ಜೀವನದ ಸತ್ಯ

| ಪದ್ಮಲತಾ ಮೋಹನ್

ಹದಿಹರೆಯದ ಹುಡುಗನೊಬ್ಬ ಆಸ್ಪತ್ರೆಗೆ ದಾಖಲಾಗಿದ್ದ. ಕಾಯಿಲೆ ವಿಷಮಹಂತಕ್ಕೆ ತಲುಪಿದ್ದರಿಂದಾಗಿ ಬದುಕುವ ಸಾಧ್ಯತೆ ಕಡಿಮೆ ಎನ್ನಲಾಗಿತ್ತು, ವೈದ್ಯರೂ ಈ ನಿಟ್ಟಿನಲ್ಲಿ ಅಸಹಾಯಕರಾಗಿದ್ದರು. ಮನೆಯವರೂ ದೇವರ ಮೇಲೆ ಭಾರಹಾಕಿ ಆತನಿಗಾಗಿ ಪ್ರಾರ್ಥಿಸುತ್ತಿದ್ದರು. ಈ ಎಲ್ಲ ಕಾರಣಗಳಿಂದಾಗಿ ಆ ಯುವಕ ದೈಹಿಕವಾಗಿ-ಮಾನಸಿಕವಾಗಿ ಕುಂದಿದ್ದ. ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದ ಕಾರಣದಿಂದಾಗಿ, ಆತನಿಗೆ ನೀಡುತ್ತಿದ್ದ ಮಾತ್ರೆ-ಔಷಧಗಳೂ ಪರಿಣಾಮ ಬೀರುತ್ತಿರಲಿಲ್ಲ. ಒಂದು ದಿನ ಅದೇ ಕನವರಿಕೆಯಲ್ಲಿ ನಿದ್ರೆಗೆ ಜಾರಿದಾಗ ಕನಸಲ್ಲಿ ದೇವರು ಕಾಣಿಸಿಕೊಂಡ.

‘ಭಗವಂತಾ, ನನಗೇಕೆ ಈ ದುಸ್ಥಿತಿ?’ ಎಂದು ಹುಡುಗ ಪ್ರಶ್ನಿಸಿದ್ದಕ್ಕೆ ದೇವರು ಸುಮ್ಮನೆ ನಕ್ಕ. ‘ನನಗೆ ಉತ್ತರ ಬೇಕು’ ಎಂದು ಆ ಯುವಕ ಆಗ್ರಹಪಡಿಸಿದರೂ ದೇವರ ನಗು ಮುಂದುವರಿಯಿತು. ‘ನನಗೆ ಇನ್ನೂ ಬದುಕಬೇಕು ಎನಿಸುತ್ತಿದೆ. ನನ್ನಲ್ಲಿ ನಿನಗೆ ಕರುಣೆಯೇ ಇಲ್ಲವೇ? ನನಗೆ ಸಹಾಯ ಮಾಡುವುದಿಲ್ಲವೇ?’ ಎಂದು ಪ್ರಶ್ನಿಸಿದ ಹುಡುಗ ಕೊಂಚ ಅಸಮಾಧಾನದಿಂದ. ಮೌನಮುರಿದ ಭಗವಂತ, ‘ಮಗೂ, ನಿನ್ನ ಬದುಕಿಗೆ ಬೇರಾರೂ ತಡೆ ಒಡ್ಡಿಲ್ಲ, ಸ್ವತಃ ಕೊರಗುವಿಕೆಗೆ ಒಡ್ಡಿಕೊಂಡಿರುವವನು ನೀನೇ. ಬದುಕಲು ನೀನೇ ಇಷ್ಟಪಡುತ್ತಿಲ್ಲ, ದಾರಿಗಳೆಲ್ಲ ಮುಚ್ಚಿಹೋದವೆಂದು ನೀನೇ ನಿರ್ಧರಿಸಿಬಿಟ್ಟಿದ್ದೀಯ. ನೀನು ಹಾಗೆ ಮಾಡಬೇಕೆಂದು ನಾನು ಎಂದಾದರೂ ಹೇಳಿದ್ದೆನಾ? ಶ್ರದ್ಧಾಪೂರ್ವಕವಾಗಿ, ಕುಂದಿಲ್ಲದ ಬದ್ಧತೆಯೊಂದಿಗೆ ನೀನು ಪ್ರಯತ್ನಪಟ್ಟರೆ ಮಾತ್ರವಷ್ಟೇ ನಾನು ನೆರವಾಗಬಲ್ಲೆ…’ ಎಂದ.

