ಟ್ರಿಪ್ ಹೋಗೋಣ ಬನ್ನಿ

|ಸುಚೇತನಾ ನಾಯ್ಕ

ಯುವಕರಿಗೆ ಲಾಂಗ್ ಡ್ರೖೆವ್ ಹುಚ್ಚು ಒಂದೆಡೆಯಾದರೆ, ಒಂಟಿಯಾಗಿ ಅಥವಾ ಕುಟುಂಬದವರ ಜತೆಗಷ್ಟೇ ಟೂರ್ ಹೋಗುವ ಬದಲು ಹೊಸಹೊಸ ಸ್ನೇಹಿತರ ಜತೆ, ವಿಭಿನ್ನ ಸ್ಥಳಗಳಿಗೆ ಭೇಟಿ ನೀಡಿ, ಹೊಸ ಅನುಭವಗಳನ್ನು ಪಡೆದು ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಬಯಸುವವರು ಇನ್ನೊಂದೆಡೆ. ಈ ಎರಡೂ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಮೂವರು ಯುವಕರು ಆರಂಭಿಸಿದ್ದಾರೆ ಆನ್​ಲೈನ್ ಪ್ರವಾಸಿತಾಣ ‘ರೋಡ್ ಟ್ರಿಪ್ಪರ್ಸ್ ಕ್ಲಬ್’.

ವಾಹನವೂ ಇದೆ, ಟ್ರಿಪ್​ಗೆ ಹೋಗುವ ಉಮೇದೂ ಇದೆ. ಆದರೆ ಹೋಗುವುದು ಎಲ್ಲಿಗೆ? ಸ್ಥಳ ಗೊತ್ತಿದ್ದರೂ ಒಂಟಿಯಾಗಿ ಪ್ರಯಾಣ ಮಾಡುವುದು ಹೇಗೆ? ಹೆಚ್ಚೆಚ್ಚು ಸ್ನೇಹಿತರ ಜತೆಗೂಡಿ ಹೋದರೆ ಎಷ್ಟು ಚೆನ್ನಾಗಿರುತ್ತದೆಯಲ್ಲವೆ? ಹೊಸಹೊಸ ಜನರನ್ನು ಪರಿಚಯ ಮಾಡಿಕೊಳ್ಳುತ್ತಾ ಹೋದರೆ ಆಹಾ ಅದೆಷ್ಟು ಚೆನ್ನ…! ಇವೆಲ್ಲಕ್ಕೂ ಈಗ ಉತ್ತರವಾಗಿ ಬಂದಿದೆ ‘ರೋಡ್ ಟ್ರಿಪ್ಪರ್ಸ್ ಕ್ಲಬ್’

