ಬದುಕಿಗೆ ಗುರಿಯಿರಲಿ

| ಗಿರಿಜಾಶಂಕರ್ ಜಿ.ಎಸ್.

ನಿರ್ದಿಷ್ಟ ಗುರಿಯಿಲ್ಲದೆ ಅರ್ಥಪೂರ್ಣವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಒಂದು ಅಂಚೆಪತ್ರ ಮಹತ್ವಪೂರ್ಣ ಮಾಹಿತಿಯನ್ನು ಒಳಗೊಂಡಿದ್ದೂ ವಿಳಾಸವನ್ನೇ ಹೊಂದಿಲ್ಲದಿದ್ದರೆ ಅದು ಎಲ್ಲಿಗೂ ತಲುಪಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿಯಲ್ಲಿ ಗುರಿಯಿಲ್ಲದಿದ್ದರೆ ನಾವಂದುಕೊಂಡಂತೆ ಬದುಕು ಕಟ್ಟಿಕೊಳ್ಳಲೂ ಸಾಧ್ಯವಿಲ್ಲ. ಸ್ಪಷ್ಟಗುರಿ ಮಾತ್ರವೇ ಹಲವು ಸವಾಲು-ಸಂಕಷ್ಟಗಳನ್ನು ಎದುರಿಸಿ ಮುನ್ನಡೆಯುವ ಆತ್ಮವಿಶ್ವಾಸವನ್ನು ನಮ್ಮಲ್ಲಿ ತುಂಬಬಲ್ಲದು. ಆತ್ಮವಿಶ್ವಾಸಕ್ಕೆ ಬಲವಾದ ನಂಬಿಕೆ ಬೇಕು. ದಿನನಿತ್ಯದ ವಾಯುವಿಹಾರದಲ್ಲಿ 1 ಕಿ.ಮೀ. ಕ್ರಮಿಸುವಷ್ಟರಲ್ಲಿ ಕೆಲವರಿಗೆ ಸುಸ್ತಾಗುತ್ತದೆ; ಆದರೆ ಪುಣ್ಯಕ್ಷೇತ್ರಕ್ಕೆಂದು ಹೊರಟಾಗ ಎಷ್ಟೇ ದೂರದ ಯಾನವಾದರೂ ದಣಿವು ಅನಿಸುವುದಿಲ್ಲ. ‘ಆರಾಧ್ಯದೈವದ ದರ್ಶನದಿಂದ ನಮ್ಮ ಕಷ್ಟ ಪರಿಹಾರವಾಗುತ್ತದೆ’ ಎಂಬ ಬಲವಾದ ನಂಬಿಕೆಯೇ ಇದಕ್ಕೆ ಕಾರಣ. ಆಯ್ದುಕೊಂಡ ಕಾರ್ಯಕ್ಷೇತ್ರ ಯಾವುದೇ ಇರಲಿ, ಎದುರಾಗುವ ದುರ್ಗಮಹಾದಿಯಲ್ಲಿ ಪಟ್ಟುಬಿಡದೆ ಕ್ರಮಿಸುವಂಥ ಛಲವನ್ನು ಮನದಲ್ಲಿ ತುಂಬುವ ಇಂಥ ಬಲವಾದ ನಂಬಿಕೆ ಮತ್ತು ಆತ್ಮವಿಶ್ವಾಸಗಳು, ಗುರಿಯೆಡೆಗೆ ನಮ್ಮನ್ನು ಕೈಹಿಡಿದು ನಡೆಸಿಕೊಂಡು ಹೋಗುವ ಕರುಣಾಳು ಬೆಳಕೇ ಆಗುತ್ತವೆ ಎಂಬುದು ಅನುಭವಜನ್ಯ ಮಾತು.

