ಅತಿಯಾಸೆ ಆಳಕ್ಕಿಳಿಸುತ್ತದೆ!

ದುರಾಸೆಯ ದೊರೆ ಮಿದಾಸ್​ನ ಕಥೆಯಿದು. ಅವನ ಬಳಿ ಭಾರಿ ಚಿನ್ನವಿತ್ತು. ಚಿನ್ನ ಸಿಕ್ಕಷ್ಟೂ ಇನ್ನಷ್ಟು ಬೇಕೆಂಬ ಅವನ ಆಸೆ ಹೆಚ್ಚುತ್ತಿತ್ತು. ಆತ ಅಷ್ಟೂ ಚಿನ್ನವನ್ನು ಭದ್ರವಾದ ಕೋಣೆಯಲ್ಲಿ ಬಚ್ಚಿಟ್ಟಿದ್ದ. ಪ್ರತಿದಿನ ಅದನ್ನು ನೋಡುತ್ತ ಕಾಲ ಕಳೆಯುತ್ತಿದ್ದ.

ಒಂದು ದಿನ ಅವನು ಹೀಗೆಯೇ ಚಿನ್ನ ಎಣಿಸುತ್ತಿದ್ದಾಗ ಎಲ್ಲಿಂದಲೋ ಒಬ್ಬ ಅಪರಿಚಿತ ಪ್ರತ್ಯಕ್ಷನಾಗಿ, ‘ನಿನಗೊಂದು ವರ ಕೊಡುತ್ತೇನೆ’ ಎಂದಾಗ ಮಿದಾಸ್​ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಿದಾಸ್ ಕೇಳಿದ, ‘ನಾನು ಮುಟ್ಟಿದ್ದೆಲ್ಲವೂ ಚಿನ್ನವಾಗಬೇಕು’ ಎಂದು! ‘ನಾಳೆ ಸೂರ್ಯೋದಯದ ನಂತರ ನೀನು ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ’ ಎಂದು ವರ ನೀಡಿದ.

‘ಇದು ಖಂಡಿತ ನಿಜವಾಗಲಾರದು, ನಾನೆಲ್ಲೋ ಕನಸು ಕಾಣುತ್ತಿದ್ದೇನೆ’ ಎನಿಸಿತು ರಾಜನಿಗೆ. ಆತ ಮರುದಿನ ಎದ್ದವನೇ ತನ್ನ ಹಾಸಿಗೆಯನ್ನು ಮುಟ್ಟಿದ. ಬಟ್ಟೆಗಳನ್ನು ಮುಟ್ಟಿದ. ಎಲ್ಲವೂ ಚಿನ್ನವಾದವು! ನಂತರ ನೀರು ಕುಡಿಯಲೆಂದು ಲೋಟ ಮುಟ್ಟುತ್ತಿದ್ದಂತೆ ಅದು ಚಿನ್ನವಾಯಿತು. ಹಣ್ಣು ತಿನ್ನಲು ಹೋದ. ಅದೂ ಚಿನ್ನವಾಯಿತು. ಆತನಿಗೆ ವಿಪರೀತ ಹಸಿವಾಯಿತು. ಆಗ ಉದ್ಗರಿಸಿದ, ‘ನಾನು ಚಿನ್ನವನ್ನು ತಿನ್ನಲಾರೆ, ಕುಡಿಯಲಾರೆ’. ಅದೇ ಸಮಯಕ್ಕೆ ಸರಿಯಾಗಿ ಪುಟ್ಟ ಮಗಳು ಓಡುತ್ತ ಆತನ ಬಳಿ ಬಂದಳು. ಆತ ಅವಳನ್ನು ಬಿಗಿದಪ್ಪಿಕೊಂಡ. ಮಗಳೂ ಒಂದು ಚಿನ್ನದ ಪ್ರತಿಮೆಯಾದಳು! ಆತನ ಬಳಿ ನಗುವೆಂಬುದು ಉಳಿಯಲೇ ಇಲ್ಲ.

