Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಬದುಕು ಆದರ್ಶಮಯವಾಗಿರಲಿ

Monday, 12.11.2018, 6:20 AM       No Comments

| ದಿವ್ಯಾ ಹೆಗಡೆ

ಸ್ನೇಹಿತರಿಬ್ಬರು, ದುರ್ವರ್ಗದಿಂದ ಸಂಪತ್ತು ಗಳಿಸಲು ಆಲೋಚಿಸಿ ಪರಸ್ಪರ ಸಂಭಾಷಣೆಯಲ್ಲಿ ನಿರತರಾಗಿದ್ದರು. ಅವರಲ್ಲಿ ಒಬ್ಬನ ವೃದ್ಧತಂದೆ ಇದನ್ನೆಲ್ಲ ತನ್ನ ಕೋಣೆಯಿಂದಲೇ ಕೇಳಿಸಿಕೊಳ್ಳುತ್ತಿದ್ದ. ಮಗ ಅಡ್ಡದಾರಿಯಲ್ಲಿರುವುದು ತಿಳಿಯುತ್ತಿದ್ದಂತೆ ಆತನನ್ನು ಒಳಕರೆದು ‘ಮಗೂ, ಹಣ ಸಂಪಾದನೆಯೊಂದೇ ಜೀವನದ ಗುರಿಯಾಗಬಾರದು. ಅದರಲ್ಲೂ ಈ ಕುರಿತು ನೀನು ಗೆಳೆಯನೊಡನೆ ನಡೆಸಿದ ಚರ್ಚೆ ನನಗೆ ಸರಿಯೆನಿಸಲಿಲ್ಲ; ಒಪ್ಪೊತ್ತು ಗಂಜಿಯುಂಡರೂ ಸರಿ, ಬದುಕಿನಲ್ಲಿ ಪ್ರಾಮಾಣಿಕತೆಯಿರಬೇಕು. ದುರ್ವರ್ಗದಲ್ಲಿ ಹಣ ಸಂಪಾದಿಸಬಾರದು’ ಎಂದು ಬುದ್ಧಿ ಹೇಳಿದ.