ಬಂದರಿನಲ್ಲಿ ಹಡಗೊಂದು ನಿಂತಿತ್ತು. ಅಲ್ಲಿಗೆ ಹಾರಿಬಂದ ಹಕ್ಕಿಯೊಂದು ಆಯಾಸ ನೀಗಿಕೊಳ್ಳಲೆಂದು ಕೆಲಕಾಲ ಕುಳಿತುಕೊಂಡಿತು. ಮಿತಿಮೀರಿದ ದಣಿವಿನಿಂದಾಗಿ ನಿದ್ರೆಗೆ ಜಾರಿದ ಹಕ್ಕಿಗೆ ಹಡಗು ಹೊರಟಿದ್ದೇ ಗೊತ್ತಾಗಲಿಲ್ಲ. ಕೆಲಕಾಲದ ನಂತರ ಎಚ್ಚರವಾದಾಗ, ಹಡಗು ಬಹಳ ದೂರ ಸಾಗಿಬಂದಿತ್ತು. ತಕ್ಷಣ, ಹಡಗು ಚಲಿಸುತ್ತಿದ್ದ ವಿರುದ್ಧ ದಿಕ್ಕಿಗೆ ಹಾರಲು ಮೊದಲಿಟ್ಟಿತು. ಸಾಕಷ್ಟು ದೂರ ಕ್ರಮಿಸಿದ ನಂತರ, ತನ್ನಿಂದ ದಡ ಸೇರಲು ಸಾಧ್ಯವಿಲ್ಲ ಎನಿಸಿ, ಹಡಗಿನತ್ತ ಮರಳಿ ಹಾರಿಬಂತು. ಕೆಲಕಾಲ ವಿಶ್ರಮಿಸಿ, ‘ಹಿಂದಿನಬಾರಿ ತಪು್ಪದಿಕ್ಕಿನಲ್ಲಿ ಹಾರಿದೆ ಎನಿಸುತ್ತದೆ; ಈ ಸಲ ಹಡಗು ಸಾಗುತ್ತಿರುವ ದಿಕ್ಕಿನಲ್ಲೇ ಹಾರುವೆ’ ಎಂದು ರೆಕ್ಕೆಗಳನ್ನು ಪಟಪಟನೆ ಬಡಿಯಿತು. ಪುನಃ ಸಾಕಷ್ಟು ದೂರ ಕ್ರಮಿಸಿದರೂ ನೆಲೆಗಾಣದೆ, ಮತ್ತೆ ಹಡಗಿನೆಡೆಗೆ ಮರಳಿತು. ಹೀಗೆ ದ್ವಂದ್ವದ ಬಲಿಪಶುವಾಗಿ, ಆ ದಿಕ್ಕಿನಲ್ಲಿ-ಈ ದಿಕ್ಕಿನಲ್ಲಿ ಮತ್ತೆಮತ್ತೆ ವ್ಯರ್ಥ ಕಸರತ್ತಿನಲ್ಲಿ ತೊಡಗಿದ ಆ ಹಕ್ಕಿ ಮಾರ್ಗಮಧ್ಯದಲ್ಲಿ ಸುಸ್ತಾಗಿ ಸಮುದ್ರದಲ್ಲಿ ಬಿದ್ದು ಅಸುನೀಗಿತು.

ಬದುಕಿಗೊಂದು ಸ್ಪಷ್ಟಗುರಿ, ಅದೆರೆಡೆಗೆ ಸಾಗುವುದಕ್ಕೊಂದು ಆದರ್ಶಯುತ ಮಾರ್ಗ ಈ ಎರಡೂ ಇಲ್ಲದಿದ್ದಲ್ಲಿ, ಅವಧಿಗೆ ಮುಂಚಿತವಾಗಿಯೇ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ ಅಥವಾ ನಿರಂತರ ಹತಾಶೆಗೆ ಒಳಗಾಗಬೇಕಾಗುತ್ತದೆ ಎಂಬುದನ್ನು ಧ್ವನಿಸುವ ರೂಪಕವಿದು. ನಾವು ಇಂಥ ದಿಕ್ಕುಗೆಟ್ಟ ಹಕ್ಕಿಯಾಗದಿರೋಣ.

(ಲೇಖಕರು ಕನ್ನಡ ಅಧ್ಯಾಪಕರು ಮತ್ತು ಹವ್ಯಾಸಿ ಬರಹಗಾರರು)

(ಪ್ರತಿಕ್ರಿಯಿಸಿ: [email protected])