ಹೌದು. ಹೆಸರೇ ಹೇಳುವಂತೆ ಇದು ರಸ್ತೆಯ ಮೂಲಕ ಪ್ರವಾಸ ಕೈಗೊಳ್ಳುವವರ ಕ್ಲಬ್. ಆದರೆ ಇದು ಆನ್​ಲೈನ್ ಕ್ಲಬ್. ಜನರು ತಮ್ಮದೇ ವಾಹನದಲ್ಲಿ (ಬೈಕ್, ಕಾರ್, ಜೀಪ್, ಬಸ್ ಯಾವುದಾದರೂ ಸೈ) ಇತರ ಸಹ ಪ್ರವಾಸಿಗರ ಜತೆಗೂಡಿ ಪ್ರವಾಸ ಕೈಗೊಳ್ಳುವುದು ಈ ಕ್ಲಬ್​ನ ಥೀಮ್ ಒಂಟಿಯಾಗಿ ಇಲ್ಲವೇ ಕುಟುಂಬದವರ ಜತೆಗಷ್ಟೇ ಪ್ರತ್ಯೇಕವಾಗಿ ಟ್ರಿಪ್​ಗೆ ಹೋಗುವ ಬದಲು ಹೆಚ್ಚೆಚ್ಚು ಜನರ ಜತೆಗೆ, ಎಂದೂ ನೋಡಿರದ ಸ್ಥಳಗಳಿಗೆ ಹೋಗುವ ಖುಷಿಯೇ ಬೇರೆ. ಬೇಸಿಗೆ ರಜೆ ಶುರುವಾಗಲು ಒಂದು ತಿಂಗಳು ಮಾತ್ರವಿದೆ. ಈಗಾಗಲೇ ಟೂರಿನ ಪ್ಲಾ್ಯನ್ ಮಾಡಿಕೊಳ್ಳುತ್ತಿರುವವರೇ ಹೆಚ್ಚು ಮಂದಿ. ಇನ್ನೊಂದೆಡೆ, ಲಾಂಗ್ ಡ್ರೖೆವ್ ಕ್ರೇಜ್ ಉಳ್ಳ ಯುವಕರು ಪರೀಕ್ಷೆ ಮುಗಿಯುವುದನ್ನೇ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಇಂಥ ಎಲ್ಲಾ ವರ್ಗದವರನ್ನೂ ಗಮನದಲ್ಲಿ ಇಟ್ಟುಕೊಂಡಿದೆ ಈ ಆನ್​ಲೈನ್ ಕ್ಲಬ್. ಅಪರಿಚಿತ ಸ್ಥಳಗಳಿಗೂ ಯಾವುದೇ ಚಿಂತೆಯಿಲ್ಲದೇ ಆರಾಮಾಗಿ ಹೋಗಿ ಬರುವ ಜತೆಗೆ ಪ್ರವಾಸದ ವೇಳೆ ಹೊಸ ಜತೆಗಾರರನ್ನು ಮಾಡಿಕೊಡುವ ‘ಜವಾಬ್ದಾರಿ’ ಹೊತ್ತಿದ್ದಾರೆ ಈ ಕ್ಲಬ್ ಯುವಕರು.

ದೆಹಲಿಯ ರುಚಿಕಾ ಗಾಂಧಿ, ವಿನೀತ್ ರಾಜನ್ ಮತ್ತು ದೀಪಕ್ ಅನಂತ್ ಎಂಬ ಮೂವರು ಸ್ನೇಹಿತರು ಶುರು ಮಾಡಿರುವ ಈ ಆನ್​ಲೈನ್​ಕ್ಲಬ್​ಗೆ ಈಗ ವರ್ಷದ ಹರೆಯ. ಈ ಕಡಿಮೆ ಅವಧಿಯಲ್ಲಿಯೇ 150ಕ್ಕೂ ಟ್ರಿಪ್ ಆಯೋಜಿಸಿರುವ ಯುವತಂಡ, ಮೂರು ಸಾವಿರಕ್ಕೂ ಮಿಕ್ಕಿದ ಜನರನ್ನು ವಿವಿಧ ಸ್ಥಳಗಳಿಗೆ ಕೊಂಡೊಯ್ದಿದೆ. ಬೆಂಗಳೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ 16 ನಗರಗಳಿಗೆ ಈಗಾಗಲೇ ಪ್ರವಾಸ ಮಾಡಿ ಬಂದಾಗಿದೆ. ವಯಸ್ಸಿನ ನಿಬಂಧನೆ ಹಾಕದೇ ಎಷ್ಟೇ ವರ್ಷದವರಾದರೂ ಟೂರ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಕ್ಲಬ್ ಶುರುವಾದದ್ದು ಹೀಗೆ: ಈ ಮೂವರು ಸ್ನೇಹಿತರು ಹಿಂದೆ ಸಾಕಷ್ಟು ಬಾರಿ ಒಂಟಿಯಾಗಿ ಹಾಗೂ ಕುಟುಂಬದ ಜತೆ ಪ್ರವಾಸ ಮಾಡಿದ್ದಾರೆ. ಅದರಲ್ಲಿ ಬೈಕ್​ನ ಹೆಚ್ಚು ಕ್ರೇಜ್ ಇರುವ ದೀಪಕ್ ಅನಂತ್ ಈಗಾಗಲೇ ಬೈಕ್ ಮೂಲಕವೇ 5 ಲಕ್ಷಕ್ಕೂ ಹೆಚ್ಚು ಕಿಲೋ ಮೀಟರ್​ನಷ್ಟು ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸ ಮಾಡುವ ಸಮಯದಲ್ಲಿ ಪ್ರವಾಸಿಗರು ಅನುಭವಿಸುವ ತೊಂದರೆಗಳ ಬಗ್ಗೆ ಅವರಿಗೆ ಅರಿವಾದದ್ದು ಆಗಲೇ.

