ವಿವೇಚನೆಯೇ ಬದುಕು

| ಪದ್ಮಲತಾ ಮೋಹನ್

ಸುಖ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು. ‘ನೀರಹನಿ ಆವಿಯಾಗುತ್ತದೆ, ಅದೇ ಆವಿ ನೀರಾಗಿ ಪರಿವರ್ತಿತವಾಗುತ್ತದೆ; ಏಕೆಂದರೆ ಅವೆರಡೂ ಒಂದು ವಸ್ತುವಿನ ವಿಭಿನ್ನ ಅವಸ್ಥೆಗಳು. ಸುಖ-ದುಃಖಗಳೂ ಹಾಗೆಯೇ’ ಎನ್ನುತ್ತಾರೆ ‘ಓಶೋ’ ರಜನೀಶ್. ಜೀವನವನ್ನು ಒಂದು ಹಗ್ಗಕ್ಕೆ ಹೋಲಿಸಿದರೆ, ಒಂದು ತುದಿಯಲ್ಲಿ ದುಃಖವಿರುತ್ತದೆ ಮತ್ತೊಂದರಲ್ಲಿ ಸುಖವಿರುತ್ತದೆ. ಹೀಗಾಗಿ ಮನುಷ್ಯರು ಸುಖ-ದುಃಖಗಳ ಆವರ್ತನದಿಂದ ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಎಲ್ಲ ಕ್ಷಣಗಳೂ ಸುಖಕರವಾಗಿರುತ್ತವೆ ಎಂಬ ಊಹೆಯಲ್ಲಿ ಸಂಭ್ರಮಿಸುವುದೋ, ಅವು ದುಃಖದ ಮೂಟೆಯನ್ನೇ ಹೊತ್ತುತರುತ್ತವೆ ಎಂದು ಹತಾಶೆಗೊಳ್ಳುವುದೋ ತರವಲ್ಲ. ಸುಖವನ್ನು ಸಂಭ್ರಮಿಸಿದಂತೆ ಸಂಕಷ್ಟ ಅನಿವಾರ್ಯವಾಗಿದ್ದರೆ ಅದನ್ನು ಅನುಭವಿಸಲೇಬೇಕಾಗುತ್ತದೆ. ಆದರೆ ಸಂಕಷ್ಟದ ತೀವ್ರತೆಯನ್ನು ತಗ್ಗಿಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲೇ ಇದೆ ಎಂಬುದನ್ನು ಮರೆಯಬಾರದು.

