ನುಡಿಯನರಿತು ನಡೆಯೋಣ

| ರಾಗಿಣಿ

ಕಾನನವೊಂದರಲ್ಲಿ ಸುಂದರ ಗಿಣಿಗಳ ಗುಂಪೊಂದು ವಾಸಿಸುತ್ತಿತ್ತು. ಅದೊಂದು ದಿನ ಬೇಟೆಗಾರನೊಬ್ಬ ಬಲೆ ಬೀಸಿ ಗಿಣಿಗಳನ್ನು ಹಿಡಿಯತೊಡಗಿದ. ದಿನಂಪ್ರತಿ ಗಿಣಿಗಳನ್ನು ಹಿಡಿದು ಪೇಟೆಯಲ್ಲಿ ಮಾರಿ ಅದರಿಂದ ಬಂದ ಹಣದಿಂದ ಆತನ ಜೀವನ ಸಾಗುತ್ತಿತ್ತು. ಇತ್ತ ಕಾಡಿನಲ್ಲಿ ಗಿಣಿಗಳ ನಾಯಕ ಆತಂಕಗೊಂಡ. ಪಕ್ಕದೂರಿನಲ್ಲಿರುವ ಸಂನ್ಯಾಸಿಯೊಬ್ಬ ತನ್ನ ಬಳಿ ಕಷ್ಟ ಹೇಳಿಕೊಂಡು ಬರುವವರ ಕಷ್ಟ ಪರಿಹಾರ ಮಾಡುವ ವಿಚಾರ ಗಿಣಿರಾಜನಿಗೆ ತಿಳಿದು ಆ ಸಂನ್ಯಾಸಿಯಲ್ಲಿಗೆ ಹೋಯಿತು. ಸಂನ್ಯಾಸಿ, ‘ನಿನ್ನ ಪರಿವಾರದವರೆಲ್ಲರನ್ನೂ ಒಗ್ಗೂಡಿಸಿ ಅವರಿಗೆ ಒಂದು ವಿಷಯ ಮನವರಿಕೆ ಮಾಡಿಸು, ಬೇಟೆಗಾರ ಬರುತ್ತಾನೆ-ಬಲೆಬೀಸುತ್ತಾನೆ-ಕಾಳು ಹಾಕುತ್ತಾನೆ-ಯಾರೂ ಬೀಳಬೇಡಿ ಎಂದು ಅವರನ್ನು ಎಚ್ಚರಿಸು; ಇದೊಂದೇ ನಿನ್ನ ಸಮಸ್ಯೆಗಿರುವ ಪರಿಹಾರ’ ಎಂದು ಹೇಳುತ್ತಾನೆ. ಗಿಣಿರಾಜ ಎಲ್ಲ ಗಿಣಿಗಳನ್ನು ಕರೆದು ಸಂನ್ಯಾಸಿ ಹೇಳಿಕೊಟ್ಟ ಹಾಗೆ ಹೇಳುತ್ತಾನೆ. ಆಗ ಅವು ಆ ವಾಕ್ಯವನ್ನು ಒಕ್ಕೊರಲಿನಿಂದ ಕಂಠಪಾಠ ಮಾಡಿದವು.

