂಜುಶ್ರೀ ಪ್ರಿಂಟರ್ಸ್​ಗೆ ನೀಡಿ ಅವುಗಳಿಂದ 240 ಪುಸ್ತಕಗಳನ್ನು ತಯಾರಿಸಿದರು. ಈ ಕೆಲಸಕ್ಕೆ ಖರ್ಚಾದದ್ದು ಕೇವಲ 1344 ರೂ.

ಈ ಮೊತ್ತವನ್ನು ತೃತೀಯ ಬಿ.ಬಿ.ಎ ವಿದ್ಯಾರ್ಥಿಗಳೇ ಭರಿಸಿದರು. ಅಂದರೆ ಒಂದು ಪುಸ್ತಕ 5.60 ರೂ.ಗೆ ದೊರೆತಂತಾಯಿತು. ಈ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಹಂಚುವುದಕ್ಕಾಗಿ ಇವರು ಬೆಳ್ತಂಗಡಿ ತಾಲೂಕಿನ ನಾರಾವಿಯ ಕುತ್ಲೂರು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡರು. ಎಸ್​ಡಿಎಂ ಕಾಲೇಜಿನ ಓರ್ವ ಹಳೆ ವಿದ್ಯಾರ್ಥಿ ಸಲಹೆಯಂತೆ ಪುಸ್ತಕದೊಂದಿಗೆ 100 ಪೆನ್ ಮತ್ತು ಪೆನ್ಸಿಲ್​ಗಳನ್ನು ವಿತರಿಸಿದ್ದು, ಇನ್ನೋರ್ವರು ಜಾಮಿಟ್ರಿ ಪೆಟ್ಟಿಗೆ ನೀಡಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿ ತಂಡ ಮತ್ತು ವಿಭಾಗದ ಪ್ರಾಧ್ಯಾಪಕರು ಕುತ್ಲೂರು ಶಾಲೆಗೆ ತೆರಳಿ ಪ್ರತಿ ವಿದ್ಯಾರ್ಥಿಗೆ ಐದು ಪುಸ್ತಕದಂತೆ 46 ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ. ಇವರ ಈ ವಿನೂತನ ಪ್ರಯತ್ನಕ್ಕೆ ಎಸ್​ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಯಶೋವರ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತರರಿಗೆ ಸಹಾಯ ಮಾಡಬೇಕೆಂಬ ಇಲ್ಲಿನ ವಿದ್ಯಾರ್ಥಿಗಳ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ. ಇತರ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಇಂತಹ ಕೆಲಸ ಮಾಡಲು ಪ್ರಯತ್ನಿಸಬಹುದಾಗಿದೆ. ಗುಜರಿ ಅಂಗಡಿ ಸೇರುವ ಪುಸ್ತಕದಲ್ಲಿರುವ ಬಳಸದೆ ಉಳಿದ ಪುಟಗಳನ್ನು ತೆಗೆದು ಪುಸ್ತಕಗಳನ್ನು ತಯಾರಿಸಿ ತಮ್ಮ ಊರಿನ ಬಡ ವಿದ್ಯಾರ್ಥಿಗಳ ಹಂಚುವ ಕೆಲಸವನ್ನು ಎಲ್ಲರೂ ಕೈಗೆತ್ತಿಕೊಂಡರೆ ಆ ಮಕ್ಕಳಿಗೆ ಸಹಾಯವಾದೀತು.