ಸಿರಿಯಾದ ಕತೆಯೊಂದನ್ನು ನೋಡೋಣ. ಅಕ್ಕಪಕ್ಕದ ಊರಿನಲ್ಲಿದ್ದ ಓರ್ವ ಹೂವಾಡಗಿತ್ತಿ ಮತ್ತು ಮೀನು ಮಾರುವಾಕೆ ಆತ್ಮೀಯ ಗೆಳತಿಯರಾಗಿದ್ದರು. ಒಮ್ಮೆ ವ್ಯಾಪಾರನಿಮಿತ್ತವಾಗಿ ಊರೂರು ತಿರುಗಿಕೊಂಡು ಬಂದ ಮೀನು ಮಾರುವಾಕೆ, ಮನೆಗೆ ಮರಳುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಹೂವಾಡಗಿತ್ತಿಯ ಮನೆಯಲ್ಲಿ ಉಳಿದುಕೊಳ್ಳಬೇಕಾಗಿ ಬಂತು. ಆದರೆ ಮೀನು ಮಾರುವಾಕೆ ರಾತ್ರಿಯಿಡೀ ನಿದ್ರೆ ಬಾರದೆ ಹೊರಳಾಡಲಾರಂಭಿಸಿದಳು. ‘ಏನಾದರೂ ತೊಂದರೆಯಾಗುತ್ತಿದೆಯೇ?’ಎಂದು ಹೂವಾಡಗಿತ್ತಿ ಕೇಳಿದಾಗ, ‘ಈ ಹಾಸಿಗೆ-ಹೊದಿಕೆ ಸುಖಕರವಾಗಿವೆ. ಆದರೆ ನಿದ್ರೆಯೇ ಬರುತ್ತಿಲ್ಲ, ತುಂಬ ಕಷ್ಟವಾಗುತ್ತಿದೆ’ ಎಂದಳು ಮೀನು ಮಾರುವಾಕೆ. ಪದೇಪದೆ ಮಗ್ಗುಲು ಬದಲಿಸಿದರೂ ಆಕೆಗೆ ಕಣ್ಣು ಹತ್ತಲಿಲ್ಲ. ಕೊನೆಗೆ, ಆ ಕೋಣೆಯಲ್ಲಿದ್ದ ಸುಗಂಧಮಯ ಹೂವಿನ ಬುಟ್ಟಿಗಳನ್ನು ಆಚೆ ಇರಿಸುವಂತೆ ಕೋರಿದ್ದಕ್ಕೆ ಹೂವಾಡಗಿತ್ತಿ ಹಾಗೇ ಮಾಡಿದಳು. ನಂತರ, ಮೀನಿನ ಬುಟ್ಟಿಯನ್ನು ತಲೆಯ ಹತ್ತಿರ ಇರಿಸಿಕೊಳ್ಳುತ್ತಿದ್ದಂತೆ ಮೀನು ಮಾರುವಾಕೆಗೆ ಚೆನ್ನಾಗೇ ನಿದ್ರೆ ಆವರಿಸಿತು. ಅಪರಿಚಿತ ಹೂಗಂಧದಿಂದ ನಿದ್ರೆಯಿಲ್ಲದ ಸಂಕಟಕ್ಕೆ ಸಿಲುಕಿದ್ದ ಅವಳಿಗೆ ಮೀನಿನ ವಾಸನೆಯ ನಿಕಟತೆ ಸುಖ ನೀಡಿತ್ತು!

ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದೇ ಹಲುಬುತ್ತ ಸಮಯ ಹಾಳುಮಾಡಿಕೊಂಡು, ಉದ್ದೇಶಿತ ಕಾರ್ಯದಲ್ಲಿ ಹಿನ್ನಡೆ ಕಂಡುಕೊಳ್ಳುವ ಬದಲು, ಇರುವ ಪರಿಸ್ಥಿತಿಯನ್ನೇ ಅನುಕೂಲಕರವಾಗಿ ಹೇಗೆ ಬದಲಿಸಿಕೊಂಡು ಉದ್ದೇಶ ಈಡೇರಿಸಿಕೊಳ್ಳಬಹುದು ಎಂಬುದಕ್ಕೆ ಈ ಪುಟ್ಟಕತೆ ಸಾಕ್ಷಿ. ಇಲ್ಲಿ ಆಕೆ ಮಾಡಿಕೊಂಡ ಸಣ್ಣ ಬದಲಾವಣೆ ನಿದ್ರೆಗೆ ಪೂರಕವಾಗಿ ಪರಿಣಮಿಸಿದ ರೀತಿಯಲ್ಲೇ, ನಾವು ಆಯ್ದುಕೊಂಡ ಕಾರ್ಯಕ್ಷೇತ್ರದಲ್ಲಿ ಕಾಣಬರುವ ಸಣ್ಣ-ಪುಟ್ಟ ನ್ಯೂನತೆ ಅಥವಾ ಸಮಸ್ಯೆಗಳನ್ನು ಲೆಕ್ಕಿಸದೆ, ಕಾರ್ಯನಿಭಾವಣೆಯ ನಿಟ್ಟಿನಲ್ಲಿ ಅನುಕೂಲಕರ ಸಂದರ್ಭವಾಗಿ ಅವನ್ನು ಪರಿವರ್ತಿಸಿಕೊಳ್ಳುವ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು.

(ಲೇಖಕಿ ಉಪನ್ಯಾಸಕಿ) (ಪ್ರತಿಕ್ರಿಯಿಸಿ: [email protected])