ನಂಗೂ ಒಂದು ಚಾನ್ಸ್ ಕೊಡಿ…

| ದೀಕ್ಷಾ ಹೆಗ್ಡೆ ಎಚ್.

ಇನ್ನೇನು ಕೆಲವೇ ದಿನಗಳಲ್ಲಿ ಡಿಗ್ರಿ ಮುಗಿಸಲಿರುವ ಈ ಹಳ್ಳಿ ಹುಡುಗಿಯ ಕಣ್ಣಲ್ಲಿ ಹಲವು ಕನಸುಗಳು. ಇಷ್ಟು ವರ್ಷ ಮನೆ, ಕಾಲೇಜು, ಕಂಪ್ಯೂಟರ್ ಕ್ಲಾಸು ಅಂತ ಸುತ್ತು ಹಾಕಿ ಬೋರ್ ಆಗ್ಹೋಗಿದೆ. ಓದು ಮುಗಿಯುತ್ತಿದ್ದಂತೆಯೇ ಯಾವುದಾದರೊಂದು ಮಹಾನಗರದ ಬಸ್ ಹತ್ತಿ ಹೋಗಿಬಿಡಬೇಕೆಂಬ ತವಕ. ಎಲ್ಲೋ ಒಂದು ಕಡೆ ಕೆಲಸ ಹುಡುಕಿಕೊಂಡು ಅಲ್ಲೇ ಬದುಕು ಕಂಡುಕೊಳ್ಳುವ ಧಾವಂತ. ತನ್ನಿಷ್ಟದಂತೆ ಬದುಕಬೇಕೆಂಬ ಆಸೆ. ಇದೆಲ್ಲ ಮೇಲ್ನೋಟಕ್ಕೆ ಮಾತ್ರ. ನಿಜಕ್ಕೂ ಅವಳ ಅಂತರಂಗ ತುಡಿಯುತ್ತಿರುವುದು ಬೇರೆಯದಕ್ಕೆ. ದೊಡ್ಡ ಊರಿಗೆ ಹೋಗಿ ಸಿನಿಪಯಣ ಆರಂಭಿಸುವ ಬಯಕೆ ಅವಳದು. ಮೊದಲು ಸಣ್ಣಗೆ ಶುರು ಮಾಡಿ ನಂತರ ಸ್ಟಾರ್ ನಟಿ ಆಗಬೇಕೆಂಬ ಕನಸು. ಆದರೆ ಮನೆಯಲ್ಲಿ ಇದನ್ನು ಹೇಳಿಕೊಂಡರೆ ಉಸಿರಾಡಲೂ ಬಿಡಲಿಕ್ಕಿಲ್ಲ ಎಂಬುದೂ ಅವಳಿಗೆ ಚೆನ್ನಾಗಿ ಗೊತ್ತು. ಯಾಕೆಂದರೆ ಪ್ರಪಂಚವೇ ಹಾಗಿದೆ. ನಿತ್ಯವೂ ಟಿವಿಯಲ್ಲಿ ಅಪರಾಧ ಸುದ್ದಿಗಳನ್ನು ನೋಡುವ ಪಾಲಕರಿಗೆ ಮಗಳನ್ನು ಎಲ್ಲಿಗೆ ಕಳುಹಿಸುವುದಕ್ಕೂ ಭಯ. ‘ಬಿಎ ಮುಗಿದ ಮೇಲೆ ಬಿ.ಎಡ್., ಎಂ.ಎ. ಇಂಥದ್ದೇನಾದ್ರೂ ಮಾಡಿಕೊಂಡು ಟೀಚರ್ ಆಗು’ ಅಂತಿದ್ದಾರೆ ಅಪ್ಪ. ಆದರೆ ಇವಳಿಗದು ಬಿಲ್​ಕುಲ್ ಇಷ್ಟ ಇಲ್ಲ.

