ವಾತ್ಸಲ್ಯದ ಖನಿ ತಾಯಿ

| ಬಿಂಡಿಗನವಿಲೆ ಭಗವಾನ್

ಶ್ರೀರಾಮನ ವನವಾಸ ಮುಗಿದು, ಸೀತೆ ಮತ್ತು ಲಕ್ಷ್ಮಣರೊಡನೆ ಅಯೋಧ್ಯೆಗೆ ಹಿಂದಿರುಗಿದ ಸಮಯ. ಅವನಿಗೆ ಪಟ್ಟಾಭಿಷೇಕ ಮಾಡಲೆಂದು ಭರದಿಂದ ಸಿದ್ಧತೆಗಳಾಗುತ್ತಿದ್ದವು. ರಾಮನ ತಾಯಿ ಕೌಸಲ್ಯೆ ಸನಿಹದ ಕಂಬವೊಂದರ ಮರೆಯಲ್ಲಿ ನಿಂತು ಈ ಸಂಭ್ರಮವನ್ನೆಲ್ಲ ಕಣ್ತುಂಬಿಕೊಳ್ಳುತ್ತಿದ್ದಳು. ಮಗನನ್ನು ಮತ್ತೆಮತ್ತೆ ನೋಡಿದರೂ ಆಕೆಯ ಕಣ್ಣುಗಳಿಗೆ ತೃಪ್ತಿಯಾಗುತ್ತಿಲ್ಲ, ಅವನ ಮೇಲೆ ನೆಟ್ಟಿದ್ದ ದೃಷ್ಟಿಯನ್ನು ಆಕೆಗೆ ಹೊರಳಿಸಲಾಗುತ್ತಿಲ್ಲ. ಶ್ರೀರಾಮನ ದೃಷ್ಟಿ ಅಪ್ರಯತ್ನವಾಗಿ ತಾಯಿಯೆಡೆಗೆ ಹೊರಳಿತು. ‘ಅಮ್ಮ ಏನನ್ನೋ ಕೇಳಬೇಕು ಅಂದುಕೊಳ್ಳುತ್ತಿರುವಂತಿದೆ, ಅವಳಿದ್ದಲ್ಲಿಗೇ ತೆರಳಿ ವಿಚಾರಿಸಬೇಕು…’ ಎಂದು ಮನದಲ್ಲೇ ಹೇಳಿಕೊಂಡ ರಾಮ. ಆದರೆ ತನ್ನನ್ನು ಅಭಿನಂದಿಸಲೆಂದು ಸುತ್ತುವರಿದಿರುವವರ ಕೋಟೆಯನ್ನು ಭೇದಿಸಿ ತಾಯಿಯತ್ತ ಸಾಗಲೂ ಅವನಿಗೆ ಆಗುತ್ತಿಲ್ಲ. ‘ಬಹುಶಃ, ನಾನೇನೋ ಉಡುಗೊರೆ ತಂದಿರಬಹುದೆಂದು ಅಮ್ಮ ಭಾವಿಸಿರಬಹುದೇ? ನಾನು ತೆರಳಿದ್ದು ವನವಾಸಕ್ಕೆ… ಅದೂ ದೀರ್ಘಾವಧಿಯದು. ಅಲ್ಲಿ ಬಗೆಬಗೆಯ ಪಾಡು ಪಟ್ಟಿದ್ದಾಯಿತು. ಆದರೂ ಅಮ್ಮನಿಗೆಂದು ನಾನು ಏನನ್ನಾದರೂ ತರಬಹುದಿತ್ತೇನೋ? ಹಾಗಾದರೆ ನಾನು ತಪು್ಪಮಾಡಿಬಿಟ್ಟೆನಾ? ಚಿನ್ನ-ಬೆಳ್ಳಿ, ಪಟ್ಟೆಸೀರೆಯ ಮಾತು ಹಾಗಿರಲಿ, ಕಾಡಿನಿಂದ ರುಚಿಕಟ್ಟಾದ ಅಪರೂಪದ ಹಣ್ಣುಗಳನ್ನೋ, ಕನಿಷ್ಠಪಕ್ಷ ಒಂದು ಸಸಿಯನ್ನಾದರೂ ತಂದುಕೊಟ್ಟಿದ್ದಿದ್ದರೆ ಅಮ್ಮ ಅದೆಷ್ಟು ಸಂತೋಷಪಡುತ್ತಿದ್ದಳು… ಛೇ! ಎಂಥ ಪ್ರಮಾದವಾಯಿತು…’ ಎಂದುಕೊಳ್ಳುತ್ತ ರಾಮ ಆ ಸಂಭ್ರಮದ ಸನ್ನಿವೇಶದಲ್ಲೂ ಪರಿತಪಿಸತೊಡಗಿದ. ಜನಜಂಗುಳಿ ಕೊಂಚ ಕರಗಿ, ರಾಮನಿಗೆ ಸ್ವಲ್ಪ ಬಿಡುವು ಸಿಕ್ಕಿತು. ತಾಯಿಹಸುವಿನ ಬಳಿಗೆ ಓಡೋಡಿ ಬರುವ ಪುಟ್ಟಕರುವಿನಂತೆ ಕೌಸಲ್ಯೆಯ ಬಳಿಗೆ ಧಾವಿಸಿ ಬಂದ ರಾಮ, ‘ಹೇಳಮ್ಮಾ, ನನ್ನನ್ನು ಏನೋ ಕೇಳಲು ಬಯಸುತ್ತಿರುವಂತಿದೆ..?’ ಎಂದು ಅಳುಕುತ್ತಲೇ ಕೇಳಿದ. ‘ಮಗೂ ರಾಮ, ನಿನ್ನ ಊಹೆ ಸರಿ; ಎಷ್ಟಾದರೂ ನನ್ನ ಮುದ್ದುಕಂದ ನೀನು. ಹೌದು, ನಿನ್ನನ್ನು ಏನೋ ಕೇಳುತ್ತೇನೆ, ನೀನು ಉತ್ತರಿಸಲೇಬೇಕು. ಇಲ್ಲವೆನ್ನಬೇಡ’ ಎಂದಳು ಕೌಸಲ್ಯೆ. ರಾಮನಲ್ಲಿ ಆತಂಕ ಇನ್ನೂ ಹೆಚ್ಚಾಯಿತು. ‘ನನಗಾಗಿ ಏನನ್ನು ತಂದಿರುವೆ ಕಂದಾ’ ಎಂದು ಅಮ್ಮ ಕೇಳಿಬಿಟ್ಟರೆ ಗತಿಯೇನು ಎಂದು ಒಳಗೊಳಗೇ ಕುಸಿದ. ಆದರೂ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ, ‘ಅದೇನು ಕೇಳಮ್ಮಾ’ ಎಂದ.