‘ಯಾವುದೋ ಒಂದು ಹೊಸ ಸ್ಥಳಕ್ಕೆ ಹೋದರೆ ಅಲ್ಲಿ ಏನೇನು ನೋಡಬೇಕು ಎನ್ನುವುದು ತಿಳಿಯುವುದೇ ಇಲ್ಲ, ಎಷ್ಟೋ ಸಂದರ್ಭಗಳಲ್ಲಿ ರಸ್ತೆಗಳೇ ಗೊತ್ತಾಗುವುದಿಲ್ಲ, ಹಲವು ಸಲ ಆ ಸ್ಥಳಕ್ಕೆ ಹೋಗಿ ಬಂದ ಮೇಲೆ ಇಂಥದ್ದೊಂದು ಸ್ಥಳ ಮಿಸ್ ಮಾಡಿಕೊಂಡ ಬಗ್ಗೆ ಅರಿವಾಗುತ್ತದೆ. ನನ್ನಿಬ್ಬರು ಸ್ನೇಹಿತರಿಗೂ ಇದೇ ರೀತಿ ಅನುಭವ ಆಗಿತ್ತು. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಚರ್ಚೆ ಮಾಡಿದಾಗ ಆನ್​ಲೈನ್ ಕ್ಲಬ್ ಶುರು ಮಾಡುವ ಯೋಚನೆ ಬಂತು’ ಎನ್ನುತ್ತಾರೆ ದೀಪಕ್.

‘ಈಗಂತೂ ಮಹಾನಗರಗಳ ವಾಸಿಗಳದ್ದು ಮಾತ್ರವಲ್ಲ, ಸಣ್ಣ ಪುಟ್ಟ ಊರುಗಳವರದ್ದೂ ಒಂದು ರೀತಿಯ ಯಾಂತ್ರಿಕ, ಒತ್ತಡದ ಜೀವನವೇ. ಒಂದಿಷ್ಟು ಹಾಯಾಗಿ ಕಾಲ ಕಳೆದು, ತಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಟೈಂ ಮೀಸಲು ಇಡುವುದಕ್ಕೂ ಹಲವರಿಗೆ ಸಾಧ್ಯವಾಗುತ್ತಿಲ್ಲ. ಹಾಗೊಮ್ಮೆ ಎಲ್ಲಾದರೂ ಫ್ಯಾಮಿಲಿ ಸಹಿತ ಟ್ರಿಪ್​ಗೆ ಹೋಗಿ ಬರೋಣ ಎಂದುಕೊಂಡರೂ ಆ ಬಗ್ಗೆ ಪ್ಲಾ್ಯನ್ ಮಾಡಲು ಆಗದೇ ಸುಮ್ಮನಾಗಿಬಿಡುತ್ತಾರೆ. ಒಬ್ಬರಿಗೆ ಇಷ್ಟವಾದದ್ದು, ಇನ್ನೊಬ್ಬರಿಗೆ ಇಷ್ಟವಾಗದ ಕಾರಣಕ್ಕೂ ಟ್ರಿಪ್ ಕ್ಯಾನ್ಸಲ್ ಆಗುವುದಿದೆ. ಕುಟುಂಬದ ಎಲ್ಲರಿಗೂ ಇಷ್ಟವಾದರೂ ಹೋಗುವ ಸ್ಥಳದ ಪರಿಚಯ ಇಲ್ಲದೆ ಅಥವಾ ದಾರಿ ಗೊತ್ತಿಲ್ಲದೇ ಇರಬಹುದು. ಇಂಥ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಿ, ಇಡೀ ಕುಟುಂಬಕ್ಕೆ ಸಂತೋಷಮಯ ವಾತಾವರಣ ಕಲ್ಪಿಸುವ ಜತೆಗೆ, ಒತ್ತಡ ನಿವಾರಣೆ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ. ಅದಕ್ಕಾಗಿಯೇ ಈ ಕಡಿಮೆ ಅವಧಿಯಲ್ಲಿಯೇ ನಮ್ಮ ಕ್ಲಬ್ ಇಷ್ಟೆಲ್ಲಾ ಜನಪ್ರಿಯತೆ ಪಡೆದಿದೆ. ಈಗಾಗಲೇ 5 ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯತ್ವ ಪಡೆದಿದ್ದಾರೆ’ ಎನ್ನುತ್ತಾರೆ ದೀಪಕ್.