ಮಾಚಯ್ಯ ಮೇಷ್ಟ್ರ ಮಗನ ಕತೆಯೂ ಅಷ್ಟೆ. ಬಿಕಾಂ ಮುಗೀತು, ಇನ್ನು ಎಷ್ಟು ದಿನ ಅಂತ ಹೀಗೇ ಮನೆಯಲ್ಲಿರಲಿ, ಮನೆ ಮುಂದಿನ ಕೈತೋಟ ನೋಡುತ್ತಾ ದಿನ ನೂಕಲಿ…? ಸಾಯುವ ತನಕ ಇದೇ ‘ಪ್ರಪಂಚ’ದೊಳಗೇ ಇರಬೇಕೇ? ಸಾಕು ಇನ್ನು. ಇಲ್ಲೇ ಇದ್ದರೆ ಮೇಷ್ಟ್ರ ಮಗನಾಗಿಯೇ ಇರಬೇಕಾಗುತ್ತೆ. ಸಿಟಿಗೆ ಹೋಗಿ ಏನಾದರೂ ಮಾಡೋಣ. ಇದು ಆ ಹರೆಯದ ಹುಡುಗನ ಮನಸ್ಥಿತಿ.

ಟಿವಿ, ಪೇಪರ್​ನಲ್ಲಿ ತೋರಿಸುವ ಫ್ಯಾಷನ್ ಷೋ, ರ‍್ಯಾಂಪ್ ವಾಕ್​ಗಳು, ಚಲನಚಿತ್ರರಂಗದ ಬಣ್ಣದ ಬದುಕು, ಮೇಕಪ್​ನ ಹೊಳಪು, ಚಪ್ಪಾಳೆ ಸದ್ದು… ಮುಂತಾದವುಗಳನ್ನು ನೋಡಿ ಮರುಳಾಗುವ ಹುಡುಗ-ಹುಡುಗಿಯರು ಯೋಚನೆ ಮಾಡುವ ರೀತಿ ಇದು. ತನ್ನೂರಿನ ಹುಡುಗನೊಬ್ಬ ಇಂದು ದೊಡ್ಡ ಮಾಡೆಲ್ ಆಗಿದ್ದಾನೆ, ಸ್ಟಾರ್ ನಟನಾಗಿದ್ದಾನೆ, ಅವನ ಹಿಂದೆ ಅಭಿಮಾನಿಗಳ ಹಿಂಡು. ನಾನೂ ಅವನಂತಾಗಬೇಕು ಎಂಬ ಆಸೆ. ಆದರೆ ಹೀಗೆಂದುಕೊಂಡು ಮನೆ ಬಿಟ್ಟು ರಾತ್ರೋರಾತ್ರಿ ಬಸ್ ಹತ್ತಿದರೆ ಯಶಸ್ಸು ದಕ್ಕುವುದೇ?

ಇಂಥದೇ ಮನಸ್ಥಿತಿಯ ಹುಡುಗಿಯೊಬ್ಬಳು ಕೆಲಸ ಅರಸುವ ನೆಪದಲ್ಲಿ ಇದ್ದಕ್ಕಿದ್ದಂತೆ ಬೆಂಗಳೂರು ಬಸ್ ಹತ್ತಿದಳೆಂದರೆ ಅವಳನ್ನು ನೋಡುವ ಹಲವಾರು ಕಣ್ಗಳಿರುತ್ತವೆ. ಅಂದುಕೊಂಡಿದ್ದೆಲ್ಲವೂ ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ನಾವು ಎಷ್ಟೇ ಆಧುನಿಕತೆಯ ಕಾಲದಲ್ಲಿದ್ದರೂ, ಕೈಯಲ್ಲಿ ವಾಟ್ಸ್​ಆಪ್, ಇನ್ಸ್್ಸಾಗ್ರಾಂ ನುಲಿಯುತ್ತಿದ್ದರೂ ಬದುಕು ಅಂದುಕೊಂಡಷ್ಟು ಸುಲಭವಲ್ಲ.

ಯಾವುದೂ ಅಸಾಧ್ಯವಲ್ಲ ಎಂಬ ಮಹಾನ್ ವ್ಯಕ್ತಿಗಳ ಮಾತು ಹೌದೆನಿಸಿದರೂ ಒಂಟಿ ಹುಡುಗಿ ಅಥವಾ ಹುಡುಗ ನಡುರಾತ್ರಿಯಲ್ಲಿ ಮನೆ ಬಿಟ್ಟು ಹೋಗಿ ಇನ್ನೆಲ್ಲೋ ಬದುಕು ಕಂಡುಕೊಳ್ಳುವುದು ಸುಲಭವಲ್ಲ. ಮಿಡ್ಲ್ ಕ್ಲಾಸ್ ಮನೆಯ ಕಂಫರ್ಟ್ ಜೋನ್​ನಿಂದ ಹೊರಬಂದು ಬದುಕುವುದು ದುಸ್ತರ.