ವೃದ್ಧತಂದೆಯ ಮಾತು ದಾರಿಗೆಟ್ಟ ಮಗನಿಗೆ ರುಚಿಸಲಿಲ್ಲ. ಅಲ್ಲಿಯೇ ತನ್ನ ಮಗ ಆಟವಾಡುತ್ತಿದ್ದುದನ್ನೂ ಗಮನಿಸದೆ ಜೋರುದನಿಯಲ್ಲಿ ತಂದೆಯನ್ನು ಬೈಯಲಾರಂಭಿಸಿದ. ‘ಇದು ನನ್ನ ವೈಯಕ್ತಿಕ ಜೀವನ, ಇಷ್ಟ ಬಂದಂತೆ ಬದುಕುತ್ತೇನೆ. ನನಗೆ ಬುದ್ಧಿಹೇಳಬೇಡ, ನಿನ್ನ ಕೆಲಸ ನೀನು ನೋಡಿಕೋ…’ ಎಂದು ಕೋಪದಲ್ಲಿ ಭುಸುಗುಟ್ಟಿದ. ಕೆಲದಿನಗಳ ನಂತರ, ಆತನ ಪುಟ್ಟಮಗ ಶಾಲೆಯಿಂದ ಬರುವಾಗ ಯಾರದ್ದೋ ಪೆನ್ನು-ಪೆನ್ಸಿಲ್​ಗಳನ್ನು ಕದ್ದುತಂದಿದ್ದ. ಇದನ್ನು ಕಂಡು ಬೇಸರಿಸಿಕೊಂಡ ಆತ, ಮಗನನ್ನು ಬಳಿಗೆ ಕರೆದು, ‘ಹಾಗೆಲ್ಲ ಕಳ್ಳತನ ಮಾಡಬಾರದು, ಅದು ತಪು್ಪ…’ ಎಂದು ತಿಳಿಹೇಳಲು ಮುಂದಾದರೂ ನಾಲಿಗೆ ತಡವರಿಸಿತು. ತಾನು ತನ್ನ ವಯೋವೃದ್ಧ ತಂದೆಯೊಂದಿಗೆ ನಡೆದುಕೊಂಡ ರೀತಿ ನೆನಪಾಗಿ, ಪುಟ್ಟಮಗನಿಗೆ ಬುದ್ಧಿಮಾತು ಹೇಳುವ ಯೋಗ್ಯತೆಯನ್ನೂ, ನೈತಿಕತೆಯನ್ನೂ ಆತ ಕಳೆದುಕೊಂಡಿದ್ದ. ಹೀಗಾಗಿ, ಪಾಪಪ್ರಜ್ಞೆ ಕಾಡತೊಡಗಿ ವಿಧಿಯಿಲ್ಲದೆ ಕೈಚೆಲ್ಲಿ ಹತಾಶನಾದ. ಸಾಮಾನ್ಯ ನಿದರ್ಶನವೇ ಆದರೂ ಇದು ಕಲಿಸುವ ಪಾಠ ಮಹತ್ತರವಾದದ್ದು. ಹಿರಿಯರು ಏನು ಮಾಡುತ್ತಾರೋ ಅದನ್ನೇ ಕಿರಿಯರೂ ಅನುಕರಿಸುತ್ತಾರೆ ಎಂದಿದ್ದಾನೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ. ಮಾನವನ ಜೀವನಕ್ರಮ ಬದಲಾಗಿದ್ದು, ಐಷಾರಾಮಿ ವಸ್ತುಗಳ ಸಂಗ್ರಹವೇ ಪರಮಗುರಿ ಆಗಿಬಿಟ್ಟಿದೆ. ಸಂಪತ್ತು-ಸೌಕರ್ಯಗಳಿಗಾಗಿ ಹಂಬಲಿಸುವುದು ತಪ್ಪಲ್ಲ; ಆದರೆ ಅವನ್ನು ಯಾವ ಮಾರ್ಗದಿಂದ ದಕ್ಕಿಸಿಕೊಳ್ಳುತ್ತೇವೆ ಎಂಬುದೇ ಮುಖ್ಯ. ‘ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು, ಪರರನ್ನು ಲೂಟಿ ಹೊಡೆದಾದರೂ ನಾವು ಸುಖವಾಗಿರಬೇಕು’ ಎಂಬ ಕೆಲವರ ಧೋರಣೆ ಸರ್ವಥಾ ಸ್ವೀಕಾರಾರ್ಹವಲ್ಲ. ಇಂಥ ಅಪಮಾರ್ಗದ ಹೊರತಾಗಿಯೂ ಜೀವನದಲ್ಲಿ ಸುಖ-ಸಮೃದ್ಧಿ ಕಂಡುಕೊಳ್ಳಬೇಕೆಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಸಮಾಜದಲ್ಲಿನ ನಮ್ಮ ಸ್ವೀಕಾರಾರ್ಹತೆಗೆ ನಮ್ಮ ಒಳ್ಳೆಯ ವ್ಯಕ್ತಿತ್ವ, ಸನ್ನಡತೆಯೇ ಮೂಲಾಧಾರ ಎಂಬುದನ್ನು ಅರಿಯಬೇಕಿದೆ. ಸಮಾಜಕ್ಕೆ ನಾವು ಒಳ್ಳೆಯದನ್ನು ಕೊಟ್ಟರೆ ಪ್ರತಿಯಾಗಿ ನಾವು ಸ್ವೀಕರಿಸುವುದೂ ಒಳ್ಳೆಯದನ್ನೇ ಎಂಬ ಸತ್ಯವನ್ನರಿತು ಬಾಳೋಣ. ಮುಂದಿನ ಪೀಳಿಗೆಗೆ ಒಂದು ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಡೋಣ.

(ಲೇಖಕಿ ಹವ್ಯಾಸಿ ಬರಹಗಾರ್ತಿ) (ಪ್ರತಿಕ್ರಿಯಿಸಿ:  [email protected])

Leave a Reply

Your email address will not be published. Required fields are marked *

Back To Top