ಆಶಾವಾದಿಯಿಂದ ಎಲ್ಲವೂ ಸಾಧ್ಯ

| ಡಾ.ಕೆ.ಪಿ. ಪುತ್ತೂರಾಯ

ಇತ್ತೀಚೆಗೆ ವೃದ್ಧರೊಬ್ಬರನ್ನು ಭೇಟಿಯಾದಾಗ ‘ಹೇಗಿದ್ದೀರಿ’ ಎಂಬ ನನ್ನ ಪ್ರಶ್ನೆಗೆ ‘ಸೂಪರ್, ಫಸ್ಟ್ ಕ್ಲಾಸ್’ ಎಂಬ ಲವಲವಿಕೆಯ ಉತ್ತರವನ್ನಿತ್ತರು. ಇದೇ ಪ್ರಶ್ನೆಯನ್ನು ಇನ್ನೊಬ್ಬರಿಗೆ ಕೇಳಿದಾಗ ‘ಇದ್ದೇನೆ ನೋಡಿ, ಇನ್ನೂ ಸತ್ತಿಲ್ಲ; ಮಕ್ಕಳು ಬದುಕೋಕೆ ಬಿಡುವುದಿಲ್ಲ; ಡಾಕ್ಟರ್ ಸಾಯೋಕೆ ಬಿಡುವುದಿಲ್ಲ’ ಎಂಬ ನಿರಾಶಾದಾಯಕ ಮಾತುಗಳನ್ನಾಡಿದರು.

ಇವರಿಬ್ಬರ ಮಾತುಗಳಲ್ಲೂ ಎದ್ದು ತೋರಿದ್ದು ಅವರವರ ಮನೋಭಾವ. ಮೊದಲಿನವರಲ್ಲಿ ಸಕಾರಾತ್ಮಕ ಮನೋಭಾವ ತೋರಿ ಬಂದರೆ, ಎರಡನೆಯವರಲ್ಲಿ ನಕಾರಾತ್ಮಕ ಮನೋಭಾವ. ಮೊದಲಿನವರದು ಆಶಾಭಾವವಾದರೆ, ಎರಡನೆಯವರದು ನಿರಾಶಾವಾದ. ಈ ಜಗತ್ತಿನಲ್ಲಿ ಸಮಸ್ಯೆಗಳಿಲ್ಲದವರೇ ಇಲ್ಲವೆನ್ನಬಹುದು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ. ಕೆಲವು ಇತರರಿಗೆ ಹೇಳಿ ಹಂಚಿಕೊಳ್ಳಲು ಸಾಧ್ಯವಾಗುವಂತಹದ್ದು; ಕೆಲವು ಯಾರಿಗೂ ಹೇಳಲಾಗದೆ, ಒಳಗೊಳಗೇ ಕೊರಗಿಕೊಳ್ಳುವಂತಹದ್ದು. ಕೆಲವಕ್ಕೆ ಪರಿಹಾರವಿದೆಯಾದರೆ, ಕೆಲವಕ್ಕೆ ಪರಿಹಾರವೇ ಇರೋದಿಲ್ಲ. ಅದೇನೇ ಇರಲಿ; ಜೀವನ ಸಾಗುತ್ತಲೇ ಇರುತ್ತದೆ. ಸಾಗಲೇ ಬೇಕಲ್ಲ! ಸಾಯುವವರೆಗೆ ಬದುಕಿ ಬಾಳಲೇಬೇಕಲ್ಲ! ಸಮಸ್ಯೆಗಳಿವೆ – ಸಂಕಷ್ಟಗಳಿವೆಯೆಂದು ಅಳುತ್ತ ಕೂರೋಕಾಗತ್ತಾ? ಇಲ್ಲವೇ ಸಪ್ಪೆ ಮುಖ ಮಾಡಿಕೊಂಡು ಬಿದ್ದಿರೋಕಾಗತ್ತಾ? ಹೀಗೆ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರವೂ ಸಿಗದು; ಇತರರ ಅನುಕಂಪವೂ ದೊರಕದು. ‘ಈಸಬೇಕು; ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ, ಜೀವನವೆಂಬ ಸಾಗರವನ್ನು ಈಸಲೇಬೇಕು. ಈಸಲು ನೆರವಾಗುವ ಹರಿಗೋಲೇ ಆಶಾವಾದ. ನಮ್ಮ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ವೈದ್ಯರೂ ನಾವಾಗಬೇಕು; ಎದುರಿಸುವ ಯೋಧರೂ ನಾವಾಗಬೇಕು. ಮುಂದೆ ಒಂದಲ್ಲ ಒಂದು ದಿನ, ಎಲ್ಲವೂ ಸರಿಹೋದೀತೆಂಬ ಭಾವನೆಯಿಂದ ಭರವಸೆಯಿಂದ ಮುಂದೆ ಸಾಗಲೇಬೇಕು. ಇದುವೇ ಆಶಾವಾದ. ಇದುವೇ ಎಲ್ಲ ನಿರಾಶಾವಾದಿಗಳಿಗೆ ರಾಮಬಾಣ. ‘ನನ್ನಿಂದಾಗದು’ ಎಂದು ಕೈ ಮೇಲೆತ್ತಿಬಿಟ್ಟರೆ, ಈ ಗೌಜಿ ಗದ್ದಲದಲ್ಲಿ ಬಿದ್ದು ಹೋಗೋದು ಖಂಡಿತ. ಆಶಾವಾದ ಉರಿಯುವ ಬತ್ತಿಗೆ ನೆರವಾಗುವ ಎಣ್ಣೆಯಂತೆ, ಜೀವನದಲ್ಲಿ ನಮ್ಮ ಯೋಜನೆಗಳಿಗೆ ನೆರವಾಗುತ್ತದೆ.