ಈಗಿನ ಜನರೇಷನ್​ನ ಮನಸ್ಸುಗಳ ಸ್ಥಿತಿಯೇ ಇದು. ಹಳ್ಳಿಗಳಲ್ಲಿ ಇರುವವರಿಗೆ ಹೇಗಾದರೂ ಮಾಡಿ ಪಟ್ಟಣದಲ್ಲಿ ಕೆಲಸ ಗಿಟ್ಟಿಸಬೇಕು ಎಂಬ ತುಡಿತ. ನಗರಕ್ಕೆ ಹೋದರೆ ಹೇಗೋ ಲೈಫ್ ಸೆಟಲ್ ಆಗಿಬಿಡುತ್ತದೆ ಎಂಬ ಭಾವನೆ. ಅತಿಯಾದ ನಿರೀಕ್ಷೆ ಇಟ್ಟುಕೊಂಡು ಬಂದು ಕೊನೆಗೆ ಫಲಿಸದಿದ್ದಾಗ ಅಡ್ಡ ಮಾರ್ಗ ಹಿಡಿಯುವುದು, ಶ್ರೀಮಂತ ಯುವಕ-ಯುವತಿಯರನ್ನು ಅನುಕರಿಸಲು ಹೋಗಿ ಇಲ್ಲದ ಚಟಗಳನ್ನು ಅಂಟಿಸಿಕೊಳ್ಳುವುದು, ತೊಂದರೆಗೆ ಸಿಕ್ಕಿಕೊಳ್ಳುವುದು ಈಗ ಎಲ್ಲೆಡೆ ನಡೆಯುತ್ತಿದೆ.

ಬೆಂಗಳೂರು, ಹೈದರಾಬಾದ್, ಮುಂಬೈಯಂತಹ ಮಹಾನಗರಗಳಿಗೆ ಹೋಗುವಾಗ ಸೂಕ್ತ ಪ್ಲಾನ್ ಇಲ್ಲದಿದ್ದರೆ ಎಲ್ಲವೂ ಗೋಜಲಾಗುತ್ತದೆ. ‘ಒಂದಾನೊಂದು ಕಾಲದಲ್ಲಿ ಮೆಜೆಸ್ಟಿಕ್​ನಲ್ಲಿ ಮಲಗುತ್ತಿದ್ದ ಯಶ್ ಇಂದು ನಾಯಕನಟನಾದ’ ಎಂದು ಕೆಲವರು ಪ್ರಶಂಸೆಯ ಮಾತುಗಳನ್ನು ಹೇಳುತ್ತಾರೆ. ಆದರೆ ಆ ಸಾಧನೆ ರಾತ್ರಿ ಬೆಳಗಾಗುವುದರೊಳಗೆ ಆದದ್ದಲ್ಲ. ಆತ ಗಾಂಧಿನಗರವನ್ನು ಪ್ರವೇಶಿಸಲು ಮತ್ತು ಪ್ರವೇಶಿಸಿದ ನಂತರ ಎಷ್ಟು ಶ್ರಮ ಪಟ್ಟ ಎಂಬುದು ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ.

ಅವರಂತೆ ಎಷ್ಟೋ ಜನ ಪ್ರತಿದಿನವೂ ಮಹಾನಗರಗಳಿಗೆ ವಲಸೆ ಬರುತ್ತಾರೆ. ಆದರೆ ಎಲ್ಲರೂ ಸ್ಟಾರ್ ಆಗುವುದಿಲ್ಲ. ಮನೆಯಲ್ಲೂ ಹೇಳದೆ, ಏನೋ ಸಾಧಿಸುತ್ತೇನೆಂದು ಬಂದು ಕೆಲವೇ ದಿನಗಳಲ್ಲಿ ಸ್ಟಾರ್ ಆಗಿ ಮಿಂಚುವುದು ಸಿನಿಮಾಗಳ ಕಥೆಯಲ್ಲಿ ಮಾತ್ರ ಸಾಧ್ಯವಾದೀತು. ಯಾವುದೇ ಸಲೆಬ್ರಿಟಿಯ ಬಹುಬೇಡಿಕೆಯ ನಗುವಿನ ಹಿಂದೆ ಅಪಾರ ಶ್ರಮವಿರುತ್ತದೆ ಎಂಬುದನ್ನು ಯಾರೂ ಮರೆಯಬಾರದು.

