ಸಿಂಪಲ್ಲಾಗಿರೋದೇ ಕಷ್ಟ!

ಯಾವುದೋ ಕಾರಣಕ್ಕೆ ಪಾರ್ಕ್​ನಲ್ಲಿ ಕುಳಿತಿದ್ದೀರಿ. ತುಂಟ, ಸುಂದರ ಮಗುವೊಂದು ಆಟವಾಡುತ್ತ ನಿಮ್ಮ ಬಳಿ ಬರುತ್ತದೆ. ಮಾತನಾಡಿಸೋಣ ಎನ್ನುತ್ತದೆ ಮನಸ್ಸು. ಆದರೆ, ಅದೇನೋ ಮುಜುಗರ. ಸುಮ್ಮನೆ ನೋಡಿ ನಕ್ಕು ಅಲ್ಲಿಂದ ಎದ್ದು ಬರುತ್ತೀರಿ. ಬಸ್ಸಿನಲ್ಲೋ, ರೈಲಿನಲ್ಲೋ ಎದುರಾಗುವ ಮುಖಗಳಿಗೆ ಮುಖ ಕೊಡಲು ನಮಗೆ ಹಿಂಜರಿಕೆ. ರಿಕ್ಷಾದಲ್ಲಿ ಹೋಗುವಾಗ ಸುಮ್ಮನೆ ಒಂದು ಮಾತಾಡಿದರೆ ಸಾಕು, ತನ್ನ ಗೋಳನ್ನೆಲ್ಲ ಹೇಳಿಕೊಳ್ಳಲು ಸಿದ್ಧವಿರುವ ಡ್ರೖೆವರ್​ನ ಮುಖವನ್ನೂ ನೋಡದ ನಿರ್ಲಿಪ್ತತೆ ನಮ್ಮಲ್ಲಿ. ಬದಲಿಗೆ, ಈ ಎಲ್ಲ ಸನ್ನಿವೇಶಗಳಲ್ಲೂ ಮುಖದ ತುಂಬ ನಗು ಹರಡಿ, ಸ್ವಲ್ಪ ಬಿಗುಮಾನ ಸಡಲಿಸಿದ್ದರೆ..ಎಷ್ಟೆಲ್ಲ ಖುಷಿ ಅಥವಾ ಬೇರೊಂದು ಲೋಕದ ಅನುಭವ ನಮ್ಮದಾಗಿರುವ ಸಾಧ್ಯತೆ ಇರುತ್ತಿತ್ತು! ಅಪರಿಚಿತರೊಂದಿಗೆ ಅದೆಂಥ ಖುಷಿ ಹಂಚಿಕೊಳ್ಳಬಹುದು ಎನ್ನಬೇಡಿ. ಯಾವುದೇ ನಿರೀಕ್ಷೆ, ಒತ್ತಡಗಳಿಲ್ಲದ ಭಾವದಲ್ಲಿ ಮನುಷ್ಯರೊಂದಿಗೆ ಬೆರೆಯುವುದು ಎಂಥ ಸಮಾಧಾನಕರ ಸಂಗತಿ ಗೊತ್ತೇ? ಆದರೆ, ಹಾಗೆ ಮುಕ್ತರಾಗಲು ಮೊದಲು ನಮ್ಮಲ್ಲಿ ಸರಳತೆ ಇರಬೇಕು. ಹೌದು, ಸರಳವಾಗಿರುವ ಮನುಷ್ಯರೇ ಸುಖಿಗಳು. ಯಾರಾದರೂ ತಮ್ಮನ್ನು ಮಾತನಾಡಿಸಲಿ ಎಂದು ಕಾಯುವ ಗೋಜಿಗೆ ಹೋಗದೆ ತಾವೇ ಇತರರನ್ನು ಮಾತನಾಡಿಸಿ, ಸಾಧ್ಯವಾದಷ್ಟು ಅವರನ್ನು ಖುಷಿಯಾಗಿರಿಸಿ, ಸುಖ, ದುಃಖ ಹಂಚಿಕೊಂಡು ಹಗುರಾಗುವ ಮಂದಿ ಇವರು. ಎಲ್ಲರೊಂದಿಗೂ ಸರಳವಾಗಿದ್ದರೆ ಗೆಲುವು ಸಾಧಿಸುವುದು ಕಷ್ಟವಲ್ಲವೇ ಎಂದು ಇಂದಿನ ದಿನಗಳಲ್ಲಿ ಅನಿಸಬಹುದು. ಆದರೆ, ಸರಳತೆಯೇ ನಮ್ಮನ್ನು ಯಶಸ್ಸಿನ ಸಾಮೀಪ್ಯಕ್ಕೆ ಕರೆತಂದು ಬಿಡುತ್ತದೆ. ಜಗತ್ತಿನಲ್ಲಿ ಯಶಸ್ವಿಯಾದವರು ಸರಳ ವ್ಯಕ್ತಿತ್ವವನ್ನೇ ಹೊಂದಿರುತ್ತಾರೆ. ಯಶಸ್ವಿ ವ್ಯಕ್ತಿಗಳು ದುಡ್ಡು, ಜನಮನ್ನಣೆ ಪಡೆದಿದ್ದರೂ ಸರಳತೆ ಮೈಗೂಡಿಸಿಕೊಂಡಿರುತ್ತಾರೆ. ಅಂಥವರೇ ಜಗತ್ತನ್ನು ಆಕರ್ಷಿಸುವುದು. ಅವರಲ್ಲಿ ಆ ಸರಳತೆ ಇಲ್ಲವೆಂದಿದ್ದರೆ ಯಶಸ್ಸು ಖಂಡಿತ ಸಾಧ್ಯವಾಗುತ್ತಿರಲಿಲ್ಲ.