ನಿರಾಶಾವಾದಿಗಳಲ್ಲಿ ಇರಬೇಕಾದ ಉತ್ಸಾಹವೆಲ್ಲವೂ ಬತ್ತಿ ಹೋಗಿರುತ್ತದೆ. ಈ ಜಗತ್ತಿನಲ್ಲಿ ಕಷ್ಟಗಳು ಯಾರನ್ನೂ ಬಿಟ್ಟಿಲ್ಲ ಎಂಬ ಸತ್ಯದ ಅರಿವಾದರೆ, ನಿರಾಶಾವಾದ ನಮ್ಮ ಬಳಿ ಸುಳಿಯದು. ನಾವು ಬದುಕನ್ನು ಪ್ರೀತಿಸಲಾರಂಭಿಸಿದರೆ, ಬದುಕು ಕೂಡ ನಮ್ಮನ್ನು ಪ್ರೀತಿಸಲಾರಂಭಿಸುತ್ತದೆ. ಕೆಟ್ಟವರಲ್ಲೂ ಏನಾದರೊಂದು ಒಳ್ಳೆಯ ಗುಣ ಇರುತ್ತದೆ ಹಾಗೂ ಒಂದಲ್ಲ ಒಂದು ದಿನ ಅವರೂ ಒಳ್ಳೆಯವರಾದಾರು ಎಂಬ ಆಶಯ, ಆಶಾವಾದಿಯದ್ದಾದರೆ, ಕೆಟ್ಟವರು ಒಳ್ಳೆಯವರಾಗುವ ಸಂದರ್ಭವೇ ಇಲ್ಲ ಎಂಬ ಅಪನಂಬಿಕೆ, ನಿರಾಶಾವಾದಿಗಳದ್ದು.