ಬಾಲಿವುಡ್​ನ ನಟಿಯರಲ್ಲಿ ಕಂಗನಾ ರಣಾವತ್ ತುಂಬ ವಿಭಿನ್ನ ಎನಿಸಿಕೊಳ್ಳುವ ಬೇಡಿಕೆಯ ನಟಿ. ಈಕೆ ಹೀರೋಯಿನ್ ಆಗಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ತನಗಿದ್ದ ಅಂದ ಸಾಲದೆಂದು ಕಾಸ್ಮೆಟಿಕ್ ಸರ್ಜರಿ ಮಾಡಿಸಲು ಹಣವಿಲ್ಲದೆ, ದಿನದ ಮೂರೂ ಹೊತ್ತು ಬ್ರೆಡ್ ತಿಂದು ಕಳೆದಳು ಎಂಬ ಮಾತಿದೆ. ಇಂದಿನ ಬಹಳಷ್ಟು ಯುವಕ-ಯುವತಿಯರಿಗೆ ಅವರ ಆ ಕಷ್ಟದ ಬದುಕು ಕಾಣಿಸುವುದಿಲ್ಲ.

ಇದಕ್ಕೇನು ಮಾಡ್ಬೇಕು: ನೀವೂ ಕಲೆಯನ್ನೇ ನಂಬಿ ಬದುಕು ಕಟ್ಟಿಕೊಳ್ಳುತ್ತೇನೆಂದು ಹೊರಡುವಾಗ ನಿಮ್ಮ ಶೈಕ್ಷಣಿಕ ಹಿನ್ನೆಲೆ ಗಟ್ಟಿಯಾಗಿರಲಿ. ಕನಿಷ್ಠ ಪದವಿಯಾದರೂ ಉತ್ತಮ ಅಂಕಗಳೊಂದಿಗೆ ಮುಗಿದಿರಲಿ. ಸ್ನಾತಕೋತ್ತರ ಪದವಿ ಮುಗಿದಿದ್ದರೆ ಇನ್ನೂ ಒಳ್ಳೆಯದು. ಜತೆಗೆ ವೃತ್ತಿಕೌಶಲ ಬಹು ಮುಖ್ಯ. ಪದವಿ ಓದುತ್ತಿರುವಾಗಲೇ ಪಾರ್ಟ್ ಟೈಂನಲ್ಲಿ ಕೆಲಸ ಮಾಡುತ್ತಿದ್ದಿರಿ ಅಂದರೆ ಸರಿ. ಇಲ್ಲವಾದರೆ ಇತ್ತ ಶಿಕ್ಷಣವೂ ಇಲ್ಲ. ವೃತ್ತಿಯೂ ಇಲ್ಲ ಎನ್ನುವಂತಾಗುತ್ತದೆ. ಹೀಗಾಗಿ ನಟನೆ, ಸಂಗೀತ, ಮಾಡೆಲಿಂಗ್​ನಂಥ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕೆಂದರೆ ಆರಂಭದಲ್ಲಿ ಇದನ್ನು ಪ್ರವೃತ್ತಿಯಾಗಿಸಿಕೊಳ್ಳಿ. ಅದರೊಂದಿಗೆ ಜೀವನೋಪಾಯಕ್ಕೆ ಬೇರೆ ವೃತ್ತಿ ಇರಲಿ. ಪ್ರವೃತ್ತಿ ನಿಮ್ಮ ಜೀವನಶೈಲಿಗೆ, ಅಭಿರುಚಿಗೆ ಸರಿ ಹೊಂದಿ, ಆರ್ಥಿಕ ಬಲ ನೀಡುತ್ತಿದೆ ಎಂದರಷ್ಟೇ ಅದನ್ನು ವೃತ್ತಿಯಾಗಿ ಸ್ವೀಕರಿಸಿ.

ಬಣ್ಣದ ಲೋಕಕ್ಕೆ ಹೊರಡುವ ಮುನ್ನ..

