Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಶೋಷಣೆಯ ಪರಿಣಾಮ ಭೀಕರ

Friday, 13.07.2018, 3:02 AM       No Comments

ತನ್ನ ರಾಜ್ಯದ ಸ್ಥಿತಿಗತಿಗಳನ್ನು ತಿಳಿಯಲು ರಾಜನೊಬ್ಬ ಸಾದಾ ವೇಷದಲ್ಲಿ ಒಬ್ಬನೇ ಸಂಚರಿಸುತ್ತ ಒಂದು ಕಬ್ಬಿನ ತೋಟದ ಬಳಿ ಬಂದನು. ಆ ತೋಟದ ಮನೆಯಲ್ಲಿದ್ದ ವಯೋವೃದ್ಧ ಮಹಿಳೆ ಅವನನ್ನು ನೋಡಿ, ‘ತುಂಬ ಆಯಾಸವಾಗಿರುವ ಹಾಗೆ ತೋರುತ್ತೆ, ಸ್ವಲ್ಪ ಹೊತ್ತು ವಿಶ್ರಮಿಸು’ ಎಂದಳು. ರಾಜನು, ‘ಹೌದಮ್ಮ ತುಂಬ ಬಾಯಾರಿಕೆ ಆಗಿದೆ’ ಎಂದ. ‘ಹೌದಾ! ಅದಕ್ಕೇನಂತೆ ಈಗಲೇ ಬರುವೆ’ ಎಂದು ತೋಟದೊಳಗೆ ಹೋಗಿ ಒಂದು ಕಬ್ಬು ಕಿತ್ತುಕೊಂಡು ಬಂದು ಅದನ್ನು ಕುಡಗೋಲಿನಿಂದ ಎರಡು ತುಂಡು ಮಾಡಿದ್ದೇ ತಡ ಅದರಿಂದ ಕಬ್ಬಿನ ರಸದ ಧಾರೆ ಸುರಿಯಲಾರಂಭಿಸಿತು. ಅದನ್ನು ಒಂದು ಲೋಟದಲ್ಲಿ ತುಂಬಿ ಅವನಿಗೆ ಕುಡಿಯಲು ಕೊಟ್ಟಳು. ಅಮೃತಸಮಾನವಾದ ಆ ರಸವು ತಕ್ಷಣ ಅವನ ಬಾಯಾರಿಕೆ ಶಮನ ಮಾಡಿತು. ರಾಜ ಸಂತಸಗೊಂಡ. ಆದರೆ ಕಬ್ಬಿನ ರಸ ಸವಿಯುತ್ತಿರುವಾಗ ಅವನ ಮನಸ್ಸಿನಲ್ಲಿ ವಿಚಾರವೊಂದು ಬಂತು. ‘ಇಷ್ಟೊಂದು ಒಳ್ಳೆಯ ಫಸಲು ಬೆಳೆಯುತ್ತಿರುವ ಇಲ್ಲಿಯ ಜನರ ಆದಾಯ ಎಷ್ಟಿರಬಹುದು? ಅದರಿಂದ ನನಗಾಗುವ ಲಾಭವೇನು? ಇವರಿಂದ ಎರಡು ಪಟ್ಟು ಕರ ವಸೂಲಿ ಮಾಡಿದರೆ ತಪ್ಪೇನು?’ ಹೀಗೆ ಯೋಚನೆ ಮುಂದುವರಿಯುತ್ತಿತ್ತು. ಅಷ್ಟರಲ್ಲಿ ಅವನ ಕೈಯಲ್ಲಿನ ಲೋಟ ಖಾಲಿಯಾದದ್ದನ್ನು ನೋಡಿ ಅವಳು, ‘ಇನ್ನೊಂದು ಲೋಟ ಕೊಡಲೇ?’ ಎಂದಳು. ಅದರ ಮಧುರ ರುಚಿ ಕಂಡ ಅವನಿಗೆ ಇಲ್ಲವೆನ್ನಲಾಗಲಿಲ್ಲ. ಮತ್ತೆ ಅವಳು ತೋಟಕ್ಕೆ ಹೋಗಿ ಇನ್ನೊಂದು ಕಬ್ಬು ತಂದು ಮೊದಲಿನ ಹಾಗೆಯೇ ತುಂಡರಿಸಿದಳು. ಆದರೆ ಈ ಸಲ ಅದರಿಂದ ಒಂದು ಹನಿಯೂ ರಸ ಬರಲಿಲ್ಲ. ಅವಳಿಗೆ ಆಶ್ಚರ್ಯ. ಅದೇ ಹೊಲ ಅಲ್ಲಿಯದೇ ಕಬ್ಬು ಹೀಗೇಕಾಯಿತು? ಕೂಡಲೇ ಅವಳ ಬಾಯಿಂದ ಒಂದು ಮಾತು ಬಂತು- ‘ಈ ದೇಶದ ರಾಜನು ದಯಾಹೀನನಾಗಿರಬೇಕು. ಅದಕ್ಕೆ ಧರೆಯೂ ರಸಹೀನವಾಗಿಬಿಟ್ಟಿದೆ’.