‘ಅಸಾಧ್ಯ, ಅಸಂಭವ’ ಎಂಬ ಪದಗಳು ಆಶಾವಾದಿಗಳ ಶಬ್ದಕೋಶದಲ್ಲಿರುವುದು ಬಹಳ ಅಪರೂಪ. ಆಶಾವಾದಿಗಳು ಸದಾ ಹಸನ್ಮುಖಿಗಳಾಗಿರುತ್ತಾರೆ, ಮಾತ್ರವೇ ಅಲ್ಲ. ‘ಆದರೆ-ಹೋದರೆ’ ಎಂಬ ಚಿಂತನೆಗೆ ಅವಕಾಶವೇ ಕೊಡುವುದಿಲ್ಲ. ಎಲ್ಲವೂ ಒಂದಲ್ಲ ಒಂದು ದಿನ ಸರಿಹೋದೀತು ಎಂಬ ನಿಲುವು ಅವರದು. ಆಶಾವಾದಿಗಳು ಸದಾ ಹರ್ಷಚಿತ್ತದವರಾಗಿದ್ದರೆ, ನಿರಾಶಾವಾದಿಗಳು ಚಿಂತಾಕ್ರಾಂತರಾಗಿರುತ್ತಾರೆ. ಆತಂಕ, ಭಯ, ನಿರಾಸಕ್ತಿಗಳೇ ಇವರ ಮುಖದಲ್ಲಿ ಮನೆ ಮಾಡಿರುತ್ತವೆ. ಆಶಾವಾದಿಗಳು ಎಲ್ಲ ವಸ್ತು-ವಿಷಯಗಳಲ್ಲಿ ಒಳ್ಳೆಯದನ್ನೇ ಗುರುತಿಸುತ್ತಾರೆ. ವ್ಯತಿರಿಕ್ತವಾಗಿ, ನಿರಾಶಾವಾದಿಗಳು, ಪ್ರತಿಯೊಂದರಲ್ಲೂ, ಪ್ರತಿಯೊಬ್ಬರಲ್ಲೂ ದೋಷ, ನ್ಯೂನತೆಗಳನ್ನು ಕಾಣುತ್ತಿರುತ್ತಾರೆ.

ಇದಕ್ಕೆ ಉತ್ತಮ ನಿದರ್ಶನವೆಂದರೆ ಮಹಾಭಾರತದಲ್ಲಿ ನಡೆದ ಒಂದು ಪುಟ್ಟ ಘಟನೆ. ಒಮ್ಮೆ ಶ್ರೀ ಕೃಷ್ಣ ಧರ್ಮರಾಯನನ್ನು ಕರೆದು ‘ಈ ಹಸ್ತಿನಾಪುರದಲ್ಲಿರುವ ಯಾರಾದರೊಬ್ಬ ಕೆಟ್ಟ ವ್ಯಕ್ತಿಯನ್ನು ಕರಕೊಂಡು ಬಾ’ ಎಂದು ಹೇಳಿದ. ಅಂತೆಯೇ ದುರ್ಯೋಧನನನ್ನು ಕರೆದು ‘ಓರ್ವ ಒಳ್ಳೆಯ ವ್ಯಕ್ತಿಯನ್ನು ಕರಕೊಂಡು ಬಾ’ ಎಂದು ಹೇಳುತ್ತಾನೆ. ಹಸ್ತಿನಾಪುರ ರಾಜ್ಯವನ್ನೆಲ್ಲ ಸುತ್ತಾಡಿದ ಬಳಿಕ, ಇಬ್ಬರೂ ಬರಿಗೈಯಲ್ಲಿ ಹಿಂದಿರುಗುತ್ತಾರೆ. ಕಾರಣ ಕೇಳಲಾಗಿ ‘ನನ್ನ ಕಣ್ಣಿಗೆ ಯಾರೂ ಕೆಟ್ಟವರು ಕಾಣಲೇ ಇಲ್ಲ’ ಎಂದು ಧರ್ಮರಾಯ ಉತ್ತರಿಸಿದರೆ, ‘ನನ್ನ ಕಣ್ಣಿಗೆ ಯಾರೂ ಒಳ್ಳೆಯವರು ಕಾಣಲೇ ಇಲ್ಲ’ ಎಂಬುದಾಗಿ ದುರ್ಯೋಧನನು ಉತ್ತರಿಸುತ್ತಾನೆ. ಇಷ್ಟಕ್ಕೂ ಕಾರಣ, ಅವರಿಬ್ಬರ ದೃಷ್ಟಿಕೋನದಲ್ಲಿರುವ ವ್ಯತ್ಯಾಸ. ಧರ್ಮರಾಯನದು ಸಕಾರಾತ್ಮಕವಾದ ಆಶಾದಾಯಕವಾದ ದೃಷ್ಟಿಕೋನವಾದರೆ, ದುರ್ಯೋಧನನದು ನಿರಾಶಾದಾಯಕ.

