ಜ್ಞಾನಕ್ಕೆ ಜಾತಿಯ ಹಂಗಿಲ್ಲ

ಉತ್ತರಪ್ರದೇಶದ ಕಡುಬಡತನದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಒಬ್ಬ ಹುಡುಗ ಅವರ ಕುಟುಂಬದಲ್ಲಿ ಮೊದಲ ಬಾರಿ ನಾಲ್ಕನೇ ಕ್ಲಾಸು ಪಾಸು ಮಾಡಿದ. ಹೈಸ್ಕೂಲು ತಲುಪುವಷ್ಟರಲ್ಲಿ ಆರ್ಥಿಕ ಸಮಸ್ಯೆ ಮತ್ತಷ್ಟು ಹೆಚ್ಚಿದ್ದರಿಂದ ಓದಿದ್ದೂ ತಲೆಗೆ ಹತ್ತುತ್ತಿರಲಿಲ್ಲ. ಶಾಲೆ ಬಿಟ್ಟು ಎಲ್ಲಾದರೂ ಸಣ್ಣಪುಟ್ಟ ನೌಕರಿ ಮಾಡೋಣಾಂತ ನಿರ್ಧರಿಸಿದ್ದ ಹುಡುಗನನ್ನು ಅವನ ಶಿಕ್ಷಕ ಪಂಡಿತ್ ಲಖನ್ ಲಾಲ್ ಶಾಸ್ತ್ರಿ ಕರೆದು, ‘ಎದೆಗುಂದದಿರು; ದಿನಕ್ಕೊಂದರಂತೆ ಭಗವದ್ಗೀತೆಯ ಅಧ್ಯಾಯಗಳನ್ನು ಓದು, ಕೃಷ್ಣನ ಕೃಪೆ ನಿನಗೆ ಪ್ರಾಪ್ತವಾಗುತ್ತದೆ’ ಎಂದರು. ಗುರುಗಳ ಮಾತಿನಂತೆ ಭಗವದ್ಗೀತೆ ಓದಲು ಪ್ರಾರಂಭಿಸಿದ ಮೇಲೆ ಅದರ ಒಳಮರ್ಮಗಳು ಒಂದೊಂದಾಗಿಯೇ ಹೊಳೆಯಲಾರಂಭಿಸಿದವು. ಮಾತ್ರವಲ್ಲ, ಗೀತೆಯನ್ನು ಇನ್ನೂ ಆಳವಾಗಿ ಅಧ್ಯಯನ ಮಾಡಬೇಕು, ಇದರ ತತ್ತ್ವ, ಒಳಾರ್ಥಗಳನ್ನು ಇತರರಿಗೂ ಹಂಚಬೇಕೆಂಬ ಹಂಬಲ ಹೆಚ್ಚಾಯ್ತು. ಆದರೆ ಗೀತೆಯ ನಿಜಾರ್ಥ ಅರಿಯಬೇಕಾದರೆ ಮೊದಲು ಸಂಸ್ಕೃತ ಅಭ್ಯಾಸ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದ ಈತನಿಗೆ ಸಿಕ್ಕಿದ್ದು ಸಮುದಾಯದವರ ತೀವ್ರ ವಿರೋಧ. ವಿರೋಧ ಲೆಕ್ಕಿಸದೆ ಸಂಸ್ಕೃತ ಅಧ್ಯಯನ ಮುಂದುವರಿಸಿದ.