# ನೀವೇ ನೇರವಾಗಿ ಹೋಗುವುದಕ್ಕಿಂತ ಆದಷ್ಟು ಪರಿಚಯಸ್ಥರ ಮೂಲಕ ಹೋಗಿ

# ಟಿವಿ/ಸಿನಿಮಾದಲ್ಲಿ ಬಂದ್ರೆ ಸಾಕು ಎಂಬ ಕಾರಣಕ್ಕೆ ಯಾವ್ಯಾವುದೋ ಪ್ರಾಜೆಕ್ಟ್​ಗಳನ್ನು ಒಪ್ಪಿಕೊಳ್ಳಬೇಡಿ.

# ಉಳಿದುಕೊಳ್ಳುವ ಸ್ಥಳ, ದೈನಂದಿನ ವೆಚ್ಚಕ್ಕೆ ಬೇಕಾದಷ್ಟು ಹಣ ಮುಂತಾಗಿ ಸರಿಯಾದ ಪ್ಲಾನ್ ಇಲ್ಲದೆ ಮನೆ ಬಿಡಬೇಡಿ.

# ಸರಿಯಾಗಿ ಯಾವ ಚಿತ್ರ ನಿರ್ವಣಕ್ಕೂ ಪ್ಲಾನ್ ಮಾಡಿಕೊಳ್ಳದೆ ‘ಹೊಸ ಮುಖಗಳು ಬೇಕಾಗಿವೆ’ ಎಂದು ಪ್ರಚಾರ ಮಾಡುವವರ ಬಗ್ಗೆ ಹುಷಾರಾಗಿರಿ. ಅವರಿಗೆ ನಿಜಕ್ಕೂ ಚಿತ್ರ ನಿರ್ವಿುಸುವ ಉದ್ದೇಶ ಇದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಮುಂದುವರಿಯಿರಿ. ್ಝಾವುದೇ ಸಿನಿಮಾ, ಕಿರುಚಿತ್ರಕ್ಕೆ ಒಪ್ಪಿಗೆ ಸಹಿ ಹಾಕಿದ ಮೇಲೆ ಅವರಿಗಿಷ್ಟ ಬಂದಂತೆ ಡ್ರೆಸ್ ತೊಡಲು ಹೇಳಬಹುದು. ನಟನೆಯಲ್ಲಿ ನಿಮ್ಮ ಕೆಲಸ, ಪಾತ್ರ ಏನು, ಯಾವ್ಯಾವ ಸನ್ನಿವೇಶ ಬರುತ್ತದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಿ.

ಸಾಮಾಜಿಕ ಜಾಲತಾಣ ಸೂಕ್ತ ವೇದಿಕೆ

ಈಗ ಕಾಲ ಬದಲಾಗಿದೆ. ನಿಮ್ಮಲ್ಲಿನ ಪ್ರತಿಭೆ ಪ್ರದರ್ಶನಕ್ಕೆ ಮಹಾನಗರಕ್ಕೇ ಹೋಗಬೇಕೆಂದೇನಿಲ್ಲ. ಫೇಸ್​ಬುಕ್, ಇನ್ಸ್​ಟಾ ಗ್ರಾಮ್ಂತಹ, ಮ್ಯೂಸಿಕಲಿ ಮುಂತಾದ ಸಾಮಾಜಿಕ ಜಾಲತಾಣಗಳನ್ನೇ ಆರಂಭಿಕ ಹಂತದಲ್ಲಿ ನೀವು ನಿಮ್ಮ ವೇದಿಕೆಯಾಗಿ ಬಳಸಿಕೊಳ್ಳಬಹುದು. ಊರಿನಲ್ಲಿದ್ದುಕೊಂಡೇ ನಟನೆ ಮಾಡಿ ಹೊರಜಗತ್ತಿಗೆ ಪರಿಚಯಿಸಬಹುದು. ಕಿರುಚಿತ್ರ ರಚಿಸಿ ಎಲ್ಲರಿಗೂ ತೋರಿಸಬಹುದು. ಅದಕ್ಕೆ ಬರುವ ಪ್ರತಿಕ್ರಿಯೆಯನ್ನು ಗಮನಿಸಿ, ಸರಿಯಾಗಿ ಯೋಜಿಸಿಕೊಂಡು ಮುಂದಡಿ ಇಡಬಹುದು.