ಒಂದೇ ದಿನದ ಟ್ರಿಪ್​ನಿಂದ ಹಿಡಿದು ರಾತ್ರಿ ಅಲ್ಲಿಯೇ ತಂಗುವ ಅನೇಕ ದಿನಗಳ ಟ್ರಿಪ್​ಗಳ ಆಯೋಜನೆ ಈ ಕ್ಲಬ್ ಮಾಡಲಿದೆ. ಪ್ರವಾಸಿಗರೆಲ್ಲರೂ ಒಂದೇ ರೆಸಾರ್ಟ್​ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಈ ಯುವಕರೇ ಮಾಡುತ್ತಾರೆ.

ದೀಪಕ್ ಅವರ ಸಂಪರ್ಕ ಸಂಖ್ಯೆ: 7506642382

ಸದಸ್ಯರಾಗುವುದು ಹೇಗೆ?

www.roadtrippersclub.com ಎಂದು ಟೈಪಿಸಿದರೆ, ಕ್ಲಬ್ ವೆಬ್​ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ನೋಂದಣಿ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯ. ಸದ್ಯ ನೋಂದಣಿ ಉಚಿತವಾಗಿದೆ. ನೋಂದಣಿ ಮಾಡಿಕೊಂಡು ಸದಸ್ಯರಾದ ತಕ್ಷಣ ಮುಂಬರುವ ದಿನಗಳಲ್ಲಿ ಇರುವ ಟ್ರಿಪ್​ಗಳ ಬಗ್ಗೆ ವಿವರಣೆ ಸಿಗುತ್ತದೆ. ನಿಮ್ಮಿಷ್ಟದ ಟ್ರಿಪ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸಂಪೂರ್ಣ ಮಾಹಿತಿ ನೀಡಬೇಕು. ಇದಾದ ನಂತರ ಯಾವುದೇ ಒಂದು ಸ್ಥಳಕ್ಕೆ ಟ್ರಿಪ್ ನಿಗದಿಯಾದರೆ ಅಲ್ಲಿಗೆ ಹೋಗಬಯಸುವವರ ವಾಟ್ಸ್​ಆಪ್ ಗ್ರೂಪ್ ಮಾಡಲಾಗುತ್ತದೆ. ಪ್ರತಿಯೊಂದು ಡ್ರೖೆವ್​ಗೂ ರಿಜಿಸ್ಟ್ರೇಷನ್ ಲಿಂಕ್ ಕೊಡಲಾಗುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ಪ್ರವಾಸದ ಸಂಪೂರ್ಣ ಮಾಹಿತಿ ತೆರೆದುಕೊಳ್ಳುತ್ತದೆ. ಒಂದು ದಿನದ ಟ್ರಿಪ್ ಆದರೆ ಅದಕ್ಕೆ ಪ್ರವಾಸಿಗರಿಂದ ಹಣ ಪಡೆಯುವುದಿಲ್ಲ. ಆದರೆ ರಾತ್ರಿ ತಂಗಬೇಕಿದ್ದರೆ ಮಾತ್ರ ತಂಗುವ ವೆಚ್ಚ ಸೇರಿದಂತೆ ಆಯಾ ಸ್ಥಳಕ್ಕೆ ಅಗತ್ಯವಿರುವ ಶುಲ್ಕವನ್ನು ಪಡೆಯಲಾಗುತ್ತದೆ. ಇದನ್ನು ಪ್ರವಾಸಿಗರು ಪ್ರವಾಸಕ್ಕೆ ಹೊರಡುವ ಪೂರ್ವದಲ್ಲಿಯೇ ನೀಡಬೇಕಾಗುತ್ತದೆ. ಶೀಘ್ರದಲ್ಲಿಯೇ ಮೊಬೈಲ್ ಆಪ್ ಕೂಡ ಶುರು ಮಾಡುವ ಬಗ್ಗೆ ಈ ಯುವಕರು ಚಿಂತನೆ ನಡೆಸಿದ್ದಾರೆ.

