ಕೊಟ್ಟು ಆನಂದಿಸೋಣ…

|  ಗಿರಿಜಾದೇವಿ ಮ. ದುರ್ಗದಮಠ

ಒಳ್ಳೆಯ ಆಚಾರವುಳ್ಳ, ಸುಸಂಸ್ಕೃತ ಮನೆತನದ ಹೆಣ್ಣೊಬ್ಬಳನ್ನು ಆಗರ್ಭ ಶ್ರೀಮಂತರ ಮಗನಿಗೆ ಕೊಟ್ಟು ಮದುವೆ ಮಾಡಲಾಯಿತು. ಗಂಡನ ಮನೆಗೆ ಹೀಗೆ ಹೊಸದಾಗಿ ಸೊಸೆಯಾಗಿ ಬಂದಾಕೆಗೆ, ಅಲ್ಲಿ ದಾನ-ಧರ್ಮ ಮಾಡುವ, ಕರೆದು ನೀಡುವ, ಪರೋಪಕಾರ ಚಿಂತನೆಯ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಅಲ್ಲಿಗೆ ಭಿಕ್ಷುಕರು ಬೇಡಲು ಬರುತ್ತಿರಲಿಲ್ಲ, ಸ್ವಾಮಿ-ಸಂನ್ಯಾಸಿಗಳು ಭಿನ್ನಹಕ್ಕೆ ಆಗಮಿಸುತ್ತಿರಲಿಲ್ಲ. ಕೇವಲ ದುಡಿಯುವುದು, ಗಳಿಸಿಡುವುದು, ಬೇಡಿ ಬಂದವರಿಗೆ ‘ಮುಂದೆ ಹೋಗು’ ಎನ್ನುವುದು ಆ ಮನೆಯವರ ನಿತ್ಯ ಪರಿಪಾಠವಾಗಿತ್ತು.

ಇದನ್ನು ಕಂಡ ಸೊಸೆಗೆ ‘ಎಷ್ಟು ಶ್ರೀಮಂತಿಕೆ ಇದ್ದರೇನು ಪ್ರಯೋಜನ?’ ಎನಿಸಿತ್ತು. ಈ ಮನೆಯ ಸಂಸ್ಕೃತಿಯನ್ನು ಬದಲಿಸುವುದು ಹೇಗೆ ಎಂದು ಆಕೆ ಆಲೋಚಿಸುತ್ತಿರುವಾಗಲೇ ಭಿಕ್ಷುಕನೊಬ್ಬ ‘ಭಿಕ್ಷೆ ನೀಡಿ ಅಮ್ಮಾ…’ ಎಂದು ಹೊರಗೆ ಕೂಗಿದ್ದು ಕೇಳಿಸಿತು. ಅತ್ತೆ-ಮಾವ ಎದುರಿಗೇ ಇದ್ದರೂ, ‘ಹೋಗಿ ಭಿಕ್ಷೆ ನೀಡಮ್ಮ’ ಎನ್ನಲಿಲ್ಲ. ಇದೇ ಸರಿಯಾದ ಸಮಯ ಎಂದು ಭಾವಿಸಿದ ಸೊಸೆ, ‘ಮುಂದೆ ಹೋಗಯ್ಯಾ…’ ಎಂದಳು ನಿರ್ಲಕ್ಷ್ಯದಿಂದ. ಆ ಭಿಕ್ಷುಕನೋ ‘ತುಂಬ ಹಸಿವಾಗಿದೆ ತಾಯೀ, ತಂಗಳಾದರೂ ನೀಡಮ್ಮಾ..’ ಎಂದು ಗೋಗರೆದ. ‘ತಂಗಳೂ ಇಲ್ಲ, ಬಿಸೀದೂ ಇಲ್ಲ, ಮುಂದೆ ಹೋಗಪ್ಪಾ’ ಎಂಬ ಗಡಸು ಉತ್ತರ ಬಂತು ಸೊಸೆಯಿಂದ. ಹಸಿದು ಹತಾಶನಾಗಿದ್ದ ಭಿಕ್ಷುಕ, ‘ಹೋಗಲಿ, ಮನೆಯಲ್ಲಿ ಏನಿದೆಯೋ ಅದನ್ನೇ ನೀಡಮ್ಮಾ’ ಎಂದ ದೀನದನಿಯಲ್ಲಿ. ‘ಒಮ್ಮೆ ಹೇಳಿದರೆ ಅರ್ಥವಾಗುವುದಿಲ್ಲವೇ? ಏನಿದೆ ಈ ಮನೆಯಲ್ಲಿ ನೀಡುವುದಕ್ಕೆ?’ ಎಂದು ಸೊಸೆ ಗದರಿದಳು. ಭಿಕ್ಷುಕ ವಿಧಿಯಿಲ್ಲದೆ ಅಲ್ಲಿಂದ ತೆರಳಿದ.