ಹುಡ್ಗೀರು ಹುಷಾರಾಗಿರಿ

ಇತ್ತೀಚೆಗೆ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಚಾರ ತುಂಬ ಪ್ರಸ್ತಾಪವಾಗುತ್ತಿದೆ. ನಟನೆಯಷ್ಟನ್ನೇ ನಂಬಿ ಬಂದವರ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳುವವರಿದ್ದಾರೆ. ಒಳ್ಳೆಯ ನಿರ್ದೇಶಕ, ನಿರ್ವಪಕ, ನಟರು ಬೇಕಾದಷ್ಟು ಜನ ಇದ್ದಾರಾದರೂ ಅವರ ಮಧ್ಯೆ ಕೆಲವು ದುರುಳರೂ ಇದ್ದಾರೆ. ಇದು ಸಾಲದೆಂಬಂತೆ ಹೊಸದಾಗಿ ಗಾಂಧಿನಗರಕ್ಕೆ ಬಂದ ಹುಡುಗಿ/ಹುಡುಗರ ಆರ್ಥಿಕ ಹಿನ್ನೆಲೆ ತಿಳಿದು ಹಣ ಪೀಕುವವರೂ ಇದ್ದಾರೆ. ಇಂಥವರ ಬಗ್ಗೆ ಎಚ್ಚರ ಇರಲಿ.

ಗುರಿಯತ್ತ ಫೋಕಸ್ ಮಾಡಿದರೆ ಯಶಸ್ಸು

ಯಾವುದೇ ಕ್ಷೇತ್ರದಲ್ಲೂ ಒಳ್ಳೆಯದು-ಕೆಟ್ಟದ್ದು ಎರಡೂ ಇರುತ್ತೆ. ಮನರಂಜನೆ ಕ್ಷೇತ್ರವೂ ಇದಕ್ಕೆ ಹೊರತಲ್ಲ. ನನಗೆ ಮೊದಲಿನಿಂದಲೂ ಸಿನಿಮಾ ಹುಚ್ಚು. ನಾನು 16 ವರ್ಷದವನಿದ್ದಾಗಲೇ ಮನೆ ಬಿಟ್ಟು ಬೆಂಗಳೂರಿಗೆ ಬಂದೆ. ಇಲ್ಲಿಗೆ ಬಂದು 10 ವರ್ಷವಾಯಿತು. ನನಗೇನು ಬಂದ ಕೂಡಲೇ ಅವಕಾಶ ಸಿಗಲಿಲ್ಲ. ಆರಂಭದಲ್ಲಿ ತುಂಬ ಕಷ್ಟ ಇತ್ತು. ಮನೆಯವರ ವಿರೋಧ ಕಟ್ಟಿಕೊಂಡು ಬಂದಿದ್ದರಿಂದ ಹಣಕಾಸಿನ ಸಮಸ್ಯೆಯೂ ಇತ್ತು. ಹೊಟ್ಟೆಪಾಡಿಗಾಗಿ ಕೆಲವೆಡೆ ಕೆಲಸ ಮಾಡಿದೆ. ಸಮಾನ ಮನಸ್ಕ ಹುಡುಗರ ಜತೆ ಸೇರಿ ಶಾರ್ಟ್​ಫಿಲಂ ಕೂಡ ಮಾಡಿದೆ. ಟಿವಿ ವಾಹಿನಿಗಳಲ್ಲೂ ಕೆಲಸ ಮಾಡಿದೆ. ಕೊನೆಗೆ ಮೇಕಪ್ ಮ್ಯಾನ್ ಗುರುಮೂರ್ತಿಯವರು ನಟ ಸುದೀಪ್ ಅವರಿಗೆ ನನ್ನನ್ನು ಪರಿಚಯಿಸಿದ್ರು. ಅಲ್ಲಿಂದ ಕಿಚ್ಚನ ಜತೆ ಮಾಣಿಕ್ಯ ಸಿನಿಮಾದಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಶುರುವಾಯಿತು. ನನ್ನ ಕೆಲಸ ಗಮನಿಸಿದ ಅವರು ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ನಿರ್ದೇಶಿಸುವಂತೆ ಹೇಳಿದರು. ಏನೋ ಮಾಡ್ಬೇಕು ಅಂತ ಊರು ಬಿಟ್ಟು ಬಂದವರು ಜೀವನೋಪಾಯಕ್ಕಾಗಿ ಬೇರೆ ಕೆಲಸ ಮಾಡುತ್ತಲೇ ಗುರಿಯೆಡೆಗೆ ಫೋಕಸ್ ಮಾಡ್ಬೇಕು. ಹಾಗಿದ್ದರಷ್ಟೇ ಎಲ್ಲರ ನಡುವೆ ವಿಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯ.

| ಗುರುದತ್ ಗಾಣಿಗ ಚಲನಚಿತ್ರ ನಿರ್ದೇಶಕ

(ಪ್ರತಿಕ್ರಿಯಿಸಿ: [email protected])