‘ಸದ್ಯ, ಕೇಳು ಅಂದ್ಯಲ್ಲ ಮಗನೇ…’ ಕೌಸಲ್ಯೆಯಿಂದ ಸಮಾಧಾನದ ದನಿ ಹೊಮ್ಮಿತು. ‘ಸರಿ, ನನ್ನ ಪ್ರಶ್ನೆಯೇನು ಗೊತ್ತೇ ಕಂದಾ?’ ಎಂದಳು ಕೌಸಲ್ಯೆ . ‘ನೀನು ಪ್ರಶ್ನಿಸಿದರಲ್ಲವೇ ಗೊತ್ತಾಗುವುದು?!’ ಅಂದ ರಾಮ. ಕೌಸಲ್ಯೆ ರಾಮನ ಬಳಿ ತೆರಳಿ ಮಮಕಾರದಿಂದ ಅವನ ತಲೆ ನೇವರಿಸುತ್ತ, ‘ನಿನ್ನ ಊಟ ಆಯಿತೆ ಕಂದಾ, ಬೇಗ ಹೇಳು…’ ಅಂದಳು.

ರಾಮನ ಕಂಠ ಗದ್ಗದಿತವಾಗಿ ಮಾತೇ ಹೊರಡಲಿಲ್ಲ, ಅವನ ಕಣ್ಣಾಲಿಗಳು ತುಂಬಿಬಂದಿದ್ದವು. ಬೇರೇನೂ ತೋಚದೆ ಮಾತೆ ಕೌಸಲ್ಯೆಯನ್ನು ಬಿಗಿದಪ್ಪಿದ.

ಮಾತೃವಾತ್ಸಲ್ಯಕ್ಕೆ ಇದಕ್ಕಿಂತ ನಿದರ್ಶನ ಬೇಕೇ? ತನ್ನ ಕೂಸು ಹಸಿದಿರಬಾರದು, ಅದಕ್ಕೆ ಯಾವುದೇ ನೋವಾಗಬಾರದು ಎಂದು ಸದಾ ಹಂಬಲಿಸುವಾಕೆಯೇ ‘ತಾಯಿ’. ವಾತ್ಸಲ್ಯ ಎಂಬ ಪರಿಕಲ್ಪನೆಯ ಮೂರ್ತರೂಪವೇ ತಾಯಿ ಎಂಬುದನ್ನು ಮರೆಯದಿರೋಣ, ಆಕೆಗೆ ನೋವಾಗದಿರುವಂತೆ ನಡೆದುಕೊಳ್ಳೋಣ.

(ಲೇಖಕರು ಸಾಹಿತಿ) (ಪ್ರತಿಕ್ರಿಯಿಸಿ: [email protected])