ನಾಯಿಗೂ ಇದೆ ಜಾಗ

ಕೆಲವರಿಗೆ ಟ್ರಿಪ್​ಗೆ ಹೋಗುವ ಆಸೆ ಇದ್ದರೂ ಮನೆಯಲ್ಲಿ ಸಾಕಿರುವ ನಾಯಿಯಿಂದಾಗಿ ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕೂ ರೋಡ್ ಟ್ರಿಪ್ಪರ್ಸ್ ಕ್ಲಬ್ ಬಳಿ ಉತ್ತರವಿದೆ. ಸಾಕುನಾಯಿ ಇದ್ದರೆ ಅದಕ್ಕೂ ಟ್ರಿಪ್​ನಲ್ಲಿ ಕರೆದುಕೊಂಡು ಹೋಗುವ ಅವಕಾಶ ಕಲ್ಪಿಸಲಾಗಿದೆ. ಸ್ವಂತ ವಾಹನವಾಗಿರುವ ಕಾರಣ, ಇದರಿಂದ ಬೇರೆಯವರಿಗೂ ತೊಂದರೆಯಾಗುವುದಿಲ್ಲ ಎಂಬ ವಿಶ್ವಾಸ ಕ್ಲಬ್​ನದ್ದು.

ಸುರಕ್ಷತೆಗೆ ಹೆಚ್ಚಿನ ಆದ್ಯತೆ

ಇಲ್ಲಿ ಪ್ರವಾಸಿಗರೇ ವಾಹನ ತರಬೇಕು. ಒಂದು ವೇಳೆ ಬಾಡಿಗೆ ವಾಹನದ ಅಗತ್ಯ ಬಿದ್ದರೆ ಕ್ಲಬ್ ಅದರ ವ್ಯವಸ್ಥೆ ಮಾಡಿಕೊಡುತ್ತದೆ. ಚಾಲನಾ ಪರವಾನಗಿ ಹೊಂದಿರುವುದು ಮಾತ್ರ ಕಡ್ಡಾಯ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸಕ್ಕೆ ಹೋಗುವ ವೇಳೆ ಎಲ್ಲಾ ವಾಹನಗಳಿಗಿಂತ ಮುಂದೆ ಹಾಗೂ ತೀರಾ ಕೊನೆಯಲ್ಲಿ ಕ್ಲಬ್​ನ ವಾಹನ ಇರುತ್ತದೆ. ಕೊನೆಯಲ್ಲಿ ಇರುವ ಕಾರಿನಲ್ಲಿ ನುರಿತ ಮೆಕ್ಯಾನಿಕ್ಸ್, ರಿಪೇರಿ ಟೂಲ್ಸ್, ಫಸ್ಟ್ ಏಡ್ ಬಾಕ್ಸ್ ಸೇರಿದಂತೆ ಸುರಕ್ಷತೆಯ ಸಾಮಗ್ರಿಗಳು ಇರುತ್ತವೆ.

(ಪ್ರತಿಕ್ರಿಯಿಸಿ: [email protected])