ಯುವಕನ ದೇಹದಲ್ಲಿ ಮಿಂಚಿನ ಸಂಚಾರವಾದಂತಾಯಿತು; ಬದುಕಲೇಬೇಕೆಂಬ ಉತ್ಕಟ ಇಚ್ಛೆ ಅವನಲ್ಲಿ ನವಚೈತನ್ಯವನ್ನು ಸ್ಪುರಿಸಿತು. ನೋಡನೋಡುತ್ತಿದ್ದಂತೆಯೇ ‘ಜಾದೂ’ ಜರುಗಿತು. ಆತ ನಿಧಾನವಾಗಿ ಚೇತರಿಸಿಕೊಳ್ಳಲಾರಂಭಿಸಿದ. ಮೊಗದಲ್ಲಿ ಜೀವಕಳೆ ಚಿಮ್ಮಿತು. ‘ನಾನೂ ಬಾಳುತ್ತೇನೆ, ಬಾಳಿ ತೋರಿಸುತ್ತೇನೆ’ ಎಂಬ ಮಂತ್ರ ಅವನ ಅನುಕ್ಷಣದ ಉಸಿರಾಯಿತು. ಪರಿಣಾಮ, ಸಂಪೂರ್ಣ ಗುಣಮುಖನಾದ, ಆಯ್ದುಕೊಂಡ ಕಾರ್ಯಕ್ಷೇತ್ರದಲ್ಲೂ ಯಶಸ್ವಿಯಾದ.

ಎಷ್ಟೇ ಕಷ್ಟಕರ ಪರಿಸ್ಥಿತಿಯಿರಲಿ, ಆತ್ಮಸ್ಥೈರ್ಯಕ್ಕೆ ಸಂಚಕಾರ ತಂದುಕೊಳ್ಳದಿದ್ದರೆ ಏನನ್ನು ಬೇಕಿದ್ದರೂ ಸಾಧಿಸಬಹುದು ಎಂಬುದಕ್ಕೆ ಈ ರೂಪಕ ಸಾಕ್ಷಿ. ಕೊರಗು ಮತ್ತು ನಕಾರಾತ್ಮಕ ಯೋಚನೆಯೇ ತಲೆತುಂಬಿಕೊಂಡಿದ್ದರೆ, ಸಮರ್ಥ ಮಾತ್ರೆ-ಔಷಧಗಳೂ ಕೆಲಸ ಮಾಡುವುದಿಲ್ಲ. ಸಕಾರಾತ್ಮಕ ಚಿಂತನೆಗೆ ಒಡ್ಡಿಕೊಂಡರೆ, ಎಂಥ ಸವಾಲು-ಸಂಕಷ್ಟದ ತೀವ್ರತೆಯೂ ತಗ್ಗಿ ಸಾಧನೆಯ ಹಾದಿ ಸುಗಮಗೊಳ್ಳುತ್ತದೆ. ಅದನ್ನು ಬಿಟ್ಟು ಯುದ್ಧಕ್ಕೆ ಮೊದಲೇ ಸೋಲೊಪ್ಪಿಕೊಂಡರೆ, ಜಯ ಸಿಗುವುದಾದರೂ ಹೇಗೆ? ಕ್ರೀಡೆಯಲ್ಲಿಯೂ ಎರಡು ತಂಡಗಳವರೂ ಗೆಲ್ಲಬೇಕೆಂದೇ ಆಡುತ್ತಾರೆ. ಉತ್ತಮ ಆಟಕ್ಕೆ ಅದುವೇ ಉತ್ತೇಜನ ನೀಡುತ್ತದೆ. ಗೆಲ್ಲುವ ಭರವಸೆಯೊಂದಿಗೇ ಜೀವನಪಥದಲ್ಲಿ ಹೆಜ್ಜೆಹಾಕಬೇಕಿರುವುದು ನಮ್ಮೆಲ್ಲರ ಹೆಗಲಮೇಲಿನ ಹೊಣೆ, ಅದೇ ಬದುಕಿನ ಸತ್ಯವೂ ಹೌದು ಎಂಬುದನ್ನು ಮರೆಯದಿರೋಣ.

(ಲೇಖಕಿ ಉಪನ್ಯಾಸಕಿ) (ಪ್ರತಿಕ್ರಿಯಿಸಿ: [email protected])