ರಾಜ ತಲೆ ತಗ್ಗಿಸಿ ಅಳಲಾರಂಭಿಸಿದ. ಆತನಿಗೆ ವರ ನೀಡಿದ ಅಪರಿಚಿತ ಮತ್ತೆ ಪ್ರತ್ಯಕ್ಷನಾಗಿ, ‘ಮುಟ್ಟಿದ್ದೆಲ್ಲ ಚಿನ್ನವಾಗುವ ವರದಿಂದ ಸಂತೋಷವಾಗಿದೆಯೇ’ ಎಂದು ಕೇಳಿದ. ‘ನನ್ನಷ್ಟು ದುರ್ದೈವಿ ಯಾರೂ ಇಲ್ಲ’ ಎಂದುತ್ತರಿಸಿದ. ‘ನಿನಗೆ ಬೇಕಾಗಿದ್ದಾದರೂ ಏನು? ಅನ್ನವೋ ಅಥವಾ ಚಿನ್ನದ ರಾಶಿಯೋ? ಮಗಳೋ ಅಥವಾ ಚಿನ್ನದ ಪುತ್ಥಳಿಯೋ?’ ಮಿದಾಸ್ ಇನ್ನೂ ಜೋರಾಗಿ ಅಳಲಾರಂಭಿಸಿದ. ಅಪರಿಚಿತನ ಕ್ಷಮೆ ಕೇಳಿದ. ‘ನನ್ನ ಬಳಿ ಇರುವ ಅಷ್ಟೂ ಚಿನ್ನವನ್ನು ಕೊಡುತ್ತೇನೆ. ದಯವಿಟ್ಟು ನನ್ನ ಮಗಳನ್ನು ಕೊಡು. ಅವಳಿಲ್ಲದಿದ್ದರೆ ನಾನು ಎಲ್ಲವನ್ನೂ ಕಳೆದುಕೊಂಡಂತೆ’ ಎಂದ! ‘ನೀನು ಮೊದಲಿಗಿಂತಲೂ ಬುದ್ಧಿವಂತನಾಗಿದ್ದಿ’ ಎಂದು ಮಿದಾಸ್​ನನ್ನು ಸಮಾಧಾನಪಡಿಸಿ, ತನ್ನ ವರವನ್ನು ಹಿಂತೆಗೆದುಕೊಂಡ. ಮುದ್ದಿನ ಮಗಳು ಮತ್ತೆ ಜೀವಂತವಾಗಿ ರಾಜನ ಮಡಿಲು ಸೇರಿದಳು. ಇದರಿಂದ ಕಲಿತ ಪಾಠವನ್ನು ಮತ್ತೆ ಮಿದಾಸ್ ಜೀವನದಲ್ಲೆಂದೂ ಮರೆಯಲಿಲ್ಲ.

ಈ ಕಥೆಯ ನೀತಿ ಸರ್ವರಿಗೂ ವೇದ್ಯವಾಗುವಂಥದ್ದೇ! ಕೆಲವೊಮ್ಮೆ ನಾವು ಬಯಸಿದ್ದನ್ನು ಪಡೆಯುವುದು, ಪಡೆಯದೇ ಇರುವುದಕ್ಕಿಂತ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ. ಮನದಲ್ಲೇಳುವ ವಿಕೃತಮೌಲ್ಯಗಳು ದುರಂತಕ್ಕೆ ಎಡೆ ಮಾಡಿಕೊಡುತ್ತವೆ. ಆಸೆ ಪಡುವುದು ತಪ್ಪಲ್ಲ, ಆದರೆ ಅತಿಯಾಸೆ ನಮ್ಮನ್ನು ಆಳಕ್ಕಿಳಿಸುತ್ತದೆ ಎನ್ನುವುದನ್ನು ಮರೆಯದೇ ಜೀವನ ಸಾಗಿಸೋಣ.

|ಚಿದಾನಂದ ಪಡದಾಳೆ

(ಲೇಖಕರು ಹವ್ಯಾಸಿ ಬರಹಗಾರರು) (ಪ್ರತಿಕ್ರಿಯಿಸಿ: [email protected])