ಈ ಸಂಭಾಷಣೆ ಕೇಳಿ ಕೋಪಗೊಂಡ ಅತ್ತೆ-ಮಾವ, ‘ಏನಮ್ಮಾ, ಮುಂದೆ ಹೋಗಪ್ಪ ಎಂದಷ್ಟೇ ಹೇಳಬಹುದಿತ್ತು; ಏನಿದೆ ಈ ಮನೆಯಲ್ಲಿ ನೀಡುವುದಕ್ಕೆ ಅಂದ್ಯಲ್ಲಾ? ನಾವೇನೂ ಇಲ್ಲದವರು ಎಂಬಂತೆ ಮಾತಾಡಿದ್ದೇಕೆ?’ ಎಂದು ಆಕ್ಷೇಪಿಸಿದರು. ಅದಕ್ಕೆ ಸೊಸೆ, ‘ಈ ಮನೆಯಲ್ಲಿ ಎಲ್ಲವೂ ಇದೆ, ಆದರೆ ಯಾರ ಪ್ರಯೋಜನಕ್ಕೂ ಬಾರದಂತಿದೆ; ನಾನು ಭಿಕ್ಷುಕನಿಗೆ ಹೇಳಿದ್ದು ಅನ್ನದ ಕುರಿತಲ್ಲ, ಪುಣ್ಯದ ಕುರಿತು. ತಂಗಳೂ ಇಲ್ಲ, ಬಿಸೀದೂ ಇಲ್ಲ ಎಂದರೆ- ಹಿಂದಿನವರೂ ಪುಣ್ಯ ಮಾಡಿಲ್ಲ, ಈಗಿನವರಿಂದಲೂ ಪುಣ್ಯಕಾರ್ಯ ನಡೆಯುತ್ತಿಲ್ಲ ಎಂದರ್ಥ. ಏನಿದೆ ಈ ಮನೆಯಲ್ಲಿ ನೀಡುವುದಕ್ಕೆ ಎಂದರೆ- ಈ ಮನೆಯಲ್ಲಿ ಪುಣ್ಯದ ಬುತ್ತಿಯೇ ಇಲ್ಲ ಎಂದರ್ಥ…’ ಎಂದು ವಿವರಿಸಿದಳು. ಅತ್ತೆ-ಮಾವನಿಗೆ ಈ ಮಾತಿನ ಒಳಮರ್ಮ ಅರ್ಥವಾಯಿತು. ಆ ಕ್ಷಣದಿಂದಲೇ ಬದಲಾಗಿ ದಾನ-ಧರ್ಮದ ಪ್ರವೃತ್ತಿಯನ್ನು ರೂಢಿಸಿಕೊಂಡರು. ಆ ಭಿಕ್ಷುಕನನ್ನು ವಾಪಸ್ ಕರೆದು ಅನ್ನ ನೀಡಿದರು. ಕೊಟ್ಟು ಆನಂದಿಸುವುದರಲ್ಲಿ ಇರುವ ಸುಖ ಬೇರೆ ಯಾವ ಬಾಬತ್ತಿನಲ್ಲೂ ಸಿಗದು. ಹಾಗಾಗಿ ಒಳ್ಳೆಯ ಸಂಸ್ಕಾರಗಳನ್ನೇ ಕಲಿಯೋಣ, ದಾನ-ಧರ್ಮ, ಪರೋಪಕಾರ ಬುದ್ಧಿ, ಪರಹಿತ ಚಿಂತನೆಗಳು ನಮ್ಮ ಬಾಳಿನ ಪುಣ್ಯದ ಗಂಟು ಎಂಬುದನ್ನು ಮರೆಯದಿರೋಣ.

(ಲೇಖಕಿ ನಿವೃತ್ತ ಪ್ರಾಂಶುಪಾಲೆ)(ಪ್ರತಿಕ್ರಿಯಿಸಿ: [email protected])