ತಾವಷ್ಟೇ ಬದುಕುವುದಕ್ಕೆ ಸೀಮಿತರಾಗದೆ ತಮ್ಮ ಜೊತೆಯಲ್ಲಿರುವ ದುರ್ಬಲರು, ಪ್ರಾಣಿ-ಪಕ್ಷಿಗಳು, ಗಿಡ-ಮರಗಳು ಇವುಗಳನ್ನೆಲ್ಲ ನೋಡಿಕೊಳ್ಳುವುದು ಶಕ್ತಿ ಇದ್ದವರ ಕರ್ತವ್ಯ ಎನ್ನುತ್ತದೆ ವೇದ. ಶಕ್ತಿಯುತರಾದವರು ದುರ್ಬಲರ ಜೊತೆ ಹೇಗೆ ವ್ಯವಹರಿಸಬೇಕೆಂದು ಪ್ರಕೃತಿ ನಮಗೆ ಮರಕ್ಕೆ ಸುತ್ತಿರುವ ಬಳ್ಳಿಯ ಉದಾಹರಣೆಯಿಂದ ಕಲಿಸುತ್ತದೆ. ಸೃಷ್ಟಿಯಲ್ಲಿ ಸಿಗುವುದೆಲ್ಲವನ್ನೂ ಶೋಷಣೆ ಮಾಡುತ್ತ ಹೋದರೆ ಭವಿಷ್ಯದಲ್ಲಿ ಏನೂ ಉಳಿಯಲಿಕ್ಕಿಲ್ಲ. ಭೂಮಿ, ಜಲ, ವಾಯು ಮುಂತಾದ ಪಂಚಭೂತಗಳನ್ನು ನಾವು ಎಷ್ಟು ಪ್ರೀತಿಸುತ್ತೇವೆಯೋ ಅಷ್ಟು ಅವು ನಮ್ಮ ರಕ್ಷಣೆ ಮಾಡುತ್ತವೆ. ಪ್ರಕೃತಿಯಿಂದ ಸಾಕಷ್ಟು ಪಡೆದಿರುವ ನಾವು ಸ್ವಲ್ಪವನ್ನಾದರೂ ತಿರುಗಿ ಕೊಡಬೇಕಾಗುತ್ತದೆ. ಅದನ್ನೇ ಭಗವದ್ಗೀತೆಯಲ್ಲಿ ‘ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ’ ಅಂದರೆ ‘ಇನ್ನೊಬ್ಬರಿಗೆ ಶ್ರೇಯಸ್ಸನ್ನು ಉಂಟು ಮಾಡುವುದು ತನ್ನ ಕರ್ತವ್ಯವೆಂದು ತಿಳಿದವನಿಗೆ ಪರಮ ಶ್ರೇಯಸ್ಸು ದೊರೆಯುತ್ತದೆ’ಎಂದು ಹೇಳಲಾಗಿದೆ.

ಮಣದಷ್ಟು ಪಡೆದುಕೊಂಡು ಕಣದಷ್ಟನ್ನೂ ಕೊಡದೆ ಹೋದರೆ ರಣ ಉಂಟಾಗದೇ ಇನ್ನೇನಾದೀತು?

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ) (ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *

Back To Top