ಆಶಾವಾದಿಗಾಗಲೀ, ನಿರಾಶಾವಾದಿಗಾಗಲೀ ಇಬ್ಬರಿಗೂ ಜೀವನದಲ್ಲಿ ಅಡೆತಡೆಗಳು ಎದುರಾಗುತ್ತಲೇ ಇರುತ್ತವೆ. ಇದು ಸರ್ವೆ ಸಾಮಾನ್ಯ ಹಾಗೂ ಸಹಜ ಸ್ವಾಭಾವಿಕ. ಅಡೆತಡೆಗಳಿಲ್ಲದ ಜೀವನ ಯಾರದಿದೆ? ಆದರೆ, ಆಶಾವಾದಿಗೆ ಎದುರಾಗುವ ಅಡೆತಡೆಗಳು ಮುಂದೆ ಸಾಗಲು ನೆರವಾಗುವ ಮೆಟ್ಟುಕಲ್ಲುಗಳಾಗಿ ಗೋಚರಿಸುತ್ತವೆ; ಅವಕಾಶಗಳಾಗಿ ಕಾಣುತ್ತವೆ. ಆದರೆ ನಿರಾಶಾವಾದಿಗೆ ಕೈಗೆ ಬಂದ ಅವಕಾಶಗಳಲ್ಲೂ ಸಮಸ್ಯೆಗಳೇ ಗೋಚರಿಸುತ್ತವೆ.

ಯಾವುದೇ ಕೆಲಸವನ್ನು ‘ಯಾಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿ ಗೊಣಗುತ್ತ ದೂರ ಸರಿಯುತ್ತಾರೆ. ನಿರಾಶಾವಾದಿ, ಇತರರನ್ನು ಟೀಕಿಸುವುದೇ, ತಪ್ಪುಗಳನ್ನು ಕಂಡು ಹಿಡಿಯುವುದೇ ತನ್ನ ಮುಖ್ಯ ಕೆಲಸವನ್ನಾಗಿ ಮಾಡಿಕೊಂಡು, ತನ್ನ ಸಂಪರ್ಕದಲ್ಲಿ ಬರುವವರ ಉತ್ಸಾಹವನ್ನು ನಾಶ ಮಾಡುತ್ತಾನೆ. ಆದರೆ ಆಶಾವಾದಿ, ಎಲ್ಲರನ್ನೂ ಪ್ರೋತ್ಸಾಹಿಸುತ್ತ ಚೈತನ್ಯದ ಚಿಲುಮೆ ಹರಿಸುತ್ತಾನೆ. ಸಾಮಾನ್ಯವಾಗಿ ಆಶಾವಾದಿಗಳು ಕನಸುಗಾರರು. ಕನಸುಗಾರರಲ್ಲದವರು ಮಹತ್ತರವಾದುದನ್ನು ಸಾಧಿಸಿದ ಉದಾಹರಣೆಗಳಿಲ್ಲ.

ಆಶಾವಾದಿ, ಚಂದದ ಗುಲಾಬಿ ಹೂವನ್ನು ಕಂಡು ‘ಇಷ್ಟೊಂದು ಮುಳ್ಳುಗಳ ಮಧ್ಯೆಯೂ, ಎಷ್ಟೊಂದು ಚಂದದ ಹೂ ಅರಳಿದೆಯಲ್ಲ!’ ಎಂದು ತಿಳಿದು ಸಂತಸಪಟ್ಟರೆ, ನಕಾರಾತ್ಮಕ ನಿರಾಶಾವಾದಿ ‘ಥೂ, ಈ ಹೂವಿನ ಸುತ್ತ ಎಷ್ಟೊಂದು ಮುಳ್ಳುಗಳಿವೆ!’ ಎಂದು ಗೊಣಗುತ್ತಿರುತ್ತಾನೆ.