ಸಂಸ್ಕೃತ ಭಾಷೆಯಲ್ಲೇ ಎಂ.ಎ ಮಾಡಿ, ಮುಂದೆ ವಾರಾಣಸಿಯ ಸಂಪೂರ್ಣಾನಂದಜೀ ಎಂಬುವರ ಮಾರ್ಗದರ್ಶನದಲ್ಲಿ ಹಿಂದೂ ಪುರಾಣಗಳ ಅಧ್ಯಯನ ನಡೆಸಿದ. ತೌಲನಿಕ ಧಾರ್ವಿುಕ ಅಧ್ಯಯನದಲ್ಲಿ ‘ಆಚಾರ್ಯ’ ಮತ್ತು ‘ಶಾಸ್ತ್ರಿ’ಗಳೆಂಬ ಉಪಾಧಿಗಳನ್ನು ಪಡೆದ. ಮುಂದೆ, “Comparative analysis of Gayatri Mantra and Surah Fatiah, with reference to meaning and importance’ ವಿಷಯದ ಬಗ್ಗೆ ಅಧ್ಯಯನ ನಡೆಸಿ, ಡಾಕ್ಟರೇಟ್ ಪಡೆದುಕೊಂಡ. ಆಗಲೂ ಸಾಕಷ್ಟು ವಿರೋಧ ಎದುರಿಸಬೇಕಾಗಿ ಬಂತು. ಯಾವ ವಿರೋಧಕ್ಕೂ ಬಗ್ಗದೆ ‘ಮೋಹನ ಗೀತಾ’, ‘ವೇದ ಮತ್ತು ಅಧಿಕಾರ’, ‘ಗಾಯತ್ರಿ ಮಂತ್ರದ ಬೌದ್ಧಿಕ ಉಪಯೋಗಗಳು’, ‘ಶ್ರೀಮದ್ ಭಗವದ್ಗೀತಾ ಮತ್ತು ಕುರಾನ್’ ಸೇರಿದಂತೆ ಅನೇಕ ಮೌಲ್ಯಯುತ ಕೃತಿಗಳನ್ನು ರಚಿಸಿದ. ಪರಿಣಾಮ 2009ರಲ್ಲಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಅರಸಿಕೊಂಡು ಬಂದಿತು. ವೈಯಕ್ತಿಕವಾಗಿ ತನ್ನ ಮುಸ್ಲಿಂ ಅಸ್ತಿತ್ವವನ್ನು ಉಳಿಸಿಕೊಂಡೇ ಸಂಸ್ಕೃತ ಭಾಷೆ ಕಲಿತು, ಹಿಂದೂಧರ್ಮದ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸಿದ ಈ ಮಹಾನುಭಾವ ಬೇರಾರೂ ಅಲ್ಲ. 2019ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿದ ಡಾ.ಮಹಮ್ಮದ್ ಹನೀಫ್ ಖಾನ್ ಶಾಸ್ತ್ರಿ.

ಜ್ಞಾನಕ್ಕೆ ಜಾತಿಯ ಹಂಗಿಲ್ಲ, ಅದು ಒಬ್ಬರ ಸೊತ್ತಲ್ಲ. ಯಾರು ಬೇಕಾದರೂ ಜ್ಞಾನವಂತರಾಗಬಹುದು. ಜ್ಞಾನವೆಂದರೆ, ತಿಳಿದುಕೊಂಡಷ್ಟು; ಇನ್ನೂ ತಿಳಿಯಬೇಕಾದುದು ಬಹಳವಿದೆ ಎಂಬ ಅರಿವು ಮೂಡಿಸುವಂಥದ್ದು. ಇದು ಕೀಳರಿ ಮೆಯಲ್ಲ; ವಿನಮ್ರತೆಯ ವಿನೀತ ಭಾವ! ಜ್ಞಾನಾಗ್ನಿ ಅಜ್ಞಾನವನ್ನು ಸುಟ್ಟು ಹಾಕುತ್ತದೆ, ಆದರೆ ದ್ವೇಷಾಗ್ನಿ ಮನಃಶಾಂತಿಯನ್ನು, ಸಾಮರಸ್ಯವನ್ನು ಸುಟ್ಟು ಹಾಕುತ್ತದೆ. ಗಂಧದ ಕೊರಡನ್ನು ಪೆಟ್ಟಿಗೆಯೊಳಗಿಟ್ಟರೆ, ಅದರ ಸುವಾಸನೆ ಗೊತ್ತಾಗದು. ಅದನ್ನು ಹೊರಗೆ ತೆಗೆದು, ತೀಡಬೇಕು, ತೇಯಬೇಕು. ಅಂತೆಯೇ ಜ್ಞಾನ ಗುಪ್ತವಾಗಿರಬಾರದು; ಸುಪ್ತವಾಗಿರಬಾರದು. ಆಚೆಗೆ ಬರಬೇಕು, ಆಗ ಮಾತ್ರ ಅದರ ಲಾಭ ಎಲ್ಲರಿಗೂ ಲಭ್ಯ.

| ಡಾ.ಕೆ.ಪಿ.ಪುತ್ತೂರಾಯ

(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)

(ಪ್ರತಿಕ್ರಿಯಿಸಿ: [email protected])