ಮರುದಿನ ಯಥಾಪ್ರಕಾರ ಬೇಟೆಗಾರ ಬಂದ. ತಕ್ಷಣ ಮರದಲ್ಲಿದ್ದ ಗಿಣಿಗಳೆಲ್ಲವೂ ‘ಬೇಟೆಗಾರ ಬರ್ತಾನೆೆ-ಬಲೆಬೀಸ್ತಾನೆ-ಕಾಳು ಹಾಕ್ತಾನೆೆ-ಯಾರೂ ಬೀಳಬೇಡಿ’ ಎಂದು ಕೂಗತೊಡಗಿದವು. ‘ನಾನು ಬಲೆ ಬೀಸುವುದು ಇವುಗಳಿಗೆ ಮೊದಲೇ ಗೊತ್ತಾಗಿದೆಯಲ್ಲ, ಇನ್ನು ನನ್ನ ಆಟ ನಡೆಯುವುದಿಲ್ಲ’ ಎಂದು ಆತ ವಾಪಸಾಗುತ್ತಾನೆ. ಮರುದಿನ ಮತ್ತೆ ಅದೇ ಪುನರಾವರ್ತನೆಯಾಯಿತು. ಬೇಟೆಗಾರ ದಿನವೂ ಬರಿಗೈಲಿ ವಾಪಸಾಗುತ್ತಿದ್ದ, ಆತನ ಜೀವನೋಪಾಯಕ್ಕೆ ಬೇರೆ ದಾರಿ ಇಲ್ಲದೆ ವ್ಯಥೆಗೆ ಬಿದ್ದ. ಅನ್ಯಮಾರ್ಗವಿಲ್ಲದೆ ಅದೇ ಸಂನ್ಯಾಸಿಯಲ್ಲಿಗೆ ಪರಿಹಾರಕ್ಕಾಗಿ ಬರುತ್ತಾನೆ. ಆಗ ಸಂನ್ಯಾಸಿ ಬೇಟೆಗಾರನಿಗೆ-‘ನೀನು ಯಥಾಪ್ರಕಾರ ಬಲೆಬೀಸು, ನಿನ್ನ ಕಾಯಕ ಮುಂದುವರಿಸು, ಗಿಣಿಗಳ ಕೆಲಸ ಅವು ಮಾಡುತ್ತವೆ, ನಿನ್ನ ಕೆಲಸ ನೀನು ಮಾಡು’ ಎಂದು ಹೇಳುತ್ತಾನೆ. ಬೇಟೆಗಾರ ಮರುದಿನ ಬಂದು ಬಲೆಬೀಸಿ ಕಾಳು ಚೆಲ್ಲಿದೊಡನೆ ಗಿಣಿಗಳೆಲ್ಲವೂ ಬಂದು ಬಲೆಯೊಳಗೆ ಬಂಧಿಯಾಗಿ ಕಂಠಪಾಠವಾಗಿದ್ದ ವಾಕ್ಯವನ್ನು ಉಲಿಯುತ್ತಲೇ ಕಾಳು ತಿನ್ನತೊಡಗಿದವು. ತಾನು ಕಾಳುಹಾಕಿ ಹಿಡಿಯುವ ಸಂಗತಿ ಗೊತ್ತಿದ್ದರೂ ಹೇಗೆ ಅವು ಬಂಧಿಯಾದವು ಎಂಬ ಸಂದೇಹದೊಂದಿಗೆ ಮತ್ತೆ ಸಂನ್ಯಾಸಿ ಬಳಿ ಬರುತ್ತಾನೆ. ‘ಗಿಣಿಗಳು ನಾನು ಹೇಳಿಕೊಟ್ಟ ವಾಕ್ಯವನ್ನು ಅರ್ಥಮಾಡಿಕೊಳ್ಳದೆ ಕೇವಲ ಉಲಿಯುವುದಕ್ಕಷ್ಟೇ ಸೀಮಿತಗೊಳಿಸಿದವು. ಅದರಿಂದ ಅಪಾಯವನ್ನು ಗಿಣಿಗಳೇ ಆಹ್ವಾನಿಸಿಕೊಂಡವು’ ಎಂದ ಸಂನ್ಯಾಸಿ. ಈ ಕಥೆ ಕಾಲ್ಪನಿಕವಾದರೂ ಇದರಲ್ಲಿ ಅಡಗಿರುವ ಸಂದೇಶ ಅರ್ಥಪೂರ್ಣ. ನಮ್ಮಲ್ಲಿ ಅನೇಕರು ಎಷ್ಟೊಂದು ಶ್ರದ್ಧಾಕೇಂದ್ರಗಳಿಗೆ, ದೇವಾಲಯಗಳಿಗೆ, ತೀರ್ಥಕ್ಷೇತ್ರಗಳಿಗೆೆ ಹೋಗುತ್ತಾರೆ, ಧಾರ್ವಿುಕ ಗ್ರಂಥಗಳ ಪಾರಾಯಣ ಮಾಡುತ್ತಾರೆ, ಪ್ರವಚನ-ಸತ್ಸಂಗ ಆಲಿಸುತ್ತಾರೆ. ಹಿತನುಡಿಗಳನ್ನು ಶ್ರವಣ ಮಾಡುತ್ತಾರೆಯೇ ಹೊರತು ಮನನ ಮಾಡಿಕೊಳ್ಳುವುದಿಲ್ಲ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಉತ್ತಮ ವಿಷಯಗಳು, ಹಿತನುಡಿಗಳು ಬರಿ ಕೇಳುವುದಕ್ಕಷ್ಟೇ ಅಲ್ಲ, ಅದರಲ್ಲಿ ಅಡಗಿರುವ ತತ್ತ್ವವನ್ನು ಮನಗಂಡು ಅನುಸರಿಸಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಂಡು, ಮುಂದಿನ ಭವಿಷ್ಯ ಉಜ್ವಲವಾಗುತ್ತದೆ ಮತ್ತು ಜೀವನ ಸಾರ್ಥಕವಾಗುತ್ತದೆ.

(ಲೇಖಕಿ ಹವ್ಯಾಸಿ ಬರಹಗಾರ್ತಿ)(ಪ್ರತಿಕ್ರಿಯಿಸಿ: [email protected])