ಆಶಾವಾದಿಗಳು ಸಕಾರಾತ್ಮಕ ಫಲಿತಾಂಶಗಳನ್ನೇ ಪಡೆಯುತ್ತಾರೆ. ‘ಈ ದಿನ ನನ್ನದು, ನನಗಾಗಿಯೇ ಇರುವಂತಹದ್ದು’ ಎಂದು ತಿಳಿದು, ಸೃಜನಾತ್ಮಕವಾದ ಚಟುವಟಿಕೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು, ಏನನ್ನಾದರೂ ಸಾಧಿಸಲು ಸಮರ್ಥರಾಗುತ್ತಾರೆ. ನಿರಾಶಾವಾದಿಗಳ ಮನಸ್ಸಿನಲ್ಲಿ ‘ಏನಾಗುತ್ತೋ ಏನೋ’, ‘ಸಾಧ್ಯವಾಗುತ್ತೋ ಇಲ್ಲವೋ’ ಎಂಬ ಹತಾಶೆಯ ಹಕ್ಕಿ, ಗೂಡು ಕಟ್ಟಿಕೊಂಡಿರುತ್ತದೆ. ಸಕಾರಾತ್ಮಕವಾಗಿ ಯೋಚಿಸುವವರು ‘ಯಾಕಾಗಲ್ಲ? ಆಗಿಯೇ ಆಗುತ್ತೆ ಬಿಡಿ’ ಎಂಬ ಧೋರಣೆಯುಳ್ಳವರಾದರೆ, ನಕಾರಾತ್ಮಕವಾಗಿ ಯೋಚಿಸುವವರ ಮಾತುಗಳಲ್ಲಿ ‘ನಾನು ಯಾವತ್ತೂ ಅನ್​ಲಕ್ಕಿ, ನನ್ನಿಂದ ಇದು ಸಾಧ್ಯವಿಲ್ಲವೆಂಬುದು ನನಗೆ ಮೊದಲೇ ಗೊತ್ತಿತ್ತು, ಅದಕ್ಕೇ ಈ ತಪ್ಪುಗಳಾಗಿವೆ’ ಎಂಬ ಪದಪ್ರಯೋಗಗಳಿರುತ್ತವೆ.

ಆಶಾವಾದವು ನಮ್ಮ ಮನೋಬಲವನ್ನು ಕುಗ್ಗದಂತೆ, ನಿರಾಶೆಯಿಂದ ಸೋಲೊಪ್ಪದಂತೆ ನೆರವಾಗುವ ಒಂದು ಇಂಧನವಿದ್ದಂತೆ. ಆಶಾವಾದವೆಂದರೆ, ಜೀವನದಲ್ಲಿ ಅನಿರೀಕ್ಷಿತ ಘಟನೆಗಳನ್ನು ಎದುರಿಸಲು ಸಿದ್ಧವಾಗಿರುವ ಒಂದು ಮನೋಭಾವ. No poison can kill a positive thinker, no media can cure a negative thinker ಎಂಬ ಮಾತಿನಂತೆ ಆಶಾವಾದಿಗಳನ್ನು ತಡೆಯಲು ಸಾಧ್ಯವಾಗದು. ಅಂತೆಯೇ ನಿರಾಶಾವಾದಿಗಳನ್ನು ಮೇಲೆತ್ತಲು ಸಾಧ್ಯವಾಗದು. ಆದ್ದರಿಂದ ನಿರಾಶಾವಾದಕ್ಕೆ ಜಾರುವ ಮುನ್ನ, ಜೀವನದಲ್ಲಿ ಆಶಾವಾದಿಗಳಾಗಿಯೇ ಮುಂದುವರಿಯೋಣ.

(ಪ್ರತಿಕ್ರಿಯಿಸಿ: [email protected])